ಗೃಹ ಇಲಾಖೆಯಲ್ಲಿ ರಾಜ್ಯ ಸರ್ಕಾರ ಮೇಜರ್ ಸರ್ಜರಿ ಮಾಡಿದೆ. ಬರೋಬ್ಬರಿ 35 ಡಿವೈಎಸ್‌ಪಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿದೆ. ಜಗದೀಶ ನೆಲಮಂಗಲ ಉಪ ವಿಭಾಗ, ಗೌತಮ್ ಕೆ.ಸಿ.ರಾಜ್ಯ ಗುಪ್ತವಾರ್ತೆ ಸೇರಿ 35 ಜನರನ್ನ ವರ್ಗಾವಣೆ ಮಾಡಿದೆ. ಮತ್ತೊಂದೆಡೆ ಮೇಕೆದಾಟು ಪಾದಯಾತ್ರೆ ವೇಳೆ ಕೋವಿಡ್ ನಿಯಮ ಉಲ್ಲಂಘಿಸಲಾಗಿತ್ತು. ಈ ಸಂಬಂಧ ಕೆಲ ಕಾಂಗ್ರೆಸ್ ನಾಯಕರ ವಿರುದ್ಧ ಕೇಸ್ ದಾಖಲಾಗಿತ್ತು. ಆದ್ರೆ ಈಗ ಎಲ್ಲಾ ಪ್ರಕರಣಗಳನ್ನ ಹೈಕೋರ್ಟ್ ರದ್ದುಪಡಿಸಿದೆ. ಇನ್ನು ಕಾಂಗ್ರೆಸ್ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಸ್ವಪಕ್ಷದ ವಿರುದ್ಧ ಲಿಂಗಾಯತ ವಿಚಾರವಾಗಿ ಗಂಭೀರತ ಆರೋಪ ಮಾಡಿದ್ದಾರೆ. ಇದನ್ನು ಬಿಜೆಪಿ ನಾಯಕರು ಅಸ್ತ್ರವಾಗಿ ಬಳಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡ್ತಿದ್ದಾರೆ. ಜೊತೆಗೆ ಶಿವಮೊಗ್ಗದ ಈದ್ ಮಿಲಾದ ಗಲಭೆ ವಿಚಾರವೂ ಕಾಂಗ್ರೆಸ್ ವಿರುದ್ಧದ ಪ್ರಬಲ ಅಸ್ತ್ರವಾಗಿದೆ. ಇವೆಲ್ಲದರ ಜೊತೆಗೆ ರಾಜ್ಯದ ಪ್ರಮುಖ ಘಟನೆಗಳನ್ನು ಟಿವಿ9 ಡಿಜಿಟಲ್ನಲ್ಲಿ ಪಡೆಯಿರಿ.
ಯಾದಗಿರಿ: ತಾಲೂಕಿನ ಸೌದಾಗರ ಕ್ರಾಸ್ ಬಳಿ ಟ್ರಾಕ್ಟರ್ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿ ಟ್ರ್ಯಾಕ್ಟರ್ ಚಾಲಕನಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ಮುಖಾಮುಖಿ ಡಿಕ್ಕಿಯಾದ ಪರಿಣಾಮ ಟ್ರ್ಯಾಕ್ಟರ್ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಯಾದಗಿರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣ ‘ಹೆಣ ಬೀಳದ ಕಾರಣ ಬಿಜೆಪಿಯವರು ಭ್ರಮನಿರಸನಗೊಂಡಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ. ‘ಕಿಡಿಗೇಡಿಗಳ ವಿರುದ್ಧ ಪೊಲೀಸರು ಸೂಕ್ತ ಕ್ರಮ ತೆಗೆದುಕೊಂಡಿದ್ದಾರೆ. ದುಷ್ಕೃತ್ಯ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆದಿದೆ. ಆದರೂ, ಬಿಜೆಪಿ ನಾಯಕರು ವಿಪರೀತವಾಗಿ ವೈಭವೀಕರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮೂವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ನಿರಾಕರಿಸಿ ಹೈಕೋರ್ಟ್ ಆದೇಶಿಸಿದೆ. 9ನೇ ಆರೋಪಿ ಕೆ.ಇಸ್ಮಾಯಿಲ್ ಶಫಿ, 10ನೇ ಆರೋಪಿ ಕೆ.ಮೊಹಮ್ಮದ್ ಇಕ್ಬಾಲ್, 11ನೇ ಆರೋಪಿ ಮೊಹಮ್ಮದ್ ಶಾಹೀದ್ ಜಾಮೀನು ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ. ಹೆಚ್.ಬಿ.ಪ್ರಭಾಕರ್ ಶಾಸ್ತ್ರಿ, ನ್ಯಾ.ಅನಿಲ್ ಕೆ.ಕಟ್ಟಿ ಅವರಿದ್ದ ಪೀಠ ಆದೇಶ ಹೊರಡಿಸಿದೆ.
ಬೆಂಗಳೂರು: ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರು ನಾಮಕರಣಗೊಂಡು 50 ವರ್ಷ ಆದ ಹಿನ್ನಲೆ ವರ್ಷವಿಡೀ ಕರ್ನಾಟಕ ಸಂಭ್ರಮ ಆಚರಿಸಲು ಸರ್ಕಾರ ನಿರ್ಧಾರ ಮಾಡಿದೆ. ಆದ್ದರಿಂದ ಕರ್ನಾಟಕದ ದೇಶೀ ಸಂಸ್ಕೃತಿ ಹೆಚ್ವು ಬಿಂಬಿತವಾಗಬೇಕು, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಹೆಸರಿನಲ್ಲಿ
ನ. 1, 2023 ರಿಂದ ನ. 1, 2024 ರವರೆಗೆ ಕರ್ನಾಟಕ ಸಂಭ್ರಮ ಆಚರಿಸಲು ಸಿಎಂ ಸೂಚನೆ ನೀಡಿದ್ದಾರೆ.
ಬೆಳಗಾವಿ: ರೋಗಗಳನ್ನ ತಡೆ ಹಿಡಿಯುವ ಕೆಲಸಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದು ಆರೋಗ್ಯ ಸಚಿವ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಭಾಗೀಯ ಮಟ್ಟದ ಅಧಿಕಾರಿಗಳ ಜೊತೆಗೆ ಸಭೆ ಬಳಿಕ ಮಾತನಾಡಿದ ಅವರು ‘ ಮಕ್ಕಳ, ತಾಯಿ ಮರಣ ಅನುಪಾತ ಕರ್ನಾಟಕದಲ್ಲಿ ಕಡಿಮೆ ಇದೆ. ಹೆಚ್ಚು ರೋಗಗಳು ಬರದೇ ಇರುವುದಕ್ಕೆ ಪ್ರಯತ್ನ ಇರಬೇಕು. ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ಪರಿಸ್ಥಿತಿ ಸರ್ವೇ ಮಾಡುವ ಚಿಂತನೆ ಇದೆ ಎಂದರು.
ಬೆಂಗಳೂರು: ನೂತನ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಕ್ಷೇತ್ರ ವಿಂಗಡಣೆ ಮಾಡಲಾಗಿದೆ. ಹೌದು, ಐದು ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಕ್ಷೇತ್ರ ವಿಂಗಡಣೆಯನ್ನು ಡಿಕೆ ಶಿವಕುಮಾರ್ ಅವರು ಮಾಡಿದ್ದಾರೆ. ಬೆಂಗಳೂರು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಕೇಂದ್ರ ಕಾಂಗ್ರೆಸ್ ಸಮಿತಿಗಳ ಕ್ಷೇತ್ರ ವಿಂಗಡಣೆ ಮಾಡಲಾಗಿದೆ.
ಶಿವಮೊಗ್ಗ: ಜಿಲ್ಲೆಯಲ್ಲಿ ನಡೆದ ಈದ್ ಗಲಾಟೆಗೆ ಸಂಬಂಧಿಸಿದಂತೆ ‘ ಅವರು ಇಷ್ಟು ಕೀಳುಮಟ್ಟಕ್ಕೆ ಇಳಿಯುತ್ತಾರೆ ಎನ್ನುವುದು ಅಚ್ಚರಿ ಮೂಡಿಸಿದೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೇಳಿದರು.
‘ಮುಸ್ಲಿಂ ಗೂಂಡಾಗಳು, ಓಮಿನಿ ವಾಹನದಲ್ಲಿ ಬಂದು ಹಿಂದೂ ಮನೆಗೆ ದಾಳಿ ಮಾಡಿದ್ದಾರೆ. ರಾಮಲಿಂಗ ರೆಡ್ಡಿ ಬಂದ್ರೆ ನಾನೇ ಅವರನ್ನು ಕರೆದುಕೊಂಡು ಹೋಗಿ, ಎಸ್ಪಿ ಅವರ ಜೊತೆ ಮಾತಾಡೋಣ ಎಂದಿದ್ದಾರೆ.
ಬೆಂಗಳೂರು: ಸಿಟಿ ರೌಂಡ್ಸ್ ಕೈಗೊಡಿದ್ದ ಡಿಕೆ ಶಿವಕುಮಾರ್ ಅವರು ಇದೀಗ ಮುಗಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು ‘ 34 ಕಿ.ಮೀ ನಲ್ಲಿ ಟೆಂಡರ್ ಶ್ಯೂರ್ ಕೆಲಸ ನಡಿತಿದೆ. ನಿಂತ ಕಾಮಗಾರಿಗಳು ಆರಂಭ ಮಾಡೋದಕ್ಕೆ ಹೇಳಿದ್ದೇನೆ. ಜೊತೆಗೆ ಚರಂಡಿ ಕೆಲಸಗಳನ್ನ ಆರಂಭಿಸಲು ಸೂಚನೆ ನೀಡಿದ್ದೇನೆ. ರಸ್ತೆ ಗುಂಡಿಗಳ ಬಗ್ಗೆ ತಿಳಿಸೋದಕ್ಕೆ ಸಾರ್ವಜನಿಕರಿಗೂ ಅವಕಾಶವಿದೆ. ಗುಂಡಿ ಮುಚ್ಚುವ ಕೆಲಸ ಆಗುತ್ತಿದೆ. ಅಮೃತನಗರೋತ್ಥನ ಯೋಜನೆಯಡಿ 5 ಸಾವಿರ ಕೋಟಿ ಅನುದಾನದಲ್ಲಿ ಕೆಲಸಗಳು ಆಗಲಿವೆ. 7 ನೇ ತಾರೀಖಿಗೆ ಔಟರ್ರಿಂಗ್ ರೋಡ್ನಲ್ಲಿ ವೀಕ್ಷಣೆ ಮಾಡಲಿದ್ದೇನೆ ಎಂದರು.
ಬೆಂಗಳೂರು: ಇಂದು ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರು ಸಿಟಿ ರೌಂಡ್ ನಡೆಸುತ್ತಿದ್ದಾರೆ. ವಸಂತನಗರ 8 ನೇ ಮುಖ್ಯ ರಸ್ತೆ ಬಳಿ ಆಗಮಿಸಿದ ಡಿಸಿಎಂಗೆ ಬೊಕ್ಕೆ ಕೊಟ್ಟು ಶಾಸಕ ರಿಜ್ವಾನ್ ಅರ್ಷದ್ ಸ್ವಾಗತಿಸಿದ್ದಾರೆ. ಬಳಿಕ ವಸಂತನಗರದ ಬಳಿ ರಾಜಕಾಲುವೆ ಕಾಮಗಾರಿ ವೀಕ್ಷಣೆ ಮಾಡಿದ್ದಾರೆ.
ಮಂಗಳೂರು: ವೇಷ ಬದಲಿಸಿಕೊಂಡು ಬಿಜೆಪಿಯವರೇ ಗಲಾಟೆ ಮಾಡಿದ್ದಾರೆಂಬ ಹೇಳಿಕೆಗೆ ಯುಟರ್ನ್ ಹೊಡೆದ ಸಚಿವ ರಾಮಲಿಂಗಾರೆಡ್ಡಿ ಅವರು ‘ ನಾನು ಆ ರೀತಿ ಹೇಳಿಕೆ ನೀಡಿಲ್ಲ, ಶಿವಮೊಗ್ಗ ಘಟನೆಯಲ್ಲಿ ಯಾರೇ ತಪ್ಪು ಮಾಡಿದ್ರೂ ಕ್ರಮ ತೆಗೆದುಕೊಳ್ಳಲಿ. ಸಾಮಾನ್ಯವಾಗಿ ಬಿಜೆಪಿಯವರು ಯಾವ ರೀತಿ ಮಾಡ್ತಾರೆ ಅಂತಾ ಹೇಳಿದ್ದೆ. ನಾನು ಶಿವಮೊಗ್ಗ ಘಟನೆ ಆಧರಿಸಿ ಈ ರೀತಿ ಹೇಳಿಲ್ಲ. ಹಳೇ ಘಟನೆಗಳ ಬಗ್ಗೆ ಬಿಜೆಪಿಯವರು ವೇಷ ಬದಲಿಸಿಕೊಳ್ತಾರೆ ಎಂದಿದ್ದು ಎಂದಿದ್ದಾರೆ.
ಬೆಂಗಳೂರು: ಶಿವಮೊಗ್ಗ ಗಲಭೆಗೆ ಬಿಜೆಪಿ ಕಾರಣ ಎನ್ನುವ ಸಚಿವ ರಾಮಲಿಂಗ ರೆಡ್ಡಿ ಹೇಳಿಕೆಗೆ ತೇಜಸ್ವಿಸೂರ್ಯ ತಿರುಗೇಟು ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ಜನರ ಹಿತ ಬಯಸಿಲ್ಲ,
ಅಲ್ಪಸಂಖ್ಯಾತರ ವೋಟ್ ಬ್ಯಾಂಕ್ ಗೋಸ್ಕರ ಕೆಲಸ ಮಾಡುತ್ತಿದೆ. ನಮ್ಮ ಸರ್ಕಾರ ಇದ್ದಾಗ 40 ಅಡಿ ತಲ್ವಾರ್ ಮೆರವಣಿಗೆ ಯಾಕೆ ನಡಿಲಿಲ್ಲ. ಪೊಲೀಸರ ಮೇಲೆ ಕಲ್ಲು ತೂರುವವರ ಮೇಲೆ ಯಾಕೆ ಸರ್ಕಾರ ಕ್ರಮ ತಗೊಂಡಿಲ್ಲ ಎಂದು ಕಿಡಿಕಾರಿದ್ದಾರೆ.
ಬೆಳಗಾವಿ : ಸಂಕ್ರಾಂತಿ ವೇಳೆಗೆ ಸರ್ಕಾರ ಪತನದ ಬಗ್ಗೆ ಯೋಗೇಶ್ವರ್ ಹೇಳಿಕೆ ವಿಚಾರ ‘ಭವಿಷ್ಯ ನುಡಿಯುವ ಶಕ್ತಿ ನಮಗಿಲ್ಲ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಸಂವಿಧಾನ ಬದ್ಧವಾಗಿ ರಾಜ್ಯದಲ್ಲಿ ಸರ್ಕಾರ ರಚನೆಯಾಗಿದೆ. ರಾಜ್ಯದಲ್ಲಿ ಹೇಗೆ ಸರ್ಕಾರ ಪತನವಾಗಲಿದೆ ಎಂದು ಅವರನ್ನೇ ಕೇಳಿ ಎಂದರು. ಇನ್ನು ಇದೇ ವೇಳೆ ಟಾರ್ಗೆಟ್ ಮಾಡುವುದರಲ್ಲಿ ಬಿಜೆಪಿಯವರು ಬಹಳ ನಿಸ್ಸೀಮರು. ಕಳೆದ 10 ವರ್ಷದಲ್ಲಿ ಬಿಜೆಪಿಯವರು 11 ಸರ್ಕಾರ ಕೆಡವಿದ್ದಾರೆ. ಬಿಜೆಪಿಯವರು ಸಾವಿರಕ್ಕೂ ಹೆಚ್ಚು ಶಾಸಕರನ್ನು ಖರೀದಿ ಮಾಡಿದ್ದಾರೆ. 2024ಕ್ಕೆ ದೇಶದಲ್ಲಿ BJP ಸರ್ಕಾರ ಇರಲ್ಲ ಎಂಬುದು ನಮ್ಮ ಅಭಿಪ್ರಾಯ ಎಂದರು.
ಬೆಂಗಳೂರು: ರಾಜ್ಯದಲ್ಲಿ ಬಂಜಾರ ಜನಾಂಗವನ್ನು SCಗೆ ಸೇರಿಸಿದ್ದು ದೇವರಾಜ ಅರಸು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು. ಬೆಂಗಳೂರಿನ ವಸಂತನಗರದಲ್ಲಿ ಬಂಜಾರ ಭವನ ಉದ್ಘಾಟಿಸಿ ಮಾತನಾಡಿದ ಅವರು ‘ಶಿಕ್ಷಣ ಇಲ್ಲದಿದ್ದರೆ ನಾವು ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ. ಈ ಸಮುದಾಯಕ್ಕೆ ರೆಸಿಡೆನ್ಷಿಯಲ್ ಸ್ಕೂಲ್ ಮಾಡಿಕೊಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ನಮ್ಮ ಸರ್ಕಾರ ಇದ್ದಾಗಲೇ ಸೇವಾ ಲಾಲ್ ಜೈನ ಪೀಠ ಆಗಿದ್ದು, ಸೇವಾಲಾಲ್ ಜಯಂತಿ ಮಾಡಿದ್ದು ಸಹ ನಮ್ಮ ಸರ್ಕಾರ. ಬಜೆಟ್ನಲ್ಲಿ ಬಂಜಾರ ಸಮುದಾಯ ಅಭಿವೃದ್ಧಿಗೆ 275 ಕೋಟಿ ಕೊಟ್ಟಿದೆ ಎಂದರು.
ಮಂಡ್ಯ: ಮಂಡ್ಯದಲ್ಲಿ ಕಾವೇರಿ ಕಿಚ್ಚು ಮುಂದುರೆದಿದ್ದು, ಈ ಹಿನ್ನಲೆ ರೈತರು ಭಜನೆ ಚಳುವಳಿ ನಡೆಸಿದ್ದಾರೆ. ತಮಿಳುನಾಡಿಗೆ ನೀರು ಹರಿಸ್ತಿರೋದನ್ನ ಖಂಡಿಸಿ ಇಂದು ಶ್ರೀರಂಗಪಟ್ಟಣದಲ್ಲಿ ರೈತರು ರಸ್ತೆಯಲ್ಲಿ ಭಜನೆ ಮಾಡಿ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಭೂಮಿ ತಾಯಿ ಹೋರಾಟ ಸಮಿತಿ ವತಿಯಿಂದ ವಿನೂತನ ಪ್ರತಿಭಟನೆ ಹಮ್ಮಿಕೊಂಡಿದ್ದು, ರೈತ ಹೋರಾಟಗಾರ ನಂಜುಂಡೇಗೌಡ ನೇತೃತ್ವದಲ್ಲಿ ವಿನೂತನ ಚಳುವಳಿ ನಡೆದಿದೆ.
ಗದಗ: ಕೋಟಿ ರೂಪಾಯಿ ವಂಚನೆ ಪ್ರಕರಣದ ಆರೋಪಿ ಹಾಲಶ್ರೀಯನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದ್ದು, ಇದೀಗ ಪೊಲೀಸರು ದೂರುದಾರ ಪಿಡಿಓ ಸಂಜಯ್ ಚವಡಾಳ ಮನೆಗೆ ಹಾಲಶ್ರೀಯನ್ನು ಮಹಜರಕ್ಕೆ ಕರೆತಂದಿದ್ದಾರೆ. ಮುಂಡರಗಿ ಪಟ್ಟಣದಲ್ಲಿರುವ ಅವರ ಮನೆಗೆ ಪೊಲೀಸರು ಆಗಮಿಸಿದ್ದಾರೆ.
ಬೆಂಗಳೂರು: ಲಂಬಾಣಿ ಜನಾಂಗ ನಂಬಿಕೆಗೆ ಅರ್ಹವಾದ ಜನಾಂಗ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಬಂಜಾರ ಭವನ ಉದ್ಘಾಟಿಸಿ ಡಿಸಿಎಂ ‘ನನ್ನ 8 ಚುನಾವಣೆಯಲ್ಲಿ ಶೇ.99ರಷ್ಟು ಲಂಬಾಣಿ ಜನ ಮತ ಹಾಕಿದ್ದಾರೆ. ನಮ್ಮ ಸರ್ಕಾರ ಬರಲು ಲಂಬಾಣಿ ಜನಾಂಗ ಕೂಡ ಕಾರಣೀಭೂತರಾಗಿದ್ದಾರೆ. ಲಂಬಾಣಿ ಸಮುದಾಯಕ್ಕೆ ಸರ್ಕಾರದ ಎಲ್ಲಾ ಯೋಜನೆಗಳು ಸಿಗುತ್ತಿವೆ. ಸಂತ ಸೇವಾಲಾಲ್ ಕೇಂದ್ರಕ್ಕೆ ಈಗ ಉಚಿತವಾಗಿ ಹೋಗಿಬರಹುದು. ತಾಂಡಾಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಸಂಪೂರ್ಣ ಸಹಕಾರ ನೀಡಿದೆ ಎಂದರು.
ಭೈರತಿ ಸುರೇಶ್ ಮಧ್ಯಸ್ಥಿಕೆಯಲ್ಲಿ ಹನೂರು JDS ಶಾಸಕ ಮಂಜುನಾಥ್ ಅವರು ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದಾರೆ. ಶಾಸಕ ಮಂಜುನಾಥ್ ಜೊತೆ ಸಿಎಂ ಸಿದ್ದರಾಮಯ್ಯ ರಹಸ್ಯ ಮಾತುಕತೆ ನಡೆಸಿದ್ದಾರೆ. ಅರ್ಧ ಗಂಟೆಗೂ ಹೆಚ್ಚು ಕಾಲ ಬೆಳಗಾವಿ ಸಾಂಬ್ರಾ ಏರ್ಪೋರ್ಟ್ನಲ್ಲಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸಿಎಂ ಜೊತೆ ಶಾಸಕ ಮಂಜುನಾಥ್ ಚರ್ಚಿಸಿದ್ದಾರೆ.
ಮೈಸೂರಿನಲ್ಲಿ ಕಾವೇರಿ ಹೋರಾಟ ಮುಂದುವರಿದಿದೆ. ಮೈಸೂರು ಜಿಲ್ಲಾ ಬಿಜೆಪಿ ರೈತ ಮೋರ್ಚಾದಿಂದ ಕಬಿನಿ ಜಲಾಶಯಕ್ಕೆ ಮುತ್ತಿಗೆ ಹಾಕಲು ಯತ್ನ ನಡೆದಿದೆ.ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಡಾ ನವೀನ್ ನೇತೃತ್ವದಲ್ಲಿ ಮುತ್ತಿಗೆ ಹಾಕಲು ಯತ್ನಿಸಲಾಗಿದ್ದು ಈ ವೇಳೆ ಬಿಜೆಪಿ ಮುಖಂಡರನ್ನ ಪೊಲೀಸರು ವಶಕ್ಕೆ ಪಡೆದರು. ಈ ಸಂದರ್ಭ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷೆ ಮಂಗಳ ಸೋಮಶೇಖರ್, ರಮೇಶ್ ಕುಮಾರ್, ಬಿಜೆಪಿ ಮುಖಂಡರಾದ ಹಂಚಿಪುರ ಗುರುಸ್ವಾಮಿ ಸೇರಿ ಹಲವರು ಭಾಗಿಯಾಗಿದ್ದರು.
ಹಿಂದುಗಳ ಮೇಲೆ ನಡೆಯುವ ದಾಳಿಯನ್ನು ಸಹಿಸೋದಿಲ್ಲ. ತಕ್ಕ ಉತ್ತರ ಕೊಡಲು ವಿಹೆಚ್ಪಿ ಬಜರಂಗದಳ ಸಿದ್ಧವಿದೆ ಎಂದು ಮಂಗಳೂರಿನಲ್ಲಿ RSS ಪ್ರಾಂತ ಸಹ ಕಾರ್ಯವಾಹ ಪ್ರಕಾಶ್ ಎಚ್ಚರಿಕೆ ನೀಡಿದ್ದಾರೆ. ಬಜರಂಗದಳದ ಪ್ರಚಾರ ರಥ ಯಾತ್ರೆಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಗಣೇಶ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸ್ತಾರೆ. ಮುಸ್ಲಿಮರ ಮೆರವಣೆಗೆಯಲ್ಲೂ ಹಿಂದುಗಳ ಮೇಲೆ ದಾಳಿ ನಡೆದಿದೆ, ಪರೋಕ್ಷವಾಗಿ ಶಿವಮೊಗ್ಗ ಗಲಾಟೆ ಪ್ರಸ್ತಾವಿಸಿ ಇಂತಹ ದಾಳಿಯನ್ನು ವಿಶ್ವ ಹಿಂದು ಪರಿಷತ್ ಸಹಿಸೋದಿಲ್ಲ. ಇದಕ್ಕೆ ತಕ್ಕ ಉತ್ತರ ಕೊಡಲು ಬಜರಂಗದಳ ಯುವಕರು ಸಿದ್ದ ಎಂದು ಎಚ್ಚರಿಕೆ ನೀಡಿದರು.
ಶಿವಮೊಗ್ಗ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೂ 27 ಎಫ್ಐಆರ್ ದಾಖಲಾಗಿದೆ. ಗಲಭೆಯಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನ ಬಂಧಿಸಲಾಗಿದೆ. ಪರಿಸ್ಥಿತಿ ಸದ್ಯ ಶಾಂತವಾಗಿದೆ. ಮುಂದೆ ಈ ರೀತಿಯ ಗಲಭೆಗಳಿಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಜಿ, ಐಜಿಪಿ ಅಲೋಕ್ ಮೋಹನ್ ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಜಾತಿ ಇಲ್ಲ ನಮ್ಮದು ಕಾಂಗ್ರೆಸ್ ಪಕ್ಷವೇ ಒಂದು ಜಾತಿ. ನಮ್ಮಲ್ಲಿ ಲಿಂಗಾಯತ, ಒಕ್ಕಲಿಗರು, ದಲಿತರು, ಹಿಂದುಳಿದವರು, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಇದ್ದಾರೆ. ಎಲ್ಲಾ ಜಾತಿಯ ಜನರು ಇರೋ ಏಕೈಕ ಪಕ್ಷ ಇಂಡಿಯಾದಲ್ಲಿ ಕಾಂಗ್ರೆಸ್ ಒಂದೇ. ಜಾತಿ ಮೆಲೆ ನಾವು ರಾಜಕಾರಣ ಮಾಡೋದಿಲ್ಲ ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರಕ್ಕೆ ಸಂಬಂಧಿಸಿ ಈ ಮೈತ್ರಿ ಬಿಜೆಪಿಗೆ ಬೇಕಿತ್ತಾ ಅಥವಾ ಜೆಡಿಎಸ್ಗೆ ಬೇಕಿತ್ತಾ? ಎಂದು ಬೆಂಗಳೂರಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪ್ರಶ್ನೆ ಮಾಡಿದ್ದಾರೆ. ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಅನ್ನೋದು ತಪ್ಪು. ಎಲ್ಲಾ ಜಿಲ್ಲೆಯವರು ಸಂಪರ್ಕದಲ್ಲಿದ್ದಾರೆ. ಜನತಾದಳ ಪಕ್ಷದ ಸಿದ್ಧಾಂತವನ್ನು ಬಿಜೆಪಿಯವರು ಒಪ್ಪಿದ್ದಾರಾ? ಬಿಜೆಪಿ ಸಿದ್ಧಾಂತವನ್ನ JDS ಒಪ್ಪಿದೆಯಾ ಎಂಬುದನ್ನು ತಿಳಿಸಬೇಕು. ರಾಷ್ಟ್ರಮಟ್ಟದಲ್ಲಿ ಮೈತ್ರಿ ಮಾಡಿಕೊಳ್ಳುವುದಕ್ಕೆ ನಮಗೆ ಶಕ್ತಿ ಇಲ್ಲ. ಈ ಮೈತ್ರಿ ಕರ್ನಾಟಕಕ್ಕೆ ಮಾತ್ರ ಸೀಮಿತ ಆಗುತ್ತಿದೆ. ದೇವೇಗೌಡರು ಎಲ್ಲರನ್ನೂ ಕರೆದು ಅಭಿಪ್ರಾಯ ಪಡೆಯುವುದು ಸೂಕ್ತ ಎಂದು ಸಿ.ಎಂ.ಇಬ್ರಾಹಿಂ ಹೇಳಿದರು.
ವಿಜಯಪುರ ಜಿಲ್ಲೆಯಲ್ಲಿ ಮತ್ತೇ ಡೆಂಘಿ ಹಾಗೂ ಚಿಕೂನ್ ಗುನ್ಯಾ ಕಾಟ ಹೆಚ್ಚಾಗಿದೆ. ಸಾಮಾನ್ಯವಾಗಿ ಈ ರೋಗಗಳು ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದವು. ಆದರೆ ಈಗ ಮಳೆಯಿಲ್ಲದೇ ಬರಗಾಲ ಇದ್ದಾಗಲೂ ರೋಗ ಉಲ್ಭಣಗೊಂಡಿದೆ. ಜನವರಿಯಿಂದ ಸೆಪ್ಟೆಂಬರ್ ಕೊನೆಯವರೆಗೆ 117 ಚಿಕೂನ್ ಗುನ್ಯಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಹಾಘೂ 206 ಡೆಂಘಿ ಪ್ರಕರಣಗಳು ಪತ್ತೆಯಾಗಿವೆ.
ಅ.10ರಂದು ಉಡುಪಿಯಲ್ಲಿ ನಡೆಯುವ ಹಿಂದೂ ಸಮಾಜೋತ್ಸವದ ಮೇಲೂ ಈದ್ ಗಲಾಟೆ ಬಿಸಿ ತಟ್ಟಿದೆ. ಉಡುಪಿ ಎಸ್ಪಿ ಡಾ.ಅರುಣ್ ಸೂಚನೆಯಂತೆ ಉಡುಪಿ ನಗರ ಸುತ್ತಮುತ್ತ ಅಳವಡಿಸಿದ್ದ ಬ್ಯಾನರ್ಗಳನ್ನು ತೆರವು ಮಾಡಲಾಗುತ್ತಿದೆ.
ಕೆ.ಆರ್.ಪುರ-ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗಕ್ಕೆ ಚಾಲನೆ ವಿಚಾರಕ್ಕೆ ಸಂಬಂಧಿಸಿ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಟಿವಿ9ಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದರು. ಮೆಟ್ರೋ ಪ್ರಾರಂಭ ಮಾಡಿದ್ದು ಮನಮೋಹನ್ ಸಿಂಗ್ ಸರ್ಕಾರ. ಇದರಲ್ಲಿ ಎನ್ಡಿಎ ಹಾಗೂ ಭಾರತೀಯ ಜನತಾ ಪಕ್ಷದ ಪಾತ್ರ ಏನೂ ಇಲ್ಲ ಎಂದರು.
ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವರು, ಶಾಸಕರಿಗೆ ಮನವಿ ಸಲ್ಲಿಸಿದರೆ ನಮಗೆ ಕಳುಹಿಸಿಕೊಡುತ್ತಾರೆ. ಆ ಮನವಿ ನನಗೆ ಬರುತ್ತದೆ, ಇಲ್ಲದಿದ್ರೆ ಇಲಾಖೆ ಡಿಜಿಗೆ ಕಳುಹಿಸುತ್ತಾರೆ. ಆಗ ನಾವು ಕ್ಯಾಬಿನೆಟ್ ಸಬ್ ಕಮಿಟಿ ಮುಂದೆ ಚರ್ಚೆ ಮಾಡುತ್ತೇವೆ. ಏನೇನು ಸೆಕ್ಷನ್ ಹಾಕಿರುತ್ತಾರೆ ಎಲ್ಲವನ್ನೂ ಪರಿಶೀಲನೆ ಮಾಡುತ್ತೇವೆ. ಅಂತಿಮವಾಗಿ ಕೇಸ್ ಹಿಂಪಡೆಯುವ ಬಗ್ಗೆ ಕ್ಯಾಬಿನೆಟ್ನಲ್ಲಿ ತೀರ್ಮಾನ ಮಾಡುತ್ತೆ. ಪತ್ರ ಬರೆದರು ಎಂದು ಬೊಬ್ಬೆ ಹೊಡೆದರೆ ನಾವು ಏನು ಮಾಡಬೇಕು. ನಾನು ಇನ್ನೂ ಪತ್ರ ನೋಡಿಲ್ಲ, ಒಂದು ವೇಳೆ ಪತ್ರ ಬರೆದ್ರೂ ತಪ್ಪಿಲ್ಲ ಎಂದು ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಮಂಡ್ಯದಲ್ಲಿ ಕಾವೇರಿ ಹೋರಾಟ ಮುಂದುವರೆದಿದೆ. ತಮಿಳುನಾಡಿಗೆ ನೀರನ್ನ ಹರಿಸುವುದನ್ನ ರಾಜ್ಯ ಸರ್ಕಾರ ನಿಲ್ಲಿಸುವುದಿಲ್ಲ. ಮಳೆ ಬಂದು ಜಲಾಶಯ ತುಂಬಲಿ ಎಂದು ಮಂಡ್ಯದ ಕಾವೇರಿ ಭವನದ ಮುಂಭಾಗ ಇರುವ ಕಾವೇರಿ ಮಾತೆ ಪ್ರತಿಮೆಗೆ ಕನ್ನಡಸೇನೆ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ರದ್ದಾಗಲಿ ಎಂದು ಘೋಷಣೆ ಕೂಗಿದ್ದಾರೆ.
ಬೆಂಗಳೂರಿನ ಮೇಖ್ರಿ ವೃತ್ತ ಬಳಿಯ ಗಜರಾಜ ಜ್ಯುವೆಲರಿ ಶಾಪ್ ಮೇಲೂ ಐಟಿ ಅಧಿಕಾರಿಗಳ ದಾಳಿ ನಡೆದಿದೆ. ಅಂಗಡಿ ಬಾಗಿಲು ಮುಚ್ಚಿ ಒಳಗಡೆ ಪರಿಶೀಲನೆ ನಡೆಸಲಾಗುತ್ತಿದೆ. ಎರಡು ಇನ್ನೋವಾ ಕಾರಿನಲ್ಲಿ ಬಂದಿರುವ ಐಟಿ ಅಧಿಕಾರಿಗಳ ಟೀಂ ತಲಾಶ್ ನಡೆಸುತ್ತಿದೆ.
ರಾಜ್ಯದಲ್ಲೂ ಜಾತಿ ಗಣತಿ ವರದಿ ಬಿಡುಗಡೆ ಮಾಡಲಿ ಎಂದು ಬೆಂಗಳೂರಿನಲ್ಲಿ ಟಿವಿ9ಗೆ ಬಿಜೆಪಿ ಮಾಜಿ ಶಾಸಕ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅತೀ ಹಿಂದುಳಿದ ವರ್ಗಕ್ಕೆ ಸೇರಿದವರು. ಬಿಜೆಪಿ ಸರ್ಕಾರದಲ್ಲಿ ಅತೀ ಹೆಚ್ಚು ಹಿಂದುಳಿದ ಶಾಸಕರು ಹಾಗೂ ಸಂಸದರು ಇರುವುದು. ಜಾತಿ ಹೆಸರು ಹೇಳಿ ತಮ್ಮ ಕುಟುಂಬ ಉದ್ಧಾರ ಮಾಡಿಕೊಂಡಿದ್ದಾರೆ ಎಂದು ಬೆಂಗಳೂರಿನಲ್ಲಿ ಟಿವಿ9ಗೆ ಬಿಜೆಪಿ ಮಾಜಿ ಶಾಸಕ ಸಿ.ಟಿ.ರವಿ ಹೇಳಿದರು.
ತೆರಿಗೆ ವಂಚನೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 10ಕ್ಕೂ ಹೆಚ್ಚು ಕಡೆ ಐಟಿ ಅಧಿಕಾರಿಗಳು ಉದ್ಯಮಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಉದ್ಯಮಿಗಳ ಒಡೆತನದ ಸಂಸ್ಥೆಗಳ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
BMTC ಕಮರ್ಷಿಯಲ್ ವಿಭಾಗದಲ್ಲಿ ಕೋಟ್ಯಂತರ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಬಿಎಂಟಿಸಿಯ 7 ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ. ಅಸಿಸ್ಟೆಂಟ್ ಸೆಕ್ಯುರಿಟಿ ಆ್ಯಂಡ್ ವಿಜಿಲೆನ್ಸ್ ಆಫೀಸರ್ ಸಿ.ಕೆ.ರಮ್ಯಾ ಅವರು ದೂರು ದಾಖಲಿಸಿದ್ದಾರೆ. ಆರೋಪಿಗಳು ಬಿಎಂಟಿಸಿಯ ಹಿಂದಿನ ಎಂಡಿ ಶಿಖಾ ಹಾಗೂ ನಿರ್ದೇಶಕ ಕೆ.ಅರುಣ್ ಸಹಿ ಕಲರ್ ಜೆರಾಕ್ಸ್ ಮಾಡುವ ಮೂಲಕ ನಕಲಿ ದಾಖಲೆ ಸೃಷ್ಟಿಸಿದ್ದರು. ಆರೋಪ ಕೇಳಿ ಬಂದ ಹಿನ್ನೆಲೆ ಬಿಎಂಟಿಸಿ 7 ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.
ಮೈಸೂರಿನ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ನಿವೃತ್ತ ಡಿವೈಎಸ್‌ಪಿ ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲಾಗಿದೆ. ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಮೈಸೂರಿನ ಆಲನಹಳ್ಳಿ ನಿವಾಸಿ ನಿವೃತ್ತ ಡಿವೈಎಸ್‌ಪಿ ವಿಜಯಕುಮಾರ್, ವೇಣು, ರಾಜೇಶ್ ಹಾಗೂ ಅಭಿ ಎಂಬುವವರ ವಿರುದ್ಧ ಕೇಸ್ ದಾಖಲಾಗಿದೆ. ಬೆಂಗಳೂರಿನ ಸುಂಕದಕಟ್ಟೆ ನಿವಾಸಿ ಗೌತಮ್‌ಕುಮಾರ್‌ರಿಂದ ದೂರು ದಾಖಲಾಗಿದೆ.
ಮೈಸೂರು ಜಿಲ್ಲೆಯ ಟಿ.ನರಸೀಪುರ ಸರ್ಕಾರಿ ಆಸ್ಪತ್ರೆ ಮುಂದೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಧರಣಿ ನಡೆಸುತ್ತಿದೆ. 5ನೇ ಗ್ಯಾರಂಟಿ ಜೊತೆಗೆ 6ನೇ ಗ್ಯಾರಂಟಿ ಆರೋಗ್ಯ ಭಾಗ್ಯ ಜಾರಿಗೆ ಆಗ್ರಹಿಸಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲವೊಂದು ಪರೀಕ್ಷೆ & ನುರಿತ ವೈದ್ಯರು ಇಲ್ಲ. ಸುಸಜ್ಜಿತ ತಾಯಿ ಮಗು ಆಸ್ಪತ್ರೆ ನಿರ್ಮಾಣ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
Published On - 7:56 am, Wed, 4 October 23