Lokayukta Raid: ಬೆಂಗಳೂರು, ಮಂಗಳೂರು, ಮಂಡ್ಯ ಸೇರಿ ಕರ್ನಾಟಕದ 7 ಕಡೆ ಲೋಕಾಯುಕ್ತ ದಾಳಿ

| Updated By: ಗಣಪತಿ ಶರ್ಮ

Updated on: Nov 21, 2024 | 9:45 AM

ಕರ್ನಾಟಕದಾದ್ಯಂತ 7 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರ ವಿರುದ್ಧ ದೊಡ್ಡ ಪ್ರಮಾಣದ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರು, ಮಂಗಳೂರು ಮತ್ತು ಮಂಡ್ಯ ಸೇರಿದಂತೆ ಹಲವೆಡೆ ದಾಳಿ ನಡೆದಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಟೌನ್ ಪ್ಲಾನಿಂಗ್ ಮತ್ತು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆದಿದೆ. ಕಾವೇರಿ ನೀರಾವರಿ ನಿಗಮದ ಎಂಡಿ ಮನೆ ಮೇಲೆಯೂ ದಾಳಿ ನಡೆದಿದೆ.

Lokayukta Raid: ಬೆಂಗಳೂರು, ಮಂಗಳೂರು, ಮಂಡ್ಯ ಸೇರಿ ಕರ್ನಾಟಕದ 7 ಕಡೆ ಲೋಕಾಯುಕ್ತ ದಾಳಿ
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಎಂಸಿ ಕೃಷ್ಣವೇಣಿ ಅವರ ಮಂಗಳೂರಿನ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನೆ
Follow us on

ಬೆಂಗಳೂರು, ನವೆಂಬರ್ 21: ಕರ್ನಾಟಕದಾದ್ಯಂತ ಲೋಕಾಯಯಕ್ತ ಅಧಿಕಾರಿಗಳು ಮತ್ತೆ ಭ್ರಷ್ಟರ ಬೇಟೆ ಚುರುಕುಗೊಳಿಸಿದ್ದಾರೆ. ಗುರುವಾರ ಬೆಳ್ಳಂಬೆಳಗ್ಗೆಯೇ ಬೆಂಗಳೂರು, ಮಂಗಳೂರು, ಮಂಡ್ಯ ಸೇರಿ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ ನಡೆದಿದೆ. ಬೆಂಗಳೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಎಂಸಿ ಕೃಷ್ಣವೇಣಿ ಮನೆ ಮೇಲೆ ದಾಳಿ ನಡೆದಿದೆ. ಸದ್ಯ ಕೃಷ್ಣವೇಣಿ ಮಂಗಳೂರಿಗೆ ವರ್ಗವಾಗಿದ್ದು, ಅಲ್ಲಿಯೂ ಅವರ ಮನೆ ಮೇಲೆ ದಾಳಿ ನಡೆದಿದೆ. ಅವರ ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆದಿದೆ.

ಬೆಂಗಳೂರಿನಲ್ಲಿ ಟೌನ್​​ ಮತ್ತು ಕಂಟ್ರಿ ಪ್ಲಾನಿಂಗ್ ನಿರ್ದೇಶಕ ತಿಪ್ಪೇಸ್ವಾಮಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಅಬಕಾರಿ ಇಲಾಖೆ ಎಸ್​​​ಪಿ ಮೋಹನ್ ಮನೆ ಮೇಲೆಯೂ ರೇಡ್​​​ ನಡೆದಿದೆ. ಕಾವೇರಿ ನೀರಾವರಿ ನಿಗಮ‌ ಎಂಡಿ ಮಹೇಶ್, ಸಂಬಂಧಿಕರ ಮನೆ ಮೇಲೆ ದಾಳಿ ಮಾಡಲಾಗಿದೆ. ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಮಹೇಶ್ ಮನೆ, ಸಂಬಂಧಿಕರ ಮನೆ ಮೇಲೆ ದಾಳಿ ನಡೆದಿದೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಕೃಷ್ಣವೇಣಿ ಅವರ ಮಂಗಳೂರಿನ ವೆಲೆನ್ಸಿಯಾದ ಮನೆ ಹಾಗೂ ಕಚೇರಿಗೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕೃಷ್ಣವೇಣಿ 2 ತಿಂಗಳ ಹಿಂದಷ್ಟೇ ವರ್ಗಾವಣೆ ಆಗಿ ಮಂಗಳೂರಿಗೆ ಬಂದಿದ್ದಾರೆ. ಇವರು ಈ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಗಣಿ‌ ಇಲಾಖೆ ಅಧಿಕಾರಿಯಾಗಿದ್ದರು. ಚಿಕ್ಕಬಳ್ಳಾಪುರದಲ್ಲಿ ಕೃಷ್ಣವೇಣಿ ವಿರುದ್ಧ ದೂರು ದಾಖಲಾದ ಹಿನ್ನೆಲೆ ಈ ದಾಳಿ ನಡೆದಿದೆ. ಮಂಗಳೂರು ಲೋಕಾಯುಕ್ತ ಎಸ್​ಪಿ ನಟರಾಜ್ ನೇತೃತ್ವದಲ್ಲಿ ದಾಳಿ ನಡೆದಿದೆ.

ಮೂರು ವಾಹನಗಳಲ್ಲಿ ಬಂದ ಅಧಿಕಾರಿಗಳು, ಪೊಲೀಸ್

ಮಂಗಳೂರಿನ ವೇಲೆನ್ಸಿಯಾ ಬಳಿಯ ಫ್ರೆಡ್ ರೋಸ್ ಎನ್ಕಲೇವ್ ಅಪಾರ್ಟ್​ಮೆಂಟ್​ಗೆ ಬೆಳಗ್ಗೆಯೇ ಮೂರು ವಾಹನಗಳಲ್ಲಿ ಆಗಮಿಸಿದ ಲೋಕಾ ಅಧಿಕಾರಿಗಳು ದಾಳಿ ನಡೆಸಿದರು. ಮಂಗಳೂರು ಹಾಗೂ ಚಿಕ್ಕಬಳ್ಳಾಪುರ ಲೋಕಾಯುಕ್ತ ಅಧಿಕಾರಿಗಳ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಿದೆ. ಮಲ್ಲಿಕಟ್ಟೆ ಬಳಿಯ ಕಚೇರಿಗೂ ಲೋಕಾಯುಕ್ತ ಎಂಟ್ರಿಕೊಟ್ಟಿದೆ.

ಕಾವೇರಿ ನೀರಾವರಿ ನಿಗಮ ಎಂಡಿ ಮನೆ ಮೇಲೆ ಲೋಕಾ ದಾಳಿ

ಮಂಡ್ಯದಲ್ಲಿ ‌ಲೋಕಾಯುಕ್ತ ಎಸ್​ಪಿ ಸುರೇಶ್ ಬಾಬು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಕಾವೇರಿ ನೀರಾವರಿ ನಿಗಮದ ಎಂಡಿ ಮಹೇಶ್ ಮನೆಗಳ ಮೇಲೆ ದಾಳಿ ಮಾಡಲಾಗಿದೆ.

ಇದನ್ನೂ ಓದಿ: ಜನಾಕ್ರೋಶದಿಂದ ಎಚ್ಚೆತ್ತ ಸರ್ಕಾರ, ಬಿಪಿಎಲ್​ ಕಾರ್ಡ್​​ ರದ್ದು ಮಾಡದಂತೆ ಸಿಎಂ ಆದೇಶ

ಒಟ್ಟು ಏಳು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಹೇಶ್ ಅವರ ಬೆಂಗಳೂರು ಮೈಸೂರು ಮನೆಗಳು, ಅವರ ಮಾವ ಕೃಷ್ಣಪ್ಪ ಅವರ ಮನೆ (ಮಳವಳ್ಳಿ ತಾಲ್ಲೂಕಿನ ದಳವಾಯಿ ಕೋಡಿಗಳ್ಳಿ ಗ್ರಾಮದಲ್ಲಿ ಇರುವ ಮನೆ) ಸೇರಿದಂತೆ ಏಳು‌ ಕಡೆ ದಾಳಿ ನಡೆದಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:01 am, Thu, 21 November 24