ಬೆಂಗಳೂರು: ಮಹಾಶಿವರಾತ್ರಿಯ ಪ್ರಯುಕ್ತ ಇಂದು ರಾಜ್ಯದ ರಾಜಕೀಯ ನಾಯಕರು ದೇವಸ್ಥಾನಕ್ಕೆ ತೆರಳಿ ಈಶ್ವರನ ದರ್ಶನ ಪಡೆದರು. ಅಂತೆಯೇ, ಹಬ್ಬದ ಪ್ರಯುಕ್ತ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನಗರದ ಚಾಮರಾಜಪೇಟೆಯಲ್ಲಿರುವ ದೇವಸ್ಥಾನಕ್ಕೆ ಭೇಟಿಕೊಟ್ಟರು. ಚಾಮರಾಜಪೇಟೆಯ ಮಲೆ ಮಹದೇಶ್ವರ ದೇವಸ್ಥಾನಕ್ಕೆ ಸಿದ್ದರಾಮಯ್ಯ ಭೇಟಿ ನೀಡಿ ದೇವರ ದರ್ಶನ ಪಡೆದರು.
ಅಂದ ಹಾಗೆ, ಸಿದ್ದರಾಮಯ್ಯ ಪ್ರತಿ ವರ್ಷ ಶಿವರಾತ್ರಿ ಹಬ್ಬದಂದು ಇದೇ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈ ಬಾರಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಸಿದ್ದರಾಮಯ್ಯಗೆ ಸಾಥ್ ನೀಡಿದರು.
‘ಜನ ಸುಖ-ಶಾಂತಿಯಿಂದ ನೆಲೆಸುವಂತೆ ಮಾಡಲಿ ಎಂದು ಪ್ರಾರ್ಥನೆ ಮಾಡಿದ್ದೇನೆ’
ಈ ಸಲ, ವಿಪಕ್ಷ ನಾಯಕ ಸಿದ್ದರಾಮಯ್ಯ ದೇವರಿಗೆ ಜೋಡಿ ತೆಂಗಿನಕಾಯಿಯ ಆರತಿ ಬೆಳಗಿದರು. ಬಳಿಕ, ಮಾದಪ್ಪನ ಹಾಡಿಗೆ ತಾಳ ಸಹ ಹೊಡೆದರು. ಪೂಜೆ ನಂತರ ಮಾತನಾಡಿದ ಸಿದ್ದರಾಮಯ್ಯ ಪ್ರತಿವರ್ಷವೂ ಶಿವರಾತ್ರಿ ದಿನ ನಾನು ಮಲೆ ಮಹದೇಶ್ವರನ ದರ್ಶನಕ್ಕೆ ಬರ್ತೀನಿ. ದೇವಸ್ಥಾನಕ್ಕೆ ಬಂದು ದರ್ಶನ ಮಾಡಿಕೊಂಡು ಹೋಗ್ತೀನಿ ಎಂದು ಹೇಳಿದರು. ರಾಜ್ಯದ ಜನತೆಗೆ ಒಳ್ಳೇದಾಗಲಿ. ಒಳ್ಳೇ ಮಳೆ-ಬೆಳೆ ಆಗಿ ಜನ ಸುಖ-ಶಾಂತಿ ಹಾಗೂ ಸಮೃದ್ಧಿಯಿಂದ ನೆಲೆಸುವಂತೆ ಮಾಡಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಅಂತಾ ಸಿದ್ದರಾಮಯ್ಯ ಹೇಳಿದರು.
ಕಾಡು ಮಲ್ಲೇಶ್ವರಸ್ವಾಮಿ ದೇವಾಲಯಕ್ಕೆ ಸಿಎಂ BSY ಭೇಟಿ
ಅತ್ತ, ಮಲ್ಲೇಶ್ವರಂನಲ್ಲಿರುವ ಕಾಡು ಮಲ್ಲೇಶ್ವರಸ್ವಾಮಿ ದೇವಾಲಯಕ್ಕೆ ಸಿಎಂ B.S.ಯಡಿಯೂರಪ್ಪ ಭೇಟಿಕೊಟ್ಟರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಸಿಎಂ ಬಿಎಸ್ವೈ ಕಾಡು ಮಲ್ಲೇಶ್ವರಸ್ವಾಮಿಯ ದರ್ಶನ ಪಡೆದರು.
ಕಾಡು ಮಲ್ಲೇಶ್ವರನ ದರ್ಶನದ ಬಳಿಕ ಮಾತನಾಡಿದ ಸಿಎಂ ಒಳ್ಳೆಯ ಮಳೆ, ಬೆಳೆಯಾಗಿ ಜನರು ನೆಮ್ಮದಿಯಿಂದ ಜೀವನ ನಡೆಸಲಿ ಎಂದು ಪ್ರಾರ್ಥಿಸಿದ್ದೇನೆ. ಕೊರೊನಾ ಹಿನ್ನೆಲೆ ಜನ ಬಿಗಿಯಾದ ಕ್ರಮ ತೆಗೆದುಕೊಳ್ಳಬೇಕು. ಜನ ಎಚ್ಚರ ವಹಿಸಬೇಕು. ಮಾಸ್ಕ್, ದೈಹಿಕ ಅಂತರ ಕಾಪಾಡಬೇಕೆಂದು ಬೇಡಿಕೊಳ್ಳುವೆ. ಕೈಮುಗಿದು ಬೇಡಿಕೊಳ್ಳುತ್ತೇನೆಂದು ಸಿಎಂ ಯಡಿಯೂರಪ್ಪ ಹೇಳಿದರು.
ಶಿವರಾತ್ರಿಯಂದು ಮನೆ ದೇವರ ದರ್ಶನ ಮಾಡಿದ ದೊಡ್ಡಗೌಡರು
ಅತ್ತ, ಹಾಸನದಲ್ಲಿ ಶಿವರಾತ್ರಿಯ ಪ್ರಯುಕ್ತ ತಮ್ಮ ಮನೆ ದೇವರಾದ ದೇವೇಶ್ವರನ ದರ್ಶನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಆಗಮಿಸಿದರು. ದೇವರಿಗೆ ವಿಶೇಷ ಪೂಜೆ ಸಹ ಸಲ್ಲಿಸಿದರು.
ದೇವರ ದರ್ಶನದ ಬಳಿಕ ಮಾತನಾಡಿದ ದೇವೇಗೌಡ ಮುಂದಿನ ವರ್ಷ ನನ್ನ ಆರೋಗ್ಯ ಸ್ಥಿತಿ ಹೇಗಿರುತ್ತೋ ಗೊತ್ತಿಲ್ಲ. ಹೀಗಾಗಿ, ಈ ಬಾರಿ ದರ್ಶನ ಪಡೆಯೋಣ ಎಂದು ಬಂದಿದ್ದೇನೆ. ಪ್ರಯಾಣ ಮಾಡದಂತೆ ನನಗೆ ವೈದ್ಯರು ಸಲಹೆ ನೀಡಿದ್ದಾರೆ. ತುಂಬಾ ಜ್ವರ ಬಂದಿದೆ, ದೆಹಲಿಯಲ್ಲಿ ಚಿಕಿತ್ಸೆ ಪಡೆದಿದ್ದೆ. ಆರಾಮಾಗಿ ನಡೆದಾಡುತ್ತಿದ್ದೆ, ಈಗ ಅಷ್ಟೊಂದು ಶಕ್ತಿ ಇಲ್ಲ ಎಂದು ಹೇಳಿದರು.
ಇನ್ನು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮೇಲೆ ಹಲ್ಲೆ ಆರೋಪ ವಿಚಾರವಾಗಿ ಅವರಿಗೆ ಈ ರೀತಿ ಆಗಬಾರದಿತ್ತು. ಎಡಗಾಲಿಗೆ ಪೆಟ್ಟು ಬಿದ್ದಿದೆ ಎಂದು ತಿಳಿದಿದ್ದೇನೆ. ರಾಜಕೀಯದಲ್ಲಿ ಸೋಲು ಗೆಲುವು ಸಾಮಾನ್ಯ. ಇಂತಹ ಮಟ್ಟಕ್ಕೆ ರಾಜಕೀಯ ಪರಿಸ್ಥಿತಿ ಹೋಗಬಾರದು ಎಂದು ಬೇಸರ ವ್ಯಕ್ತಪಡಿಸಿದರು.
ನಾನು ನಂದಿಗ್ರಾಮದಲ್ಲೇ ಸ್ಪರ್ಧಿಸುತ್ತೇನೆ ಎಂದು ಅವರು ಪಣತೊಟ್ಟಿದ್ದಾರೆ. ಅವರ ಎದುರಾಳಿಗಳು ನಡೆದುಕೊಂಡ ರೀತಿ ಖಂಡನೀಯ. ಅವರು ಬೇಗ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಸಾಮಾನ್ಯ. ಕೂಡಲೇ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡಿದರು.
ಹರದನಹಳ್ಳಿ ದೇವೇಶ್ವರನಿಗೆ HDKಯಿಂದ ವಿಶೇಷ ಪೂಜೆ ಸಲ್ಲಿಕೆ
ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮನೆದೇವರ ದರ್ಶನ ಪಡೆದರು.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿರುವ ತಮ್ಮ ಹುಟ್ಟೂರಿನ ಹರದನಹಳ್ಳಿ ದೇವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಮೈಸೂರಿನಿಂದ ಆಗಮಿಸಿ ಪೂಜೆ ಸಲ್ಲಿಸಿದರು.
ಇದನ್ನೂ ಓದಿ: TV9 Kannada Anchor Anand Burali | ಟಿವಿ9 ನಿರೂಪಕ ಆನಂದ ಬುರಲಿಗೆ ಮಹಾಂತಶ್ರೀ ಪ್ರಶಸ್ತಿ
Published On - 7:16 pm, Thu, 11 March 21