ಪ್ರೀತಿಸುವಂತೆ ಫ್ಯಾಷನ್​ ಡಿಸೈನರ್​ಗೆ ಟಾರ್ಚರ್​: ಪರಿಚಯಸ್ಥನ ವಿರುದ್ಧವೇ ಮಹಿಳೆ ದೂರು

ಪ್ರೀತಿಸುವಂತೆ ಎರಡು ಮಕ್ಕಳ ತಾಯಿಯ ಹಿಂದೆ ಬಿದ್ದು, ಕೊಲೆ ಬೆದರಿಕೆಯನ್ನೂ ಹಾಕಿರುವ ಆರೋಪದ ಹಿನ್ನಲೆ ವ್ಯಕ್ತಿಯೋರ್ವನ ವಿರುದ್ಧ ದೂರು ದಾಖಲಾಗಿದೆ. ಮೊದ ಮೊದಲು ಮಗಳಿಗೆ ಗಂಡು ನೋಡು ಎಂದಿತ್ತಾತ, ಆಮೇಲೆ ನಾನು ನಿನ್ನ ಪ್ರೀತಿಸುತ್ತೇನೆ. ನೀನೂ ನನ್ನ ಪ್ರೀತಿಸು ಎಂದು ಸಂತ್ರಸ್ತೆಗೆ ಟಾರ್ಚರ್​ ಮಾಡಿದ್ದ. ಆಕೆಯ ಮೇಲೆ ಹಲ್ಲೆಯನ್ನೂ ನಡೆಸಿದ್ದ ಎಂದು ಆರೋಪಿಸಲಾಗಿದೆ.

ಪ್ರೀತಿಸುವಂತೆ ಫ್ಯಾಷನ್​ ಡಿಸೈನರ್​ಗೆ ಟಾರ್ಚರ್​: ಪರಿಚಯಸ್ಥನ ವಿರುದ್ಧವೇ ಮಹಿಳೆ ದೂರು
ಆರೋಪಿ ಸಂತೋಷ್​ ರೆಡ್ಡಿ
Updated By: ಪ್ರಸನ್ನ ಹೆಗಡೆ

Updated on: Oct 26, 2025 | 3:04 PM

ಬೆಂಗಳೂರು, ಅಕ್ಟೋಬರ್​ 26: ಪ್ರೀತಿಸುವಂತೆ ಎರಡು ಮಕ್ಕಳ ತಾಯಿಯ ಹಿಂದೆ ಬಿದ್ದು, ಕೊಲೆ (Murder) ಬೆದರಿಕೆಯನ್ನೂ ಹಾಕಿರುವ ಆರೋಪದ ಹಿನ್ನಲೆ ಸಂತೋಷ್ ರೆಡ್ಡಿ ಎಂಬಾತನ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತನ್ನ ಮಗಳ ಮೂಲಕ ಸಂತ್ರಸ್ತ ಯುವತಿಯ ಪರಿಚಯ ಸಂತೋಷ್ ರೆಡ್ಡಿಗೆ ಆಗಿತ್ತು. ಆರಂಭದಲ್ಲಿ ಮಗಳಿಗೆ ಹೆಣ್ಣು ನೋಡು ಎಂದು ಹೇಳಿದ್ದಾತ, ಬಳಿಕ ತನ್ನನ್ನು ಪ್ರೀತಿಸುವಂತೆ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಸಂತ್ರಸ್ತ ಮಹಿಳೆ ಫ್ಯಾಷನ್​ ಡಿಸೈನರ್​ ಆಗಿದ್ದು, ತನ್ನ ಕಸೀನ್​ ಮದುವೆಗೆ ಕುರ್ತಾ ಡಿಸೈನ್​ ಮಾಡಿಕೊಡುವಂತೆ ಸಂತೋಷ್ ರೆಡ್ಡಿ ಪುತ್ರಿ ಭಾವನ್ಯಾ ಕರೆ ಮಾಡಿದ್ದರು. ಮಗಳ ಕಾಂಟ್ಯಾಕ್ಟ್​ ಬಳಸಿಕೊಂಡು ಆರೋಪಿ ಸಂತ್ರಸ್ತೆಯ ಸಂಪರ್ಕಕ್ಕೆ ಬಂದಿದ್ದ. ಈ ಪರಿಚಯ ಸ್ನೇಹಕ್ಕೆ ತಿರುಗಿ ಕುಟುಂಬದ ಸ್ನೇಹಿತನ ರೀತಿ ಸಂತೋಷ್​ ರೆಡ್ಡಿ ಇದ್ದ. ಆರಂಭದಲ್ಲಿ ಸಂತ್ರಸ್ತೆಯ ಕಂಪನಿಗೆ ಇನ್ವೆಸ್ಟ್​ ಮಾಡುತ್ತೇನೆ ಎಂದೂ ಆತ ಹೇಳಿದ್ದು, ಇದಕ್ಕೆ ಆಕೆಯ ಮನೆಯವರು ಒಪ್ಪಿರಲಿಲ್ಲ. ಇದಾದ ಬಳಿಕ ತನ್ನ ಮಗಳು ಭಾವನ್ಯಾಗೆ ಗಂಡು ನೋಡಿ ಎಂದೂ ಸಂತ್ರಸ್ತೆಗೆ ಹೇಳಿದ್ದ. ಹೀಗಿರುವಾಗ ಇನ್ನೊಂದು ದಿನ ಕರೆ ಮಾಡಿ, ಮಗಳು ಭಾವನ್ಯಾ ನನ್ನ ಜೊತೆ ಮಾತನಾಡುತ್ತಿಲ್ಲ, ತನ್ನನ್ನು ಬಿಟ್ಟು ಹೋಗಿದ್ದಾಳೆ. ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣ ತೆಗೆದುಕೊಂಡು ಹೋಗಿದ್ದಾಳೆಂದು ಅಲವತ್ತುಕೊಂಡಿದ್ದ. ಹೀಗಾಗಿ ಆತನನ್ನು ಸಂತ್ರಸ್ತೆ ಸಮಾಧಾನ ಪಡಿಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ:  4 ಮಕ್ಕಳ ತಾಯಿ ಸಲ್ಮಾ ಕೊಲೆ ಪ್ರಕರಣಕ್ಕೆ ಹೊಸ ತಿರುವು; ದುಷ್ಕರ್ಮಿಗಳ ಕೊಲೆ ಸಂಚು ಹೇಗಿತ್ತು ಗೊತ್ತಾ?

ಕೊಲೆ ಬೆದರಿಕೆ

ಇದಾದ ಬಳಿಕ ಆತ ವೈಯಾಲಿಕಾವಲ್​ನಲ್ಲಿರುವ ಸಂತ್ರಸ್ತೆ ಮನೆಗೆ ಬಂದಿದ್ದು, ನಿಮ್ಮ ಸಹಾಯಬೇಕೆಂದು ಭಾವನಾತ್ಮಕವಾಗಿ ಮಾತನಾಡಿದ್ದ. ಈ ವೇಳೆಯೂ ಸಂತ್ರಸ್ತೆ ಆತನನ್ನು ಸಮಾಧಾನಪಡಿಸಿದ್ದು, ಮಾತನಾಡುತ್ತ ಏಕಾಏಕಿ ನಿನ್ನನ್ನ ನಾನು ಪ್ರೀತಿ ಮಾಡುತ್ತಿದ್ದೇನೆ, ನೀನು ಕೂಡ ಪ್ರೀತಿಸಬೇಕು ಎಂದು ಆತ ಗೋಗರೆದಿದ್ದಾನೆ. ಸಂತ್ರಸ್ತೆ ಇದನ್ನು ನಿರಾಕರಿಸಿದ ಕಾರಣ, ಆಕೆ ಮೇಲೆ ಹಲ್ಲೆ ನಡೆಸಿದ್ದಾನೆ. ಕೊಲ್ಲುವ ಬೆದರಿಕೆಯನ್ನೂ ಹಾಕಿದ್ದಾನೆ. ಇದಾದ ಬಳಿಕ ವಾಟ್ಸ್ಯಾಪ್​ ಮೂಲಕ ಮತ್ತೆ ಬೆದರಿಕೆ ಹಾಕಿದ್ದು, ನೀನು ಲವ್ ಮಾಡಿಲ್ಲ ಅಂದ್ರೆ ನಿನ್ನಿಬ್ಬರು ಮಕ್ಕಳನ್ನ ಕೊಂದು ನಿನ್ನನ್ನೂ ಕೊಲ್ಲುತ್ತೇನೆ ಎಂದು ಸಂತೋಷ್​ ರೆಡ್ಡಿ ತಿಳಿಸಿರೋದಾಗಿ ಸಂತ್ರಸ್ತೆ ಆರೋಪಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:05 pm, Sun, 26 October 25