ಕೊಪ್ಪಳ, ಡಿಸೆಂಬರ್ 22: ಡಿಸೆಂಬರ್ 24 ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ (Gangavati) ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ಸಾವಿರಾರು ಹನುಮ ಮಾಲಾಧಾರಿಗಳು ಆಗಮಿಸಿ, ಹನುಮ ಮಾಲೆಯನ್ನು ವಿಸರ್ಜಿಸಲಿದ್ದಾರೆ. ಆದರೆ ಇಷ್ಟು ವರ್ಷ ಹನುಮ ಮಾಲೆ ವಿಸರ್ಜನೆ ದಿನವೇ ನಡೆಯುತ್ತಿದ್ದ ಸಂಕೀರ್ತನಾ ಯಾತ್ರೆ (Sankirtana Yatra) ಎರಡು ದಿನ ಮೊದಲೇ ಗಂಗಾವತಿ ಪಟ್ಟಣದಲ್ಲಿ ನಡೆಯುತ್ತಿದೆ.
ಕೋಮು ಸೂಕ್ಷ್ಮ ನಗರವಾಗಿರೋ ಗಂಗಾವತಿ ಪಟ್ಟಣದಲ್ಲಿ ಇಂದು ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ಹಿಂದೂ ಪರ ಸಂಘಟನೆಗಳು ಹನುಮ ಮಾಲೆ ಅಂಗವಾಗಿ ಸಂಕೀರ್ತನಾ ಯಾತ್ರೆ ಹಮ್ಮಿಕೊಂಡಿವೆ. ಇಂದು ಮುಂಜಾನೆ ಹತ್ತು ಗಂಟೆಗೆ ಗಂಗಾವತಿ ಪಟ್ಟಣದ ಎಪಿಎಂಸಿಯಿಂದ ಆರಂಭವಾಗಲಿರೋ ಸಂಕೀರ್ತನಾ ಯಾತ್ರೆಯಲ್ಲಿ ಗಂಗಾವತಿ ತಾಲೂಕಿನ ಸಾವಿರಾರು ಹನುಮ ಮಾಲಾಧಾರಿಗಳು ಭಾಗಿಯಾಗಲಿದ್ದಾರೆ. ಪಟ್ಟಣದ ವಿವಿಧ ಬೀದಿಯಲ್ಲಿ ಸಂಕೀರ್ತನಾ ಯಾತ್ರೆ ನಡೆಯಲಿದೆ. ಹನ್ನೆರಡು ಅಡಿಯ ಆಂಜನೇಯ ಮೂರ್ತಿಯ ಭವ್ಯ ಶೋಭಾಯಾತ್ರೆಯಲ್ಲಿ ಹನುಮ ಮಾಲಾದಾರಿಗಳು ಜೈ ಹನುಮಾನ ಜೈಘೋಷಗಳನ್ನು ಹೊರಡಿಸುತ್ತಾ ಸಾಗಲಿದ್ದಾರೆ.
ಇದನ್ನೂ ಓದಿ: ಕೊಪ್ಪಳ: ಕೋಟಿ ಖರ್ಚು ಮಾಡಿ ಕಟ್ಟಿದ ತರಲಕಟ್ಟಿ ಕೆರೆ ಕಟ್ಟೆಯಲ್ಲಿ ಕೆಲವೇ ದಿನಗಳಲ್ಲಿ ಬಿರುಕು!
ಇನ್ನು ಗಂಗಾವತಿ ನಗರದಲ್ಲಿ ಸಂಕೀರ್ತನಾ ಯಾತ್ರೆ ಹಿನ್ನೆಲೆಯಲ್ಲಿ ಕೊಪ್ಪಳ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ. ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಯಶೋದಾ ವಂಟಗೋಡಿ ಗಂಗಾವತಿ ನಗರದಲ್ಲಿಯೇ ಬೀಡು ಬಿಟ್ಟಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಂಡಿದ್ದಾರೆ. ಇನ್ನು ಗಂಗಾವತಿ ಪಟ್ಟಣದಲ್ಲಿ99 ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಇಬ್ಬರು ಡಿವೈಎಸ್ಪಿ, 26 ಸಿಪಿಐ, 62 ಪಿ ಎಸ್ ಐ ಸೇರಿ 1650 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಯಾರು ಕೂಡಾ ಶಾಂತಿ ಕದಡುವ ಕೆಲಸ ಮಾಡಬಾರದು. ಅಹಿತಕರ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವದಾಗಿ ಕೊಪ್ಪಳ ಎಸ್ಪಿ ಯಶೋದಾ ವಂಟಗೋಡಿ ಖಡಕ್ ಸೂಚನೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ