ಬೆಂಗಳೂರು: ಕೇಂದ್ರದಿಂದ ಖೇಲ್ರತ್ನ ಪ್ರಶಸ್ತಿ ಹೆಸರು ಬದಲಾವಣೆ ವಿಚಾರವಾಗಿ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು (ಆಗಸ್ಟ್ 7) ಹೇಳಿಕೆ ನೀಡಿದ್ದಾರೆ. ದ್ವೇಷದ ರಾಜಕಾರಣ ಕೈಬಿಡುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹ ವ್ಯಕ್ತಪಡಿಸಿದ್ದಾರೆ. ರಾಜೀವ್ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಹಾಗಾಗಿ ಖೇಲ್ರತ್ನ ಪ್ರಶಸ್ತಿಗೆ ರಾಜೀವ್ ಗಾಂಧಿ ಹೆಸರಿಟ್ಟಿದ್ದರು. ನಿಮ್ಮ ಅವಧಿಯಲ್ಲಿ ಧ್ಯಾನ್ಚಂದ್ ವಿಶ್ವವಿದ್ಯಾಲಯ ಆರಂಭಿಸಿ. ಧ್ಯಾನ್ಚಂದ್ ವಿವಿ ಆರಂಭಿಸಿ ಕ್ರೀಡಾಪಟುಗಳಿಗೆ ತರಬೇತಿ ನೀಡಿ. ಕೇವಲ ಗಾಂಧಿ ಕುಟುಂಬದ ಹೆಸರು ಬದಲಿಸುವ ಕೆಲಸ ಬೇಡ ಎಂದು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಇಂದಿರಾ ಕ್ಯಾಂಟೀನ್ ಹೆಸರು ಬದಲಿಸುವಂತೆ ಟ್ವೀಟ್ ಮೂಲಕ ಸಿಎಂ ಬಸವರಾಜ ಬೊಮ್ಮಾಯಿಗೆ ಒತ್ತಾಯಿಸಿದ್ದ ಸಿ.ಟಿ. ರವಿ ವಿಚಾರವಾಗಿ ಶಿವಕುಮಾರ್ ಮಾತನಾಡಿದ್ದಾರೆ. ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಲು ಕೈಹಾಕಿದ್ರೆ ಸುಮ್ಮನಿರಲ್ಲ. ನಾವೇನು ಸುಮ್ಮನೆ ಕೈಕಟ್ಟಿಕೊಂಡು, ಬಳೆ ತೊಟ್ಟು ಕುಳಿತಿಲ್ಲ ಎಂದು ಗುಡುಗಿದ್ದಾರೆ.
ಜನಾಭಿಪ್ರಾಯ ಮೇರೆಗೆ ಹೆಸರು ಬದಲಾವಣೆ ಎಂದು ಹೇಳುತ್ತೀರಿ. ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಇಳಿಸುವಂತೆ ಆಗ್ರಹವಿದೆ. ತೈಲ ದರ ಇಳಿಸುವಂತೆ ಜನಾಭಿಪ್ರಾಯ ವ್ಯಕ್ತವಾಗುತ್ತಿದೆ. ಹಾಗಾದರೆ ನೀವ್ಯಾಕೆ ತೈಲ ದರ ಇಳಿಕೆ ಮಾಡಲು ಯತ್ನಿಸುತ್ತಿಲ್ಲ. ಗಿಮಿಕ್ ರಾಜಕಾರಣ ಬಿಟ್ಟು, ಜನಸೇವೆ ಮಾಡಲು ಪ್ರಯತ್ನಿಸಿ. ಕೇಂದ್ರ ಸರ್ಕಾರದ ನಡೆಯಿಂದ ದ್ವೇಷದ ಮನೋಭಾವ ಹೆಚ್ಚುತ್ತಿದೆ ಎಂದು ಶಿವಕುಮಾರ್ ಕಿಡಿಕಾರಿದ್ದಾರೆ.
ಇಂದಿರಾ ಕ್ಯಾಂಟೀನ್ ಹೆಸರು ಬದಲಿಸುವುದಲ್ಲ, ಮುಟ್ಟಿ ನೋಡಲಿ ಎಂದು ಸಿ.ಟಿ.ರವಿ ಸೇರಿದಂತೆ ಬಿಜೆಪಿ ನಾಯಕರಿಗೆ ಡಿಕೆಶಿ ನೇರ ಸವಾಲು ಹಾಕಿದ್ದಾರೆ. ನಾವು ಸುಮ್ಮನೆ ಕುಳಿತಿಲ್ಲ, ಆಮೇಲೆ ಏನಾಗುತ್ತೆಂದು ಗೊತ್ತಾಗುತ್ತೆ. ಬಿಜೆಪಿ ಅವಧಿಯಲ್ಲಿ ಅಟಲ್ ಸಾರಿಗೆ ಎಂದು ಯೋಜನೆ ಜಾರಿ ಆಗಿತ್ತು. ನಮ್ಮ ಅವಧಿಯಲ್ಲಿ ಅಟಲ್ ಸಾರಿಗೆ ಯೋಜನೆ ಮುಂದುವರಿಸಿದ್ವಿ. ಸಾಧಕರು, ಮಹನೀಯರ ಹೆಸರಿನ ಯೋಜನೆಗೆ ತಡೆ ನೀಡಬೇಡಿ. ಕೇವಲ ಹೆಸರು ಬದಲಾವಣೆಯೇ ಸರ್ಕಾರದ ಸಾಧನೆಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರ ಖಂಡನೀಯ. ಧ್ಯಾನ್ ಚಂದ್ ನಮ್ಮ ದೇಶದ ಆಸ್ತಿ. ಆ ಬಗ್ಗೆ ತಕರಾರು ಇಲ್ಲ. ಆದರೆ, ಅವರ ಹೆಸರಲ್ಲಿ ಇನ್ನೇನಾದರೂ ಪ್ರಶಸ್ತಿ ಅಥವಾ ಸಂಸ್ಥೆ ಮಾಡಲಿ. ಗಾಂಧಿ ಪರಿವಾರದ ಹೆಸರಿದೆ ಅನ್ನೋ ಕಾರಣಕ್ಕೆ ಈ ರೀತಿ ಮಾಡಿದರೆ ನಾವು ಸುಮ್ನೆ ಕೂರೋಲ್ಲ ಎಂದು ತಿಳಿಸಿದ್ದಾರೆ.
ಮೊದಲು ರಾಜ್ಯದ ಎಲ್ಲಾ ಜನರಿಗೆ ಲಸಿಕೆ ಕೊಡಿ
ಕೊರೊನಾ 3ನೇ ಅಲೆ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ ವಿಚಾರವಾಗಿ ಮಾತನಾಡಿದ ಡಿ.ಕೆ. ಶಿವಕುಮಾರ್, ಮೊದಲು ರಾಜ್ಯದ ಎಲ್ಲಾ ಜನರಿಗೆ ಲಸಿಕೆ ಕೊಡಿ. ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಬೇಕಿರುವ ಲಸಿಕೆ ಪಡೆಯಿರಿ. ಈ ನಿಟ್ಟಿನಲ್ಲಿ ನೂತನ ಸಿಎಂ ಬೊಮ್ಮಾಯಿ ಪ್ರಯತ್ನ ಮಾಡಲಿ. ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡಬೇಡಿ ಎಂದು ಹೇಳಿದ್ದಾರೆ.
ನೆರೆಹೊರೆಯ ರಾಜ್ಯದ ಸಿಎಂಗಳನ್ನಾದರೂ ನೋಡಿ ಕಲಿಯಿರಿ. ವ್ಯಾಕ್ಸಿನ್ ನೀಡಿ ರಾಜ್ಯದ ಜನರನ್ನು ಕೊರೊನಾದಿಂದ ರಕ್ಷಿಸಿ. ಆಡಳಿತ ನಡೆಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನೆರೆಹೊರೆಯ ರಾಜ್ಯಗಳ ಜತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಹೇಳಿಕೆ ನೀಡಿದ್ದಾರೆ.
ಬೆಂಗಳೂರು ನಗರದಲ್ಲೂ ಆಸ್ತಿ ತೆರಿಗೆ ಮನ್ನಾ ಮಾಡಲಿ
ಬೆಂಗಳೂರು ನಗರದಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡಿದ ವಿಚಾರವಾಗಿಯೂ ಅವರು ಪ್ರತಿಕ್ರಿಯಿಸಿದ್ದಾರೆ. ಪಾಲಿಕೆ ಕೌನ್ಸಿಲ್‌ನಲ್ಲಿ ನಿರ್ಣಯ ಮಂಡಿಸಿ ಹೆಚ್ಚಿಸುವಂತಿಲ್ಲ. ಆಸ್ತಿ ತೆರಿಗೆ ಶೇಕಡಾ 10ಕ್ಕಿಂತ ಹೆಚ್ಚಳ ಮಾಡುವಂತಿಲ್ಲ. ಆದ್ರೆ ಆಸ್ತಿ ತೆರಿಗೆ ಹೇಗೆ ಹೆಚ್ಚಳ ಮಾಡಿದ್ದಾರೋ ಗೊತ್ತಾಗುತ್ತಿಲ್ಲ. ಆಸ್ತಿ ತೆರಿಗೆ ಸಂಬಂಧ 28 ಸಾವಿರ ಜನರಿಗೆ ನೋಟಿಸ್ ಜಾರಿ ಮಾಡಲಾಗಿದೆ. 2020ರಲ್ಲಿ ಹೊಸ ಕಾಯ್ದೆ ಜಾರಿಗೆ ಬಂದಿದೆ. ಹಳೇ ಕಾಯ್ದೆ ಆಧಾರದಲ್ಲಿ ಏಕೆ ನೋಟಿಸ್ ಕೊಡಬೇಕು ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.
ಗುಜರಾತ್‌ನಲ್ಲಿ ಒಂದು ವರ್ಷ ಆಸ್ತಿ ತೆರಿಗೆ ಮನ್ನಾ ಮಾಡಿದ್ದಾರೆ. ಮಾತೆತ್ತಿದ್ರೆ ಬಿಜೆಪಿಯವರು ಗುಜರಾತ್ ಮಾದರಿ ಅಂತಾರಲ್ಲ. ಬೆಂಗಳೂರು ನಗರದಲ್ಲೂ ಆಸ್ತಿ ತೆರಿಗೆ ಮನ್ನಾ ಮಾಡಲಿ ಎಂದೂ ರಾಜ್ಯ ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
(KPCC President DK Shivakumar on Dhyan Chand Khel Ratna Award Vaccination Drive)
Published On - 2:37 pm, Sat, 7 August 21