ಮೈಸೂರು ಬೆಂಗಳೂರು ಎಕ್ಸ್​ಪ್ರೆಸ್ ವೇಯಲ್ಲಿ ತಪ್ಪಿತು ಭಾರೀ ದುರಂತ; ಸಿಸಿಟಿವಿಯಲ್ಲಿ ಸೆರೆಯಾಯ್ತು ಅಪಘಾತದ ದೃಶ್ಯ

| Updated By: ಗಣಪತಿ ಶರ್ಮ

Updated on: Jul 14, 2023 | 3:16 PM

ಕಂಟೇನರ್ ಟ್ರಕ್ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಎದುರಿನ ಲೇನ್ ಪ್ರವೇಶಿಸಿದೆ. ಮತ್ತೂ ಮುಂದುವರಿದು ಹೆದ್ದಾರಿ ಮತ್ತು ಸರ್ವಿಸ್ ರಸ್ತೆಯನ್ನು ಬೇರ್ಪಡಿಸುವ ತಡೆಗೋಡೆ ಮೇಲೆ ನಿಂತಿತ್ತು.

ರಾಮನಗರ: ಬೆಂಗಳೂರು ಮೈಸೂರು ಎಕ್ಸ್​​​​ಪ್ರೆಸ್​ ವೇಯಲ್ಲಿ (Bengaluru Mysuru Expressway) ಭಾರಿ ಗಾತ್ರದ ಕಂಟೇನರ್ ಟ್ರಕ್ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಯವುದೇ ಸಾವು-ನೋವು ಸಂಭವಿಸಿಲ್ಲ. ಆದರೆ, ಅಪಘಾತದ ತೀವ್ರತೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವೇಗವಾಗಿ ಸಾಗುತ್ತಿದ್ದ ಭಾರಿ ಕಂಟೇನರ್ ಟ್ರಕ್ ಚಾಲಕನ ನಿಯಂತ್ರಣ ತಪ್ಪಿದ ಡಿವೈಡರ್ ಅನ್ನು ದಾಟಿ ಎದುರಿನ ಲೇನ್ ಪ್ರವೇಶಿಸಿತು. ನಂತರ ತಡೆಗೋಡೆಗೆ ಗುದ್ದಿ ಸರ್ವೀಸ್​ ರಸ್ತೆಗೆ ವಾಲಿದೆ. ರಾಮನಗರ ಜಿಲ್ಲೆಯಲ್ಲಿ ಜುಲೈ 12 ರಂದು ಈ ಘಟನೆ ನಡೆದಿದ್ದು, ಸಿಸಿಟಿವಿ ದೃಶ್ಯಾವಳಿ ಈಗ ಬಿಡುಗಡೆಗೊಂಡಿದೆ.

ಹೆದ್ದಾರಿ ಪಕ್ಕದ ಅಂಗಡಿಯೊಂದರಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಅಪಘಾತದ ದೃಶ್ಯ ಸೆರೆಯಾಗಿತ್ತು.

ಕಂಟೇನರ್ ಟ್ರಕ್ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಎದುರಿನ ಲೇನ್ ಪ್ರವೇಶಿಸಿದೆ. ಮತ್ತೂ ಮುಂದುವರಿದು ಹೆದ್ದಾರಿ ಮತ್ತು ಸರ್ವಿಸ್ ರಸ್ತೆಯನ್ನು ಬೇರ್ಪಡಿಸುವ ತಡೆಗೋಡೆ ಮೇಲೆ ನಿಂತಿತ್ತು.

ಅದೃಷ್ಟವಶಾತ್ ಎದುರಿನ ಲೇನ್​​ನಲ್ಲಿ ರಸ್ತೆಯಲ್ಲಿ ಆ ಕ್ಷಣ ಯಾವುದೇ ವಾಹನ ಬಾರದ ಕಾರಣ ಭಾರಿ ಅನಾಹುತ ತಪ್ಪಿದೆ. ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆ ನೀಡಲಾಗಿದೆ.

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಸಣಕಲಗೆರೆ ಗ್ರಾಮದಲ್ಲಿ ಜುಲೈ 12 ರಂದು ಮಧ್ಯಾಹ್ನ 1:06 ಕ್ಕೆ ಈ ಘಟನೆ ನಡೆದಿದೆ. ಚಾಲಕನ ವಿರುದ್ಧ ಚನ್ನಪಟ್ಟಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Bengaluru-Mysuru Expressway: ಉದ್ಘಾಟನೆಯಾದಗಿನಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಸಂಭವಿಸಿದ ಅಪಘಾತಗಳೆಷ್ಟು? ಇಲ್ಲಿದೆ ಅಂಕಿ-ಅಂಶ

ಬೆಂಗಳೂರು ಮತ್ತು ಮೈಸೂರನ್ನು ಸಂಪರ್ಕಿಸುವ ಆರು ಪಥಗಳ ಎತ್ತರವನ್ನು ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.

ಆ ಬಳಿಕ ಈ ಹೆದ್ದಾರಿ ಹಲವಾರು ಅಪಘಾತಗಳಿಗೆ ಸಾಕ್ಷಿಯಾಗಿದ್ದು, ಸೋಮವಾರ ವಿಧಾನಸಭೆಯಲ್ಲಿ ಪ್ರತಿಪಕ್ಷ ಬಿಜೆಪಿ ಈ ವಿಷಯವನ್ನು ಪ್ರಸ್ತಾಪಿಸಿದೆ. ಹೆದ್ದಾರಿಯಲ್ಲಿ ಜೂನ್ 30 ರವರೆಗೆ 100 ಜನರು ಸಾವನ್ನಪ್ಪಿದ್ದಾರೆ ಮತ್ತು 335 ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರ ತನ್ನ ಉತ್ತರದಲ್ಲಿ ತಿಳಿಸಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ (ಎನ್‌ಎಚ್‌ಎಐ) ಸುರಕ್ಷತಾ ಲೆಕ್ಕಪರಿಶೋಧನಾ ವರದಿಯನ್ನು ಕೇಳಲಾಗಿದೆ ಎಂದು ಸರ್ಕಾರ ಹೇಳಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:08 pm, Thu, 13 July 23