‘ಕೈ’ ಕಟ್, ಬಾಯ್ ಮುಚ್: ಸಚಿವರು, ಶಾಸಕರಿಗೆ ಸುರ್ಜೇವಾಲ ನೇರ ಎಚ್ಚರಿಕೆ: ಕಾಂಗ್ರೆಸ್ ಬಣ ರಾಜಕೀಯಕ್ಕೆ ಬೀಳುತ್ತಾ ಬ್ರೇಕ್?
ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸುರ್ಜೇವಾಲ, ಪಕ್ಷದ ಚೌಕಟ್ಟು ಮೀರಿ ಸಚಿವರು, ಶಾಸಕರು ಮಾತನಾಡುವಂತಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಚೌಕಟ್ಟು ಮೀರಿ ಹೇಳಿಕೆಗಳನ್ನು ನೀಡಿದರೆ ಶಿಸ್ತು ಕ್ರಮ ಜರುಗಿಸುತ್ತೇವೆ ಎಂದೂ ಹೇಳಿದ್ದಾರೆ.
ಬೆಂಗಳೂರು, ನವೆಂಬರ್ 1: ರಾಜ್ಯ ಕಾಂಗ್ರೆಸ್ನಲ್ಲಿ (Karnataka Congress) ಆಂತರಿಕ ಕಲಹ, ಅಸಮಾಧಾನ, ವಿಭಿನ್ನ ಹೇಳಿಕೆಗಳು ಹೆಚ್ಚಾಗುತ್ತಿರುವಂತೆಯೇ ಅದಕ್ಕೆ ತೇಪೆ ಹಚ್ಚಲು ಹೈಕಮಾಂಡ್ ಮುಂದಾಗಿದೆ. ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ರಾಜ್ಯಕ್ಕೆ ಆಗಮಿಸಿದ್ದು, ಪಕ್ಷದ ನಾಯಕರ ಜತೆ ಸಮಾಲೋಚನೆ ನಡೆಸಿದ್ದಾರೆ. ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸುರ್ಜೇವಾಲ, ಪಕ್ಷದ ಚೌಕಟ್ಟು ಮೀರಿ ಸಚಿವರು, ಶಾಸಕರು ಮಾತನಾಡುವಂತಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಚೌಕಟ್ಟು ಮೀರಿ ಹೇಳಿಕೆಗಳನ್ನು ನೀಡಿದರೆ ಶಿಸ್ತು ಕ್ರಮ ಜರುಗಿಸುತ್ತೇವೆ ಎಂದೂ ಹೇಳಿದ್ದಾರೆ.
ಸಭೆಯಲ್ಲಿ ನಿಗಮ ಮಂಡಳಿಗಳ ನೇಮಕ ಬಗ್ಗೆಯೂ ಚರ್ಚೆ ಆಗಿದೆ. ನಿಗಮ ಮಂಡಳಿ ನೇಮಕದ ಕುರಿತು ಮತ್ತಷ್ಟು ಚರ್ಚೆ ಆಗಬೇಕಿದೆ. ಮಧ್ಯಪ್ರದೇಶ ಚುನಾವಣೆ ಮುಗಿದ ಬಳಿಕ ಮತ್ತೆ ವಾಪಸ್ ಬರುತ್ತೇನೆ. 2-3 ಹಂತದ ಮಾತುಕತೆ ಆಗುವುದು ಬಾಕಿ ಇದೆ ಎಂದು ಸಿಂಗ್ ಸುರ್ಜೇವಾಲ ಹೇಳಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆ ಸಂಬಂಧ ಚರ್ಚೆ ಮಾಡಿದ್ದೇವೆ. ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರೂ ಭರವಸೆ ನೀಡಿದ್ದಾರೆ. ಅಭ್ಯರ್ಥಿಗಳ ಘೋಷಣೆ ವಿಳಂಬ ಆಗಬಾರದೆಂದು ಚರ್ಚೆ ಮಾಡಿದ್ದೇವೆ. ಕಾಂಗ್ರೆಸ್ ಗ್ಯಾರಂಟಿಗಳ ಜಾರಿಯಿಂದ ಜನರಿಗೆ ಅನುಕೂಲವಾಗಿದೆ. ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಕೆಲಸ ಆಗಬೇಕಿದೆ. ಮುಂದಿನ 15 ದಿನಗಳ ಒಳಗಾಗಿ ಮೊದಲ ಹಂತದ ಸಭೆ ನಡೆಯಲಿದೆ. ಯಾರು ಸೂಕ್ತ ಅಭ್ಯರ್ಥಿ ಅಂತಾ ಪ್ರಾಥಮಿಕ ಹಂತದ ಚರ್ಚೆಯಾಗಿದೆ ಎಂದು ಸುರ್ಜೇವಾಲ ಹೇಳಿದರು.
ಇದನ್ನೂ ಓದಿ: ಕರ್ನಾಟಕದಲ್ಲಿ ರೈತರಿಗೆ ಐದು ಗಂಟೆ ವಿದ್ಯುತ್: ತೆಲಂಗಾಣ ಕಾಂಗ್ರೆಸ್ಗೆ ಹಿನ್ನಡೆಯಾದ ಡಿಕೆ ಶಿವಕುಮಾರ್ ಹೇಳಿಕೆ
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ: ಕೆಸಿ ವೇಣುಗೋಪಾಲ್
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದರು. ಪ್ರಧಾನಮಂತ್ರಿಗಳಿಗೆ ಏನಾದ್ರೂ ಸಂದೇಶ ರವಾನಿಸುವುದು ಇದ್ದರೆ ಹೇಳಿ. ಸಂದೇಶ ರವಾನೆ ಮಾಡಬೇಕಿದ್ರೆ ಹೇಳಿ, ನಾನು ಅವರಿಗೆ ತಿಳಿಸುತ್ತೇನೆ ಎಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕೆಸಿ ವೇಣುಗೋಪಾಲ್ ವ್ಯಂಗ್ಯವಾಡಿದರು.
ರಾಜಕಾರಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ