ಪ್ರತ್ಯೇಕ ಘಟನೆ: ಮತದಾನದ ಬಳಿಕ ತುಮಕೂರು, ಮಂಡ್ಯದಲ್ಲಿ ದುರಂತ ಅಂತ್ಯಕಂಡ ಮತದಾರ
ರಾಜ್ಯದ 14 ಲೋಕಸಭಾ ಕ್ಷೇತ್ರದಲ್ಲಿ ಮೊದಲ ಹಂತದ ಮತದಾನ ಇಂದು(ಏ.26) ನಡೆಯುತ್ತಿದೆ. ಈ ಮಧ್ಯೆ ತುಮಕೂರಿನಲ್ಲಿ ಮತದಾನದ ಬಳಿಕ ದಿಢೀರನೆ ಕುಸಿದು ಬಿದ್ದು ಮತದಾರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇತ್ತ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚನ್ನೇಗೌಡನಹಳ್ಳಿಯಲ್ಲಿ ಅಜ್ಜ ಮೃತಪಟ್ಟಿದ್ದಾರೆ.
ತುಮಕೂರು, ಏ.26: ಮತದಾನದ ಬಳಿಕ ದಿಢೀರನೆ ಕುಸಿದು ಬಿದ್ದು ಮತದಾರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತುಮಕೂರಿನಲ್ಲಿ(Tumakuru) ನಡೆದಿದೆ. ಮಯೂರ ಯುವ ವೇದಿಕೆಯ ಸದಸ್ಯ ಹೆಚ್.ಕೆ.ರಮೇಶ್, ಮೃತಪಟ್ಟವರು. ಇಂದು(ಏ.26) ನಗರದ ಎಸ್‌ಎಸ್ ಪುರಂ ಮತಗಟ್ಟೆಗೆ ಪತ್ನಿ ಸಮೇತ ಬಂದು ಮತ ಚಲಾಯಿಸಿದ್ದರು. ಬಳಿಕ ತಮ್ಮದೇ ಮಾಲೀಕತ್ವದ ಬಟ್ಟೆ ಅಂಗಡಿಯಲ್ಲಿದ್ದಾಗ ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.
ಮತದಾನ ಬಳಿಕ ಸಾವನ್ನಪ್ಪಿದ ಅಜ್ಜ
ಮಂಡ್ಯ: ಮತದಾನ ಬಳಿಕ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚನ್ನೇಗೌಡನಹಳ್ಳಿಯ ಅಜ್ಜ ಮೃತಪಟ್ಟಿದ್ದಾರೆ. ಕುಂದೂರಯ್ಯ (87) ಸಾವನ್ನಪ್ಪಿರುವ ಅಜ್ಜ. ಕಾಲು ನೋವಿನಿಂದ ಬಳಲುತ್ತಿದ್ದ ಕುಂದೂರಯ್ಯ ಅವರು, ಇಂದು ಬೆಳಗ್ಗೆಯೇ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದರು. ಬಳಿಕ ಮನೆಗೆ ಬಂದಿದ್ದ ಮೇಲೆ ಅಜ್ಜ ದಿಢೀರ್ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ಮಣಿಪುರ ಹಿಂಸಾಚಾರ: ನಮ್ಮ ನಾಯಕರನ್ನು ನಂಬುವುದಿಲ್ಲ, ಈ ಚುನಾವಣೆಗೆ ಅರ್ಥವಿಲ್ಲ: ಸಂತ್ರಸ್ತರು
ಮತದಾನ ಮಾಡಿ ಹೊರ ಬಂದು ಕೈ ಮುರಿದುಕೊಂಡ ವೃದ್ದೆ
ಮೈಸೂರು: ಮೈಸೂರಿನ ಕುವೆಂಪುನಗರದ ಎಂ.ಬ್ಲಾಕ್ ಗೋಕುಲ್ ಶಾಲೆಯ ಬೂತ್ ಬಳಿ ಮತದಾನ ಮಾಡಿ ಹೊರ ಬಂದ ವೃದ್ದೆಯೊಬ್ಬರು ಕೈ ಮುರಿದುಕೊಂಡ ಘಟನೆ ನಡೆದಿದೆ. ಜಯಮ್ಮ (76) ಬಿದ್ದು ಕೈ ಮುರಿದುಕೊಂಡ ವೃದ್ದೆ. ಮತದಾನ ಮಾಡಿ ಹೊರ ಬಂದಿದ್ದರು. ಈ ವೇಳೆ ಪಕ್ಕದಲ್ಲಿದ್ದ ಹಸುಗಳ ಕಾಳಗಕ್ಕೆ ಹೆದರಿ ಓಡುವ ಸಂದರ್ಭದಲ್ಲಿ ಆಯತಪ್ಪಿ ಬಿದ್ದು ಕೈ ಮುರಿತವಾಗಿದೆ. ಕೂಡಲೇ ಖಾಸಗಿ ಆಸ್ಪತ್ರೆಗೆ ಸೇರಿಸಿ ವೃದ್ದ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ