ಮೈಸೂರು: ಕಾಡುಪ್ರಾಣಿಯ ಬೇಟೆಗೆ ಹಾಕಿದ್ದ ಉರುಳಿಗೆ ಸಿಲುಕಿ ಚಿರತೆ ಸಾವಿಗೀಡಾದ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗುರುಪುರ ಹಳೆ ವಾರಂಚಿ ರಸ್ತೆ ಬಳಿ ನಡೆದಿದೆ. ರೈತ ಜಾಹೀದ್ ಅವರ ಜಮೀನಿನ ಬಳಿ ಈ ಅಚಾತುರ್ಯ ನಡೆದಿದ್ದು, ಕಾಡಿನಿಂದ ನಾಡಿಗೆ ಆಹಾರ ಅರಸಿ ಬಂದಿದ್ದ ಚಿರತೆ ಸದ್ಯ ಬಲಿಯಾಗಿದೆ.
ರೈತರ ಜಮೀನಿನಲ್ಲಿ ಬೇಟೆ ಉರುಳಿಗೆ ಸಿಲುಕಿ ನರಳಾಡುತ್ತಿದ್ದ ಚಿರತೆಯನ್ನು ಕಂಡ ಸ್ಥಳೀಯರು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆದರೆ ಇದನ್ನು ಹಗುರವಾಗಿ ತೆಗೆದುಕೊಂಡ ಅರಣ್ಯ ಇಲಾಖೆ ಸಿಬ್ಬಂದಿಗಳು ತಡವಾಗಿ ಸ್ಥಳಕ್ಕೆ ಆಗಮಿಸಿದ್ದಾರೆ. ಅಂತಿಮವಾಗಿ ಚಿರತೆ ನರಳಿ ನರಳಿ ಪ್ರಾಣ ಬಿಟ್ಟಿದ್ದು, ಇತ್ತ ಗ್ರಾಮಸ್ಥರು ಚಿರತೆ ಸಾವಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳೇ ಕಾರಣ ಎಂದು ಆರೋಪ ಮಾಡಿದ್ದಾರೆ.
ಆಹಾರ ಅರಸಿ ನಾಡಿಗೆ ಬರುವ ಪ್ರಾಣಿಗಳಿಗೆ ಸದ್ಯ ಇದೇ ರೀತಿಯ ತೊಂದರೆಗಳಾಗುತ್ತಿದ್ದು, ಒಂದು ಜಮೀನಿಗೆ ಹಾಕುವ ತಂತಿ ಬೆಲಿಗಳಲ್ಲಿನ ವಿದ್ಯುತ್ ಅನ್ನು ಸ್ಪರ್ಶಿಸಿ ಪ್ರಾಣಿಗಳು ಸಾವನ್ನಪ್ಪುತ್ತಿವೆ. ಇಲ್ಲ ಈ ರೀತಿಯ ಬೇಟೆ ಅಥವಾ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಾಣಿಗಳು ಮೃತಪಟ್ಟಿವೆ. ಇನ್ನು ಪದೇ ಪದೇ ಈ ರೀತಿಯ ಘಟನೆಗಳು ಸಂಭವಿಸಿದರು ಇವುಗಳ ಕುರಿತು ಸೂಕ್ತ ಪರಿಹಾರವನ್ನು ಜಾರಿಗೆ ತರುವಲ್ಲಿ ಸರ್ಕಾರ ಮತ್ತು ಅರಣ್ಯ ಇಲಾಖೆ ಎಡವುತ್ತಿದೆ ಎನ್ನುವುದು ವಿಪರ್ಯಾಸ.
ಹಸು ಮೇಲೆ ದಾಳಿ ಮಾಡಿದ ಹುಲಿ
ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ಹಸು ಮೇಲೆ ಹುಲಿ ದಾಳಿ ಮಾಡಿದೆ. ಬಾಚೀರ ಸುಜ ಎಂಬುವರಿಗೆ ಸೇರಿದ ಹಸುವಿನ ಮೇಲೆ ಹುಲಿ ಏಕಾಏಕಿಯಾಗಿ ಎರಗಿದ್ದು, ಹುಲಿ ದಾಳಿಯಿಂದ ಹಸು ಮೃತಪಟ್ಟಿದೆ. ಆ ಮೂಲಕ ಕೊಡಗಿನಲ್ಲಿ ಹುಲಿ ಅಬ್ಬರ ಜೋರಾಗಿದ್ದು, ನರಹಂತಕ ಹುಲಿ ಸೆರೆಗಾಗಿ ಅರಣ್ಯ ಇಲಾಖೆ ಹರಸಾಹಸ ಪಡುವಂತಾಗಿದೆ. ಇನ್ನು ಬೆಳ್ಳೂರು ಗ್ರಾಮಕ್ಕೆ ಅರಣ್ಯ ಇಲಾಖೆಯ ಕಾರ್ಯಾಚರಣೆ ತಂಡ ಸ್ಥಳಾಂತರ ಮಾಡಿದ್ದು, ಮುಂದಿನ ದಿನಗಳಲ್ಲಾದರು ಹುಲಿಯ ಉಪಟಳದಿಂದ ಸ್ಥಳೀಯರು ಮತ್ತು ಹಸುವಿನಂತಹ ಗ್ರಾಮದ ಸಾಧು ಪ್ರಾಣಿಗಳು ಜೀವ ಬೆದರಿಕೆ ಇಲ್ಲದೇ ವಾಸ ಮಾಡುವ ವ್ಯವಸ್ಥೆ ನಿರ್ಮಾಣವಾಗುವುದು ಅನಿವಾರ್ಯವಾಗಿದೆ.
ಇದನ್ನೂ ಓದಿ: ಚಿರತೆಯೊಂದಿಗೆ ಧೈರ್ಯದಿಂದ ಹೋರಾಡಿ, ಅದರ ಕಣ್ಣಿಗೆ ತಿವಿದು ಪಾರಾದ ಬಾಲಕ !
Published On - 4:17 pm, Wed, 3 March 21