ಬೆಂಗಳೂರು: ಮುಷ್ಕರ ನಿರತ 2,443 ಬಿಎಂಟಿಸಿ ಸಿಬ್ಬಂದಿಯನ್ನು ಆಡಳಿತ ಮಂಡಳಿ ಅಮಾನತುಗೊಳಿಸಿದೆ. ನೋಟಿಸ್ ನೀಡಿದರೂ ಕೆಲಸಕ್ಕೆ ಹಾಜರಾಗದಿದ್ದಕ್ಕೆ ಬಿಎಂಟಿಸಿ ಅಮಾನತು ಅಸ್ತ್ರ ಪ್ರಯೋಗಿಸಿದೆ. ಸಸ್ಪೆಂಡ್ ಆದವರ ಪೈಕಿ 1,974 ಮಂದಿ ಹಿರಿಯ ನೌಕರರು ಎಂಬುದು ಗಮನಾರ್ಹ ಸಂಗತಿ. ನೋಟಿಸ್‌ಗೆ ಉತ್ತರ ನೀಡಲು ಸೋಮವಾರದವರೆಗೆ ಗಡುವು ನೀಡಲಾಗಿದೆ. ನೋಟಿಸ್‌ಗೆ ಸೂಕ್ತ ಕಾರಣ ನೀಡದಿದ್ರೆ ಎಲ್ಲ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಲಾಗುವುದು ಎಂದು ಬಿಎಂಟಿಸಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಕೈಗಾರಿಕಾ ವಿವಾದ ಕಾಯ್ದೆ 22 (1) ಡಿ ಅಡಿಯಲ್ಲಿ ಕೈಗಾರಿಕಾ ವಿವಾದ ಸಂಧಾನ ಪ್ರಕ್ರೀಯೆಯಲ್ಲಿರುವಾಗ ಯಾವುದೇ ನೌಕರರು ಮುಷ್ಕರ ನಡೆಸುವಂತಿಲ್ಲ ಎಂಬ ನಿಯಮವಿದೆ. ಸಾರಿಗೆ ನೌಕರರ ಕೂಟ ಏಪ್ರಿಲ್ 7ರಂದು ಮುಷ್ಕರದ ನೋಟೀಸ್ ನೀಡಿತ್ತು. ಆದರೆ ಏಪ್ರಿಲ್ 6ರ ಮಧ್ಯಾಹ್ನದಿಂದಲೇ ನೌಕರರು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಇದು ಕಾರ್ಮಿಕ ಕಾಯ್ದೆಯ ಸ್ಪಷ್ಟ ಉಲ್ಲಂಘನೆ. ಹೀಗಾಗಿ ಸದ್ಯ ನಡೆಯುತ್ತಿರೋ ಮುಷ್ಕರ ಕಾನೂನುಬಾಹಿರ ಎಂದು ಬಿಎಂಟಿಸಿ ಘೋಷಿಸಿದೆ. ಕಾನೂನುಬಾಹಿರ ಮುಷ್ಕರದಲ್ಲಿ ಭಾಗಿಯಾದ ನೌಕರರು ತಕ್ಷಣ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಬಿಎಂಟಿಸಿ ಸೂಚಿಸಿದೆ. ಆದರೆ ನೌಕರರು ಮುಷ್ಕರ ಮುಂದುವರೆಸಿದ ಕಾರಣ ಇಂದು ಅಮಾನತು ಅಸ್ತ್ರ ಪ್ರಯೋಗಿಸಿದೆ.
ಮೆಜೆಸ್ಟಿಕ್ನಲ್ಲಿ ಬಿಎಂಟಿಸಿ, ಖಾಸಗಿ ಬಸ್ ಚಾಲಕರ ನಡುವೆ ವಾಗ್ವಾದ
ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಮತ್ತು ಖಾಸಗಿ ಬಸ್ ಚಾಲಕರ ನಡುವೆ ವಾಗ್ವಾದ ನಡೆದಿದೆ. ರಾಜ್ಯದಲ್ಲಿ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆಯಲ್ಲಿ ನಗರದಲ್ಲಿ ನಗರದಲ್ಲಿ ಖಾಸಗಿ ಬಸ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಖಾಸಗಿ ಬಸ್‌ಗಳ ಮಧ್ಯೆ ಕೆಲ ಬಿಎಂಟಿಸಿ ಬಸ್ಗಳು ಸಂಚರಿಸಿವೆ. ಬಿಎಂಟಿಸಿ ಬಸ್‌ಗಳಲ್ಲಿ ಹೆಚ್ಚಿನ ಜನ ಪ್ರಯಾಣಿಸುವ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್ ಅಡ್ಡಗಟ್ಟಿ ಖಾಸಗಿ ಬಸ್ ಚಾಲಕರು ಗಲಾಟೆ ಮಾಡಿದ್ದರು.
ಬಾಗಲಕೋಟೆಯಲ್ಲಿ 129 ಸಿಬ್ಬಂದಿಗೆ ನೋಟಿಸ್
ಬಾಬಾಗಲಕೋಟೆ ಜಿಲ್ಲೆಯಲ್ಲಿ ಸಾರಿಗೆ ನೌಕರರ ವಿರುದ್ಧ ಕಠಿಣ ಕ್ರಮ ಜರುಗಿಸಲು ಕೆಎಸ್ಆರ್ಟಿಸಿ ಮುಂದಾಗಿದೆ. ಕರ್ತವ್ಯಕ್ಕೆ ಗೈರಾದ 129 ಚಾಲಕ, ನಿರ್ವಾಹಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಈವರೆಗೆ 80 ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದ್ದು, ಒಬ್ಬರನ್ನು ವಜಾ ಮಾಡಲಾಗಿದೆ ಎಂದು ಬಾಗಲಕೋಟೆ ವಿಭಾಗೀಯ ಅಧಿಕಾರಿ ಬಸವರಾಜ್ ಅಮ್ಮನ್ನವರ ಮಾಹಿತಿ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಇಂದು 76 ಚಾಲಕ / ನಿರ್ವಾಹಕರು, 146 ಮೆಕ್ಯಾನಿಕಲ್ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾದರು. ಜಿಲ್ಲೆಯಲ್ಲಿಂದು 39 ಬಸ್ಗಳು ಓಡಾಡಿದವು. ಹುನಗುಂದ ತಾಲೂಕಿನ ಧನ್ನೂರು ಬಳಿ ಬಸ್ ಮೇಲೆ ಕಲ್ಲು ಎಸೆಯಲಾಗಿದೆ. ಈ ಸಂಬಂಧ ಎಫ್ಐಆರ್ ದಾಖಲಿಸಲಾಗಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹಳ್ಳಿಮಾರನಹಳ್ಳಿ ಬಳಿ KSRTC ಬಸ್ ಮೇಲೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು. ಕನಕಪುರದಿಂದ ರಾಮನಗರಕ್ಕೆ ತೆರಳುತ್ತಿದ್ದ KSRTC ಬಸ್ ಮೇಲೆ ಕಲ್ಲು ತೂರಲಾಗಿದೆ. ಘಟನೆಯಲ್ಲಿ ಆದ ನಷ್ಟ ಮತ್ತು ಗಾಯಾಳುಗಳ ಮಾಹಿತಿ ಲಭ್ಯವಾಗಿಲ್ಲ.
(KSRTC BMTC Strike Staff on Strike to Face Strict Action for Violating Workers Act)
ಇದನ್ನೂ ಓದಿ: KSRTC BMTC Strike: ಸಾರಿಗೆ ಸಿಬ್ಬಂದಿಯಿಂದ 60 ಬಸ್‌ಗಳ ಮೇಲೆ ದಾಳಿ; ಪೊಲೀಸ್ ಕ್ರಮ ಗ್ಯಾರೆಂಟಿ ಎಂದ ಸಚಿವ ಲಕ್ಷ್ಮಣ ಸವದಿ
Published On - 11:04 pm, Sat, 17 April 21