ನಮ್ಮ ಹಿಂದೂ ಧರ್ಮದ ವಿಷ್ಣು ಪುರಾಣದಲ್ಲೇ ಭಾರತ ಎಂದು ಉಲ್ಲೇಖವಿದೆ. ಸದ್ಯ, ಬ್ರಿಟಿಷರು ಅಂದು ಈ ಈ ದೇಶವನ್ನು ಕರೆಯುತ್ತಿದ್ದ ಇಂಡಿಯಾ ಎಂಬ ಹೆಸರನ್ನ ಭಾರತ ಅಂತಾ ಬದಲಿಸಬೇಕು ಅನ್ನೋ ಚರ್ಚೆ ಭಾರೀ ಸಂಚಲನ ಸೃಷ್ಟಿಸಿದೆ. ಇದರ ಜೊತೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರು ಹಿಂದೂ ಧರ್ಮದ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗಳು ಬಿಜೆಪಿ ನಾಯಕರ ಕಣ್ಣುಗಳನನ್ನು ಕೆಂಪಗಾಗಿಸಿದೆ. ಇನ್ನು, ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಮಳೆಯಾಗುವ ಮುನ್ಸೂಚನೆಯೂ ಇದೆ. ಅಲ್ಲದೆ, ಕಾವೇರಿ ನದಿ ನೀರು ವಿವಾದವೂ ಜೋರಾಗಿಯೇ ಇದೆ. ಈ ಎಲ್ಲದರ ನಡುವೆ, ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದೆ. ಗಜಪಡೆಗಳು ವಿಶ್ವವಿಖ್ಯಾತ ಮೈಸೂರು ಅರಮನೆಗೆ ಈಗಾಗಲೇ ಎಂಟ್ರಿ ಕೊಟ್ಟಿವೆ. ಇವೆಲ್ಲದರ ಜೊತೆಗೆ ರಾಜ್ಯದ ಪ್ರಮುಖ ಸುದ್ದಿಗಳ ಲೈವ್ ಅಪ್ಡೇಟ್ಸ್ ಟಿವಿ9 ಡಿಜಿಟಲ್ನಲ್ಲಿ ವೀಕ್ಷಿಸಿ.
ರಾಯಚೂರು: ಇಂದು ಸಂಜೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಮುಳ್ಳೂರು ಗ್ರಾಮದ ಬಳಿ ಕೆಎಸ್ಆರ್ಟಿಸಿ ಬಸ್ ಎಕ್ಸಲ್ ಕಟ್ ಆಗಿ ಪಲ್ಟಿಯಾಗಿದೆ. ಘಟನೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರೆ, 20 ಕ್ಕೂ ಹೆಚ್ಚು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ರಾಮನಗರ: ಹೆಚ್‌ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ‘ರಾಮನಗರದ ದುಸ್ಥಿತಿಗೆ ಹೆಚ್‌ಡಿಕೆ ಅವರ ಕುಟುಂಬವೇ ಕಾರಣ ಎಂದು ರಾಮನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ರಾಮನಗರದ ಹಿಂದಿನ ಫೋಟೋ ನೋಡಿ ನನಗೆ ಭಯ ಆಗೋಗಿತ್ತು. 20 ವರ್ಷದಿಂದ ಅಧಿಕಾರದಲ್ಲಿದ್ರೂ, ರಾಮನಗರ ಸಂಪೂರ್ಣ ಕಡೆಗಣಿಸಿದ್ದರು ಎಂದಿದ್ದಾರೆ.
ಬೆಂಗಳೂರು: ಮೈಸೂರು ರಸ್ತೆಯ, ದೀಪಾಂಜಲಿ ಮೇಟ್ರೋ ಸ್ಟೇಷನ್ ಬಳಿ ಮಳೆ ಸುರಿದಿದ್ದು, ಕೇವಲ 20 ನಿಮಿಷ ಸುರಿದ ಮಳೆಗೆ ರಸ್ತೆ ಮೇಲೆಲ್ಲ ನೀರು ಬಂದಿದೆ. ರಸ್ತೆ ಮೇಲೆ ಮಳೆ ನೀರು ನಿಂತ ಪರಿಣಾಮ ಪಾದಚಾರಿಗಳು ಪರದಾಟ ನಡೆಸುವ ಸ್ಥಿತಿ ಎದುರಾಗಿದ್ದು, ಕಬ್ಬನ್ ಪಾರ್ಕ್ ಸುತ್ತಮುತ್ತ ಟ್ರಾಫಿಕ್ ಕಿರಿಕಿರಿ ಉಂಟಾಗಿದೆ.
ರಾಮನಗರ: ಭಾರತ್ ಜೋಡೋ ಯಾತ್ರೆಗೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ಇಂದು ರಾಮನಗರದಲ್ಲಿ ರೋಡ್ಶೋ ಹಮ್ಮಿಕೊಂಡಿದ್ದು ಇದೀಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಆಗಮಿಸಿದ್ದಾರೆ. ಇನ್ನು ಈ ವೇಳೆ ಕ್ರೇನ್ಗಳ ಮೂಲಕ ಬೃಹತ್ ಹಾರಗಳನ್ನು ಹಾಕಿದ ಮುಖಂಡರು.
ರಾಮನಗರ: ಭಾರತ್ ಜೋಡೋ ಯಾತ್ರೆಯಾಗಿ ಒಂದು ವರ್ಷ ತುಂಬಿದ ಹಿನ್ನೆಲೆ ಕಾಂಗ್ರೆಸ್ ನಾಯಕರ ಪಾದಯಾತ್ರೆ ಹಮ್ಮಿಕೊಂಡಿದ್ದರು. ಈ ವೇಳೆ ಮೆಡಿಕಲ್ ಕಾಲೇಜು ಸ್ಥಳಾಂತರ ಖಂಡಿಸಿ ಪ್ರತಿಭಟನೆಗೆ ಜೆಡಿಎಸ್ ಕಾರ್ಯಕರ್ತರು ಮುಂದಾಗಿದ್ದರು. ಇದರಿಂದ ರಾಮನಗರ ಪೊಲೀಸರು ಜೆಡಿಎಸ್ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ಗೌರಿಗಣೇಶ ಹಬ್ಬ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ಬೆಂಗಳೂರಿನ ಟೌನ್ಹಾಲ್ನಲ್ಲಿ ಸಾರ್ವಜನಿಕ ಸಭೆ ಕರೆದಿದ್ದಾರೆ. ಬೆಂಗಳೂರಿನಲ್ಲಿ ಎಲ್ಲೆಲ್ಲಿ ಗಣೇಶ ಮೂರ್ತಿ ಕೂರಿಸಬೇಕು, ಮೆರವಣಿಗೆಗೆ ಯಾವ್ಯಾವ ನಿಯಮ ಪಾಲನೆ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.
ರಾಮನಗರ: ಭಾರತ್ ಜೋಡೋ ಯಾತ್ರೆಯಾಗಿ 1 ವರ್ಷ ತುಂಬಿದ ಹಿನ್ನೆಲೆ ಇಂದು ಸಂಜೆ 5.30ಕ್ಕೆ ರಾಮನಗರದಲ್ಲಿ ಕಾಂಗ್ರೆಸ್ ನಾಯಕರಿಂದ ಪಾದಯಾತ್ರೆ ನಡೆಯಲಿದೆ. ರಾಮನಗರ ಡಿಸಿ ಕಚೇರಿಯಿಂದ ಐಜೂರು ವೃತ್ತದವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಕಾಂಗ್ರೆಸ್ ನಾಯಕರು 4 ಕಿಲೋ ಮೀಟರ್ ಪಾದಯಾತ್ರೆ ಮಾಡಲಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಲಿದ್ದಾರೆ.
ಬೆಂಗಳೂರು: ‘ಗೃಹಲಕ್ಷ್ಮೀ’ ನೋಂದಣಿ ಸ್ಥಗಿತ ಆಗಿದೆ ಎಂದು ಟ್ವೀಟ್ ವಿಚಾರ ‘ ಸ್ಥಗಿತ ಬಗ್ಗೆ ಕೇಳಿ ನನಗೆ ಆಶ್ಚರ್ಯ ಆಯ್ತು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಇನ್ನು ಈ ಕುರಿತು ತಕ್ಷಣ ಇಲಾಖೆ ಕಾರ್ಯದರ್ಶಿ, ನಿರ್ದೇಶಕರನ್ನು ಕರೆದು ಮಾತನಾಡಿದೆ. ಅತಾಚುರ್ಯದಿಂದ ನಮ್ಮ ಇಲಾಖೆಯಿಂದ ಈ ಟ್ವೀಟ್ ಆಗಿದೆ ಎಂದಿದ್ದಾರೆ.
ಬೆಂಗಳೂರು: ನಗರದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿರುವ ಹಿನ್ನಲೆ ಬಿಬಿಎಂಪಿ ಕಚೇರಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಸಭೆ ನಡೆಸಿದ್ದಾರೆ. ಈ ವೇಳೆ ಡೆಂಘೀ ಪ್ರಕರಣ ಬಗ್ಗೆ ಮಾಹಿತಿ ಪಡೆದ ದಿನೇಶ್ ಗುಂಡೂರಾವ್ ಅವರು ಪ್ರಕರಣ ಹೆಚ್ಚಿರುವ ಕಡೆ ಮುತುವರ್ಜಿ ವಹಿಸಲು ಸೂಚಿಸಿದ್ದಾರೆ.
ಯಡಿಯೂರಪ್ಪ ಜೈಲಿಗೆ ಹೋಗಲು ಬಿಜೆಪಿಯವರೇ ಕಾರಣ ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಜೊತೆ ಮಾತಾಡಿದ್ದೇನೆ. ನಾನು ಯಾವುದರ ಬಗ್ಗೆಯೂ ಚರ್ಚೆ ಮಾಡಲ್ಲ. ನಾವೆಲ್ಲರೂ ಒಟ್ಟಾಗಿ ಸೇರಿಕೊಂಡು ಪಕ್ಷ ಸಂಘಟನೆ ಮಾಡಬೇಕಿದೆ ಎಂದರು. ವಲಸಿಗ ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಮರು ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಯಾವ ಶಾಸಕರೂ ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಿಲ್ಲ. ನಮ್ಮ ಎಲ್ಲಾ ಶಾಸಕರ ಜೊತೆಗೂ ನಾನು ಮಾತನಾಡಿದ್ದೇನೆ ಎಂದರು.
ಶೀಘ್ರದಲ್ಲೇ ವಿಪಕ್ಷ ನಾಯಕನನ್ನು ಆಯ್ಕೆ ಮಾಡುತ್ತಾರೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ವಿಪಕ್ಷ ನಾಯಕರು ಇಲ್ಲ ಅಂತಾ ನಾವು ನಮ್ಮ ಕೆಲಸ ನಿಲ್ಲಿಸಿಲ್ಲ. ಯಡಿಯೂರಪ್ಪ ಮನೆಯಲ್ಲಿ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. ಶೀಘ್ರದಲ್ಲೇ ರಾಜ್ಯಾದ್ಯಂತ ಪ್ರವಾಸ ಆರಂಭಿಸುವೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 22-23 ಸೀಟು ಗೆಲ್ಲಿಸುವ ವಿಶ್ವಾಸ ಇದೆ ಎಂದರು.
ಕೇಂದ್ರದಿಂದ ಒಂದು ದೇಶ ಒಂದು ಚುನಾವಣೆ ಪ್ರಸ್ತಾಪ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಒಂದು ದೇಶ ಒಂದು ಚುನಾವಣೆ ವಿಚಾರ ಒಳ್ಳೆಯದೇ. ಆದರೆ ಒಂದೇ ಬಾರಿ ಚುನಾವಣೆ ಮಾಡಲು ಸಾಧ್ಯವಾಗಲ್ಲ. ಒಂದೇ ಬಾರಿ ಚುನಾವಣೆ ನಡೆದರೆ ಕೆಲ ರಾಜ್ಯ ಚುನಾವಣೆ ಮುಂದೂಡಬೇಕು. ಈಗ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಇದೆ. ಇತ್ತೀಚೆಗಷ್ಟೇ ಕರ್ನಾಟಕ ವಿಧಾನಸಭಾ ಚುನಾವಣೆ ನಡೆದಿದೆ. ಹಾಗಾದರೆ ನಮ್ಮ ಸರ್ಕಾರ ವಿಸರ್ಜನೆ ಮಾಡುತ್ತೀರಾ ಎಂದು ಶೆಟ್ಟರ್ ಪ್ರಶ್ನಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಈಗಾಗಲೇ 2 ಸಾವಿರ ರೂ. ಜಮೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ಗೊಂದಲವಾಗದಿರಲಿ ಎಂದು ರಾಜ್ಯ ಸರ್ಕಾರ ನೋಂದಣಿ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ನೋಂದಾಯಿತ ಫಲಾನುಭವಿಗಳಿಗೆ 2 ಸಾವಿರ ರೂ. ಜಮೆ ಆದ ನಂತರ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಕ್ರಿಯೆ ಪುನಾರಂಭಗೊಳ್ಳಲಿದೆ. 1.28 ಕೋಟಿ ಫಲಾನುಭವಿಗಳ ಪೈಕಿ 1.13 ಕೋಟಿ ನೋಂದಣಿಯಾಗಿದೆ. 17 ಲಕ್ಷ ಫಲಾನುಭವಿಗಳು ಬ್ಯಾಂಕ್ ಅಕೌಂಟ್, ಕೆವೈಸಿ ಅಪ್ಡೇಟ್ ಮಾಡಿಸಿಲ್ಲ ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರಾಜ್ಯ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಆರಂಭಗೊಂಡಿದೆ. ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಗೃಹ ಸಚಿವ ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಹೆಚ್ ಸಿ ಮಹದೇವಪ್ಪ , ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ, ಸಚಿವ ಕೆ ಎನ್ ರಾಜಣ್ಣ, ಸಚಿವ ಆರ್ ಬಿ ತಿಮ್ಮಾಪುರ್, ಸಚಿವ ನಾಗೇಂದ್ರ ಸೇರಿದಂತೆ ಹಲವು ಶಾಸಕರು ಅಧಿಕಾರಿಗಳು ಭಾಗಿಯಾಗಿದ್ದಾರೆ.
ಸತಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಹೇಳಿಕೆ ವಿಚಾರವಾಗಿ ಉದಯನಿಧಿ ಸ್ಟಾಲಿನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿಂದೂ ಜಾಗರಣ ವೇದಿಕೆಯು ಹುಬ್ಬಳ್ಳಿ ಉಪನಗರ ಠಾಣೆಗೆ ದೂರು ನೀಡಿದೆ. ದೂರಿನ ಅನ್ವಯ ಐಪಿಸಿ ಸೆಕ್ಷನ್ 153 ಎ, 153 ಬಿ, 295ರಡಿ ಕಾನೂನು ಅಡಿ ದೂರು ದಾಖಲಾಗಿದೆ.
ಕಾಂಗ್ರೆಸ್ ಅಜೆಂಡಾ ತಿಳಿಸಿಲ್ಲ ಅಂತಾರೆ, ದೇಶದ ಜನ ಇದನ್ನು ಲೈವ ಆಗಿ ನೋಡುತ್ತಾರೆ. ಇದನ್ನು ಲೈವ್ ಆಗಿ ತೋರಸಿದ್ದೆ ಬಿಜೆಪಿ. ಕಾಂಗ್ರೆಸ್ ಪಾರ್ಟಿ ಘಮಂಡಿಯಾ ಉಳಿಸಲು ಸ್ಟಾಲಿನ್ ಹೇಳಿಕೆ ಖಂಡಿಸಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ. ಮೊದಲು ತಮಿಳುನಾಡಿಗೆ ನೀರು ಬಿಟ್ಟು ಇದೀಗ ಮೇಲ್ಮನವಿ ಸಲ್ಲಿಸಿದ್ದಾರೆ. ಇದು ಕೂಡಾ ಘಟಬಂಧನ ಉಳಿಸುವ ತಂತ್ರವಾಗಿದೆ. ಆ ಮೂಲಕ ರಾಜ್ಯದ ಹಿತಾಸಕ್ತಿ ಬಲಿ ಕೊಟ್ಡಿದ್ದಾರೆ. ಮೋದಿ ಸೋಲಿಸಲು ಷಡ್ಯಂತ್ರ ಮಾಡಿದ್ದಾರೆ. ಏನೇ ಷಡ್ಯಂತ್ರ ಮಾಡಿ ಮೋದಿ ಮತ್ತೆ ಗೆಲ್ಲುತ್ತಾರೆ. ಒಂದು ದೇಶ ಒಂದು ಚುನಾವಣೆ ಬಗ್ಗೆ ಚರ್ಚೆಯಾಗಿಲ್ಲ. ಅಜೆಂಡಾ ತಗೆದುಕೊಳ್ಳಲು ಸಮಯ ಇದೆ. ಇದಕ್ಕೆ ಒಂದು ಪ್ರೊಸೆಸ್ ಇದೆ. ಮೋದಿ ಬಂದ ಮಾಡಿದ ಮೇಲೆ ಇದನ್ನು ಮಾಡಿಲ್ಲ. 75 ವರ್ಷದಿಂದಲೂ ಈ ಪ್ರೋಸೆಸ್ ಇದೆ ಎಂದರು.
ಹಿಂದೂ ಧರ್ಮದ ಕುರಿತು ನೀಡಿದ ಹೇಳಿಕೆಗೆ ಸ್ಪಷ್ಟನೆ ನೀಡಿದ ಗೃಹಸಚಿವ ಜಿ.ಪರಮೇಶ್ವರ್, ಹಿಂದೂ ಧರ್ಮದ ಬಗ್ಗೆ ನಾನು ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಹಿಂದೂ ಧರ್ಮವನ್ನು ಬೇರೆ ರೀತಿ ಅರ್ಥೈಸುವ ಕೆಲಸ ನಾನು ಮಾಡಿಲ್ಲ. ನಾವೆಲ್ಲಾ ಹಿಂದೂಗಳು, ಬೆಳಗ್ಗೆ ಎದ್ದರೆ ಗಣಪತಿಗೆ ಪ್ರಾರ್ಥಿಸುತ್ತೇನೆ. ನಾನು ಬೆಳಗ್ಗೆ ಎದ್ದ ಕೂಡಲೇ ಲಕ್ಷ್ಮೀ ಶ್ಲೋಕ ಹೇಳುತ್ತೇನೆ. ರಾತ್ರಿ ಮಲಗುವ ಮುಂಚೆ ಹನುಮನ ಶ್ಲೋಕ ಹೇಳುತ್ತೇನೆ ಎಂದು ಹೇಳಿ ಎರಡು ಶ್ಲೋಕಗಳನ್ನು ಹೇದರು. ಅಲ್ಲದೆ, ಬಿಜೆಪಿಯವರಿಗೆ ಈ ಶ್ಲೋಕ ಹೇಳಲು ಬರುವುದಿಲ್ಲ. ಶ್ಲೋಕ ಹೇಳುವಂತೆ ಬಿಜೆಪಿಯವರಿಗೆ ಸವಾಲು ಹಾಕಿದರು. ಹಿಂದೂ ಧರ್ಮ ಯಾವಾಗ ಹುಟ್ಟಿತು ಎಂದು ನಾನು ಪ್ರಶ್ನೆ ಮಾಡಿಲ್ಲ. ನಾನು ಸರ್ವಪಲ್ಲಿ ರಾಧಾಕೃಷ್ಣನ್ ವಿಚಾರದ ಬಗ್ಗೆ ಮಾತಾಡಿದ್ದು, ಜೈನ, ಬುದ್ಧ, ಮುಸ್ಲಿಂ ಧರ್ಮಕ್ಕೆ ಸ್ಥಾಪಕರು ಇದ್ದಾರೆ. ಆದರೆ ಹಿಂದೂ ಧರ್ಮಕ್ಕೆ ಸ್ಥಾಪಕರು ಇಲ್ಲ ಎಂದು ಹೇಳಿದ್ದರು. ಸರ್ವಪಲ್ಲಿ ರಾಧಾಕೃಷ್ಣನ್ ಮಾತನ್ನ ಉಲ್ಲೇಖಿಸಿದ್ದಕ್ಕೆ ಬಿಜೆಪಿ ಬೊಬ್ಬೆ ಹಾಕುತ್ತಿದ್ದಾರೆ. ನಾನು ಹಿಂದೂ ಧರ್ಮದ ಬಗ್ಗೆ ಅವಹೇನಕಾರಿಯಾಗಿ ಮಾತಾಡಿಲ್ಲ. ಹಿಂದೂ ಧರ್ಮದ ಮೇಲೆ ನಮಗೆ ಗೌರವವಿದೆ, ಬಿಜೆಪಿಗೆ ಇದೆಯಾ? ಎಂದು ಪ್ರಶ್ನಿಸಿದರು.
ನಾಳೆ ನಿಗದಿಯಾಗಿದ್ದ ಬಿಜೆಪಿ ನಿಯೋಗದ KRS ಅಣೆಕಟ್ಟು ಭೇಟಿ ಮುಂದಿನ ವಾರಕ್ಕೆ ಮುಂದೂಡಿಕೆಯಾಗಿದೆ. ನಾಳೆ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ಬಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಂದೂಡಿಕೆ ಮಾಡಲಾಗಿದೆ. ಈ ಹಿಂದೆ ಪ್ರತಿಭಟನೆಯನ್ನು ಕೂಡಾ ಎರಡು ಬಾರಿ ಮುಂದೂಡಿದ್ದ ಬಿಜೆಪಿ, ರಾಜ್ಯ ಕಾರ್ಯಕಾರಣಿ ಸಭೆಯನ್ನು ಕೂಡಾ ಮುಂದೂಡಿತ್ತು.
ಮೈಸೂರು: ಹಲವು ಆರೋಪಗಳ ಸಂಬಂಧ ಮಾಜಿ ಸಚಿವ ಎಸ್.ಎ.ರಾಮದಾಸ್ ಅವರಿಗೆ ಸುಪ್ರೀಂಕೋರ್ಟ್ನಲ್ಲಿ ಹಿನ್ನಡೆಯಾಗಿದೆ. ತನ್ನನ್ನು ಮದುವೆಯಾಗಿ ವಂಚಿಸಿದ್ದಾರೆಂದು ಎಂದು ಆರೋಪಿಸಿ 2013ರಲ್ಲಿ ರಾಮದಾಸ್ ವಿರುದ್ಧ ಪ್ರೇಮಕುಮಾರಿ ಎಂಬವರು ದೂರು ನೀಡಿದ್ದರು. ಪ್ರಕರಣ ರದ್ದು ಕೋರಿ ರಾಮದಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಕೋರ್ಟ್ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ ರಾಮದಾಸ್ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಕೂಡ ವಜಾಗೊಳಿಸಿದೆ.
ಬಿಜೆಪಿಯಿಂದ ನನ್ನನ್ನು ಉಚ್ಚಾಟನೆ ಮಾಡಿದ್ದು ಬೇಸರ ತಂದಿದೆ ಎಂದು ದಾವಣಗೆರೆ ಜಿಲ್ಲೆಯ ಜಗಳೂರು ಮಾಜಿ ಶಾಸಕ ಗುರುಸಿದ್ದನಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಕೆಲ ಮುಖಂಡರ ಸಂಚಿನಿಂದ ನನ್ನನ್ನು ಉಚ್ಚಾಟನೆ ಮಾಡಲಾಗಿದೆ. ನನ್ನ ಪುತ್ರ ಡಾ.ರವಿಕುಮಾರ್ ಲೋಕಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇದೇ ಕಾರಣಕ್ಕೆ ನನ್ನ ಮತ್ತು ಮೂವರು ಪುತ್ರರನ್ನು ಉಚ್ಚಾಟನೆ ಮಾಡಿದ್ದಾರೆ. ಪಕ್ಷವನ್ನ ತಾಯಿಯೆಂದು ತಿಳಿದವನು ನಾನು. ಪಕ್ಷವಿರೋಧಿ ಚಟುವಟಿಕೆ ಮಾಡಿಲ್ಲ ಎಂದು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಹಣ ಹಾಗೂ ಅಧಿಕಾರಕ್ಕಾಗಿ ಬಂದವರು ಹಾಗೂ ಅವರ ರಕ್ಷಣೆಗೆ ನಿಂತವರು ತಮ್ಮ ವಿರುದ್ಧ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ ಹಾಗೂ ಜಗಳೂರು ಮಾಜಿ ಶಾಸಕ ಎಸ್ ವಿ ರಾಮಚಂದ್ರ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೋಲಾರ ಜಿಲ್ಲಾ ಕಾಂಗ್ರೆಸ್ ಮುಖಂಡರ ನಡುವೆ ಮುಸುಕಿನ ಗುದ್ದಾಟ ಸ್ಫೋಟಗೊಂಡಿದೆ. ಕೋಲಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹಾಗೂ ಎಂಎಲ್ಸಿ ಅನಿಲ್ ಕುಮಾರ್ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಪರಿಣಾಮ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ MLC ಅನಿಲ್‌ಕುಮಾರ್ ರಾಜೀನಾಮೆ ನೀಡಿದ್ದಾರೆ. ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ಎರಡು ತಿಂಗಳು ಬಾಕಿ ಇರುವಾಗಲೇ ಅನಿಲ್ ಕುಮಾರ್ ರಾಜೀನಾಮೆ ನೀಡಿದ್ದಾರೆ. ಸರ್ಕಾರ ನಾಮನಿರ್ದೇಶನ ಮಾಡಿದ್ದ ಸದಸ್ಯ ಎಲ್.ಎ.ಮಂಜುನಾಥ್ ಹೆಸರು ವಾಪಸ್ಗೆ ಅನಿಲ್ ಕುಮಾರ್ ಹಾಗೂ ಶಾಸಕ ಕೊತ್ತೂರು ಮಂಜುನಾಥ್ ಒತ್ತಾಯಿಸಿದ್ದರು. ಈ ಬೆಳವಣಿಗೆ ನಡುವೆಯೇ ಅನಿಲ್ ಕುಮಾರ್ ರಾಜೀನಾಮೆ ನೀಡಿದ್ದಾರೆ.
Published On - 9:05 am, Thu, 7 September 23