ಮಂಡ್ಯ: ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕೃತಿ ನಗರಿ ಮೈಸೂರು ನಡುವಿನ ಸಂಚಾರದ ಸಮಯವನ್ನು ತಗ್ಗಿಸುವ ನಿಟ್ಟಿನಲ್ಲಿ ನಿರ್ಮಾಣ ಮಾಡಲಾಗಿರುವ ಎಕ್ಸ್‌ಪ್ರೆಸ್‌ವೇನಲ್ಲಿ (Bengaluru Mysuru Expressway) ಅಪಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಈ ಬಗ್ಗೆ ಸದನದಲ್ಲೂ ಚರ್ಚೆಯಾಯಿತು. ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತ ಸಂಖ್ಯೆ ಹೆಚ್ಚಳ ಹಿನ್ನೆಲೆ ಎನ್ಹೆಚ್ಐ (NHI) ಅಧಿಕಾರಿಗೆ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಕ್ಲಾಸ್ ತೆಗೆದುಕೊಂಡಿದ್ದಾರೆ. ಮಂಡ್ಯ ಜಿಲ್ಲಾ ಪಂಚಾಯತ್ನ ಕಾವೇರಿ ಸಭಾಂಗಣದಲ್ಲಿ ನಡೆದ ದಿಶಾ ಸಭೆಯಲ್ಲಿ ಮತನಾಡಿದ ಅವರು ದಿನೇ ದಿನೇ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಸರಿಯಾದ ಸರ್ವಿಸ್ ರಸ್ತೆಗಳಿಲ್ಲ. ಚರಂಡಿ ಕಾಮಗಾರಿಗಳು ಅಲ್ಲಲ್ಲಿ ಇನ್ನು ಬಾಕಿ ಇದೆ ಎಂದು ತರಾಟೆಗೆ ತೆಗೆದುಕೊಂಡರು.
ಅಲ್ಲದೇ ಇದರ ನಡುವೆ ದಿನೇ ದಿನೇ ಅಪಘಾತಗಳಾಗಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮೊನ್ನೆ ಚನ್ನಪಟ್ಟಣದ ಬಳಿ ಒಂದು ಟ್ರಕ್ನ ದೃಶ್ಯ ನೋಡಿದರೇ ಮೈ ನಡುಗಿಸುತ್ತೆ. ರಸ್ತೆ ಇರುವುದು ಜನರ ಅನುಕೂಲಕ್ಕೆ. ಜನರ ಪ್ರಾಣ ಕಳೆದುಕೊಳ್ಳುವುದಕ್ಕಲ್ಲ. ಆದಷ್ಟೂ ಬೇಗ ಹೆದ್ದಾರಿ ಸಮಸ್ಯೆಗಳನ್ನು ಸರಿಪಡಿಸಿ. ಇಲ್ಲವಾದರೆ ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇದಕ್ಕೆ ಉತ್ತರಿಸಿದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ರಾಹುಲ್ ಆದಷ್ಟು ಬೇಗ ಈ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸುತ್ತೇವೆ. ಇದಕ್ಕೆ ಪೂರಕವಾಗಿ ಪೊಲೀಸ್ ಇಲಾಖೆ ಸ್ಪಂದಿಸುತ್ತಿದೆ. ಅಪಘಾತ ತಡೆಯುವಲ್ಲಿ ನಾವು ಸಫಲರಾಗುತ್ತೇವೆ ಎಂದು ಸ್ವಷ್ಟನೆ ನೀಡಿದರು.
ಇನ್ನು ಹೆದ್ದಾರಿಯ ಟೋಲ್ ಪ್ಲಾಜಾದಲ್ಲಿ ಕನ್ನಡ ಮಾತನಾಡುವರಿಗೆ ಕೆಲಸ ಯಾಕೆ ಇಲ್ಲ ಎಂಬ ಸ್ಥಳೀಯ ಶಾಸಕ ಪಿ.ರವಿಕುಮಾರ್ ಅವರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಪ್ರಶ್ನೆ ಮಾಡಿದರು. ಶಾಸಕರ ಪ್ರಶ್ನೆಗೆ ದನಿಗೂಡಿಸಿದ ಸಂಸದೆ ಸುಮಲತಾ ಅಂಬರೀಶ್ ಟೋಲ್ನಲ್ಲಿ ಕನ್ನಡ ಮಾತನಾಡುವುವವರನ್ನು ಕೆಲಸಕ್ಕೆ ಇರಿಸಿಕೊಳ್ಳಲು ಏನು ಸಮಸ್ಯೆ. ಏನಾದರು ಕಾರಣ ಇದೆಯಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: Bengaluru Mysuru Expressway: ಸಾವಿನ ಹೆದ್ದಾರಿಯಾಗುತ್ತಿರುವ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ
ಇದಕ್ಕೆ ಉತ್ತರಿಸಿದ ಅಧಿಕಾರಿ ಸಮಸ್ಯೆ ಏನಿಲ್ಲ ಮೇಡಮ್, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು. ಅಲ್ಲದೇ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ರಾಹುಲ್ ಸರ್ವಿಸ್ ರಸ್ತೆ ಸಮಸ್ಯೆ ಹದಿನೈದು ದಿನಗಳಲ್ಲಿ ಸರಿಪಡಿಸುವುದಾಗಿ ಭರವಸೆ ನೀಡಿದರು.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಜನವರಿಯಿಂದ ಮೇ ವರೆಗೆ ಒಟ್ಟು 570 ಅಪಘಾತಗಳು ವರದಿಯಾಗಿವೆ. ಇವುಗಳಲ್ಲಿ ಒಟ್ಟು 55 ಮಂದಿ ಸಾವನ್ನಪ್ಪಿದ್ದರೆ, 52 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 184 ಮಂದಿ ಮೂಳೆ ಮುರಿತದಂಥ ಸಮಸ್ಯೆಗಳಿಗೆ ಒಳಗಾಗಿದ್ದರೆ, 279 ಜನರು ಸಣ್ಣಪುಟ್ಟ ಗಾಯಗಳೊಂದಿಗೆ ಅದೃಷ್ಟವಶಾತ್ ಪಾರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:22 pm, Sat, 15 July 23