ಕೊಪ್ಪಳ: ಹನುಮ ಹುಟ್ಟಿದ ನಾಡು ಅಂಜನಾದ್ರಿ(Anjanadri Hill) ಎಂಬುವುದು ಬಹಳ ಚರ್ಚಿತ ವಿಷಯ. ಹನುಮ ಹುಟ್ಟಿರೋದು(Birth Place Of Hanuman) ಎಲ್ಲಿ ಅನ್ನೋದಕ್ಕೆ ಎರಡು ರಾಜ್ಯಗಳ ಮಧ್ಯೆ ಖ್ಯಾತೆ ಆರಂಭವಾಗಿದೆ. ಟಿಟಿಡಿ(TTD) ಹನುಮ ಹುಟ್ಟಿದ್ದು ನಮ್ಮಲ್ಲಿ ಅನ್ನೋ ಖ್ಯಾತೆ ತಗೆದಿದೆ. ಇತ್ತ ರಾಜ್ಯ ಸರ್ಕಾರ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಯೇ ಹನುಮ ಹುಟ್ಟಿದ ಸ್ಥಳ ಎಂದು ಘೋಷಣೆ ಮಾಡಲು ಮುಂದಾಗಿದೆ. ನಾಳೆ ಮುಜರಾಯಿ ಸಚಿವರು ಅಂಜನಾದ್ರಿಯ ದಾಖಲೆಗಳ ಸಂಗ್ರಹಕ್ಕೆ ಅಧಿಕಾರಿಗಳ ಸಭೆ ಕರೆದಿದ್ದಾರೆ. ಹೀಗಾಗಿ ನಾಳಿನ ಸಭೆ ಸಾಕಷ್ಡು ಕೂತುಹಲ ಕೆರಳಿಸಿದೆ.
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಸದ್ಯ ಸಾಕಷ್ಟು ಚರ್ಚೆಯಲ್ಲಿರೋ ಹೆಸರು. ಅಂಜನಾದ್ರಿ ಹನುಮ ಹುಟ್ಟಿದ ಸ್ಥಳ ಎಂದು ಅಸಂಖ್ಯಾತ ಭಕ್ತರ ನಂಬಿಕೆ. ಆದ್ರೆ ಕಳೆದ ವರ್ಷ ಟಿಟಿಡಿ ಹನುಮ ಹುಟ್ಟಿದ್ದು ನಮ್ಮಲ್ಲಿ ಎಂದು ವಾದ ಮುಂದಿಟ್ಟಿತ್ತು. ಇದಲ್ಲದೆ ಕಳೆದ ನಾಲ್ಕೈದು ದಿನಗಳ ಹಿಂದೆ ಟಿಟಿಡಿ ಯಲ್ಲಿ ಆಕಾಶಗಂಗೆ ಪ್ರದೇಶದಲ್ಲಿ ಅಂಜನಾದೇವಿ, ಬಾಲ ಹನುಮ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗಿತ್ತು. ಇದಕ್ಕೆ ಸದ್ಯ ಆಂಧ್ರಪ್ರದೇಶದ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಯಾವಾಗ ಟಿಟಿಡಿ ಹನುಮನ ಬಗ್ಗೆ ಖ್ಯಾತೆ ಆರಂಬಿಸಿತೋ, ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡಿದೆ. ಹನುಮ ಹುಟ್ಟಿದ್ದು ಕೊಪ್ಪಳ ಜಿಲ್ಲೆಯಲ್ಲಿ ಅನ್ನೋದಕ್ಕೆ ಸಾಕ್ಷಿ ಪುರಾವೆ ಸಂಗ್ರಹಿಸಲು ಮುಂದಾಗಿದೆ. ಜಿಲ್ಲಾಡಳಿತ ಸ್ಥಳೀಯ ಸಂಶೋಧಕರು ಬರೆದ ಪುಸ್ತಕ, ರಾಮಾಯಣದಲ್ಲಿರೋ ಉಲ್ಲೇಖಗಳ ಬಗ್ಗೆ ಮಾಹಿತಿ ಕಲೆ ಹಾಕ್ತಿದೆ. ಜೊತೆಗೆ ನಾಳೆ ಮುಜರಾಯಿ ಸಚಿವರು ಅಧಿಕಾರಿಗಳ ಸಭೆ ಕರೆದಿದ್ದಾರೆ. ಅಂಜನಾದ್ರಿಯೇ ಹನುಮ ಹುಟ್ಟಿದ ಸ್ಥಳ ಎಂದು ಘೋಷಣೆ ಮಾಡಲು ಸಚಿವರು ಮುಂದಾಗಿದ್ದು, ನಾಳೆ ಕೊಪ್ಪಳ ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಸಂಶೋಧಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಜೊತೆಗೆ ಸ್ಥಳೀಯ ಸಂಸದ ಸಂಗಣ್ಣ ಕರಡಿ ಕೂಡಾ ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ. ಸಂಗಣ್ಣ ಕರಡಿ ಕೂಡಾ ಅನೇಕ ದಾಖಲೆಗಳ ಸಂಗ್ರಹ ಮಾಡಿದ್ದು, ನಿರಂತರವಾಗಿ ಮುಜರಾಯಿ ಸಚಿವರ ಜೊತೆ ಸಂಪರ್ಕದಲ್ಲಿದ್ದಾರೆ. ಜಿಲ್ಲಾಧಿಕಾರಿಗಳು, ಸ್ಥಳೀಯ ಶಾಸಕರು ಸಂಸದರು ನಾಳೆ ಸಭೆಯಲ್ಲಿ ಭಾಗಿಯಾಗಬಹುದು. ಮುಜರಾಯಿ ಸಚಿವರಾದ ಶಶಿಕಲಾ ಜೊಲ್ಲೆ ಅಂಜನಾದ್ರಿ ಬಗ್ಗೆ ಸಮರ್ಪಕ ದಾಖಲೆಗಳನ್ನ ತರುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಅಂಜನಾದ್ರಿ ಅಭಿವೃದ್ಧಿಗೆ 20 ಕೋಟಿ ಹಣ ಬಿಡುಗಡೆ ಸಾಧ್ಯತೆ
ಟಿಟಿಡಿ ಖ್ಯಾತೆ ತಗೆಯೋಕೆ ಸರ್ಕಾರದ ನಿರ್ಲಕ್ಷ್ಯವೂ ಕಾರಣ. ಯಾಕಂದ್ರೆ ಹನುಮ ಹುಟ್ಟಿದ ಸ್ಥಳ ಎಂದು ಹೆಸರಾದ ಅಂಜನಾದ್ರಿಯನ್ನ ಸರ್ಕಾರ ನಿರ್ಲಕ್ಷ್ಯ ಮಾಡಿತ್ತು. ದೇಶ ವಿದೇಶಗಳಿಂದ ಭಕ್ತರು ಬರ್ತಿದ್ರು, ಅಂಜನಾದ್ರಿ ಅಭಿವೃದ್ಧಿ ವಿಷಯದಲ್ಲಿ ಹಿಂದೇಟು ಹಾಕಿತ್ತು. ಕಿಷ್ಕಿಂದೆ ಪ್ರದೇಶದಲ್ಲಿ ಹನುಮ ಹುಟ್ಟಿದ್ದಾನೆ ಅನ್ನೋದಕ್ಕೆ ಅನೇಕ ದಾಖಲೆಗಳಿವೆ, ವಾಲಿ ಸುಗ್ರೀವ ಗುಹೆ, ಸೀತೆ ಸೆರಗು ಜೊತೆಗೆ ಭೌಗೋಳಿಕವಾಗಿ ಕಿಷ್ಕಿಂದೆ ಹನುಮನ ಜನ್ಮಸ್ಥಳ ಎಂದು ಉಲ್ಲೇಖವಾಗಿದೆ. ಸಾಹಿತ್ಯಕವಾಗಿ, ಜನಪದದಲ್ಲೂ ಅಂಜನಾದ್ರಿಯೇ ಹನುಮ ಹುಟ್ಟಿದ ಪ್ರದೇಶ ಎಂಬ ಪ್ರತೀತಿ ಇದೆ. ಇದಲ್ಲದೆ ಅಮೇರಿಕದ ಸಾಹಿತಿಯೊಬ್ಬರು ಕೂಡಾ ಇದರ ಬಗ್ಗೆ ಪುಸ್ತಕದಲ್ಲಿ ಉಲ್ಲೇಖ ಮಾಡಿದ್ದಾರೆ. ಇದನ್ನೆಲ್ಲ ಬಿಟ್ಟು ಟಿಟಿಡಿ ಅಂಜನಾದ್ರಿ ಹುಟ್ಟಿರೋದು ನಮ್ಮಲ್ಲಿ ಎಂಬ ವಾದ ಮಾಡುತ್ತಿದೆ. ಟಿಟಿಡಿ ಖ್ಯಾತೆ ಆರಂಭಿಸುತ್ತಲೇ ಸರ್ಕಾರದ ಸಚಿವರು ಅಲರ್ಟ್ ಆಗಿದ್ದು ಹನುಮ ಹುಟ್ಟಿದ್ದು ನಮ್ಮಲ್ಲಿ ಎನ್ನುತ್ತಿದ್ದಾರೆ. ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಈಗಾಗಲೇ ಹನುಮ ಹುಟ್ಟಿದ್ದು ಅಂಜನಾದ್ರಿಯಲ್ಲಿಯೇ ಎಂದು ಹೇಳಿದ್ದಾರೆ.
ಈ ಬಾರಿ ಬಜೆಟ್ ನಲ್ಲಿ ಅಂಜನಾದ್ರಿ ಅಭಿವೃದ್ಧಿಗೆ 20 ಕೋಟಿ ಹಣ ಬಿಡುಗಡೆಯಾಗೋ ಸಾಧ್ಯತೆ ಇದೆ. ಇದಲ್ಲದೆ ಮುಂದಿನ ದಿನದಲ್ಲಿ ಸರ್ಕಾರವೇ ಅಂಜನಾದ್ರಿಯೇ ಹನುಮ ಹುಟ್ಟಿದ ಸ್ಥಳ ಎಂದು ಘೋಷಣೆ ಮಾಡಲು ಮುಂದಾಗಿದೆ. ಹೀಗಾಗಿ ನಾಳೆ ನಡೆಯೋ ಸಭೆ ಸಾಕಷ್ಟು ಕೂತುಹಲ ಮೂಡಿಸಿದೆ. ಸರ್ಕಾರ ಆದಷ್ಟು ಬೇಗ ಅಂಜನಾದ್ರಿಯೇ ಹನುಮನ ಜನ್ಮಸ್ಥಳ ಎಂದು ಘೋಷಣೆ ಮಾಡಬೇಕು ಅನ್ನೋದು ಹನುಮ ಭಕ್ತರ ವಾದ. ಸರ್ಕಾರದ ನಿರ್ಲಕ್ಷ್ಯದಿಂದ ಅಂಜನಾದ್ರಿ ಅಭಿವೃದ್ಧಿ ಕುಂಠಿತವಾಗಿತ್ತು.ಇದನ್ನೆ ಬಂಡವಾಳ ಮಾಡಿಕೊಂಡ ಟಿಟಿಡಿ ಹನುಮನ ಖ್ಯಾತೆ ತಗೆದಿದೆ. ಟಿಟಿಡಿ ಖ್ಯಾತೆಯ ನಂತರ ಎಚ್ಚೆತ್ತ ಸರ್ಕಾರ ಇದೀಗ ದಾಖಲೆಗಳ ಸಂಗ್ರಹಕ್ಕೆ ಮುಂದಾಗಿದೆ.ಕೇವಲ ದಾಖಲೆಗಳ ಸಂಗ್ರಹ ಮಾಡಿದ್ರೆ ಸಾಲದು,ಶಿಘ್ರವೇ ಕೊಪ್ಪಳ ಜಿಲ್ಲೆಯ ಅಂಜನಾದ್ರಿಯೇ ಹನುಮ ಹುಟ್ಟಿದ ಸ್ಥಳ ಎಂದು ಘೋಷಣೆಯಾಗಬೇಕಿದೆ.
ಟಿಟಿಡಿ ಆಂಜನೇಯ ಜನ್ಮಸ್ಥಳ ನಮ್ಮದು ಎಂದು ವಾದ ಮಾಡುತ್ತಿದೆ. ಆನೆಗೊಂದಿ ಇತಿಹಾಸ ನೋಡಿದಾಗ ಹನುಮ ಹುಟ್ಟಿದ್ದು ಕಿಷ್ಕಿಂದೆ ಪ್ರದೇಶದಲ್ಲಿ ಅನ್ಮೋದು ಉಲ್ಲೇಖ ವಿದೆ. ಅಮೇರಿಕದ ಶಾಸನ ತಜ್ಞ ಫಿಲಿಪ್ ಲಾಟಿನ್ ಅವರು ಹನುಮ ಜನಿಸಿದ್ದು ಕೊಪ್ಪಳ ಜಿಲ್ಲೆಯಲ್ಲಿ ಎಂದು ಉಲ್ಲೇಖಿಸಿದ್ದಾರೆ. ಅನೇಕ ದಾಖಲೆಗಳು ನಮ್ಮಲ್ಲಿವೆ. ಆದ್ರೆ ಟಿಟಿಡಿ ಸುಮ್ನೆ ವಾದ ಮಾಡುತ್ತಿದೆ. ನಾಳೆ ಇದೇ ವಿಷಯಕ್ಕೆ ಮುಜರಾಯಿ ಸಚಿವರು ಅಧಿಕಾರಿಗಳ ಮೀಟಿಂಗ್ ಕರೆದಿದ್ದಾರೆ. ಮುಜರಾಯಿ ಸಚಿವರಾದ ಶಶಿಕಾಲ ಜೊಲ್ಲೆ ಮಾಹಿತಿ ಸಂಗ್ರಹ ಮಾಡಲು ಮೀಟಿಂಗ್ ಕರೆದಿದ್ದಾರೆ. ಸರ್ಕಾರ ಅಂಜನಾದ್ರಿ ಅಭಿವೃದ್ಧಿಗೆ ವಿಶೇಷ ಆಧ್ಯತೆ ತಗೆದುಕೊಂಡಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೆಲ ದಿನಗಳಲ್ಲಿ ಆನೆಗೊಂದಿಗೆ ಭೇಟಿ ನೀಡಲಿದ್ದಾರೆ.ಆದಷ್ಟು ಬೇಗ ಅಂಜನಾದ್ರಿಯೇ ಹನುಮ ಹುಟ್ಟಿದ ಸ್ಥಳ ಎಂದು ಘೋಷಣೆಯಾಗಲಿದೆ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.
ಇನ್ನು ಮತ್ತೊಂದೆಡೆ ಕನ್ನಡ ಉಪನ್ಯಾಸಕರು ಸಿದ್ದಲಿಂಗಪ್ಪ ಕೋಟ್ನೇಕಲ್ ಮಾತನಾಡಿದ್ದು, ನಾಳೆ ಮುಜರಾಯಿ ಸಚಿವರು ಸಭೆ ಕರೆದಿರೋದು ಒಳ್ಳೆಯ ಬೆಳವಣಿಗೆ. ಅಂಜನಾದ್ರಿಯೇ ಹನುಮ ಹುಟ್ಟಿದ ಸ್ಥಳ ಎಂದು ನಮ್ಮ ವಾದ. ಈ ನಿಟ್ಟಿನಲ್ಲಿ ಅನೇಕ ಸಂಶೋಧನೆ ಮಾಡಿ ಅನೇಕ ಪುಸ್ತಕಗಳ ರಚನೆ ಮಾಡಿದ್ದೇವೆ.ಸರ್ಕಾರದ ವಿಳಂಬದಿಂದ ಟಿಟಿಡಿ ಖ್ಯಾತೆ ತಗೆದಿದೆ. ಇದೀಗ ಮುಜರಾಯಿ ಸಚಿವರು ಸಭೆ ಕರೆದಿರೋದು ಒಳ್ಳೆಯ ಬೆಳವಣಿಗೆ,ಸ್ಥಳೀಯ ಸಂಶೋದಕರ ಮಾಹಿತಿ,ಭೌಗೋಳಿಕವಾಗಿ ಸಚಿವರು ಮಾಹಿತಿ ಪಡೆದು ಅಂಜನಾದ್ರಿಯೇ ಹನುಮ ಹುಟ್ಟಿದ ಪ್ರದೇಶ ಎಂದು ಘೋಷಣೆ ಮಾಡಬೇಕು ಎಂದರು.
ಇದನ್ನೂ ಓದಿ: ಟಿಟಿಡಿ ಖ್ಯಾತೆಯಿಂದ ಅಲರ್ಟ್! ಆಂಜನೇಯ ಜನಿಸಿದ ಅಂಜನಾದ್ರಿ ಅಭಿವೃದ್ಧಿಗೆ ಸರ್ಕಾರ ಮುಂದು, ಕೋಟ್ಯಂತರ ಅನುದಾನ ಘೋಷಣೆ ಸಾಧ್ಯತೆ
Published On - 3:53 pm, Tue, 22 February 22