ಮತದಾರರ ಸೆಳೆಯಲು ಸಾವಿರಾರು ಮತಗಟ್ಟೆಗಳನ್ನು ಅಂದಚೆಂದಗೊಳಿಸಿದ ಚಿತ್ರಕಲಾ ಶಿಕ್ಷಕರು ಸಮಸ್ಯೆಗೆ ಸಿಲುಕಿದ್ದಾರೆ

ಸಾಧು ಶ್ರೀನಾಥ್​

|

Updated on: May 26, 2023 | 12:36 PM

ಪ್ರತಿ ಮಗಟ್ಟೆಯಿಂದ 5 ಸಾವಿರ ರೂ ವಾಪಸ್ ಕೇಳುತ್ತಿದ್ದು 50 ಲಕ್ಷ ರೂಪಾಯಿ ಹಣ ಕೇಳಿದಂತಾಗಿದೆ. ಇನ್ನು ಚಿತ್ರಕಲಾ ಶಿಕ್ಷಕರು ಹಣ ನೀಡದಿದ್ದರೆ ಸಂಬಳ ತಡೆ ಹಿಡಿಯೋ ನೋಟಿಸ್ ಜಾರಿ ಮಾಡಿ ಹೆದರಿಸಲಾಗಿದೆ. ಇಂತ ಸಮಸ್ಯೆಗೆ ಈಡಾದ ನೂರಾರು ಶಿಕ್ಷಕರು ಭಯದಲ್ಲಿ ಯಾವುದೇ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ.

ಮತದಾರರ ಸೆಳೆಯಲು ಸಾವಿರಾರು ಮತಗಟ್ಟೆಗಳನ್ನು ಅಂದಚೆಂದಗೊಳಿಸಿದ ಚಿತ್ರಕಲಾ ಶಿಕ್ಷಕರು ಸಮಸ್ಯೆಗೆ ಸಿಲುಕಿದ್ದಾರೆ
ಮತದಾರರ ಸೆಳೆಯಲು ಸಾವಿರಾರು ಮತಗಟ್ಟೆಗಳನ್ನು ಅಂದಚೆಂದಗೊಳಿಸಿದ ಚಿತ್ರಕಲಾ ಶಿಕ್ಷಕರು ಸಮಸ್ಯೆಗೆ ಸಿಲುಕಿದ್ದಾರೆ

Follow us on

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ (Karnataka assembly Elections 2023) ಮುಕ್ತಾಯವಾಗಿ ಹತ್ತಾರು ದಿನಗಳಾಗಿವೆ. ಶಾಂತಿ ಸುವ್ಯವಸ್ಥೆ ಮತದಾನಕ್ಕೆ ಹಾಗೂ ಹೆಚ್ಚು ಮತದಾನ ಆಗಲು ಜಿಲ್ಲಾ ಚುನಾವಣಾಧಿಕಾರಿಗಳು ಸೇರಿದಂತೆ ಇತರೆ ಇಲಾಖೆಗಳ ಆಧಿಕಾರಿಗಳ ಶ್ರಮ ಕಾರಣವಾಗಿದೆ. ವಿಜಯಪುರ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ಸಮಸ್ಯೆಯಿಲ್ಲದೇ ಶಾಂತಿಯುತವಾಗಿ ಚುನಾವಣಾ ಪ್ರಕ್ರಿಯೆ ನಡೆದಿತ್ತು. ಕಳೆದ ಬಾರಿಗಿಂತ ಹೆಚ್ಚು ಮತದಾನ ಆಗಲು ಆಧಿಕಾರಿಗಳು ಕೆಲಸ ಮಾಡಿದ್ದರು. ಮತಗಟ್ಟೆಗಳಿಗೆ (Polling Booth) ಬಣ್ಣ ಬಳಿದು ವಿವಿಧ ಚಿತ್ರ ಬಿಡಿಸಿ ಮತದಾರರ ಸೆಳೆಯುವ ಶ್ಲಾಘನೀಯ ಕೆಲಸವನ್ನೂ ಮಾಡಿದ್ದರು. ಆದರೆ ಈ ಮಧ್ಯೆ ಅಚಾತುರ್ಯವೊಂದು ನಡೆದಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇದೀಗ ಬಣ್ಣ ಬಳಿದು ಚಿತ್ರಕಲೆ ಬಿಡಿಸಿದ್ದ ಚಿತ್ರಕಲಾ ಶಿಕ್ಷಕರ (Art Teachers) ಬಳಿ ಚಿತ್ರಕಲಾ ಶಿಕ್ಷಕರೋರ್ವರು ತಾನು ನೋಡಲ್ ಆಧಿಕಾರಿಯೆಂದು ಹೇಳಿಕೊಂಡು ಹಣ ವಾಪಸ್ ಕೇಳುತ್ತಿದ್ದಾರೆ. ಸಂಬಳವನ್ನು ತಡೆ ಹಿಡಿಯೋ ನೋಟಿಸ್ ನೀಡಿದ್ದು ಭಾರೀ ಸಂಶಯಕ್ಕೆ ಕಾರಣವಾಗಿದೆ.

ಕಳೆದ 2023 ರ ವಿಧಾನಸಭಾ ಚುನಾವಣಾ ಕೆಲಸದಲ್ಲಿ ಭ್ರಷ್ಟಾಚಾರ ಆರೋಪ… ಮತ ಕೇಂದ್ರಗಳ ಅಂದಚೆಂದ ಮಾಡುವ ಕೆಲಸದಲ್ಲಿ ಭ್ರಷ್ಟಾಚಾರದ ವಾಸನೆ? ವಿಜಯಪುರ ಜಿಲ್ಲೆಯ ಚಿತ್ರಕಲಾ ಶಿಕ್ಷಕನೋರ್ವನ ನೇತೃತ್ವದಲ್ಲಿ ಹಣ ವಸೂಲಿ ಆರೋಪ… ಹೌದು ಇಂಥದೊಂದು ಆರೋಪ ಇದೀಗ ವಿಜಯಪುರ ಜಿಲ್ಲೆಯಲ್ಲಿ ಕೇಳಿ ಬಂದಿದೆ.

ವಿಜಯಪುರ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಶಾಂತಿಯುತ, ಕಾನೂನು ಸುವ್ಯವಸ್ಥಿತ ರೀತಿಯಲ್ಲಿ ಮತದಾನ ಆಗಬೇಕು. ಹಿಂದಿನ ಚುನಾವಣೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳು ಇತರೆ ಇಲಾಖೆ ಆಧಿಕಾರಿಗಳ ನೇತೃತ್ವದಲ್ಲಿ ಕಾರ್ಯ ಮಾಡಿದ್ದರು. ಇನ್ನು ಕಳೆದ ಬಾರಿ ಕಡಿಮೆ ಮತದಾನ ಆಗಿರೋ ಸ್ಥಳಗಳಲ್ಲಿ ಮತದಾರರನ್ನು ಸೆಳೆಯಲು ಮತಕೇಂದ್ರಗಳ ಶೃಂಗಾರ ಮಾಡುವುದು. ಅವುಗಳಿಗೆ ಬಣ್ಣ ಬಳಿಯುವುದು ಚಿತ್ರ ಬಿಡಿಸೋ ಮೂಲಕ ಮತದಾರರನ್ನು ಸೆಳೆಯಲು ತಂತ್ರ ಹೆಣೆಯಲಾಗಿತ್ತು.

ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಗಾಗಿ ಒಟ್ಟು 2078 ಮತಗಟ್ಟೆಗಳಲ್ಲಿ ಮತದಾನ ಮಾಡಲು ಸಿದ್ದತೆ ಮಾಡಿದ್ದರು. ಈ ಪೈಕಿ 1000 ಕ್ಕೂ ಆಧಿಕ ಮತಗಟ್ಟೆಗಳಿಗೆ ಬಣ್ಣ ಬಳಿದು ವಿವಿಧ ಕಲೆಗಳ ಚಿತ್ರ ಬರೆದು ಮತದಾರರ ಸೆಳೆಯಲಾಗಿತ್ತು. ಮತಗಟ್ಟೆಗಳಿಗೆ ಬಣ್ಣ ಬಳಿಯಲು ಚಿತ್ರ ಬಿಡಿಸಲು ಸ್ಥಳಿಯ ಆಡಳಿತ ಮಂಡಳಿಯಿಂದ ಒಂದು ಮತಗಟ್ಟೆಗೆ ಐದು ಸಾವಿರ ರೂಪಾಯಿ ಹಣ ನೀಡಲಾಗಿತ್ತು. ಬಣ್ಣ ಬಳಿದು ಚಿತ್ರ ಬಿಡಿಸಲು ಆಯಾ ತಾಲೂಕಿನ ಚಿತ್ರಕಲಾ ಶಿಕ್ಷಕರನ್ನು ನಿಯೋಜನೆ ಮಾಡಲಾಗಿತ್ತು.

ಈ ರೀತಿ ಸ್ಥಳೀಯ ಗ್ರಾಮ ಪಂಚಾಯತಿ ಆಧಿಕಾರಿ ಅಥವಾ ಸ್ಥಳೀಯ ಆಡಳಿತ ಸಂಸ್ಥೆಯಿಂದ ಒಂದು ಮತಗಟ್ಟೆಗೆ 5 ಸಾವಿರ ರೂಪಾಯಿ ನೀಡಲಾಗಿತ್ತು. ಕೆಲಸ ಮುಗಿದ ಬಳಿಕ ಅದೇ ಸ್ಥಳೀಯ ಆಡಳಿತ ಮಂಡಳಿ ಆಧಿಕಾರಿ ಕೆಲಸ ಪರಿಶೀಲನೆ ಮಾಡಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಬೇಕೆಂಬ ನಿಯಮವಿತ್ತು. ಜಿಲ್ಲೆಯ ಒಂದು ಸಾವಿರಕ್ಕೂ ಆಧಿಕ ಮತಗಟ್ಟೆಗಳಿಗೆ ಬಣ್ಣ ಬಳಿದು ಚಿತ್ರ ಬಿಡಿಸಿ ಉತ್ತಮ ಕೆಲಸವಾಗಿದೆ ಎಂಬ ರಿಪೋರ್ಟ್ ನ್ನು ಸಹ ಚಿತ್ರಕಲಾ ಶಿಕ್ಷಕರು ಪಡೆದುಕೊಂಡಿದ್ದರು.

ಇಷ್ಟೆಲ್ಲಾ ಕೆಲಸ ಕಾರ್ಯಗಳು ಏಪ್ರಿಲ್ ತಿಂಗಳಲ್ಲೇ ಮುಗಿದು ಹೋಗಿದ್ದವು. ಇಷ್ಟು ಕೆಲಸ ಮುಗಿದ ಬಳಿಕ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಿಂದ ಮತಗಟ್ಟೆಗಳ ಅಂದಚೆಂದ ಮಾಡಿದ ತಪ್ಪಿಗೆ ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಿ ಬಣ್ಣ ಹಾಗೂ ಮತ್ತಿತರ ವಸ್ತುಗಳ ಖರೀದಿ ಮಾಡಿ ರಸೀದಿ ಹಾಗೂ ಉಳಿದ ಹಣ ಇಲಾಖೆಗೆ ವಾಪಸ್ ಮಾಡಬೇಕು. ಈ ಸಂಬಂಧ, ಹಿರಿಯ ಚಿತ್ರಕಲಾ ಶಿಕ್ಷಕ ಮಂಜುನಾಥ ಮಾನೆ ಅವರನ್ನು ಸಂಪರ್ಕಿಸಬೇಕೆಂದು ನೋಟಿಸ್ ನೀಡಲಾಗಿದೆ.

ಇದು ಚಿತ್ರಕಲಾ ಶಿಕ್ಷಕರ ಬೇಸರಕ್ಕೆ ಕಾರಣವಾಗಿದೆ. ಸ್ಥಳೀಯ ಆಡಳಿತ ಮಂಡಳಿಯವರು ಮತಗಟ್ಟೆ ಅಂದಚೆಂದ ಮಾಡಲು ಬಣ್ಣ ಹಾಗೂ ಗೌರವ ಧನ ಸೇರಿದಂತೆ ಐದು ಸಾವಿರ ಹಣ ನೀಡಿದ್ದಾರೆ. ನಮಗೆ ಯಾವುದೇ ರಸೀದಿ ಬೇಡಿಲ್ಲ. ಅವರು ಹಣ ಕೊಟ್ಟವರು ಇದೀಗಾ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನೂಡಲ್ ಆಧಿಕಾರಿಯೆಂದು ಹೇಳುವ ಮಂಜುನಾಥ ಮಾನೆ ನಮ್ಮ ಬಳಿ ತಲಾ ಮತಗಟ್ಟೆಯಿಂದ 5 ಸಾವಿರ ಹಣ ವಾಪಸ್ ಕೇಳಿದ್ದಾರೆ. ಹಣ ನೀಡದ ಕಾರಣ ಅನುದಾನಿತ ಹಾಗೂ ಅನುದಾನಿತವಲ್ಲದ ಶಿಕ್ಷಕರ ಸಂಬಳ ತಡೆ ಹಿಡಿಯಲು ಇಲಾಖೆಯಿಂದ ನೋಟಿಸ್ ನೀಡಿದ್ದಾರೆ ಎಂದು ಚಿತ್ರಕಲಾ ಶಿಕ್ಷಕರು ತೀವ್ರ ಅಸಮಾಧಾನ ತೋಡಿಕೊಂಡಿದ್ದಾರೆ.

ಅಸಲಿಗೆ ಯಾವುದೇ ಮತಗಟ್ಟೆಯನ್ನು ಅಂದ ಚೆಂದ ಮಾಡಲು ಚುನಾವಣಾ ಆಯೋಗ ಹಣ ನೀಡಿಲ್ಲ. ಮತದಾರರನ್ನು ಸೆಳೆಯಲು ಸ್ಥಳೀಯ ಆಡಳಿತ ಸಂಸ್ಥೆಗಳು ಚಿತ್ರಕಲಾ ಶಿಕ್ಷಕರಿಗೆ ಹಣ ನೀಡಿವೆ. ಚಿತ್ರಕಲಾ ಶಿಕ್ಷಕರಿಗೆ ಸ್ಥಳೀಯ ಸಂಸ್ಥೆಗಳು ಹಣ ನೀಡಿ ಉತ್ತಮ ಕೆಲಸ ಮಾಡಲಾಗಿದೆ ಎಂದು ಪ್ರಮಾಣ ಪತ್ರ ನೀಡಿದ್ದಾರೆ. ಅಷ್ಟರ ಮೇಲೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯಿಂದ ನೂಡಲ್ ಆಧಿಕಾರಿ ಮಂಜುನಾಥ್ ಮಾನೆ ಅವರಿಗೆ ಬಣ್ಣ ಖರೀದಿ ಮಾಡಿದ ರಸೀದಿ ಹಾಗೂ ಇತರೆ ದಾಖಲಾತಿ ನೀಡಬೇಕೆಂದು ನೋಟಿಸ್ ಜಾರಿಯಾಗಿದ್ದು ಹಲವಾರು ಸಂಶಯಗಳಿಗೆ ಕಾರಣವಾಗಿದೆ.

ಆದರೂ ಅದೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಹೆಸರಿನಲ್ಲಿ ಜಾರಿಯಾಗಿರೋ ನೋಟಿಸ್ ನಲ್ಲಿ ಚಿತ್ರಕಲಾ ಶಿಕ್ಷಕ ಮಂಜುನಾಥ ಮಾನೆ ನೂಡಲ್ ಆಧಿಕಾರಿ ಎಂದು ನಮೂದಿಸಲಾಗಿದೆ. ಹಾಗಾದರೆ ನೂಡಲ್ ಆಧಿಕಾರಿಯಾಗಿ ನೇಮಕವಾಗದೇ ಇರೋ ಮಂಜುನಾಥ ಮಾನೆ ಹೆಸರು ನೂಡಲ್ ಅಧಿಕಾರಿಯೆಂದು ಡಿಡಿಪಿಐ ಅವರ ನೋಟಿಸ್ ನಲ್ಲಿ ಉಲ್ಲೇಖವಾಗಿದ್ದಾದರೂ ಯಾಕೆ? ಸ್ಥಳೀಯ ಸಂಸ್ಥೆಗಳು ನೀಡಿದ ಹಣವನ್ನು ನೂಡಲ್ ಆಧಿಕಾರಿ ಎಂದಿರೋ ಮಂಜುನಾಥ ಮಾನೆ ವಾಪಸ್ ಕೇಳುತ್ತಿರೋದಾರೂ ಯಾಕೆ ಎಂಬುದು ಇಲ್ಲಿ ಭ್ರಷ್ಟಾಚಾರ ನಡೆದಿದ್ದಕ್ಕೆ ಪುಷ್ಟಿ ನೀಡಿದೆ.

ಜಿಲ್ಲೆಯಲ್ಲಿ 1000 ಕ್ಕೂ ಆಧಿಕ ಮತಗಟ್ಟೆಗಳನ್ನು ಅಂದಚೆಂದ ಮಾಡಲು ಅವುಗಳಿಗೆ ಬಣ್ಣ ಬಳಿದು ಚಿತ್ರ ಬಿಡಿಸಲಾಗಿದೆ. ಹೀಗೆ ಅಂದಚೆಂದ ಮಾಡಿದ ಚಿತ್ರಕಲಾ ಶಿಕ್ಷಕರಿಂದ ವಾಪಸ್ ಹಣ ಕೇಳುತ್ತಿರೋ ಮಂಜುನಾಥ ಮಾನೆ ಅವರು ಆ ಹಣವನ್ನು ಯಾರಿಗೆ ನೀಡಲಿದ್ದಾರೆ? ಯಾರ ಆದೇಶದ ಪ್ರಕಾರ ಇವರು ಹಣ ವಾಪಸ್ ಕೇಳುತ್ತಿದ್ದಾರೆ? ಎಂಬುದು ಉತ್ತರ ಸಿಗದ ಪ್ರಶ್ನೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 1000 ಕ್ಕೂ ಆಧಿಕ ಮತಗಟ್ಟೆಗಳನ್ನು ಅಲಂಕಾರ ಮಾಡಲಾಗಿದೆ.

ಪ್ರತಿ ಮಗಟ್ಟೆಯಿಂದ 5 ಸಾವಿರ ವಾಪಸ್ ಕೇಳುತ್ತಿದ್ದು 50 ಲಕ್ಷ ರೂಪಾಯಿ ಹಣ ಕೇಳಿದಂತಾಗಿದೆ. ಇನ್ನು ಚಿತ್ರಕಲಾ ಶಿಕ್ಷಕರು ಹಣ ನೀಡದಿದ್ದರೆ ಸಂಬಳ ತಡೆ ಹಿಡಿಯೋ ನೋಟಿಸ್ ಜಾರಿ ಮಾಡಿ ಹೆದರಿಸಲಾಗಿದೆ. ಇಂತ ಸಮಸ್ಯೆಗೆ ಈಡಾದ ನೂರಾರು ಶಿಕ್ಷಕರು ಭಯದಲ್ಲಿ ಯಾವುದೇ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ಸಂಬಳ ತಡೆಯೋ ಭಯದಲ್ಲಿ ಹಣ ಕೊಟ್ಟು ಯಾರಿಗೆ ಬೇಕು ಈ ರಗಳೆ ಎಂದಿದ್ದಾರೆ.

ಇಲ್ಲಿ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳು ಶಾಮೀಲಾಗಿದ್ಧಾರೋ ಅಥವಾ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಾರದೇ ಇದೆಲ್ಲವನ್ನು ಮಂಜುನಾಥ ಮಾನೆ ಮಾಡಿದ್ದಾರೋ ಎಂಬುದರ ಬಗ್ಗೆ ಇಲಾಖಾ ವಿಚಾರಣೆಯಾಗಬೇಕಿದೆ. ಈ ಕುರಿತು ಜಿಲ್ಲಾಧಿಕಾರಿಗಳ ಗಮನ ಸೆಳೆದಿದ್ದು ಈ ಪ್ರಕರಣ ಕುರಿತು ಗಮನ ಹರಿಸಿ ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ಸದ್ಯ ಜಿಲ್ಲೆಯಲ್ಲಿ ಇದೇ ವಿಚಾರ ತೀವ್ರ ಚರ್ಚೆಯಾಗುತ್ತಿದೆ. ಶಿಕ್ಷಣ ಇಲಾಖೆಯಲ್ಲಿ ಚಿತ್ರಕಲಾ ಶಿಕ್ಷಕರಿಂದ ಹಣ ವಸೂಲಿ ಮಾಡುತ್ತಿರೋ ಆರೋಪ ಕೇಳಿ ಬಂದಿದೆ. ನೂಡಲ್ ಅಧಿಕಾರಿಯೇ ಅಲ್ಲದ ಚಿತ್ರಕಲಾ ಶಿಕ್ಷಕ ಮಂಜುನಾಥ ಮಾನೆ ಮತಗಟ್ಟೆಗಳ ಅಂದಚೆಂದ ಮಾಡಿರೋ ಚಿತ್ರಕಲಾ ಶಿಕ್ಷಕರಿಂದ ಹಣ ವಸೂಲಿ ಮಾಡುತ್ತಿರೋ ಆರೋಪ ದಟ್ಟವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಗಮನ ಹರಿಸಬೇಕಿದೆ. ಯಾರೇ ತಪ್ಪು ಮಾಡಿದ್ದರೂ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕಿದೆ. ಶಾಂತಿ ಸುವ್ಯವಸ್ಥೆ ಚುನಾವಣೆ ಮಾಡಿ ಸೈ ಎನಿಸಿಕೊಂಡಿದ್ದು ಈ ಘಟನೆಯಿಂದ ಚರ್ಚೆಗೀಡಾಗುವಂತಾಗಿದೆ.

ವರದಿ: ಅಶೋಕ ಯಡಳ್ಳಿ, ಟಿವಿ9, ವಿಜಯಪುರ

ತಾಜಾ ಸುದ್ದಿ

Related Stories

Click on your DTH Provider to Add TV9 Kannada