KSRTC BMTC Strike: ಸಾರಿಗೆ ಸಿಬ್ಬಂದಿಯಿಂದ 60 ಬಸ್​ಗಳ ಮೇಲೆ ದಾಳಿ; ಪೊಲೀಸ್ ಕ್ರಮ ಗ್ಯಾರೆಂಟಿ ಎಂದ ಸಚಿವ ಲಕ್ಷ್ಮಣ ಸವದಿ

ಬಸ್ಸುಗಳಿಗೆ ಅಥವಾ ಬಸ್ ನಿಲ್ದಾಣಗಳಿಗೆ ಹಾನಿ ಮಾಡಿದರೆ ನಮ್ಮ ನೌಕರರು ತಮ್ಮ ತಲೆಯ ಮೇಲೆ ತಾವೇ ಕಲ್ಲು ಹಾಕಿ ಕೊಂಡಂತಾಗುತ್ತದೆ. ಇಂಥವರ ವಿರುದ್ಧ ಕಾನೂನು ತನ್ನದೇ ಆದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತದೆ.

KSRTC BMTC Strike: ಸಾರಿಗೆ ಸಿಬ್ಬಂದಿಯಿಂದ 60 ಬಸ್​ಗಳ ಮೇಲೆ ದಾಳಿ; ಪೊಲೀಸ್ ಕ್ರಮ ಗ್ಯಾರೆಂಟಿ ಎಂದ ಸಚಿವ ಲಕ್ಷ್ಮಣ ಸವದಿ
ಸಾರಿಗೆ ಸಚಿವ ಲಕ್ಷ್ಮಣ ಸವದಿ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on: Apr 14, 2021 | 8:25 PM

ಬೆಂಗಳೂರು: ರಾಜ್ಯದ ವಿವಿಧೆಡೆ ಕಳೆದ 7 ದಿನಗಳಲ್ಲಿ ಮುಷ್ಕರ ನಿರತ ಸಾರಿಗೆ ಸಿಬ್ಬಂದಿ ಒಟ್ಟು 60 ಬಸ್​ಗಳ ಮೇಲೆ ದಾಳಿ ನಡೆಸಿದ್ದಾರೆ. ಸಾರಿಗೆ ಸಿಬ್ಬಂದಿಯ ಈ ಕ್ರಮವನ್ನು ಸಚಿವ ಲಕ್ಷ್ಮಣ ಸವದಿ ಖಂಡಿಸಿದ್ದಾರೆ. ಬಸ್​ಗಳ ಮೇಲೆ ದಾಳಿ ನಡೆಸಿ ಹಾನಿ ಮಾಡಿದ್ದು ಖಂಡನಾರ್ಹ. ದಾಳಿ ನಡೆಸಿದ ಆರೋಪಿಗಳ ವಿರುದ್ಧ ಪೊಲೀಸರು ಶಿಸ್ತುಕ್ರಮ ಜರುಗಿಸುತ್ತಾರೆ ಎಂದು ಸವದಿ ಹೇಳಿದ್ದಾರೆ. ಕೆಎಸ್​ಆರ್​ಟಿಸಿಯ 34, ಬಿಎಂಟಿಸಿಯ 3, ಈಶಾನ್ಯ ಸಾರಿಗೆಯ 20, ವಾಯವ್ಯ ಸಾರಿಗೆಯ 3 ಬಸ್​ಗಳು ಹಾಳಾಗಿವೆ. ಮುಷ್ಕರದಿಂದ ನಾಲ್ಕೂ ನಿಗಮಗಳಿಗೆ ₹ 152 ಕೋಟಿ ನಷ್ಟವಾಗಿದೆ. ಕೆಎಸ್​ಆರ್​ಟಿಸಿ ₹ 70, ಬಿಎಂಟಿಸಿಗೆ ₹ 20 ಕೋಟಿ, ಈಶಾನ್ಯ ಸಾರಿಗೆ ನಿಗಮಕ್ಕೆ ₹ 31.5 ಕೋಟಿ, ವಾಯವ್ಯ ಸಾರಿಗೆ ನಿಗಮಕ್ಕೆ ₹ 30.5 ಕೋಟಿ ನಷ್ಟವಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ಸಚಿವರು ತಿಳಿಸಿದ್ದಾರೆ.

ಮುಷ್ಕರ ನಿರತ ಸಾರಿಗೆ ನೌಕರರ ವಿಚಾರದಲ್ಲಿ ನಮ್ಮ ಸರ್ಕಾರ ಎಷ್ಟೇ ಸಮಾಧಾನ, ಸೌಹಾರ್ದದ ಕ್ರಮ ಅನುಸರಿಸುತ್ತಿದ್ದರೂ ಸಹ ಒಟ್ಟು ಅರವತ್ತು ಬಸ್ಸುಗಳು ಪ್ರತಿಭಟನಾಕಾರರ ದುಷ್ಕೃತ್ಯಕ್ಕೆ ಈಡಾಗಿ ಹಾನಿಗೊಂಡಿವೆ. ಇದರಲ್ಲಿ ಕೆಲವೊಂದು ವೋಲ್ವೋದಂಥ ದುಬಾರಿ ಬಸ್ಸುಗಳೂ ಸೇರಿವೆ. ಬಸ್ಸುಗಳೆಂದರೆ ಸಾರಿಗೆ ವ್ಯವಸ್ಥೆಯ ಆತ್ಮಗಳಿದ್ದಂತೆ. ಈ ಬಸ್ಸುಗಳಿಂದಲೇ ನಮ್ಮ ಲಕ್ಷಾಂತರ ಸಾರಿಗೆ ನೌಕರರ ಬದುಕಿನ ರಥವೂ ಸಾಗುತ್ತದೆ ಎಂಬುದನ್ನು ನಮ್ಮ ನೌಕರರು ಅರ್ಥಮಾಡಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಹಿಂಸೆಯಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಬಸ್ಸುಗಳಿಗೆ ಅಥವಾ ಬಸ್ ನಿಲ್ದಾಣಗಳಿಗೆ ಹಾನಿ ಮಾಡಿದರೆ ನಮ್ಮ ನೌಕರರು ತಮ್ಮ ತಲೆಯ ಮೇಲೆ ತಾವೇ ಕಲ್ಲು ಹಾಕಿ ಕೊಂಡಂತಾಗುತ್ತದೆ. ಇಂಥವರ ವಿರುದ್ಧ ಕಾನೂನು ತನ್ನದೇ ಆದ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತದೆ. ಈಗಾಗಲೇ ಅನೇಕ ನೌಕರ ಕುಟುಂಬದವರು ತಾವು ಮುಷ್ಕರದಿಂದ ಬೇಸತ್ತಿರುವುದಾಗಿ ತಿಳಿಸಿದರೂ ಸಹ ಕೆಲವು ಪಟ್ಟಭದ್ರರು ಈ ಮುಷ್ಕರವನ್ನು ಮುಂದುವರಿಸುತ್ತಾ ಸಾರ್ವಜನಿಕರಿಗೆ ಅಷ್ಟೇ ಅಲ್ಲ ನಮ್ಮ ನೌಕರ ಬಾಂಧವರಿಗೂ ಕೂಡ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಇಂಥವರ ಕುಮ್ಮಕ್ಕಿಗೆ ಬಲಿಯಾಗಬಾರದು ಎಂದು ಅವರು ನೌಕರರಲ್ಲಿ ವಿನಂತಿಸಿದ್ದಾರೆ.

ಇಂದು ನಮ್ಮ ಕರೆಗೆ ಓಗೊಟ್ಟು ಹಲವಾರು ಸಾರಿಗೆ ನೌಕರರು ಕರ್ತವ್ಯಕ್ಕೆ ಮರಳಿದ್ದಾರೆ. ಹಲವು ಕಡೆಗಳಲ್ಲಿ ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲವಾಯಿತು. ಇಂದು ಸಂಜೆಯ ವೇಳೆಗೆ 3200ಕ್ಕಿಂತಲೂ ಹೆಚ್ಚು ಬಸ್ಸುಗಳು ಸಂಚರಿಸಿದವು. ಹೀಗೆ ಕರ್ತವ್ಯಕ್ಕೆ ಆಗಮಿಸಿದ ನಮ್ಮ ನೌಕರ ಮಿತ್ರರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು ಹಾಗೂ ಹಬ್ಬದ ಸಿಹಿಯನ್ನು ವಿತರಿಸಿ ಶುಭಾಶಯ ಕೋರಲಾಯಿತು ಎಂದು ಅವರು ಹೇಳಿದ್ದಾರೆ.

ನಮ್ಮ ಕುಟುಂಬದ ಸದಸ್ಯರಂತೆ ಇರುವ ನೌಕರ ಮಿತ್ರರ ಮೇಲೆ ನಾನು ವಿಶ್ವಾಸ ಕಳೆದುಕೊಂಡಿಲ್ಲ. ನಮ್ಮ ಸಾರಿಗೆ ನೌಕರ ಬಾಂಧವರು ವಾಸ್ತವ ಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಕೂಡಲೇ ಎಲ್ಲರೂ ಕೆಲಸಕ್ಕೆ ಹಾಜರಾಗುತ್ತಾರೆ ಎಂದು ನಾನು ಆಶಾವಾದಿಯಾಗಿದ್ದೇನೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

(Transport Corporation Staff Attacks 60 Bus Strict Action Vows Minister Lakshman Savadi)

ಇದನ್ನೂ ಓದಿ: ಲಾಕ್​ಡೌನ್ ಘೋಷಣೆಯ ಒಳಗೆ ಡ್ಯೂಟಿಗೆ ಬರದಿದ್ರೆ ವಜಾ ಸಾಧ್ಯತೆ; ಸಾರಿಗೆ ನೌಕರರಿಗೆ ಅಯನೂರು ಮಂಜುನಾಥ್ ಎಚ್ಚರಿಕೆ

ಇದನ್ನೂ ಓದಿ: ನೌಕರರ ಮನವೊಲಿಸಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಪುತ್ರ; ಮುಷ್ಕರ ವಾಪಸ್​, ಅಥಣಿಯಲ್ಲಿ ಬಸ್​ ಸಂಚಾರ ರೈಟ್​ ರೈಟ್​!