Lokayukta Raid: ಬೆಂಗಳೂರು, ಕೊಪ್ಪಳ ಸೇರಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ

| Updated By: Ganapathi Sharma

Updated on: Dec 10, 2024 | 11:50 AM

ಬೆಂಗಳೂರು, ಕೊಪ್ಪಳ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭ್ರಷ್ಟಾಚಾರದ ಅನುಮಾನದ ಮೇರೆಗೆ 10 ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಕೊಪ್ಪಳದಲ್ಲಿ ಅಬಕಾರಿ ಇನ್ಸ್​​ಪೆಕ್ಟರ್ ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿಯ ಆಭರಣಗಳು ಪತ್ತೆಯಾಗಿವೆ. ಲೋಕಾಯುಕ್ತ ದಾಳಿ ಸಂಬಂಧಿತ ವಿವರಗಳು ಇಲ್ಲಿವೆ.

Lokayukta Raid: ಬೆಂಗಳೂರು, ಕೊಪ್ಪಳ ಸೇರಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ
ಕೊಪ್ಪಳದಲ್ಲಿ ಅಬಕಾರಿ ಇನ್ಸ್​​ಪೆಕ್ಟರ್ ರಮೇಶ ನಿವಾಸ (ಒಳಚಿತ್ರದಲ್ಲಿ ರಮೇಶ)
Follow us on

ಬೆಂಗಳೂರು, ಡಿಸೆಂಬರ್ 10: ಭ್ರಷ್ಟ ಅಧಿಕಾರಿಗಳ ವಿರುದ್ಧದ ಕಾರ್ಯಾಚರಣೆ ಚುರುಕುಗೊಳಿಸಿರುವ ಲೋಕಾಯುಕ್ತ ಮಂಗಳವಾರ ಬೆಳಂಬೆಳಗ್ಗೆ ಬೆಂಗಳೂರು, ಕೊಪ್ಪಳ ಸೇರಿದಂತೆ ಕರ್ನಾಟಕ ಹಲವು ಜಿಲ್ಲೆಗಳಲ್ಲಿ ದಾಳಿ ನಡೆಸಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಗದಗ, ಕಲಬುರುಗಿ, ರಾಯಚೂರು, ಚಿತ್ರದುರ್ಗದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ 5 ಕಡೆ ದಾಳಿ ನಡೆಸಿ ಮನೆಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. 10 ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.

ಎಲ್ಲೆಲ್ಲಿ ಲೋಕಾಯುಕ್ತ ದಾಳಿ?

  • ಲೋಕೇಶ್ ಬಾಬು, ಬೆಸ್ಕಾಂ ಇಂಜಿಯರ್ ಬೆಂಗಳೂರಿನ ಬಣಸವಾಡಿ ನಿವಾಸಿ
  • ಸುರೇಶ್ ಬಾಬು, ಕಂದಾಯ ಇಲಾಖೆ ಇನ್ಸ್​​ಪೆಕ್ಟರ್, ಬೆಂಗಳೂರು ನಿವಾಸ
  • ಕೃಷ್ಣಪ್ಪ, ಬಿಬಿಎಂಪಿ ತೆರಿಗೆ ಇನ್ಸ್​ಪೆಕ್ಟರ್, ಬೆಂಗಳೂರು ನಿವಾಸ
  • ಸುನೀಲ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ
  • ನಂಜುಡಯ್ಯ, ಶಸಸ್ತ್ರ ಡಿವೈಎಸ್ಪಿ, ಚೆನ್ನಪಟ್ಟಣ ಪೊಲೀಸ್ ತರಬೇತಿ ಶಾಲೆ
  • ಲಕ್ಷ್ಮಣ್ ಎಸ್, ಡಿಎ ಗದಗ
  • ರಾಮಪ್ಪ, ಕಲಬುರುಗಿ ಮಹಾನಗರ ಪಾಲಿಕೆ ಇಂಜಿನಿಯರ್
  • ರಮೇಶ್, ಅಬಾಕಾರಿ ಇನ್ಸ್ ಪೆಕ್ಟರ್ ರಾಮಚೂರು
  • ಸುರೇಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ
  • ಸುನೀಲ್ ಬಿಎಚ್ಒ ಬೆಂಗಳೂರು ಗ್ರಾಮಾಂತರ

ಬೆಳ್ಳಂಬೆಳಗ್ಗೆಯೇ ಅಧಿಕಾರಿಗಳ ನಿವಾಸಗಳಿಗೆ ಧಾವಿಸಿದ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರಿನ ಮಂಜುನಾಥ್ ನಗರದಲ್ಲಿ ಇರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ಡಿಹೆಚ್ಒ ನಿವಾಸ, ಸುನಿಲ್ ಕುಮಾರ್ ನಿವಾಸಕ್ಕೆ ಬೆಳಗ್ಗೆ 6 ಗಂಟೆಗೇ ಲೋಕಾ ಅಧಿಕಾರಿಗಳು ಆಗಮಿಸಿದ್ದರು. ಆದರೆ, 10 ಗಂಟೆ ತನಕ ಬಾಗಿಲು ತೆರೆಯದೇ ಹೈಡ್ರಮಾ ನಡೆಯಿತು. ನಂತರ 10 ಗಂಟೆಯ ಬಳಿಕ ಸುನೀಲ್ ಬಾಗಿಲು ತೆರೆದರು. ಸದ್ಯ ಸುನಿಲ್ ನಿವಾಸದಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಕೊಪ್ಪಳದಲ್ಲಿ ಅಬಕಾರಿ ಇನ್ಸ್​​ಪೆಕ್ಟರ್ ಮನೆ ಮೇಲೆ ಲೋಕಾಯುಕ್ತ ದಾಳಿ

ಕೊಪ್ಪಳದಲ್ಲಿ ಅಬಕಾರಿ ಇನ್ಸ್​​ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಮೇಶ ಅಗಡಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತರು ಶಾಕ್ ನೀಡಿದ್ದಾರೆ. ಮುಂಜಾನೆ ಮನೆ ಮೇಲೆ ದಾಳಿ ನೆಡೆಸಿದ ಲೋಕಾಯುಕ್ತ ಪೊಲೀಸರು ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕೊಪ್ಪಳದ ಅಬಕಾರಿ ಇಲಾಖೆಯಲ್ಲಿ ಇನ್ಸ್​​ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ರಮೇಶ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ಲೋಕಾಯುಕ್ತ ದಾಳಿಯಾಗಿದೆ.

ಇದನ್ನೂ ಓದಿ: ಡಿ 13 ರಂದು ಅಂಜನಾದ್ರಿಯಲ್ಲಿ ಮೊಳಗಲಿದೆ ಹನುಮ ಜಪ: ನಾನಾಕಡೆಗಳಿಂದ ಮಾಲಾಧಾರಿಗಳ ಆಗಮನ

ಕೊಪ್ಪಳದ ಬಿಟಿ ಪಾಟೀಲ್ ನಗರದಲ್ಲಿರುವ ಕಚೇರಿ ಹಾಗೂ ಬಾಡಿಗೆ ಮನೆ, ಸ್ವಗ್ರಾಮ ಯಲಬುರ್ಗಾ ತಾಲೂಕಿನ ತುಮ್ಮರಗುದ್ದಿ ಗ್ರಾಮದ ತೋಟದ ಮನೆ ಮೇಲೂ ದಾಳಿ ನಡೆದಿದೆ. ಲೋಕಾಯುಕ್ತ ಎಸ್ಪಿ ಎಂ ಎನ್ ಶಶೀದರ್, ಡಿವೈಎಸ್ಪಿ ಶೀಲವಂತ್, ಸಿಪಿಐ ಸುನೀಲ್ ಮೇಗಿಲಮನಿ ಸೇರಿದಂತೆ ಲೋಕಾಯುಕ್ತ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ.

ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಪತ್ತೆ

ಲೋಕಾಯುಕ್ತ ಪರಿಶೀಲನೆ ವೇಳೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿಯ ಆಭರಣಗಳು ಹಾಗೂ ಸ್ವ ಗ್ರಾಮದಲ್ಲಿ ಕೃಷಿ ಭೂಮಿ ಇರುವುದು ಪತ್ತೆಯಾಗಿದೆ. ಆಸ್ತಿಯ ಒಟ್ಟು ಮೌಲ್ಯ ಮತ್ತು ಬೇರಡೆ ಏನಾದರೂ ಆಸ್ತಿ ಇದೆಯಾ ಎಂಬುದನ್ನು ಲೋಕಾಯುಕ್ತ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ