ಬೆಂಗಳೂರು, (ಆಗಸ್ಟ್ 07): ಮಂಡ್ಯ ಜಿಲ್ಲೆಯ ಕೆಎಸ್ಆರ್ಟಿಸಿ (KSRTC) ಬಸ್ ನಿರ್ವಾಹಕ ವರ್ಗಾವಣೆ ಸಂಬಂಧ ಆತ್ಮಹತ್ಯೆ ಯತ್ನ ಪ್ರಕರಣ ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಈ ಪ್ರಕರಣದಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ(n chaluvaraya swamy )ಹೆಸರು ಕೇಳಿಬಂದಿದ್ದು, ವಿಪಕ್ಷಗಳು ಅವರ ರಾಜೀನಾಮೆಗೆ ಪಟ್ಟು ಹಿಡಿದಿದ್ದವು. ಇದರ ಬೆನ್ನಲ್ಲೇ ಇದೀಗ ಚಲುವರಾಯಸ್ವಾಮಿ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಹೌದು…ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಲಂಚ(Bribe) ಆರೋಪ ಕೇಳಿಬಂದಿದ್ದು, ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಲಾಗಿದೆ.
ಇದನ್ನೂ ಓದಿ: ನನಗೆ ಮತ ಹಾಕದವರಿಗೆ ಸಹಿ ಕೂಡ ಮಾಡಲ್ಲ ಎಂದ ಸಚಿವ ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು
ಮಂಡ್ಯ, ಮಳವಳ್ಳಿ, ಕೃಷ್ಣರಾಜಪೇಟೆ, ಪಾಂಡವಪುರ, ನಾಗಮಂಗಲ, ಶ್ರೀರಂಗಪಟ್ಟಣ, ಮದ್ದೂರಿನ ಸಹಾಯಕ ಕೃಷಿ ಅಧಿಕಾರಿಗಳು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದ್ದಾರೆ. 6 ರಿಂದ 8 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಕೃಷಿ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಲಂಚಕ್ಕೆ ಕಡಿವಾಣ ಹಾಕದಿದ್ದರೆ ವಿಷ ಕುಡಿಯುವುದಾಗಿ ದೂರಿನ ಪತ್ರದಲ್ಲಿಉಲ್ಲೇಖಿಸಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯಪಾಲರು ಈ ಬಗ್ಗೆ ಸರ್ಕಾರ ಮುಖ್ಯಕಾರ್ಯದರ್ಶಿ ಪತ್ರ ಬರೆದಿದ್ದು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ರಾಜ್ಯಪಾಲರ ಅಧೀನ ಕಾರ್ಯದರ್ಶಿ ಪ್ರದೀಪ್ ಸೂಚಿಸಿದ್ದಾರೆ.
ಇನ್ನು ತಮ್ಮ ದೂರಿನ ವಿರುದ್ಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ಕೃಷಿ ಜಂಟಿ ನಿರ್ದೇಶಕರ ಜತೆ ಈಗಷ್ಟೇ ಮಾತನಾಡಿದ್ದೇನೆ. ಇದೊಂದು ಫೇಕ್ ಲೆಟರ್ ಎಂಬ ಮಾಹಿತಿ ನೀಡಿದ್ದಾರೆ. ಪಾಪ ಬಹಳ ಹುಡುಕಿ ಹುಡುಕಿ ಏನೇನೋ ಮಾಡ್ತಿದ್ದಾರೆ . ಜೆಡಿ ಅವರು ನಾನು ಯಾರ ಬಳಿ ಹಣ ಕೇಳಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ತನಿಖೆ ಮಾಡಿಸುತ್ತೇವೆ. ಮೊದಲು ಇದು ಸತ್ಯನಾ, ಅಸತ್ಯಾನ ಎಂದು ತಿಳಿದು ತನಿಖೆ ಮಾಡಿಸುತ್ತೇವೆ, ತಿಂಡಿ, ಊಟ ಮಾಡದೇ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಅದರ ಬಗ್ಗೆ ಬೇಜಾರು ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 10:19 am, Mon, 7 August 23