ಬೆಂಗಳೂರು: ಕೊರೊನಾ ವೈರಸ್ ಸೋಂಕು ನಿಯಂತ್ರಣ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮತ್ತೆ ರಾತ್ರಿ ಕರ್ಫ್ಯೂ ಮೊರೆ ಹೋಗಿದೆ. ಸಂಜೆ ವೇಳೆಗೆ ಸರ್ಕಾರ ಮಾರ್ಗ ಸೂಚಿ ಕೂಡ ಹೊರಡಿಸಲಿದೆ. ರಾತ್ರಿ ಕರ್ಫ್ಯೂವಿನಿಂದಾಗಿ ಬಸ್ ಸಂಚಾರಕ್ಕೆ ತೊಂದರೆ ಆಗಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಕೆ. ಸುಧಾಕರ್, ಬಸ್ ಸಂಚಾರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ಮಾತನಾಡಿರುವ ಕೆ. ಸುಧಾಕರ್, ಕೆಎಸ್ಆರ್ಟಿಸಿ ಬಸ್ ಸಂಚಾರಕ್ಕೆ ಯಾವುದೇ ಅಡ್ಡಿ ಆಗುವುದಿಲ್ಲ. ಹೀಗಾಗಿ, ಬೇರೆಬೇರೆ ಊರುಗಳಿಗೆ ತೆರಳುವವರಿಗೆ ಸಮಸ್ಯೆ ಉಂಟಾಗದು. ಎಲ್ಲರೂ ಮಲಗುವ ಸಂದರ್ಭದಲ್ಲಿ ನಾವು ಕರ್ಫ್ಯೂ ಮಾಡುತ್ತಿದ್ದೇವೆ. ಇದರಿಂದ ಯಾರಿಗೂ ಸಮಸ್ಯೆ ಆಗುವುದಿಲ್ಲ ಎಂದರು.
ಮಧ್ಯರಾತ್ರಿ ವೇಳೆಗೆ ರೈತರು ಮಾರುಕಟ್ಟೆಗೆ ತರಕಾರಿ ತೆಗೆದುಕೊಂಡು ಬರುತ್ತಾರೆ. ಹೀಗಾಗಿ ರಾತ್ರಿ ಕರ್ಫ್ಯೂ ರೈತರಿಗೆ ತೊಂದರೆ ಆಗಲಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸುಧಾಕರ್, ಸಂಜೆ ಬಿಡುಗಡೆ ಆಗಲಿರುವ ಮಾರ್ಗಸೂಚಿಯಲ್ಲಿ ಪ್ರತಿಯೊಂದು ಅಂಶಗಳೂ ಇರುತ್ತವೆ. ನಮ್ಮ ಸರ್ಕಾರದಲ್ಲಿ ರೈತರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಕೃಷಿ ಚಟುವಟಿಕೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದರು.
ಹೊಸ ವರ್ಷದ ಸಮೀಪದಲ್ಲೇ ಸರ್ಕಾರ ರಾತ್ರಿ ಕರ್ಫ್ಯೂ ಜಾರಿ ಮಾಡಿದೆ. ಕೊರೊನಾ ಪ್ರಕರಣಗಳು ಹರಡುತ್ತಿರುವುದು ನಿಯಂತ್ರಣಕ್ಕೆ ಬರದ ಕಾರಣ ಇದು ಹೊಸ ವರ್ಷ ಆಚರಿಸುವ ಸಂದರ್ಭವಲ್ಲ ಎಂದು ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.
ಮುಂಗಡ ಟಿಕೆಟ್ ಕಾಯ್ದಿರಿಸಿರುವ ಎಲ್ಲ ಪ್ರಯಾಣಿಕರು ರಾತ್ರಿ 10 ಗಂಟೆಯ ಒಳಗೆ ನಿಲ್ದಾಣಗಳನ್ನು ತಲುಪಬೇಕು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಪ್ರಯಾಣಿಕರಿಗೆ ಮನವಿ ಮಾಡಿದ್ದರು.
ರಾತ್ರಿ ಕರ್ಫ್ಯೂ | ಬೆಂಗಳೂರಿನಲ್ಲಿ ಬಸ್ ಸಂಚಾರದ ಗೊಂದಲ; ಮಾರ್ಗಸೂಚಿಗೆ ಕಾಯುತ್ತಿರುವ ಕೆಎಸ್ಆರ್ಟಿಸಿ, ಬಿಎಂಟಿಸಿ