ಕೊಪ್ಪಳ, ಮೇ.23: ಆ ರೈತರಿಗೆಲ್ಲಾ ನಿಮ್ಮೂರಲ್ಲಿ ಪ್ಯಾಕ್ಟರಿಯಾಗುತ್ತದೆ. ನಿಮಗೆ ನೌಕರಿ ಸಿಗುತ್ತದೆ ಅಂತ ದಲ್ಲಾಳಿಗಳು ಆಸೆ ಹುಟ್ಟಿಸಿದ್ದರು. ದಲ್ಲಾಳಿಗಳ ಮಾತನ್ನು ನಂಬಿದ್ದ ರೈತರು ಕಡಿಮೆ ಬೆಲೆಗೆ ತಮ್ಮ ಭೂಮಿಯನ್ನು ಮಾರಾಟ ಮಾಡಿದ್ದರು. ಆದ್ರೆ ದಲ್ಲಾಳಿಗಳು ಪ್ಯಾಕ್ಟರಿಯ ಹೆಸರಲ್ಲಿ ಭೂಮಿ ಖರೀದಿಸದೆ, ಕಂಪನಿ ಮಾಲೀಕರಿಗೆ ಬೇಕಾದ ವ್ಯಕ್ತಿಗಳ ಹೆಸರಲ್ಲಿ ಭೂಮಿ ಖರೀದಿಸಿದ್ದಾರೆ. ಆದರೆ ಭೂಮಿ ಖರೀದಿಸಿ ದಶಕವಾದ್ರು ಕೂಡಾ ಪ್ಯಾಕ್ಟರಿಯನ್ನು ಆರಂಭ ಮಾಡಿಲ್ಲ. ಕೆಲಸವನ್ನು ಕೂಡಾ ನೀಡ್ತಿಲ್ಲ. ಇಷ್ಟು ದಿನ ಉಳುಮೆ ಮಾಡ್ತಿದ್ದ ರೈತರಿಗೆ ಇದೀಗ ಉಳುಮೆಗೆ ಕೂಡಾ ಅವಕಾಶವನ್ನು ನೀಡ್ತಿಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಭೂಮಿಗೆ ಬೇಲಿ ಹಾಕಲು ಬಂದವರ ವಿರುದ್ದ ಇಂದು ಅನ್ನದಾತರು ಸಿಡಿದೆದ್ದಿದ್ದಾರೆ. ತಮಗೆ ನ್ಯಾಯ ಕೊಡಿಸಿ ಅಂತ ಪೊಲೀಸರ ಕಾಲಿಗೆ ಬಿದ್ದು ಬೇಡಿಕೊಂಡಿದ್ದಾರೆ.
ಕೊಪ್ಪಳ ತಾಲೂಕಿನ ಕುಣಿಕೇರಿ ತಾಂಡಾ, ಕುಣಿಕೇರಿ, ಹಿರೆಬಗನಾಳ, ಚಿಕ್ಕಬಗನಾಳ ಗ್ರಾಮಸ್ಥರು, ತಮ್ಮೂರಲ್ಲಿ ಸ್ಟೀಲ್ ಪ್ಯಾಕ್ಟರಿ ಬರುತ್ತದೆ ಅಂತ ಹೇಳಿದ್ದಕ್ಕೆ ಸಂತಸಗೊಂಡಿದ್ದರು. ಜೊತೆಗೆ ಭೂಮಿ ನೀಡಿದ ರೈತರ ಕುಟುಂಬಕ್ಕೆ ಉದ್ಯೋಗ ಕೂಡಾ ನೀಡ್ತೇವೆ ಅಂತ ಹೇಳಿದ್ದರಿಂದ ರೈತರ ಸಂತಸ ಡಬಲ್ ಆಗಿತ್ತು. ಎಕ್ಸ್ ಇಂಡಿಯಾ ಸ್ಟೀಲ್ ಕಂಪನಿ ಆರಂಭ ಆಗುತ್ತದೆ ಅಂತ ಕಂಪನಿಯವರು ಮತ್ತು ಕೆಲ ಮಧ್ಯವರ್ತಿಗಳು ಕುಣಿಕೇರಿ ತಾಂಡಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಬಣ್ಣಬಣ್ಣದ ಬರವಸೆ ನೀಡಿದ್ದರು. ಹೀಗಾಗಿ 2008 ರಿಂದ 2011 ರವರಗೆ ನೂರಾರು ರೈತರು ತಮ್ಮ ಫಲವತ್ತಾದ ಮುನ್ನೂರು ಎಕರೆಗೂ ಹೆಚ್ಚು ಕೃಷಿ ಭೂಮಿಯನ್ನು ನೀಡಿದ್ದಾರೆ. ಆರಂಭದಲ್ಲಿ ಪ್ರತಿ ಎಕರೆಗೆ ಒಂದು ಲಕ್ಷ ನೀಡಿದ್ದ ದಲ್ಲಾಳಿಗಳು, ನಂತರ ಐದರಿಂದ ಆರು ಲಕ್ಷ ಎಕರೆಗೆ ಪ್ರತಿ ಎಕರೆ ಭೂಮಿಯನ್ನು ಖರೀದಿಸಿದ್ದಾರೆ.
ಇದನ್ನೂ ಓದಿ: ಚಾಮುಂಡಿಬೆಟ್ಟದ ತಪ್ಪಲಲ್ಲಿ ಮಂಗವೊಂದರ ಕಪಿಚೇಷ್ಟೆ, ಭಕ್ತೆಯ ಫೋನ್ ಕಸಿದು ಮರಹತ್ತಿದ ಕಪಿರಾಯ!
ಆದರೆ ಭೂಮಿ ಖರೀದಿಸುವಾಗ ಸ್ಟೀಲ್ ಕಂಪನಿ ಹೆಸರಲ್ಲಿ ಭೂಮಿಯನ್ನು ಖರೀದಿಸದ ಮಾಲೀಕರು, ಕೆಲ ವ್ಯಕ್ತಿಗಳ ಹೆಸರಲ್ಲಿ ಭೂಮಿಯನ್ನು ಖರೀದಿಸಿದ್ದರು. ಜೊತೆಗೆ ಭೂಮಿ ನೀಡಿದ ಪ್ರತಿಯೊಬ್ಬ ರೈತರಿಗೆ ಕೂಡಾ ಎಕ್ಸ್ ಇಂಡಿಯಾ ಕಂಪನಿ ಹೆಸರಲ್ಲಿ ಉದ್ಯೋಗ ನೀಡೋ ಪ್ರಮಾಣ ಪತ್ರವನ್ನು ಕೂಡಾ ನೀಡಿದ್ದರು. ಆದರೆ ಭೂಮಿಯನ್ನು ನೀಡಿ ದಶಕವಾದ್ರು ಕೂಡಾ ಇಲ್ಲಿವರಗೆ ಯಾವುದೇ ಪ್ಯಾಕ್ಟರಿಯನ್ನು ಆರಂಭ ಮಾಡಿಲ್ಲ. ಪಾಳು ಬಿದ್ದ ಭೂಮಿಯನ್ನು ರೈತರೇ ಉಳುಮೆ ಮಾಡಿಕೊಳ್ಳುತ್ತಿದ್ದರು. ಆದ್ರೆ ಇದೀಗ ಪ್ಯಾಕ್ಟರಿ ಹೆಸರಲ್ಲಿ ಭೂಮಿ ಖರೀದಿಸಿದವರು, ಈ ವರ್ಷ ರೈತರಿಗೆ ಉಳುಮೆ ಮಾಡಲು ಅವಕಾಶ ನೀಡಿಲ್ಲಾ. ಇನ್ನು ಮುಂದೆ ನಿಮಗೆ ಭೂಮಿ ಉಳುಮೆಗೆ ಅವಕಾಶವಿಲ್ಲ. ಈ ಭೂಮಿ ತಮ್ಮದು ಅಂತ ಹೇಳಿ, ಭೂಮಿಯನ್ನು ಸರ್ವೇ ಮಾಡಿಸಿ ಬೇಲಿ ಹಾಕಲು ಬಂದಿದ್ದರು. ಇದು ಭೂಮಿ ಕಳೆದುಕೊಂಡವರ ಆಕ್ರೋಶಕ್ಕೆ ಕಾರಣವಾಗಿದೆ.
ತಮಗೆ ಇಲ್ಲವೇ ತಮ್ಮ ಮಕ್ಕಳಿಗೆ ಪ್ಯಾಕ್ಟರಿಯಲ್ಲಿ ಕೆಲಸ ಸಿಗುತ್ತೆ ಅನ್ನೋ ಉದ್ದೇಶದಿಂದ ನಾವು ಭೂಮಿ ಕೊಟ್ಟಿದ್ದೆವು. ಆದ್ರೆ ಇಲ್ಲಿವರಗೆ ಪ್ಯಾಕ್ಟರಿ ಆರಂಭ ಮಾಡಿಲ್ಲ. ಪ್ಯಾಕ್ಟರಿಯಲ್ಲಿಯೇ ಉದ್ಯೋಗ ಸಿಗುತ್ತೆ ಅನ್ನೋ ಕಾರಣಕ್ಕೆ ಅನೇಕರು ಬೇರೆ ಉದ್ಯೋಗಕ್ಕೆ ಹೋಗಿಲ್ಲ. ಇದೀಗ ಉದ್ಯೋಗವನ್ನು ನೀಡದೆ, ಕೊಟ್ಟ ಭೂಮಿಯನ್ನು ಕೂಡಾ ಕಸಿದುಕೊಂಡರೆ ನಾವು ಹೊಟ್ಟೆ ತುಂಬಿಸಿಕೊಳ್ಳೋದು ಹೇಗೆ ಅಂತ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಪ್ಯಾಕ್ಟರಿಯವರನ್ನು ಕೇಳಲು ಹೋದ್ರೆ, ನೀವು ನಮ್ಮ ಪ್ಯಾಕ್ಟರಿಗೆ ಭೂಮಿ ಕೊಟ್ಟಿಲ್ಲ. ಭೂಮಿ ಕೊಟ್ಟವರಿಗೆ ಕೇಳಿ ಅಂತಿದ್ದಾರಂತೆ. ಇತ್ತ ಭೂಮಿ ಕೊಟ್ಟವರು, ನಾವು ದುಡ್ಡು ಕೊಟ್ಟು, ಭೂಮಿ ಖರೀದಿ ಮಾಡದ್ದೇವೆ. ಉದ್ಯೋಗದ ಬಗ್ಗೆ ನಮಗೆ ಗೊತ್ತಿಲ್ಲ ಅಂತ ಹೇಳ್ತಿದ್ದಾರಂತೆ. ಹೀಗಾಗಿ ರೈತರು ಇಂದು ಭೂಮಿಗೆ ಬೇಲಿ ಹಾಕಲು ಬಂದವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಉಳುಮೆ ಮಾಡಲು ಟ್ರ್ಯಾಕ್ಟರ್ ಸಮೇತ ಜಮೀನಿಗೆ ಆಗಮಿಸಿದ್ದರು. ಆದ್ರೆ ಉಳುಮೆಗೆ ಆವಕಾಶ ನೀಡದೇ ಇದ್ದಾಗ ರೈತರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಎಕ್ಸ್ ಇಂಡಿಯಾ ಸ್ಟೀಲ್ ಕಂಪನಿ ಪರವಾಗಿ ಭೂಮಿ ಖರೀದಿಸಿದವರು ಯಾರು ಕೂಡಾ ಪ್ರತಿಕ್ರಿಯೇ ನೀಡಲು ನಿರಾಕರಿಸಿದ್ದಾರೆ. ಇನ್ನು ನಮಗೆ ಉದ್ಯೋಗವಾದ್ರು ನೀಡಬೇಕು, ಇಲ್ಲವೇ, ನಮ್ಮ ಭೂಮಿಯನ್ನು ನಮಗೆ ಮರಳಿ ನೀಡಬೇಕು ಅಂತ ರೈತರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಉದ್ಯೋಗ ನೀಡ್ತೇವೆ ಅಂತ ಭೂಮಿ ಖರೀದಿಸಿದವರು, ಕಂಪನಿಯವರ ಜೊತೆ ಮಾತನಾಡಿ, ಆದಷ್ಟು ಬೇಗನೆ ಕಂಪನಿ ಆರಂಭಿಸಿ, ಉದ್ಯೋಗ ನೀಡುವ ಕೆಲಸ ಮಾಡಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ