ಉತ್ತರ ಕನ್ನಡ: ಚಿರತೆಯೊಂದು ಮರದ ಮೇಲೆ ಹಾರು ಬೆಕ್ಕೊಂದನ್ನು ಹಿಡಿಯಲು ಜಿಗಿದ ವೇಳೆ ವಿದ್ಯುತ್ ತಂತಿ ತಾಗಿ ಚಿರತೆ ಮತ್ತು ಹಾರುಬೆಕ್ಕು ಎರಡೂ ಪ್ರಾಣಿಗಳು ಸಾವಿಗೀಡಾದ ಘಟನೆ ಜಿಲ್ಲೆಯ ಜೋಯಿಡಾ ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ್ಗೆ ಸೇರಿದ ಶೇವಾಳಿ ಬಳಿ ಸೋಮವಾರ ನಡೆದಿದೆ. ಗುಂದ ಅರಣ್ಯ ಇಲಾಖೆಯ ತಮ್ಮಣಗಿ ಶಾಖೆಯ ಶೇವಾಳಿಯಲ್ಲಿ ಹಾರು ಬೆಕ್ಕನ್ನು ಬೇಟೆಯಾಡುವಾಗ ಚಿರತೆ ಮರದಿಂದ ಮರಕ್ಕೆ ಹಾರಿದ್ದು, ವಿದ್ಯುತ್ ತಂತಿ ತಾಗಿ ಸಾವಿಗೀಡಾಗಿದೆ.
ಗುಂದ ಪಶು ವೈದ್ಯಾಧಿಕಾರಿ ಅರ್ಚಾನ ಸಿನ್ಹಾ ಸ್ಥಳಕ್ಕೆ ಆಗಮಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ಎಲ್ಲರೂ ಸೇರಿ ಚಿರತೆಯ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಪ್ ಮಾರಿಯೋ ಕ್ರಿಸ್ತೊ ರಾಜಾ, ಎಸಿಎಪ್ ಕೆ.ಎಸ್ ಗೋರವರ್, ಗುಂದ ವಲಯ ಅರಣ್ಯ ಅಧಿಕಾರಿ ವಿನೋದ ಅಂಗಡಿ, ಪಣಸೋಲಿ ವಲಯ ಅರಣ್ಯಾಧಿಕಾರಿ ಸಂಗಮೇಶ ಪಾಟೀಲ್, ಗುಂದ ಅರಣ್ಯ ಇಲಾಕೆಯ ಫಾರೆಸ್ಟರ್ ಮಧು ಹೊನ್ನಳಿ, ಗುರುರಾಜ ಗೌಡ ಇತರರು ಉಪಸ್ಥಿತರಿದ್ದರು.
ನಂಜನಗೂಡಿನಲ್ಲಿ ಕಾಡು ಬೆಕ್ಕನ್ನು ಕಂಡು ಚಿರತೆ ಎಂದು ಗಾಬರಿಗೊಂಡ ಗ್ರಾಮಸ್ಥರು:
ಮೈಸೂರಿನ ನಂಜನಗೂಡು ತಾಲೂಕಿನ ದೇವನೂರು ಗ್ರಾಮದಲ್ಲಿ ಕಾಡು ಬೆಕ್ಕನ್ನು ನೋಡಿ ಚಿರತೆ ಅಂದುಕೊಂಡು ಜನರೆಲ್ಲಾ ಕಂಗಾಲಾಗಿದ್ದಾರೆ. ಗ್ರಾಮದಲ್ಲಿ ಕಾಡು ಬೆಕ್ಕೊಂದು ಸದ್ದಿಲ್ಲದೇ ಓಡಾಡುತ್ತಿತ್ತು. ಅದನ್ನು ದೂರದಿಂದ ನೋಡಿದ ಜನರು ಚಿರತೆ ಎಂದುಕೊಂಡು ಗಾಬರಿಯಾಗಿದ್ದರು.
ತಕ್ಷಣವೇ ಜನರೆಲ್ಲ ಸೇರಿ ಕೈಯ್ಯಲ್ಲಿ ಕೋಲು ಹಿಡಿದು ಹುಡುಕಾಟ ಆರಂಭಿಸಿದರು. ನಂತರ ಗ್ರಾಮದಲ್ಲಿ ಅಡಗಿ ಕುಳಿತಿದ್ದ ಕಾಡು ಬೆಕ್ಕನ್ನು ಸೆರೆಹಿಡಿದಿದ್ದಾರೆ. ಸದ್ಯ ಚಿರತೆ ಎಂದು ತಿಳಿದಿದ್ದ ಜನರು ಕಾಡುಬೆಕ್ಕನ್ನು ನೋಡಿ ನಿಟ್ಟಿಸಿರು ಬಿಟ್ಟಿದ್ದಾರೆ. ಬಳಿಕ ಸೆರೆ ಹಿಡಿದ ಕಾಡು ಬೆಕ್ಕನ್ನು ಅರಣ್ಯ ಇಲಾಖೆ ವಶಕ್ಕೆ ನೀಡಲಾಗಿದೆ.
ಜಿಂಕೆಯ ಅಂತ್ಯಕ್ರಿಯೆ ಮಾಡಿದ ಅರಣ್ಯ ಇಲಾಖೆ:
ಕಾಫಿನಾಡಿನಗೆ ಕಾಡಿನಿಂದ ಜಿಂಕೆಯೊಂದು ಆಗಮಿಸಿದ್ದು, ಇದನ್ನು ಕಂಡ ಪಿಟ್ಬುಲ್ ತಳಿಯ ನಾಯಿ ಅಟ್ಟಿಸಿಕೊಂಡು ಹೋಗಿದೆ. ಹೀಗೆ ಜೆಂಕೆಯನ್ನು ಬೆನ್ನಟ್ಟಿ ಹೋದ ನಾಯಿ ಜಿಂಕೆಯ ಜೊತೆಗೆ ಸುಮಾರು 15 ನಿಮಿಷಗಳ ಕಾಲ ಕಾದಾಟ ನಡೆಸಿದೆ. ಇನ್ನು ಜಿಂಕೆ ತನ್ನೆಲ್ಲಾ ಶಕ್ತಿ ಪ್ರದರ್ಶನ ತೋರಿಸಿದರೂ ನಾಯಿಯ ಎದುರು ಸೋಲು ಒಪ್ಪಿಕೊಳ್ಳಬೇಕಾಯಿತು. ಬರೀ ಸೋಲಾಗಿದ್ದರೆ ಬಹುಶಃ ಅಷ್ಟು ಬೇಸರವಾಗುತ್ತಿರಲಿಲ್ಲ, ಆದರೆ ಪಿಟ್ಬುಲ್ ತಳಿಯ ನಾಯಿಗೆ ಸಾಥ್ ನೀಡಿದ ಬೀದಿನಾಯಿಗಳು ಜಿಂಕೆಯನ್ನ ಬಲಿತೆಗೆದುಕೊಂಡಿದೆ.
ಈ ವೇಳೆ ಜಿಂಕೆಯ ಸಹಾಯಕ್ಕೆ ಸ್ಥಳೀಯರು ಸೇರಿದಂತೆ ಅರಣ್ಯ ಸಿಬ್ಬಂದಿ ದೌಡಾಯಿಸಿದ್ದರು ಆದರೆ ಜಿಂಕೆ ಬದುಕಿಸಲು ಮಾಡಿದ ಇನ್ನಿಲ್ಲದ ಪ್ರಯತ್ನ ಕೈಗೂಡಲೇ ಇಲ್ಲ. ಸಾವು ಬದುಕಿನ ಹೋರಾಟದಲ್ಲಿ 7 ವರ್ಷದ ಗಂಡು ಜಿಂಕೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಮೂಡಿಗೆರೆ ಸಮೀಪದ ಹಳೆಕೋಟೆ ಅರಣ್ಯ ಇಲಾಖೆಯ ಆವರಣದಲ್ಲಿ ಜಿಂಕೆಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಜಿಂಕೆಯ ಮರಣೋತ್ತರ ಪರೀಕ್ಷೆ ಬಳಿಕ ಅಲ್ಲೇ ಅಂತ್ಯಸಂಸ್ಕಾರವನ್ನ ಕೂಡ ಮಾಡಲಾಯಿತು. ಗಾಬರಿಯಿಂದ ಕಾದಾಟ ನಡೆಸಿದ್ದರಿಂದ ಜಿಂಕೆ ಹೃದಯಘಾತದಿಂದ ಸಾವನ್ನಪ್ಪಿರುವ ಸಾಧ್ಯತೆ ಜಾಸ್ತಿಯಿದೆ ಎಂದು ಪಶುವೈದ್ಯರು ಅಭಿಪ್ರಾಯಪಟ್ಟರು.
ಇದನ್ನೂ ಓದಿ:
ಕಾಡು ಬೆಕ್ಕನ್ನು ನೋಡಿ ಚಿರತೆ ಅಂದುಕೊಂಡು ಆತಂಕ ಗೊಂಡ ನಂಜನಗೂಡು ಜನ!
ಜಿಂಕೆ ಮೇಲೆ ನಾಯಿ ದಾಳಿ: ಹೋರಾಟದಲ್ಲಿ ಸಾವಿಗೀಡಾದ ಸಾಧು ಪ್ರಾಣಿ ಅಂತ್ಯಸಂಸ್ಕಾರದ ವೇಳೆ ಕಣ್ಣೀರಿಟ್ಟ ಸ್ಥಳೀಯರು