ಕೊಪ್ಪಳ: ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ದುರ್ಮರಣ (Accident) ಹೊಂದಿರುವಂತಹ ಘಟನೆ ಜಿಲ್ಲೆಯ ಕುಕನೂರು ತಾಲೂಕಿನ ಬಾನಾಪುರ ಗ್ರಾಮದ ಬಳಿ ತಡರಾತ್ರಿ ಅಪಘಾತ ಸಂಭವಿಸಿದೆ. ಸ್ಕಾರ್ಪಿಯೋ ಕಾರಿನಲ್ಲಿದ್ದ ಐವರು ಸಾವನ್ನಪ್ಪಿದ್ದು, ನಾಲ್ವರಿಗೆ ಗಾಯವಾಗಿದೆ. ದೇವಪ್ಪ, ಗಿರಿಜಮ್ಮ, ಪಾರವ್ವ, ಶಾಂತವ್ವ, ಗಿರಿಜಮ್ಮ ಮೃತರು. ಸಿರಿಯಪ್ಪ, ಭೂಮಿಕಾ, ಪುಷ್ಪರಾಜ್, ಪಲ್ಲವಿ ಗಾಯಾಳು. ಮೃತರನ್ನು ಯಲಬುರ್ಗಾ ತಾಲೂಕಿನ ಬಿನ್ನಾಳ ಗ್ರಾಮದವರು. ನಾಲ್ವರು ಗಾಯಾಳುಗಳು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಬರ್ತಡೇ ಪಾರ್ಟಿ ಮುಗಿಸಿಕೊಂಡು ಹೋಗುವಾಗ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಕುಕನೂರು ಪೊಲೀಸರ ಭೇಟಿ, ಪರಿಶೀಲನೆ ಮಾಡಿದರು.
ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ
ಇನ್ನೂ ಘಟನಾ ಸ್ಥಳಕ್ಕೆ ಕುಕನೂರ ತಾಲೂಕು ಆಸ್ಪತ್ರೆಗೆ ಸಚಿವ ಹಾಲಪ್ಪ ಆಚಾರ್ ಭೇಟಿ ನೀಡಿದ್ದು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದರು. ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್ ಮಾಹಿತಿ ನೀಡಿದ್ದಾರೆ.
ಸಾಮೂಹಿಕ ಅಂತ್ಯಕ್ರಿಯೆ
ಕೊಪ್ಪಳ ಜಿಲ್ಲೆ ಕುಕನೂರ ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ದೇವಪ್ಪ, ಗಿರಿಜವ್ವ, ಶಾಂತಮ್ಮ, ಪಾರವ್ವರ ನಾಲ್ವರ ಸಾಮೂಹಿಕ ಅಂತ್ಯಕ್ರಿಯೆ ನಡೆಯಲಿದೆ. ಸಾಮೂಹಿಕ ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಐವರ ಪೈಕಿ ಕಸ್ತೂರೆವ್ವ ಅಂತ್ಯಕ್ರಿಯೆ ಅವರ ಸ್ವಗ್ರಾಮ ತಿಮ್ಮಾಪೂರದಲ್ಲಿ ನಡೆಯಲಿದೆ.
ಗಾಂಜಾ ಸಾಗಿಸುತ್ತಿದ್ದವರು ಅಂದರ್
ಉಡುಪಿ: ಜಿಲ್ಲೆಯ ಪೆರ್ಡೂರು ಗ್ರಾಮದ ಜೋಗಿಬೆಟ್ಟು ಬಳಿ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಉಡುಪಿ ಸೆನ್ ಅಪರಾಧ ಪೊಲೀಸರು ಕಾರ್ಯಾಚರಣೆ ನಡೆಸಿ ವಿಜಯ್ ಕುಮಾರ್ ಎಸ್, ನಿಕ್ಷೇಪ್ ಎಸ್.ವಿ.,ನಿ ತೇಶ್ ಕುಮಾರ್ನನ್ನ ಬಂಧಿಸಿ, 6.09 ಲಕ್ಷ ರೂಪಾಯಿ ಮೌಲ್ಯದ 20 ಕೆಜಿ ಗಾಂಜಾ, ಕಾರು, 6 ಸಾವಿರ ನಗದು ಹಾಗೂ 3 ಮೊಬೈಲ್ಗಳನ್ನ ವಶಕ್ಕೆ ಪಡೆದಿದ್ದಾರೆ.
ಚಿನ್ನದ ಸರ ಎಗರಿಸಿದ್ದ ಖದೀಮ ಲಾಕ್
ಬೆಂಗಳೂರು: ಹಣ ಕೇಳುವ ನೆಪದಲ್ಲಿ ಮನೆಗೆ ಬಂದು ಮಹಿಳೆಯ ಚಿನ್ನದ ಸರ ಕದ್ದು ಪರಾರಿಯಾಗಿದ್ದ ಆರೋಪಿ ಅಂದರ್ ಆಗಿದ್ದಾನೆ. ದಾವಣಗೆರೆ ಮೂಲದ ಸಿದ್ಧರಾಮ ಎಂಬ ಆರೋಪಿಯನ್ನ ಬಂಧಿಸಿದ್ದು, 3.90 ಲಕ್ಷ ಮೌಲ್ಯದ 78 ಗ್ರಾಂ ಚಿನ್ನಾಭರಣವನ್ನ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ಜುಲೈ 20ರಂದು ಕಾಮಾಕ್ಷಿಪಾಳ್ಯದ ಮಹದೇಶ್ವರ ನಗರದಲ್ಲಿ ಮನೆಯೊಂದಕ್ಕೆ ಹಣ ಸಹಾಯ ಕೇಳಲು ಬಂದು ಚಿನ್ನದ ಸರ ಕದ್ದು ಆರೋಪಿ ಪರಾರಿಯಾಗಿದ್ದ.
ಎಲೆಕ್ಟ್ರಿಕ್ ಬೈಕ್ ಧಗಧಗ
ಶಾರ್ಟ್ ಸರ್ಕ್ಯೂಟ್ನಿಂದಾಗಿ ಎಲೆಕ್ಟ್ರಿಕ್ ಬೈಕ್ ಹೊತ್ತಿ ಉರಿದಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಜುಮ್ಮಾ ಕಾಂಪ್ಲೆಕ್ಸ್ ಬಳಿ ನಡೆದಿದೆ. ಓವರ್ ಹೀಟ್ ಆದ ಪರಿಣಾಮ ಬೈಕ್ನಲ್ಲಿ ಬೆಂಕಿ ಕಾಣಿಸಿಕೊಂಡು ನೋಡ ನೋಡುತ್ತಿದ್ದಂತೆ ಬೈಕ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಅವಘಡದಲ್ಲಿ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಕೆ.ಆರ್.ಪೇಟೆ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 6:45 am, Sun, 24 July 22