ಮೈಸೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ, ಜೆಡಿಎಸ್ ಸಮರ ಮುಂದುವರೆದಿದೆ. ಸರಿಯಾದ ವ್ಯವಸ್ಥೆ ಮಾಡದ ಹಿನ್ನೆಲೆ ನಾಲೆ ದುರಸ್ತಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡದೆ ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ(Sumalatha Ambareesh) ವಾಪಸ್ ಆಗಿದ್ದಾರೆ. ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಚೌಕಹಳ್ಳಿ ಗ್ರಾಮದಲ್ಲಿಂದು ರಸ್ತೆ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪೂಜೆಗೆ ಸಂಸದೆ ಸುಮಲತಾ ಕೂಡ ಬಂದಿದ್ದರು. ಆದ್ರೆ ಸರಿಯಾಗಿ ಶಾಮಿಯಾನ, ಚೇರ್ ವ್ಯವಸ್ಥೆ ಮಾಡದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮ ಸ್ಥಳದಲ್ಲಿ ಸರಿಯಾಗಿ ಯಾವುದೇ ವ್ಯವಸ್ಥೆ ಮಾಡದಿದ್ದಕ್ಕೆ ಅಧಿಕಾರಿಗಳ ವಿರುದ್ಧ ಸಂಸದೆ ಸುಮಲತಾ ಕೆಂಡಾಮಂಡಲರಾಗಿದ್ದಾರೆ. ಜೆಡಿಎಸ್ನ ಸಾ.ರಾ.ಮಹೇಶ್ ಪ್ರತಿನಿಧಿಸುವ K.R.ನಗರ ಕ್ಷೇತ್ರದ ಕಾರ್ಯಕ್ರಮದಲ್ಲೇ ಇಂತಹ ವ್ಯವಸ್ಥೆ ಕಂಡು ನಿಗದಿಯಾಗಿದ್ದ ಗುದ್ದಲಿ ಪೂಜೆ ನೆರವೇರಿಸದೆ ಸುಮಲತಾ ತೆರಳಿದ್ದಾರೆ.
ಕೇಂದ್ರ ಸರ್ಕಾರದ ಸಂಸದರ ನಿಧಿಯಿಂದ ನಾಲಾ ದುರಸ್ತಿ ಕಾಮಗಾರಿ ಕಾರ್ಯ ಕೈಗೊಳ್ಳಲಾಗಿತ್ತು. ಆದ್ರೆ ಕಾರ್ಯಕ್ರಮದಲ್ಲಿ ಸರಿಯಾದ ವ್ಯವಸ್ಥೆ ಮಾಡದಿದ್ದದಕ್ಕೆ ಕಾರ್ಯಪಾಲಕ ಅಭಿಯಂತರ ಬಿ.ಜೆ.ಈರಣ್ಣ, ಎಇಇ ಗುರುರಾಜ್ ಹಾಗೂ ಇಂಜಿನಿಯರ್ ಅಭಿಲಾಷ್ಗೆ ಸಂಸದೆ ಸುಮಲತಾ ತೀವ್ರ ತರಾಟೆಗೆ ತಗೊಂಡಿದ್ದಾರೆ. ಕುಶಾಲನಗರ ವೃತ್ತ ಅಧೀಕ್ಷಕ ಇಂಜಿನಿಯರ್ ಚನ್ನಕೇಶವಗೆ ಕರೆ ಮಾಡಿ ಸಂಸದರಿಗೆ ಅಗೌರ ತೋರಿಸುತ್ತಿದ್ದೀರಿ, ಶಿಸ್ತುಬದ್ಧ ವ್ಯವಸ್ಥೆ ಮಾಡಿಲ್ಲ. ಸಂಸದರ ಕಾರ್ಯಕ್ರಮಕ್ಕೆ ಪ್ರತಿ ಬಾರಿಯೂ ಹೀಗೆ ಮಾಡುತ್ತಿದ್ದೀರಿ. ನಿಮ್ಮ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ದೂರು ನೀಡುವೆ. ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸೂಚಿಸುವೆ ಎಂದು ಸಂಸದೆ ಸುಮಲತಾ ಎಚ್ಚರಿಕೆ ನೀಡಿದ್ದಾರೆ.
ಗ್ರಾಮದ ಮಹಿಳೆಯರನ್ನು ಸೇರಿಸಿ ಸಂಸದೆ ಗುದ್ದಲಿ ಪೂಜೆ
ಇನ್ನು ಇಷ್ಟೆಲ್ಲ ಆದ ಬಳಿಕ ಮಂಡ್ಯ ಸಂಸದೆ ಸುಮಲತಾ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಿಕಿ ನಡೆದಿದೆ. ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ತಲುಪಿದೆ. ಈ ವೇಳೆ ಜೆಡಿಎಸ್ ಕಾರ್ಯಕರ್ತರು ಸಂಸದೆ ಸುಮಲತಾ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಜೈಕಾರ ಹೋಗಿದ್ದಾರೆ. 50 ಲಕ್ಷ ವೆಚ್ಚದ ನೀರಾವರಿ ಇಲಾಖೆ ಕಾಮಗಾರಿ ಪೂಜೆ ಇದಾಗಿದ್ದು ಚರಂಡಿ, ಸಿಮೆಂಟ್ ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನಡೆಯಬೇಕಿತ್ತು. ಸದ್ಯ ನಮ್ಮ ಶಾಸಕ ಸಾ.ರಾ.ಮಹೇಶ್ ಅವರನ್ನು ಬಿಟ್ಟು ನೀವು ಒಬ್ಬರೆ ಗುದ್ದಲಿ ಪೂಜೆ ಮಾಡಲು ಬಿಡಲ್ಲ ಎಂದು ವಿರೋಧ ವ್ಯಕ್ತವಾಗುತ್ತಿದ್ದಂತೆ ಪ್ರೋಟೋ ಕಾಲ್ ನಿಯಮಗಳನ್ನು ಗಾಳಿಗೆ ತೂರಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡು ಗ್ರಾಮದ ಮಹಿಳೆಯರನ್ನು ಸೇರಿಸಿ ಸಂಸದೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.
ನಾನು ಮಾಡಿದ ಕೆಲಸ ಮಾಡಿಲ್ಲ ಅಂದರೆ ನಾನು ಸುಮ್ಮನಿರಲ್ಲ
ಮಂಡ್ಯದಲ್ಲಿ ಕೆಲಸಕ್ಕಿಂತ ಕ್ರೆಡಿಟ್‌ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನಾನು ಮಾಡಿರುವುದನ್ನು ಇಲ್ಲ ಅಂದಾಗ ಸುಮ್ಮನಿರಲು ಸಾಧ್ಯವಿಲ್ಲ. ಜನ ವಿಶ್ವಾಸ ಇಟ್ಟು ನನ್ನನ್ನು ಆಯ್ಕೆ ಮಾಡಿದ್ದಾರೆ. ಕ್ರೆಡಿಟ್ ತೆಗೆದುಕೊಳ್ಳಲು ನಾನು ಮಾಡಲ್ಲ. ನಿಜ ಹೇಳಲು ಭಯ ಏಕೆ? ಕ್ರೆಡಿಟ್ ವಾರ್ ಯಾರು ಆರಂಭಿಸುತ್ತಾರೋ ಅವರು ಅವರ ಜವಾಬ್ದಾರಿ ಬಗ್ಗೆ ನೋಡಿಕೊಳ್ಳಬೇಕು. ಸಂಸದರ ಕ್ರೆಡಿಟ್ ಪಡೆಯುವುದಕ್ಕೆ ಏಕೆ ಬರುತ್ತಿದ್ದಾರೋ ಗೊತ್ತಿಲ್ಲ ಎಂದು ಮೈಸೂರಿನಲ್ಲಿ ಸಂಸದೆ ಸುಮಲತಾ ಹೇಳಿಕೆ ನೀಡಿದ್ದಾರೆ. ಶಿಂಷಾ ಸೇತುವೆ ವಿಚಾರ ನಾನು ಪ್ರತಿಭಟನಾ ಸ್ಥಳಕ್ಕೆ ಹೋಗಿದ್ದೇನೆ. ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದೇನೆ. ನಾಲ್ಕು ಬಾರಿ ಅವರನ್ನು ಭೇಟಿ ಮಾಡಿದ್ದೇನೆ. ಆಯಾ ಕ್ಷೇತ್ರದ ಸಂಸದ ಆಯಾ ಕ್ಷೇತ್ರದ ಬಗ್ಗೆ ಕೇಳಿದರೆ ಪ್ರತಿಕ್ರಿಯೆ ಸಿಗುತ್ತದೆ. ಯಾರು ಬೇಕಾದರೂ ಪತ್ರ ಬರೆದಿರಬಹುದು. ಮಾಜಿ ಪ್ರಧಾನಿ ಅಥವಾ ಬೇರೆಯವರು ಬರೆದಿರಬಹುದು. ಅವರು ಏನು ಬರೆದಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ನನ್ನ ಕ್ಷೇತ್ರದ ವಿಚಾರವಾಗಿ ನಾನು ಕೆಲಸ ಮಾಡುತ್ತೇನೆ. ನಾನು ಮಾಡಿದ ಕೆಲಸ ಮಾಡಿಲ್ಲ ಅಂತಾ ಹೇಳಿದರೆ ನಾನು ಸುಮ್ಮನಿರಲ್ಲ. ಟಾರ್ಗೆಟ್ ಮಾಡುವುದು ಮೊದಲ ದಿನದಿಂದಲೂ ನಡೆದಿದೆ. ನನ್ನ ಜಿಲ್ಲೆಗೆ ಸಂಬಂಧಪಟ್ಟ ವಿಚಾರ ಮಾತ್ರ ನಾನು ಮಾತನಾಡುತ್ತೇನೆ. ನಾನು ಏನೇ ಮಾಡಿದರು ವಿರೋಧ ಮಾಡಬೇಕೆಂದು ಅವರು ನಿರ್ಧರಿಸಿದ್ದಾರೆ. ಎಲ್ಲದರಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ನಾನು ಕೆಲಸ ಮಾಡುತ್ತೇನೆ ಜನ ನನ್ನ ಪರ ಮಾತನಾಡುತ್ತಾರೆ ಅನ್ನೋ ಭಯ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅಭಿಷೇಕ್ ಅಂಬರೀಷ್ ರಾಜಕೀಯಕ್ಕೆ ಬರ್ತಾರಾ?; ಸುಮಲತಾ ಅಂಬರೀಷ್ ಹೇಳಿದ್ದಿಷ್ಟು
ಜಮ್ಮು ಕಾಶ್ಮೀರದ ಉಧಂಪುರದಲ್ಲಿ ಸ್ಫೋಟ; ಒಬ್ಬರು ಸಾವು, 13 ಜನರಿಗೆ ಗಾಯ
Published On - 3:13 pm, Wed, 9 March 22