
ಕೊಪ್ಪಳ, ಜನವರಿ 1: ಕೊಪ್ಪಳ (Koppal) ಜಿಲ್ಲೆ ಯಲಬುರ್ಗಾದ ಮದ್ಲೂರಿನಲ್ಲಿ ನವೆಂಬರ್ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರೂ, ತಾಲೂಕು ವೈದ್ಯಾಧಿಕಾರಿಯು ಅತ್ಯಾಚಾರಿಗಳನ್ನು ರಕ್ಷಿಸಲು ಯತ್ನಿಸಿರುವುದು ಗೊತ್ತಾಗಿದೆ. ಸದ್ಯ ತಾಲೂಕು ವೈದ್ಯಾಧಿಕಾರಿ ವಿರುದ್ಧವೂ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಯಲಬುರ್ಗಾ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಶಿವಕುಮಾರ್ ಸಾಕ್ಷಿ ನಾಶಪಡಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಶಿವಕುಮಾರ್ ವಿರುದ್ಧ ಯಲಬುರ್ಗಾ ಸಿಪಿಐ ಮೌನೇಶ್ವರ್ ಮಾಲಿಪಾಟೀಲ್ ಬಿಎನ್ಎಸ್ 238 (ಬಿ)ಅಡಿ ಪ್ರಕರಣ ದಾಖಲಿಸಿದ್ದಾರೆ.
ಗ್ಯಾಂಗ್ ರೇಪ್ ಕೇಸ್‌ನಲ್ಲಿ ವೈದ್ಯಾಧಿಕಾರಿ ನಿರ್ಲಕ್ಷ್ಯತೆ ಮೇಲುನೋಟಕ್ಕೆ ಕಾಣಿಸಿದೆ. ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸರು ಸಂಗ್ರಹಿಸಿದ್ದ ವಸ್ತುಗಳ ಮೇಲೆ ಡಾಕ್ಟರ್ ನೆರವಿನಿಂದಲೇ ಸಿಬ್ಬಂದಿ ಸಹಿ ಮಾಡಿದ್ದಾರೆ. ಅಲ್ಲದೇ, ಆರೋಪಿಗಳಿಂದ ಸಂಗ್ರಹಿಸಿದ 16 ವಸ್ತುಗಳು ಹಾಗೂ ಡಿಎನ್‌ಎ ಸಾಕ್ಷಿಗಳನ್ನು ಸಿಗದಂತೆ ಮಾಡಿದ್ದಾರೆ. ಆ ಮೂಲಕ ಆರೋಪಿಗಳಿಗೆ ನೆರವಾಗಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ಕೇಳಿದರೆ, ಉದ್ಧಟತನದಿಂದ ವರ್ತಿಸಿದ್ದಾರೆ ಎಂಬುದನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಮದ್ಲೂರ ಗ್ರಾಮದ ಬಳಿ 39 ವರ್ಷದ ಮಹಿಳೆ ಮೇಲೆ ನವೆಂಬರ್ 17 ರ ಸಂಜೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಹೊಸಪೇಟೆಯಿಂದ ಕುಷ್ಟಗಿಗೆ ತಮ್ಮ ಪರಿಚದವರ ಬಳಿ ಹಣ ತಗೆದುಕೊಂಡು ಹೋಗಲು ಮಹಿಳೆ ಬಂದಿದ್ದರು. ಆದರೆ ಅಲ್ಲಿಂದ ಆ ಮಹಿಳೆಯನ್ನು ಕರೆದುಕೊಂಡ ಹೋದ ನಾಲ್ವರು ಕಿರಾತಕರು, ಮತ್ತು ಬರಿಸುವ ಜ್ಯೂಸ್ ಕುಡಿಸಿ ಅತ್ಯಾಚಾರ ಎಸಗಿದ್ದರು. ಕೃತ್ಯದ ಸಂಬಂಧ ಮಹಿಳೆಯು ಪರಿಚಯಸ್ಥ ಲಕ್ಷ್ಮಣ ಎಂಬಾತ ಸೇರಿ ನಾಲ್ವರ ವಿರುದ್ದ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕುಷ್ಟಗಿ ಹಾಗೂ ಮದ್ಲೂರ ಸೀಮಾದ ಪಾಳು ಬಿದ್ದ ಮನೆಯಲ್ಲಿ ಯಾವುದೋ ಜ್ಯೂಸ್ ಕುಡಿಸಿ ಅತ್ಯಾಚಾರ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಘಟನೆ ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.
ದೂರು ದಾಖಲಾದ ಬಳಿಕ ಕೊಪ್ಪಳ ಎಸ್ಪಿ ಮೂರು ತಂಡಗಳನ್ನು ರಚನೆ ಮಾಡಿ, ಕೆಲವೇ ಗಂಟೆಗಳಲ್ಲಿ ಆರೋಪಿಗಳಾದ ಲಕ್ಷ್ಮಣ, ಬಸವರಾಜ್, ಶಿವಕುಮಾರ್ ಹಾಗೂ ಭೀಮಪ್ಪರನ್ನು ಬಂಧಿಸಿದ್ದರು. ಲಕ್ಷ್ಮಣ ಹಾಗೂ ಬಸವರಾಜ್ ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಗ್ರಾಮದವರು. ಭೀಮಪ್ಪ ಹಾಗೂ ಶಶಿಕುಮಾರ್ ಯಲಬುರ್ಗಾ ತಾಲೂಕಿನ ಹನುಮಾಪೂರ ಗ್ರಾಮದವರು. ನಂತರ ಬಂಧಿತರು ಜೈಲುಪಾಲಾಗಿದ್ದರು.
ಇದನ್ನೂ ಓದಿ: ಕೊಪ್ಪಳ: ಯಲಬುರ್ಗಾದಲ್ಲಿ ಮಹಿಳೆಗೆ ಮದ್ಯ ಸೇವನೆ ಮಾಡಿಸಿ ನಾಲ್ವರಿಂದ ಅತ್ಯಾಚಾರ
ಸದ್ಯ, ತಾಲೂಕು ವೈದ್ಯಾಧಿಕಾರಿ ಶಿವಕುಮಾರ್ ಸಾಕ್ಷ್ಯ ನಾಶಕ್ಕೆ ಮುಂದಾಗಿರುವುದರಿಂದ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ.