ಬೆಂಗಳೂರು, ಏಪ್ರಿಲ್ 26: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ (Lok Sabha Election 2024) ರಾಜ್ಯದಲ್ಲಿ ಮೊದಲ ಹಂತದ ಬಿರುಸಿನ ಮತದಾನ ನಡೆಯುತ್ತಿದೆ. ಸುಡುವ ಬಿಸಿಲಿನಲ್ಲೂ ಮತದಾರರು ತಮ್ಮ ತಮ್ಮ ಮತ ಕೇಂದ್ರಗಳಿಗೆ ತೆರಳಿ ಮತದಾನ (Voting) ಮಾಡಿದ್ದಾರೆ. ಇನ್ನು ವಿದೇಶದಲ್ಲಿ ನೆಲೆಸಿರುವ ಕರ್ನಾಟಕದ ಮತದಾರರು ತಾಯ್ನಾಡಿಗೆ ಆಗಮಿಸಿ ಮತದಾನ ಮಾಡಿರುವುದು ವಿಶೇಷ. ಸಾವಿರಾರು ರೂಪಾಯಿ ಹಣ ಖರ್ಚು ಮಾಡಿಕೊಂಡು ಮತದಾನ ಮಾಡಲು ಅಮೆರಿಕಾ, ಲಂಡನ್, ದುಬೈನಿಂದ ಆಗಮಿಸಿದ್ದಾರೆ. ಈ ಮೂಲಕ ರಾಜ್ಯದಲ್ಲೇ ಇದ್ದುಕೊಂಡು ಮತದಾನದಿಂದ ದೂರ ಉಳಿಯುವವರೆಗೆ ಮಾದರಿಯಾಗಿದ್ದಾರೆ.
ಮಂಡ್ಯ ಮೂಲದ ಯುವತಿ, ಸಾಫ್ಟ್ವೇರ್ ಉದ್ಯೋಗಿ ಸೋನಿಕಾ ಅವರು ಲಂಡನ್ನಿಂದ ಆಗಮಿಸಿ ಮತ ಚಲಾಯಿಸಿದ್ದಾರೆ. ಮಂಡ್ಯ ತಾಲೂಕಿನ ಕಾಳೇನಹಳ್ಳಿ ಮತಗಟ್ಟೆಯಲ್ಲಿ ಸೋನಿಕಾ ಮತದಾನ ಮಾಡಿದ್ದು,
ಒಂದೂವರೆ ಲಕ್ಷ ಖರ್ಚು ಮಾಡಿಕೊಂಡು ತವರಿಗೆ ಬಂದಿದ್ದಾರೆ. ಮತ ಚಲಾಯಿಸುವ ಮೂಲಕ ಜವಾಬ್ದಾರಿ ನಿರ್ವಹಿಸಿದ್ದಾರೆ.
ಕೋಲಾರ ನಿವಾಸಿ ಅಬ್ದುಲ್ ಸುಬಾನ್ ಎಂಬುವವರು ಬ್ಯುಸಿನೆಸ್‌ಗೆಂದು ದುಬೈಗೆ ತೆರಳಿದ್ದರು. ಆದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಹಕ್ಕು ಚಲಾಯಿಸಲೆಂದು ದುಬೈನಿಂದ ಬಂದಿದ್ದು, ಕೋಲಾರದ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 117ರಲ್ಲಿ ಮತದಾನ ಮಾಡಿದರು.
ಕೋಲಾರದ ಮಾಸ್ತಿ ಬಡಾವಣೆ ನಿವಾಸಿಯಾಗಿರುವ ಅನುಪಮಾ ಜೈಕುಮಾರ್ ಅವರು ಅಮೆರಿಕದಿಂದ ಆಗಮಿಸುವ ಮೂಲಕ ಮತಗಟ್ಟೆ ಸಂಖ್ಯೆ 113ರಲ್ಲಿ ಮತದಾನ ಮಾಡಿದ್ದಾರೆ.
ಇದನ್ನೂ ಓದಿ: ಪ್ರತ್ಯೇಕ ಘಟನೆ: ಮತದಾನದ ಬಳಿಕ ತುಮಕೂರು, ಮಂಡ್ಯದಲ್ಲಿ ದುರಂತ ಅಂತ್ಯಕಂಡ ಮತದಾರ
ಅದೇ ರೀತಿಯಾಗಿ ಮಂಗಳೂರಿನ ಉಳಾಯಿಬೆಟ್ಟುವಿನ ಜೀವಿತ ಎಂಬುವವರು ದುಬೈನಿಂದ ಬಂದು ಮತದಾನ ಮಾಡಿದ್ದಾರೆ. ನಮ್ಮ ಮತ ನಮ್ಮ ಹಕ್ಕು ಎನ್ನುವ ದೃಷ್ಟಿಯಿಂದ ಮತದಾನ ಮಾಡಲು ಬಂದಿದ್ದಾಗಿ ಜೀವಿತ ತಿಳಿಸಿದ್ದಾರೆ.
ಇದನ್ನೂ ಓದಿ: Tumakuru: ಮತದಾರನ ಎರಡೂ ಕೈ ತೋರು ಬೆರಳಿಗೆ ಶಾಹಿ: ತುಮಕೂರಿನಲ್ಲಿ ಅಪರೂಪದ ಘಟನೆ
ಚಿತ್ರದುರ್ಗದ ಶಿಕ್ಷಕರ ಕಾಲೋನಿ ನಗರದ ನಿವಾಸಿಯಾಗಿರುವ ಲಿಖಿತ ಅವರು ಫಿಲಿಫೈನ್ಸ್‌ನಿಂದ ಬಂದು ಮತದಾನ ಚಲಾಯಿಸಿದ್ದಾರೆ. ಫಿಲಿಫೈನ್ಸ್‌ನಲ್ಲಿ ಎಂಬಿಬಿಎಸ್ (MBBS) ಓದುತ್ತಿರುವ ಲಿಖಿತ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ಬಂದಿದ್ದರು. ಚಿತ್ರದುರ್ಗದ ಜೋಗಿ ಮಟ್ಟಿ ರಸ್ತೆಯಲ್ಲಿರುವ ಮತಗಟ್ಟೆ ಸಂಖ್ಯೆ 230ರಲ್ಲಿ ಮತದಾನ ಮಾಡಿದರು. ಪ್ರತಿ ಬಾರಿ ತಪ್ಪದೆ ಬಂದು ಮತದಾನ ಮಾಡುತ್ತಿರುವುದಾಗಿ ಲಿಖಿತ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:52 pm, Fri, 26 April 24