ಕೊಪ್ಪಳ, ಮಾ.30: ನಗರದ ಜಿಲ್ಲಾ ಆಸ್ಪತ್ರೆಯ(Koppal District Hospital) ಆವರಣದಲ್ಲಿ ನೂರು ಬೆಡ್ಗಳು ಸುಸಜ್ಜಿತ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಅನೇಕ ವರ್ಷಗಳ ಹಿಂದೆಯೇ ಆರಂಭಿಸಲಾಗಿದೆ. ಆದ್ರೆ, ಹೆಸರಿಗೆ ಮಾತ್ರ ಈ ಆಸ್ಪತ್ರೆ ಸುಸಜ್ಜಿತ ಎಂದು ಬೋರ್ಡ್ ಹಾಕಲಾಗಿದೆ. ಹೌದು, ಈ ಆಸ್ಪತ್ರೆಯಲ್ಲಿ ಹತ್ತಾರು ಸಮಸ್ಯೆಗಳಿವೆ. ಅದರಲ್ಲೂ ಪ್ರಮುಖವಾಗಿ ಕುಡಿಯುವ ನೀರಿನ ಸಮಸ್ಯೆ ದೊಡ್ಡಮಟ್ಟದಲ್ಲಿ ಇದೆ. ಆಸ್ಪತ್ರೆಯಲ್ಲಿ ರೋಗಿಗಳು ಮತ್ತು ಸಂಬಂಧಿಗಳಿಗಾಗಿ ಕುಡಿಯುವ ನೀರು ಸಿಗಲಿ ಎನ್ನುವ ಉದ್ದೇಶದಿಂದಲೇ ಶುದ್ದ ಕುಡಿಯುವ ಘಟಕಗಳನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಳವಡಿಸಲಾಗಿದೆ. ಆದರೆ, ಅವುಗಳಲ್ಲಿ ನೀರು ಮಾತ್ರ ಬರುತ್ತಿಲ್ಲ.
ಹೀಗಾಗಿ ಅನಿವಾರ್ಯವಾಗಿ ಹೆರಿಗೆಗೆ ಬಂದವರು ಮತ್ತು ಮಕ್ಕಳ ಚಿಕಿತ್ಸೆಗಾಗಿ ಬಂದವರು ನೂರಾರು ರೂಪಾಯಿ ಖರ್ಚು ಮಾಡಿಕೊಂಡು, ಅರ್ಧ ಕಿಲೋ ಮೀಟರ್ ದೂರ ಹೋಗಿ, ನೀರಿನ ಬಾಟಲ್ಗಳನ್ನು ಖರೀದಿಸಿ ತಂದು ನೀರು ಕುಡಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಈ ಆಸ್ಪತ್ರೆಗೆ ಗ್ರಾಮೀಣ ಭಾಗದಿಂದ ಪ್ರತಿನಿತ್ಯ ನೂರಾರು ಜನ ಬಡ ರೋಗಿಗಳು ಬರುತ್ತಾರೆ. ಆದ್ರೆ, ಬಂದವರಿಗೆ ನೀರಿನ ಸಮಸ್ಯೆ ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ. ಇನ್ನು ಆಸ್ಪತ್ರೆಯಲ್ಲಿ ನೀರು ಇದ್ದರೂ ಕೂಡ ನೀರನ್ನು ಸರಿಯಾಗಿ ಬಿಡಲು ಸಿಬ್ಬಂದಿ ಸರಿಯಾದ ಕ್ರಮ ಕೈಗೊಳ್ಳದೇ ಇರುವುದು ಸಮಸ್ಯೆಗೆ ಕಾರಣವಾಗುತ್ತಿದೆ. ಈ ಬಗ್ಗೆ ಈ ಹಿಂದೆ ಹತ್ತಾರು ಬಾರಿ ರೋಗಿಗಳು ಮತ್ತು ಸಂಬಂಧಿಗಳು ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನವಾಗುತ್ತಿಲ್ಲ.
ಇದನ್ನೂ ಓದಿ: ನೀರಿನ ಸಮಸ್ಯೆ ಎಂದು ನಗರ ತೊರೆಯಬೇಡಿ, ವ್ಯವಸ್ಥೆ ಮಾಡುತ್ತೇವೆ: ಐಟಿ ಕಂಪನಿಗಳಿಗೆ ಜಲ ಮಂಡಳಿ ಭರವಸೆ
ನೀರಿನ ಸಮಸ್ಯೆಯನ್ನು ಹೇಳಿಕೊಳ್ಳಲು ಅಧಿಕಾರಿಗಳಿಗೆ ಕರೆ ಮಾಡಿದ್ರೆ, ಅವರು ಯಾರು ಕೂಡ ಸ್ಪಂಧಿಸುತ್ತಿಲ್ಲವಂತೆ. ಹೀಗಾಗಿ ಅನಿವಾರ್ಯವಾಗಿ ರೋಗಿಯ ಸಂಬಂಧಿಗಳು, ಆಸ್ಪತ್ರೆಯ ಹೊರಗಡೆ ಹೋಗಿ ಹಣ ಕೊಟ್ಟು ಬಾಟಲ್ ನೀರನ್ನು ತಂದು ಕುಡಿಯುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಗೆ ಬರುವವರು ನೀರಿಗಾಗಿಯೇ ನೂರಾರು ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಇನ್ನಾದರೂ ಆಸ್ಪತ್ರೆಯ ಸಿಬ್ಬಂದಿ ನೀರಿಗಾಗಿ ವ್ಯವಸ್ಥೆ ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ