Breaking News Today Live Updates:ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ರಾಜ್ಯದಲ್ಲಿ ಕಾವೇರಿ ಕಿಚ್ಚು ಭುಗಿಲೆದ್ದಿದೆ. ಅದರಂತೆ ನಾಳೆ(ಸೆ.29) ಕರ್ನಾಟಕ ಬಂದ್ ಆಗಲಿದೆ. ಹೌದು, ಅಗತ್ಯ ಸೇವೆ ಬಿಟ್ಟು ಉಳಿದೆಲ್ಲವೂ ಬಂದ್ ಆಗಲಿದ್ದು, ನಾಳಿನ ಬಂದ್ಗೆ ಸಾವಿರಕ್ಕೂ ಹೆಚ್ಚು ಸಂಘಟನೆಗಳ ಸಾಥ್ ನೀಡಿದ್ದಾರೆ. ಇದರ ಜೊತೆಗೆ ಬಂದ್ಗೆ ಬೆಂಬಲಿಸಲು ಇಂದು(ಸೆ.28) ವಾಟಾಳ್ ನಾಗರಾಜ್ ಬೆಂಗಳೂರು ರೌಂಡ್ಸ್ ಹಾಕಲಿದ್ದಾರೆ. ಇನ್ನು ನಿನ್ನೆ ಮತ್ತೆ 18 ದಿನ ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಬೆಡುವಂತೆ cwrc ಆದೇಶ ನೀಡದ ಬೆನ್ನಲ್ಲೆ ನಿನ್ನೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬಿಜೆಪಿ, ಜೆಡಿಎಸ್ ಪ್ರತಿಭಟನೆ ನಡೆಸಿತ್ತು. ಇನ್ನು ಈದ್ ಮಿಲಾದ್ ಹಬ್ಬ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ದರ್ಗಾಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ಇದರ ಜೊತೆಗೆ ರಾಜ್ಯದ ಪ್ರಮುಖ ಸುದ್ದಿಗಳ ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ
ಕಾರವಾರ: ಒಂದರಿಂದ ಹತ್ತನೇ ತರಗತಿ ಪಠ್ಯ ಪುಸ್ತಕ ಮರು ಪರಿಷ್ಕರಣೆ ಬಗ್ಗೆ ಶಿರಸಿಯಲ್ಲಿ ಮಾತನಾಡಿದ ರೋಹಿತ್ ಚಕ್ರತೀರ್ಥ, ನಾವು ಬರಗೂರು ರಾಮಚಂದ್ರಪ್ಪನವರ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುವಾಗ ಅಲ್ಲಿ ಏನು ಸಮಸ್ಯೆ ಇತ್ತು ಎಂಬುದನ್ನು ಸಾರ್ವಜನಿಕವಾಗಿ ಹೇಳಿದ್ದೇವೆ. ನಾವು ಮಾಡಿರುವ ಪಠ್ಯ ಪರಿಷ್ಕರಣೆಯಲ್ಲಿ ಏನು ತಪ್ಪಿದೆ ಎಂದು ಸರ್ಕಾರವಾಗಲಿ, ಪರಿಷ್ಕರಣೆ ಮಾಡುತ್ತಿರುವ ವಿಷಯ ತಜ್ಞರಾಗಲಿ ಈಗಿನ ಸಮಿತಿಯ ಅಧ್ಯಕ್ಷರಾಗಲಿ ಬಹಿರಂಗ ಪಡಿಸಿಲ್ಲ ಎಂದರು.
ಕೇವಲ ಹಿಂದಿನ ಸರ್ಕಾರ ಪರಿಷ್ಕರಣೆ ಮಾಡಿತ್ತು ಅದನ್ನು ತೆಗೆಯುತಿದ್ದೇವೆ ಎಂಬ ಅಜಂಡ ಇಟ್ಟುಕೊಂಡು ಪರಿಷ್ಕರಣ ಸಮಿತಿ ರಚನೆ ಮಾಡಿದ್ದಾರೆ. ಇದು ಸಂಪೂರ್ಣ ಅಸಮಿದಾನಿಕ. 15 ,16 ಪಾಠಗಳನ್ನ ಕೇವಲ ಕ್ಯಾಬಿನೇಟ್ ಮೀಟಿಂಗ್ ಮಾಡಿ ಅಲ್ಲಿ ಸುತ್ತೋಲೆ ಹೊರಡಿಸಿದ್ದಾರೆ. ಈ ರೀತಿ ಮಾಡಲು ಶಿಕ್ಷಣ ಇಲಾಖೆಯಲ್ಲಿ ಆಸ್ಪದವಿಲ್ಲ. ಹಿಂದಿನ ಪಠ್ಯಪುಸ್ತಕ ಸಮಿತಿ ಅಧ್ಯಕ್ಷನಾದ ನನ್ನನ್ನು ಏಕೆ ಪರಿಷ್ಕರಣೆ ಮಾಡಿದ್ದೀರ ಎಂದು ಕೇಳಿಲ್ಲ. ಏಕಪಕ್ಷೀಯವಾದ ತೀರ್ಮಾನ, ಸರ್ವಾಧಿಕಾರಿ ಮನಸ್ತಿತಿಯಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.
ಮೈಸೂರು: ಕಾವೇರಿ ನೀರಿಗಾಗಿ ಮೈಸೂರಿನಲ್ಲಿ ಪ್ರತಿಭಟನೆ ಮುಂದುವರೆದಿದೆ. ಜಿಲ್ಲಾ ಪಂಚಾಯತ್ ಮುಂದೆ ರೈತ ಕಲ್ಯಾಣ ಸಂಘದಿಂದ ಮೌನ ಪ್ರತಿಭಟನೆ ನಡೆಯಿತು. ಮೇಣದ ಬತ್ತಿ ಹಚ್ಚಿ ಶಾಂತಿಯುತ ಪ್ರತಿಭಟನೆ ನಡೆಸಿದರು. ರೈತರ ಸಮಸ್ಯೆಗೆ ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ರೈತ ಕಲ್ಯಾಣ ರಾಜ್ಯಾಧ್ಯಕ್ಷ ಭೂಮಿ ಪುತ್ರ ಸಿ.ಚಂದನ್ ಗೌಡ ಒತ್ತಾಯಿಸಿದರು.
ನಾಳಿನ ಕರ್ನಾಟಕ ಬಂದ್ಗೆ ಡಾ|| ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರುಗಳಾದ ಶಿವರಾಮೇಗೌಡ, ಪ್ರವೀಣ್ ಕುಮಾರ್ ಶೆಟ್ಟಿ, ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಕೆ.ಆರ್. ಕುಮಾರ್, ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ್ ದೇವ್ ಬೆಂಬಲ ಸೂಚಿಸಿದ್ದಾರೆ.
ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ನಾಳೆ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದ್ದು, ಮೈಸೂರಿನಲ್ಲಿ ಪರಿಸ್ಥಿತಿ ಅವಲೋಕಿಸಿ ಶಾಲಾ ಕಾಲೇಜುಗಳಿಗೆ ರಜೆ ನೀಡುವ ತೀರ್ಮಾನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಎಂದಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ನಾಳೆ ಬಂದ್ಗೆ ಕರೆ ನೀಡಲಾಗಿದ್ದು, ಹಲವೆಡೆ ಬಂದ್ ಬದಲು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಈ ಪ್ರತಿಭಟನೆಯಲ್ಲಿ ನಟ ಶಿವರಾಜ್ಕುಮಾರ್ ಭಾಗಿಯಾಗುತ್ತಾರೆ ಎಂದು ಬೆಂಗಳೂರಿನಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್ ಹೇಳಿದ್ದಾರೆ. ಬೆಳಗ್ಗೆ 11 ಗಂಟೆಗೆ ಶಿವಾನಂದ ಸರ್ಕಲ್‌ನ ಗುರುರಾಜ ಕಲ್ಯಾಣ ಮಂಟಪದ ಬಳಿ ನಡೆಯುವ ಪ್ರತಿಭಟನೆಯಲ್ಲಿ ನಟ ಶಿವಣ್ಣ ಭಾಗಿಯಾಗುತ್ತಾರೆ. ಚಿತ್ರರಂಗದ ಹಲವು ನಟರು ಬಂದ್ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಾರೆ. ನಟ ಶಿವರಾಜ್ಕುಮಾರ್ ನೇತೃತ್ವದಲ್ಲಿ ನಾಳೆ ಪ್ರತಿಭಟನೆ ಮಾಡುತ್ತೇವೆ ಎಂದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸುವಿಕೆ ಖಂಡಿಸಿ ನಾಳೆ ಬಂದ್ಗೆ ಕರೆ ನೀಡಲಾಗಿದೆ. ಇದರ ಜೊತೆಗೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ ಮಂಡ್ಯದ ಹಲವು ಭಾಗಗಳಲ್ಲಿ ನಿಷೇಧಾಜ್ಞೆ ಜಾರಿಮಾಡಿ ಮಂಡ್ಯ ವಿಭಾಗದ ಉಪವಿಭಾಗಾಧಿಕಾರಿ ಎಂ ಶಿವಮೂರ್ತಿ ಆದೇಶ ಹೊರಡಿಸಿದ್ದಾರೆ. ಬೆಂ-ಮೈ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ನಿಲ್ದಾಣದ ಬಳಿ, ಮಂಡ್ಯ ತಾ. ತೂಬಿನಕೆರೆವರೆಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ನಾಳೆ ಬಂದ್ಗೆ ಕರೆ ನೀಡಲಾಗಿದ್ದು, ಇದಕ್ಕೆ ರಾಜ್ಯ ರೈತ ಸಂಘದಿಂದ ಬೆಂಬಲ ಘೋಷಣೆಯಾಗಿದೆ. ಗೌರಿಪುರ ಬಳಿ ಬೆಂ-ಮೈ ರಾಷ್ಟ್ರೀಯ ಹೆದ್ದಾರಿ ತಡೆದು ನಾಳೆ ಪ್ರತಿಭಟನೆ ನಡೆಸಲಾಗುತ್ತಿದ್ದು, ಗೆಜ್ಜಲಗೆರೆ ಗ್ರಾಮದ ಬಳಿ ರೈಲು ಮಾರ್ಗ ತಡೆದು ರೈತರಿಂದ ಪ್ರತಿಭಟನೆ ನಡೆಯಲಿದೆ. ಇದೇ ವೇಳೆ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಒತ್ತಾಯಿಸಲಿದ್ದು, ಸಮಸ್ಯೆ ಪರಿಹಾರದ ಬಗ್ಗೆ ಸಂಕಷ್ಟ ಸೂತ್ರ ಜಾರಿ ಮಾಡುವಂತೆ ಆಗ್ರಹಿಸಲಿದ್ದಾರೆ. ಈ ಬಗ್ಗೆ ಸಂಘವು ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಮೈಸೂರು: ನಾವು ನಾಳೆ ಕರ್ನಾಟಕ ಬಂದ್ ಮಾಡುತ್ತಿಲ್ಲ. ಬದಲಾಗಿ ರಾಜ್ಯ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಟಿವಿ9ಗೆ ರಾಜ್ಯ ಜಲ ಸಂರಕ್ಷಣಾ ಸಮಿತಿ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಹುಬ್ಬಳ್ಳಿ: ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಡಿಕೆ ಬಳಿ ಟಿಕೆಟ್ ಕೇಳಿದ್ದೇನೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಮೋಹನ್ ಲಿಂಬಿಕಾಯಿ ಹೇಳಿದ್ದಾರೆ. ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಕೆಪಿಸಿಸಿ ಅಧ್ಯಕ್ಷರು ಸೂಚಿಸಿದ್ದಾರೆ. ಬಿಜೆಪಿಯಲ್ಲಿನ ಅಸಮಾಧಾನದಿಂದ ನಾನು ಕಾಂಗ್ರೆಸ್‌ಗೆ ಬಂದಿದ್ದೇನೆ. ಬಿ.ಎಸ್.ಯಡಿಯೂರಪ್ಪಗೆ ಬಿಜೆಪಿಯಲ್ಲೇ ಇಕ್ಕಟ್ಟಿನ ಸ್ಥಿತಿಯಿದೆ. ಕಾಂಗ್ರೆಸ್‌ನಲ್ಲಿ ನನಗೆ ಅನ್ಯಾಯವಾಗುವುದಿಲ್ಲ ಅನ್ನೋ ಭರವಸೆ ಇದೆ. ಧಾರವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಗಳಿಲ್ಲ. ಬಿಜೆಪಿಯ ಮಾಜಿ ಶಾಸಕರು ಕಾಂಗ್ರೆಸ್ ಸೇರುತ್ತಿರುವುದು ಸ್ವಾಗತಾರ್ಹ. ಜಗದೀಶ್ ಶೆಟ್ಟರ್ MLC ಆಗಿರುವುದರಿಂದ ಲೋಕಸಭೆಗೆ ಸ್ಪರ್ಧಿಸುವುದಿಲ್ಲ. ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರ ಕೂಡ ಕಾಂಗ್ರೆಸ್ ಪಕ್ಷ ಸೇರುತ್ತಾರೆ. ಡಿಕೆ ಶಿವಕಜುಮಾರ್ ನೇತೃತ್ವದಲ್ಲಿ ದೊಡ್ಡ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸೇರಲಿದ್ದಾರೆ ಎಂದರು.
ನಾಳೆ ಕರೆ ಕೊಟ್ಟ ಕರ್ನಾಟಕ ಬಂದ್ಗೆ ರಾಜ್ಯ ಚಿತ್ರ ಮಂದಿರಗಳ ಸಂಘ ಬೆಂಬಲ ವ್ಯಕ್ತಪಡಿಸಿದೆ. ಸಂಜೆವರೆಗೆ ಚಲನಚಿತ್ರಗಳ ಪ್ರಸಾರ ಬಂದ್ ಮಾಡಲಿದ್ದು, ಸಂಜೆ ನಂತರದಿಂದ ಎಂದಿನಂತೆ ಪ್ರದರ್ಶನಗಳು ನಡೆಯಲಿವೆ ಎಂದು ಸಂಘ ತಿಳಿಸಿದೆ.
ಬೆಂಗಳೂರು: ಕಾವೇರಿಗಾಗಿ ನಾಳೆ ಕರ್ನಾಟಕ ಬಂದ್ ‘ಮಾಧ್ಯಮದವರು ಬಂದಿರೋದೆ ಒಂದು ತಯಾರಿ ಎಂದು ವಾಟಾಳ್ ನಾಗರಾಜ್ ಹೇಳಿದರು. ‘ನಿಮ್ಮನೆಲ್ಲ ನೋಡಿದ್ರೆ ಬಂದ್ ಯಶಸ್ವಿ ಯಾಗುತ್ತೆ ಅನ್ನಿಸುತ್ತದೆ. ನಾಳೆ ನಡೆಯುವ ಬಂದ್ ಶಾಂತಿಯುತವಾಗಿ ಆಗುತ್ತೆ. ಈ ಬಂದ್ ಗೆ ರಾಜ್ಯದ ಎಲ್ಲರಿಗೂ ಕೈ ಮುಗಿದು ಮನವಿ ಮಾಡ್ತೀವಿ. ‘ಇದು ಸ್ವಂತ ಬಂದ್ ಅಲ್ಲ, ಕಾವೇರಿಗಾಗಿ ನಡಿತಿರೋ ಬಂದ್. ಸಿದ್ದರಾಮಯ್ಯ ಅವರೇ ನೀವು ಬೆಂಬಲ ಕೊಡಬೇಕು. ಇದು ಯಾರ ವಿರೋಧವಾದ ಬಂದ್ ಅಲ್ಲ ಎಂದರು. ಇನ್ನು 144 ಅಲ್ಲಾ, 544 ಸೆಕ್ಷನ್ ಜಾರಿ ಮಾಡಲಿ, ಟೌನ್ ಹಾಲ್ ನಿಂದ ಮೆರವಣಿಗೆ ಮಾಡೇ ಮಾಡ್ತೀವೆ ಎಂದಿದ್ದಾರೆ.
ಬೆಂಗಳೂರು: ಕಾವೇರಿಗಾಗಿ ಕರ್ನಾಟಕ ಬಂದ್ ಹಿನ್ನಲೆ ಬೆಂಗಳೂರಿನಲ್ಲಿ ಇಂದು ಮಧ್ಯರಾತ್ರಿಯಿಂದ ನಿಷೇಧಾಜ್ಞೆ ಜಾರಿ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದಾರೆ. ಶುಕ್ರವಾರ ಹಲವಾರು ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿದ್ದಾರೆ. ನಗರದಲ್ಲಿ ಪೊಲೀಸ್ ಭದ್ರತೆ ಮಾಡಲಾಗಿದೆ. ನಾಳೆಯೂ ಸಹ ಪ್ರತಿಭಟನೆ ರ್ಯಾಲಿ ಮತ್ತು ಮೆರವಣಿಗೆಗೆ ಅವಕಾಶ ಇಲ್ಲ ಎಂದಿದ್ದಾರೆ.
ಮಂಡ್ಯ: ಜಿಲ್ಲೆಯಲ್ಲಿ ಕಾವೇರಿ ಹೋರಾಟ ತಾರಕಕ್ಕೇರಿದ್ದು, ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ನೂರಾರು ರೈತರು ಟ್ರ್ಯಾಕ್ಟರ್ಗಳಲ್ಲಿ ಪ್ರತಿಭಟನೆಗೆ ಆಗಮಿಸಿದ ರೈತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಕಾವೇರಿಗಾಗಿ ನಾರಾಯಣಗೌಡರ ಬಣದ ಮಹಿಳಾ ಘಟಕದಿಂದ ಗಾಂಧಿನಗರದ ಕಛೇರಿ ಎದುರು ಪ್ರತಿಭಟನೆ ಶುರುವಾಗಿದೆ. ಸಂಸದರ ಪೋಟೋ ಹಿಡಿದು ಮಹಿಳಾ ಕಾರ್ಯಕರ್ತರು ಧಿಕ್ಕಾರ ಕೂಗುತ್ತಿದ್ದಾರೆ. ಇನ್ನು ಕರ್ನಾಟಕ ಬಂದ್ಗೂ ಮುಂಚೆಯೇ ಫ್ರೀಡಂ ಪಾರ್ಕ್ ಬಳಿ ಬೃಹತ್ ರ್ಯಾಲಿ ಶುರುವಾಗಿದೆ.
ಮೈಸೂರು: ಕರ್ನಾಟಕ ಬಂದ್‌ಗೆ ಮೈಸೂರಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಹೌದು, ತುರ್ತು ಸೇವೆ ಹೊರತುಪಡಿಸಿ ಎಲ್ಲ ಸೇವೆಗಳೂ ಬಂದ್ ಮಾಡಲು ಬಸ್, ಲಾರಿ, ಟ್ಯಾಕ್ಸಿ, ಆಟೋ ಚಾಲಕರು ಮತ್ತು ಮಾಲೀಕರ ಸಂಘದವರು ಬೆಂಬಲ ಸೂಚಿಸಿದ್ದಾರೆ. ಅರಮನೆ ಮುಂಭಾಗ ಕಾವೇರಿ ಕ್ರಿಯಾ ಸಮಿತಿ ಸದಸ್ಯರ ಸಭೆ ನಡೆಸಿದ್ದು, ಮೈಸೂರಿನಲ್ಲಿ ಹಲವು ಸಂಘಗಳು ಬೆಂಬಲ ನೀಡಿವೆ. ಬೆಳಿಗ್ಗೆ 6 ಗಂಟೆಯಿಂದ ಮೈಸೂರು ಕೇಂದ್ರೀಯ ಬಸ್ ನಿಲ್ದಾಣದ ಬಳಿಯಿಂದ ಹೋರಾಟ ಆರಂಭವಾಗಲಿದೆ. ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ, ಮೈಸೂರು ರಕ್ಷಣಾ ವೇದಿಕೆ, ಕರ್ನಾಟಕ ಸೇನಾ ಪಡೆ ಸೇರಿ ಹಲವು ಸಂಘಟನೆಗಳು ಸಾಥ್ ನೀಡಲಿದ್ದಾರೆ.
ಬೆಂಗಳೂರು: ನಾವು ತಮಿಳುನಾಡಿನ ಜೊತೆ ಹೊಂದಾಣಿಕೆ ಮಾಡಿಲ್ಲ, ಈ ನಾಡು ಜಲ ಕಾಪಾಡಲು ನಾವು ಬದ್ದರಾಗಿದ್ದೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು. ಬಿಜೆಪಿ ಮುಖಂಡರು ದೋಷಿಸುವುದರಿಂದ ಪ್ರಯೋಜನವಿಲ್ಲ. ಬಂದ್ ಮಾಡಲು ಈಗಾಗಲೇ ಸಂಘಟನೆಗಳು ಕರೆ ಕೊಟ್ಟಿದೆ ಎಂದರು. ಇನ್ನು ಇದೇ ವೇಳೆ ಕಾಂಗ್ರೆಸ್‌ನಲ್ಲಿ ಸೇರಲು ಹಲವು ಮುಖಂಡರು ಸಿದ್ದರಾಗಿದ್ದಾರೆ. ಬಹಳ ಜನ ರಾಜ್ಯದಲ್ಲಿ ಕಾಂಗ್ರೆಸ್ ಸೇರಲು ಮುಂದಾಗಿದ್ದು, ಕಾಂಗ್ರೆಸ್ ಸಿದ್ದಾಂತ ಒಪ್ಪಿಕೊಂಡು ಹಲವು ಜನರು ಬರ್ತಿದ್ದಾರೆ ಎಂದರು.
ಹುಬ್ಬಳ್ಳಿ: ಕಾವೇರಿ ನೀರಿಗಾಗಿ ನಾಳೆ ಕರ್ನಾಟಕ ಬಂದ್ ವಿಚಾರ ‘ ಈಗ 3 ಸಾವಿರ ಕ್ಯೂಸೆಕ್ ಆದೇಶ ಬಂದಿದೆ. 10 ಸಾವಿರ ಕ್ಯೂಸೆಕ್ ಆದೇಶ ಬಂದಾಗ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡನೆ ಮಾಡಿದ್ದರೆ, ಅಷ್ಟು ದೊಡ್ಡ ಪ್ರಮಾಣದ ನೀರು ಬಿಡುವ ಪ್ರಮೇಯ ಬರುತ್ತಿರಲಿಲ್ಲ ಎಂದು ಮಾಜ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ತಡವಾಗಿಯಾದರೂ ಸರ್ಕಾರಕ್ಕೆ ಬುದ್ದಿ ಬಂದಿದೆ. ಈಗಾಗಲೇ ಸಾಕಷ್ಟು ನೀರು ಹರಿದು ಹೋಗಿದೆ. ತಮಿಳುನಾಡು ಟ್ರಿಬ್ಯುನಲ್ ಆದೇಶವನ್ನ ಉಲ್ಲಂಘನೆ ಮಾಡಿದೆ. ಕುಡಿಯುವ ನೀರಿಗೆ ಬಹುದೊಡ್ಡ ಹಾಹಾಕಾರ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಬಗ್ಗೆ ಸರ್ಕಾರ ಖಾಳಜಿ ವಹಿಸಬೇಕು ಎಂದರು.
ಬೆಂಗಳೂರು: ‘ಕನ್ನಡಿಗರು ನಿಮಗೆ ಓಟ್ ಹಾಕಿರೋರು, ರಾಜ್ಯದ ಹಿತಕಾಯಲು, ನೆಲ-ಜಲ ಕಾಯಲು ಎಂಪಿ ಚುನಾವಣೆ ಬರುತ್ತದೆ ಆಗ ನೀವು ಹೇಗೆ ಗೆಲ್ಲುತ್ತೀರಾ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಸಂಸದರ ವಿರುದ್ದ ಕಿಡಿಕಾರಿದ್ದಾರೆ.
ನಮ್ಮ ರಾಜ್ಯದ ಲಕ್ಷಾಂತರ ಕೋಟಿ ಹಣವನ್ನು ಉತ್ತರ ಭಾರತದವ್ರಿಗೆ ಹಂಚಿಕೆ ಮಾಡಲಾಗುತ್ತದೆ. ಕರವೇ ಕಾರ್ಯಕರ್ತರು ಸಂಸದರ ಮನೆಗಳಿಗೆ ನುಗ್ಗುವ ಮುನ್ನ ಸ್ವಾಭಿಮಾನ ಇದ್ರೆ ರಾಜೀನಾಮೆ ಕೊಡಿ ಎಂದರು.
ಬೆಂಗಳೂರು: ಇಂದು ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರ ‘ ಸರ್ಕಾರ ನಿರ್ಲಕ್ಷ್ಯ ವಹಿಸದೆ ರೈತರ ಪರ ನಿಲ್ಲಬೇಕು ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ‘ಕೋರ್ಟ್ನಿಂದ ಆದೇಶ ಹೊರಡಿಸಿದೆ,
ಕಾವೇರಿ ಬೋರ್ಡ್ ಮಾಹಿತಿ ನೀಡಿರುವ ಪ್ರಕಾರ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡೋಕೆ ಹೇಳಿದೆ. ಇದರಿಂದ 7.5 ಟಿಎಂಸಿ ನೀರು ಖಾಲಿಯಾಗುತ್ತೆ. ಮೊನ್ನೆ ದಿನ ಶ್ರೀರಂಗಪಟ್ಟಣದಲ್ಲಿ ನೀರು ಖಾಲಿಯಾಗಿರುವುದು ನೋಡಿದ್ದೀವಿ. ತಮಿಳುನಾಡಿಗೆ 1.80 ಸಾವಿರ ಹೆಕ್ಟೇರ್ಗೆ ನೀರು ಹರಿಸಲು ಅನುಮತಿ ಇದೆ. ಆದ್ರೆ, ಸರಿಸುಮಾರು 4 ಲಕ್ಷ ಹೆಕ್ಟೇರ್ ಗೆ ನೀರು ಹರಿಸಲಾಗುತ್ತಿದೆ. ಇದರ ಬಗ್ಗೆ ಯಾರು ಪ್ರಶ್ನೆ ಮಾಡ್ತಾ ಇಲ್ಲ. ಓರ್ವ ಯುವಕನಾಗಿ ಆಗ್ರಹ ಮಾಡ್ತೀನಿ ಸರ್ಕಾರ ರೈತರನ್ನ ಉಳಿಸಬೇಕು ಎಂದರು.
ಬೆಂಗಳೂರು: ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ಖಂಡಿಸಿ ನಾಳೆ ಬಂದ್ಗೆ ಕರೆ ನೀಡಲಾಗಿದ್ದು, ಬಂದ್ಗೆ ಬ್ರಿಗೇಡ್ ರೋಡ್ನ ವರ್ತಕರು ಬೆಂಬಲ ಸೂಚಿಸಿದ್ದೇವೆ ಎಂದು ಬ್ರಿಗೇಡ್ ರೋಡ್ ಅಸೋಸಿಯೇಷನ್ ಅಧ್ಯಕ್ಷ ಸುಹೀಲ್ ಮಾಹಿತಿ ನೀಡಿದ್ದಾರೆ. ‘ನಮ್ಮ ಅಸೋಸಿಯೇಷನ್ ವ್ಯಾಪ್ತಿಯ ಎಲ್ಲ 125 ಅಂಗಡಿಗಳು ಬಂದ್ ಮಾಡಲು ಎಲ್ಲರೂ ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.
ಬೆಂಗಳೂರು: ಕರ್ನಾಟಕ ಬಂದ್ಗೆ ನೈತಿಕ ಬೆಂಬಲ ನೀಡಲ ಶಾಲೆಗಳು ಮುಂದಾಗಿದೆ. ಶಾಲೆಗಳಿಗೆ ರಜೆ ನೀಡುವ ಜವಬ್ದಾರಿಯನ್ನ ಆಯಾ ಆಡಳಿತ ಮಂಡಳಿ ತಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳು ಶಾಲೆಗಳ ರಜೆ ನೀಡುವ ಬಗ್ಗೆ ನಿರ್ಧಾರಕ್ಕೆ ಮನವಿ ನೀಡಲಾಗಿದೆ ಎಂದು ರೂಪ್ಸಾ ಖಾಸಗಿ ಶಾಲೆಗಳ ಸಂಘಟನೆಯ ಲೋಕೇಶ್ ತಾಳಿಕಟ್ಟೆ ಮನವಿ ಮಾಡಿದ್ದಾರೆ.
ಕಲಬುರಗಿ: ಕಾವೇರಿ ನೀರಿಗಾಗಿ ನಾಳೆ ಕರ್ನಾಟಕ ಬಂದ್ ವಿಚಾರ ‘ ಕರ್ನಾಟಕ ಮತ್ತು ತಮಿಳುನಾಡು ಎ ಮತ್ತು ಬಿ ಟೀಂ ಆಗಿವೆ. ಇದರಿಂದ ಇಂಡಿಯಾ ಪಕ್ಷದ ಸೀಟುಗಳನ್ನು ಗೆಲ್ಲಲು ತಮಿಳುನಾಡಿಗೆ ಕರ್ನಾಟಕ ವನ್ನು ಅಡವಿಟ್ಟಿದ್ದಾರೆ ಎಂದು ಹೆಚ್ಡಿ ರೇವಣ್ಣ ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್ನಿಂದ ಆಪರೇಷನ್ ಕೈ ವಿಚಾರ ‘ ಅದರ ಬಗ್ಗೆ ನಾವು ತಲೆಕೆಡಿಸಿಕೊಳ್ಳಲ್ಲ, 1991 ರಿಂದ ರಾಜಕೀಯ ನೋಡ್ತಿದ್ದೇನೆ. ಆಪರೇಷನ್ ಕೈ ಗೆ ನಾವು ಹೆದರಲ್ಲ. ಕಾಂಗ್ರೆಸ್ ನವರು ಕೋಮುವಾದಿಗಳನ್ನು ದೂರ ಇಡಬೇಕು ಅಂತಾರೆ. ಆದ್ರೆ, ನಮ್ಮನ್ನು ಯಾವ ರೀತಿ ನಡೆಸಿಕೊಂಡಿದ್ದಾರೆ ಎಂದಿದ್ದಾರೆ.
ಬೆಂಗಳೂರು: ಕಾವೇರಿಗಾಗಿ ನಾಳೆ ರಾಜ್ಯಾದ್ಯಂತ ಬಂದ್ಗೆ ಕರೆ ನೀಡಲಾಗಿದೆ. ಆದರೆ, ಕರ್ನಾಟಕ ಬಂದ್ಗೆ ನೈತಿಕ ಬೆಂಬಲ ಎಂದು ಯಶವಂತಪುರ ಆಲೂಗಡ್ಡೆ ಈರುಳ್ಳಿ ವರ್ತಕರ ಸಂಘದ ಉದಯ್ ಶಂಕರ್ ಟಿವಿ9 ಗೆಮಾಹಿತಿ ನೀಡಿದ್ದಾರೆ.
ಈಗಾಗಲೇ ಮಂಗಳವಾರ ಬಂದ್ ಮಾಡಲಾಗಿದೆ. ಇನ್ನೂ ಸಾಲುಸಾಲು ರಜೆ ಬೇರೆಯಿದೆ, ಹೀಗಾಗಿ ರೈತರಿಗೆ ತೊಂದರೆ ನೀಡಲು ಆಗಲ್ಲ, ಅದ್ದರಿಂದ ನಾಳೆ ಮತ್ತೆ ಬಂದ್ ಮಾಡಲು ಆಗಲ್ಲ ಎಂದಿದ್ದಾರೆ.
ಬೆಂಗಳೂರು: ಕಾವೇರಿ ನೀರಿಗಾಗಿ ನಾಳೆ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ. ಈ ಹಿನ್ನಲೆ ಅನೇಕ ಸಂಘಟನೆಗಳು ಬೆಂಬಲ ನೀಡಿದ್ದು, ಅದರಂತೆ ಇದೀಗ ಬೀದಿ ಬದಿ ವ್ಯಾಪಾರಿಗಳು ಕೂಡ ಬಂದ್ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಬೆಳಗ್ಗೆ 6 ರಿಂದ ಸಂಜೆ 6 ವರೆಗೂ ರಾಜ್ಯಾದ್ಯಂತ ಬೀದಿ ಬದಿ ವ್ಯಾಪಾರಿಗಳು ಹಾಗೂ ಸ್ಥಳೀಯ ಮಾರ್ಕೆಟ್ ಬೀದಿ ಬದಿ ವ್ಯಾಪಾರಗಳು
ಸಂಪೂರ್ಣ ಸ್ಥಗಿತವಾಗಲಿದೆ ಎಂದು ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ರಾಜ್ಯಾಧ್ಯಕ್ಷ ರಂಗಸ್ವಾಮಿ ಟಿವಿ9 ಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಕಾವೇರಿ ಹೋರಾಟ ರಾಜ್ಯದಲ್ಲಿ ಭುಗಿಲೆದ್ದಿದ್ದು, ಬಂದ್ ಹಿನ್ನಲೆ ನಾಳೆ ಹೊಟೇಲ್ ಗಳು ಇರುತ್ತಾ? ಇರಲ್ವ ಎಂಬ ಪ್ರಶ್ನೆ ಮೂಡಿದೆ. ಈ ಹಿನ್ನಲೆ ಇಂದು ಬೆಳಗ್ಗೆ 11 ಗಂಟೆಗೆ ಈ ಬಗ್ಗೆ ಹೊಟೇಲ್ ಅಸೋಸಿಯೇಷನ್ ಮಹತ್ತರ ಸಭೆ ಕರೆದಿದೆ.
ಈಗಾಗಲೇ ಅಸೋಸಿಯೇಷನ್ ಸಂಪೂರ್ಣ ಬೆಂಬಲ ಘೋಷಿಸಿದೆ. ಆದರೆ, ಇಂದು ಮತ್ತೆ ಸಭೆ ಮಾಡಿ ಹೊಟೇಲ್ ವ್ಯಾಪಾರ ನಿಲ್ಲಿಸಬೇಕಾ ? ಬೇಡ್ವಾ ಎನ್ನುವ ಬಗ್ಗೆ ನಿರ್ಧಾರ ಮಾಡಲಿದೆ. ಇನ್ನು ಬೆಂಗಳೂರು ಬಂದ್ ದಿನ ಕೆಲ ಕಡೆ ವ್ಯಾಪಾರ ವಹಿವಾಟು ಸ್ಥಗಿತವಾಗಿತ್ತು. ಆದರೆ, ಹೊಟೇಲ್ ತೆರೆದಿದ್ದ ಕಡೆ ಜನ ಬಾರದ ಹಿನ್ನೆಲೆ ವ್ಯಾಪಾರ ಸಂಪೂರ್ಣ ಕುಗ್ಗಿತ್ತು. ಈ ಕಾರಣಕ್ಕಾಗಿ ನಾಳೆ ಬಂದ್ ದಿನ ವ್ಯಾಪಾರ ವಹಿವಾಟು ನಿಲ್ಲಿಸಬೇಕಾ? ಎಂಬುದರ ಬಗ್ಗೆ ಸಭೆಯಲ್ಲಿ ನಿರ್ಧಾರವಾಗಲಿದೆ.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರೆಗೆ ತಯಾರಿ ನಡೆದಿದ್ದು, ಒಟ್ಟಿಗೆ 14 ದಸರಾ ಆನೆಗಳು ರಸ್ತೆಗಿಳಿದಿವೆ. ಹೌದು, ಕಾಡಿನಿಂದ ನಾಡಿಗೆ ಬಂದ ಎಲ್ಲಾ 14 ಆನೆಗಳಿಗೆ ತಾಲೀಮು ನಡೆಸುತ್ತಿದ್ದು, ಅರಮನೆಯಿಂದ ಬನ್ನಿಮಂಟಪದವರೆಗೆ
ವಾಕಿಂಗ್ ಮಾಡಿವೆ. ಇಂದು ಧನಂಜಯ ಆನೆಗೆ ಕ್ಯಾಪ್ಟನ್ ಪಟ್ಟ ನೀಡಲಾಗಿದ್ದು, ಸುಮಾರು 750 ಕೆಜಿ ತೂಕ ಹೊತ್ತು ಸಾಗಿದೆ. ಇನ್ನುಳಿದಂತೆ ಧನಂಜಯ ಆನೆಯನ್ನು ಉಳಿದ ಆನೆಗಳು ಹಿಂಭಾಲಿಸಿದೆ.
ಮಂಡ್ಯ: ಕಾವೇರಿ ವಿಚಾರವಾಗಿ ನಾಳೆ ಕರ್ನಾಟಕ ಬಂದ್ ಹಿನ್ನೆಲೆ ಬಂದ್ ಬೆಂಬಲಿಸಿ ನಾಳೆ ಹೆದ್ದಾರಿ, ರೈಲು ತಡೆದು ಚಳವಳಿ ನಡೆಸಲಾಗುವುದು ಎಂದು ಮಂಡ್ಯದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಹೇಳಿದ್ದಾರೆ. ಮಂಡ್ಯದಲ್ಲಿ ಕಾವೇರಿ ಹೋರಾಟ ಮತ್ತಷ್ಟು ತೀವ್ರಗೊಳಿಸಲು ನಿರ್ಧಾರ ಮಾಡಲಾಗಿದ್ದು, ಬೆಂ-ಮೈ ಎಕ್ಸ್‌ಪ್ರೆಸ್ ವೇ ಹಾಗೂ ರೈಲು ತಡೆಗೆ ನಿರ್ಧಾರ ಮಾಡಲಾಗಿದೆ.
ರಾಜ್ಯ ಸರ್ಕಾರ ಒಂದು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವುಲ್ಲಿ ವಿಫಲವಾಗುತ್ತಿದ್ದು, ಖಡಕ್ ಆಗಿ ನೀರು ಬಿಡಲ್ಲ ಅನ್ನೋ ಸ್ಪಷ್ಟ ನಿರ್ಧಾರವನ್ನ ತಿಳಿಸಬೇಕು. ತಮಿಳುನಾಡಿಗೆ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಹೋಗಿದೆ. ಕುಡಿಯಲು ಕರ್ನಾಟಕ ನೀರು ಕೇಳ್ತಿದೆ ತಮಿಳುನಾಡು ಕ್ಯಾತೆ ತೆಗೆಯುತ್ತಿದೆ. ಪ್ರಾಧಿಕಾರದ ತಜ್ಞರ ಕಳುಹಿಸಿ ವಸ್ತು ಸ್ಥಿತಿಯನ್ನ ಪರಿಶೀಲನೆ ನಡೆಸಬೇಕು ಎಂದಿದ್ದಾರೆ.
ಬೆಂಗಳೂರು: ನಾಳೆ ಬೆಂಗಳೂರು ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಮೆಟ್ರೋ ರೈಲು ಸುರಕ್ಷತಾ ವಿಭಾಗದ ಆಯುಕ್ತರು ಕೆಂಗೇರಿಯಿಂದ ಚಲ್ಲಘಟ್ಟ ನಡುವೆ ಹೊಸ ಮಾರ್ಗ ಪರಿಶೀಲನೆ ನಡೆಸಲಿದ್ದು, ಈ ಹಿನ್ನಲೆ ನಾಳೆ ಕೆಂಗೇರಿಯಿಂದ ಮೈಸೂರು ರಸ್ತೆ ನಿಲ್ದಾಣಗಳ ನಡುವೆ ಸಂಚಾರವಿಲ್ಲ. ಆದರೆ, ಬೈಯ್ಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ನಿಲ್ದಾಣಗಳ ನಡುವೆ ಸೇವೆ ಲಭ್ಯವಿರಲಿದೆ
ಚಿಕ್ಕಮಗಳೂರು: ಕಾವೇರಿ ನೀರಿಗಾಗಿ ಕಾಫಿನಾಡಿನಲ್ಲಿ ಹೋರಾಟದ ಕಿಚ್ಚು ಭುಗಿಲೆದ್ದಿದ್ದು, ನಾಳೆ ಅಖಂಡ ಕರ್ನಾಟಕ ಬಂದ್ ಹಿನ್ನೆಲೆ ನಿನ್ನೆ ರಾತ್ರಿ ಚಿಕ್ಕಮಗಳೂರು ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಬಂದ್ ಕುರಿತು ಪೂರ್ವಭಾವಿ ಸಭೆ ನಡೆಸಿದೆ. ಇನ್ನು ಕನ್ನಡ ಪರ ಸಂಘನೆಗಳ ಒಕ್ಕೂಟ, ದಲಿತ ಸಂಘಟನೆ, ರೈತ ಸಂಘ, ಹಸಿರು ಸೇನೆ, ರಾಜಕೀಯ ಪಕ್ಷಗಳು ಬಂದ್ಗೆ ಬೆಂಬಲ ನೀಡಲಿದೆ. ಬೆಳಗ್ಗೆ 6 ಗಂಟೆಯಿಂದ ಪ್ರತಿಭಟನೆ ಆರಂಭವಾಗಲಿದೆ.
ಮಂಡ್ಯ: ಜಿಲ್ಲೆಯಲ್ಲಿ ಇಂದೂ ಕೂಡ ಕಾವೇರಿ ಹೋರಾಟ ಮುಂದುವರೆಯಲಿದೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರುವ ರೈತ ಹಿತ ರಕ್ಷಣಾ ಸಮಿತಿ ಇಂದಿನ ಕಾವೇರಿ ಹೋರಾಟಕ್ಕೆ ಹಲವು ಸಂಘಟನೆಗಳು ಸಾಥ್ ಕೂಡ ನೀಡಿದೆ. ಜೊತೆಗೆ ನಾಳೆ ಕರ್ನಾಟಕ ಬಂದ್ ಗೆ ಕರೆ ಕೊಟ್ಟಿರುವ ಹಿನ್ನೆಲೆ ಬಂದ್ ಪೂರ್ವಭಾವಿ ಸಂಬಂಧ ಚರ್ಚಿಸಲು ವಿವಿಧ ಸಂಘಟನೆಗಳು ಸಭೆ ನಡೆಸಲಿದೆ.
Published On - 7:41 am, Thu, 28 September 23