ಕೊಪ್ಪಳ, ನವೆಂಬರ್ 2: ಕರ್ನಾಟಕ ಕಾಂಗ್ರೆಸ್ನ (Karnataka Congress) ಆಂತರಿಕ ತೊಳಲಾಟ, ಭಿನ್ನಮತ ಹಾಗೂ ಅಸಮಾಧಾನಗಳನ್ನು ತಣಿಸುವ ಕೆಲಸವನ್ನು ಪಕ್ಷದ ಹೈಕಮಾಂಡ್ ತಕ್ಕ ಮಟ್ಟಿಗೆ ಮಾಡಿದೆ. ಆದಾಗ್ಯೂ, ಭಿನ್ನಮತ ಕುರಿತ ಊಹಾಪೋಹಗಳು ಇನ್ನೂ ತಣ್ಣಗಾಗಿಲ್ಲ. ಈ ಮಧ್ಯೆ, ಶಾಸಕರ ಜೊತೆ ಸಚಿವ ಸತೀಶ್ ಜಾರಕಿಹೊಳಿ ದುಬೈ ಪ್ರವಾಸ ಕೈಗೊಳ್ಳಲಿದ್ದಾರೆ ಎಂಬ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕೊಪ್ಪಳದಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಕೊಪ್ಪಳ ಹೊರವಲಯದ ಏರ್ಸ್ಟ್ರಿಪ್ನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಶಾಸಕರು ತಮ್ಮ ಹಣದಲ್ಲಿ ಪ್ರವಾಸ ಮಾಡಿದರೆ ಏನು ಕಷ್ಟ ಎಂದು ಪ್ರಶ್ನಿಸಿದರು. ಸರ್ಕಾರದ ವತಿಯಿಂದ ನಾವು ಶಾಸಕರನ್ನು ಪ್ರವಾಸಕ್ಕೆ ಕಳುಹಿಸುತ್ತಿಲ್ಲ. ಶಾಸಕರು ಪ್ರವಾಸ ಹೋಗುತ್ತಿರುವ ವಿಚಾರವೂ ಕೂಡ ನನಗೆ ಗೊತ್ತಿಲ್ಲ. ರಾಜ್ಯದ ಜನರು ನಮಗೆ ಆಶೀರ್ವಾದ ಮಾಡಿ 136 ಸ್ಥಾನ ಗೆಲ್ಲಿಸಿದ್ದಾರೆ. ಐದು ವರ್ಷ ನಾವೇ ಆಡಳಿತ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿಗೆ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಕೆಸಿ ವೇಣುಗೋಪಾಲ್ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಲೋಕಸಭಾ ಚುನಾವಣೆ ಬಗ್ಗೆ ಚರ್ಚೆ ಮಾಡಲು ಅವರಿಬ್ಬರು ಬಂದಿದ್ದರು. ಜತೆಗೆ, ನಿಗಮ ಮಂಡಳಿಗೆ ಶಾಸಕರನ್ನು ನೇಮಿಸುವ ಕುರಿತು ಚರ್ಚಿಸಲು ಚರ್ಚೆ ಮಾಡಲಾಯಿತು ಎಂದರು.
ಬರ ನಿರ್ವಹಣೆಗಾಗಿ ಉಸ್ತುವಾರಿ ಸಚಿವರು ಪ್ರವಾಸ ಮಾಡುತ್ತಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಕೇಂದ್ರದಿಂದ ಹಣ ಬಿಡುಗಡೆ ಮಾಡಿಸಲಿ. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ನಮ್ಮ ಸಚಿವರು ಹೋದರೂ ಪ್ರಧಾನಿ ಮೋದಿ ಭೇಟಿಗೆ ಅವಕಾಶ ಕೊಡಲಿಲ್ಲ. ನರೇಗಾ ಯೋಜನೆಯ 600 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿಲ್ಲ. ಬರ ಬಗ್ಗೆ ಚರ್ಚೆ ಮಾಡಲು ಪ್ರಧಾನಮಂತ್ರಿ ಅವಕಾಶವನ್ನೇ ಕೊಡುತ್ತಿಲ್ಲ. ರಾಜ್ಯ ಬಿಜೆಪಿ ನಾಯಕರು ಬರ ಅಧ್ಯಯನ ಮಾಡಲು ಹೊರಟಿದ್ದಾರೆ. ಮೊದಲು ಕೇಂದ್ರ ಬಳಿ ಹೋಗಿ ಅನುದಾನ ಕೊಡಲು ಹೇಳಲಿ. ಪ್ರಧಾನಮಂತ್ರಿ ಮೋದಿ ತಮ್ಮ ಸಚಿವರು, ಶಾಸಕರನ್ನೇ ಭೇಟಿ ಆಗಲ್ಲ. ಇನ್ನು ನಮಗೆ ಏನು ಭೇಟಿಗೆ ಅವಕಾಶ ಕೊಡುತ್ತಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಬಿಜೆಪಿಯವರು ಬಿಎಸ್ ಯಡಿಯೂರಪ್ಪ ಕಣ್ಣೀರು ಹಾಕಿಸಿ ಮನೆಗೆ ಕಳಿಸಿದರು. ಈಗ ಬಿಜೆಪಿಯವರು ಯಡಿಯೂರಪ್ಪ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಇದನ್ನೂ ಓದಿ: ‘ಕೈ’ ಕಟ್, ಬಾಯ್ ಮುಚ್: ಸಚಿವರು, ಶಾಸಕರಿಗೆ ಸುರ್ಜೇವಾಲ ನೇರ ಎಚ್ಚರಿಕೆ: ಕಾಂಗ್ರೆಸ್ ಬಣ ರಾಜಕೀಯಕ್ಕೆ ಬೀಳುತ್ತಾ ಬ್ರೇಕ್?
ಸರ್ಕಾರ ಪತನವಾಗಲಿದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಪಾಪ ಯತ್ನಾಳ್ ಹಗಲಿನಲ್ಲೇ ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕೊಪ್ಪಳಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರನ್ನು ಕೊಪ್ಪಳ ಸಂಸದ ಕರಡಿ ಸಂಗಣ್ಣ, ಎಂಎಲ್ಸಿ ಹೇಮಲತಾ ನಾಯಕ್ ಸ್ವಾಗತಿಸಿದರು. ಕೊಪ್ಪಳ ನಗರ ಹೊರವಲಯದಲ್ಲಿರೋ ವಿಮಾನ ನಿಲ್ದಾಣಕ್ಕೆ ಸಿದ್ದರಾಮಯ್ಯ ಆಗಮಿಸಿದ ಕೂಡಲೇ ಬಿಜೆಪಿ ನಾಯಕರು ಅವರನ್ನು ಸ್ವಾಗತಿಸಿದರು. ಇದೀಗ ಸಂಸದ ಕರಡಿ ಸಂಗಣ್ಣ ನಡೆ ಕುತೂಹಲ ಮೂಡಿಸಿದೆ.
ರಾಜಕಾರಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ