
ಬೆಂಗಳೂರು: ಸಂಸದೆ ಶೋಭಾ ಕರಂದ್ಲಾಜೆ ಬಹಳ ದಿನಗಳ ನಂತರ ಮಾತನಾಡಿದ್ದಾರೆ. ಇಡೀ ದೇಶ ಹತ್ರಾಸ್ ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡುತ್ತಿರುವ ಸಂದರ್ಭದಲ್ಲಿ ಅದರ ಬಗ್ಗೆ ಮಾತನಾಡಲು ಶೋಭಾಗೆ ಸಮಯವಿಲ್ಲ ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಖಾರವಾಗಿ ಹೇಳಿದ್ದಾರೆ.
ಸೋನಿಯಾ ಗಾಂಧಿ ಅಧ್ಯಕ್ಷೆಯಾಗಿರುವ ಈ ಪಕ್ಷದಲ್ಲಿ ಮಹಿಳೆಯೊಬ್ಬಳು ಉಪಚುನಾವಣೆ ಅಭ್ಯರ್ಥಿಯಾಗಿರುವುದು ನಿಜಕ್ಕೂ ಹೆಮ್ಮೆ ಎಂದು ಪುಷ್ಪಾ ಅಮರನಾಥ್ ಖಾರವಾಗಿ ತಿರುಗೇಟು ಕೊಟ್ಟಿದ್ದಾರೆ.
‘ಗಂಡ ಸತ್ತ ನಂತರ ಮಹಿಳೆ ಮನೆಯಲ್ಲಿಯೇ ಇರಬೇಕಾ?’
ಶೋಭಾ ಕರಂದ್ಲಾಜೆ ಸಾವಿನ ರಾಜಕೀಯ ಮಾಡುತ್ತಿರುವವರು. ಕುಸುಮಾ ಡಿ.ಕೆ.ರವಿ ಹೆಸರನ್ನು ಬಳಕೆ ಮಾಡಬಾರದು ಎಂದು ಹೆಣ್ಣುಕುಲಕ್ಕೆ ಅವಮಾನವಾಗುವ ರೀತಿಯಲ್ಲಿ ಮಾತನಾಡಿದ್ದಾರೆ. ಈಗಾಗಲೇ, ಕುಸುಮಾ ಡಿ.ಕೆ ರವಿ ಹೆಸರು ಬಳಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ, ಗಂಡ ಸತ್ತ ನಂತರ ಮಹಿಳೆ ಸಮಾಜದಲ್ಲಿ ಮುಂಚೂಣಿಗೆ ಬರಬಾರದಾ? ಮನೆಯಲ್ಲಿಯೇ ಇರಬೇಕಾ? ಎಂದು ಪುಷ್ಪಾ ಪ್ರಶ್ನಿಸಿದ್ದಾರೆ. ಬಿಜೆಪಿಯ ಮನಸ್ಮೃತಿಯ ಮನಸ್ಥಿತಿ ಎಂಥದ್ದು ಎಂದು ಸಂಸದೆ ಶೋಭಾ ಕರಂದ್ಲಾಜೆ ತೋರಿಸಿದ್ದಾರೆ. ಇದನ್ನು ರಾಜರಾಜಶ್ವರಿ ನಗರದ ಮಹಿಳೆಯರು ಗಂಭೀರವಾಗಿ ಪರಿಗಣಿಸಿ ಬಿಜೆಪಿಗೆ ಪಾಠ ಕಲಿಸಬೇಕು ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಸುದ್ದಿಗೋಷ್ಠಿ ವೇಳೆ ಹೇಳಿದ್ದಾರೆ.
ಕರಂದ್ಲಾಜೆಯವರೇ ಒಂದು ಹೆಣ್ಣು ಮಗುವಿಗೆ ಗೌರವ ನೀಡಿ
ಶೋಭಾ ಕರಂದ್ಲಾಜೆ ಒಂದೇ ದಿಕ್ಕಿನಲ್ಲಿ ಯೋಚಿಸಬಾರದು. ಕುಸುಮಾ ಸಣ್ಣ ವಯಸ್ಸಿನಲ್ಲೇ ಗಂಡನನ್ನ ಕಳೆದುಕೊಂಡಿದ್ದಾರೆ. ಪತಿ ಕಳೆದುಕೊಂಡ ಅವರ ನೋವು ಯಾರಿಗೆ ಅರ್ಥವಾಗುತ್ತೆ. ತನ್ನ ಎಲ್ಲ ನೋವನ್ನು ಮರೆತು ಸಾಮಾಜ ಸೇವೆಗೆ ಬಂದಿದ್ದಾರೆ. ಅಂಥವರ ಬಗ್ಗೆ ಈ ರೀತಿಯಾಗಿ ಮಾತಾಡುವುದು ಸರಿಯಲ್ಲ.
ಶೋಭಾ ಕರಂದ್ಲಾಜೆಯವರೇ ಒಂದು ಹೆಣ್ಣು ಮಗುವಿಗೆ ಗೌರವ ನೀಡಿ. ಇದನ್ನು ಚರ್ಚಾ ವಿಷಯವಾಗಿ ಮಾಡುವುದಕ್ಕೆ ಹೋಗಬೇಡಿ. ವಿದ್ಯಾವಂತ ಹೆಣ್ಣುಮಗಳಿಗೆ ಗೌರವ ಕೊಡುವುದನ್ನ ಕಲಿಯಿರಿ. ಕುಸುಮಾ ಅಭ್ಯರ್ಥಿಯಾಗಿದ್ದಕ್ಕೆ ನಿಮಗೆ ಭಯ ಶುರುವಾಗಿದೆ. ಹೀಗಾಗಿ ಇಂತಹ ಮಾತುಗಳನ್ನು ಹೇಳುತ್ತಿದ್ದೀರೆಂದು ಉಮಾಶ್ರೀ ಟಾಂಗ್ ಕೊಟ್ಟಿದ್ದಾರೆ.
ಡಿಕೆ ರವಿ ಹೆಸರನ್ನು ಯಾರು ಬಳಸಿಕೊಂಡರೂ ಅವರಿಗೆ ಒಳ್ಳೆದಾಗಲ್ಲ -ಸಂಸದೆ ಶೋಭಾ