ಮೈಸೂರು, ಅ.04: ದಸರಾ ಹಬ್ಬದ ಸಂಭ್ರಮ ಇದೀಗ ನಾಡಿನೆಲ್ಲಡೆ ಕಳೆಗಟ್ಟಿದೆ. ಮೈಸೂರು ದಸರಾಗೆ ನಿನ್ನೆ ಚಾಲನೆ ಕೂಡ ನೀಡಲಾಗಿದೆ. ಈ ಮಧ್ಯೆ ಮೈಸೂರು ದಸರಾದ ಮೂಲ ನೆಲೆಯಾದ ಶ್ರೀರಂಗಪಟ್ಟಣ ದಸರಾ(Srirangapatna Dasara 2024)ಗೆ ಇಂದು ಅದ್ದೂರಿಯಾಗಿ ಚಾಲನೆ ಸಿಕ್ಕಿದ್ದು, ಇಂದಿನಿಂದ ನಾಲ್ಕು ದಿನಗಳ ಕಾಲ ನಡೆಯಲಿದೆ. ಇನ್ನು ಶ್ರೀರಂಗಪಟ್ಟಣ ದಸರಾಗೆ ನಟ ಶಿವರಾಜ್ ಕುಮಾರ್ ಚಾಲನೆ ನೀಡಿದರು. ಶ್ರೀರಂಗಪಟ್ಟಣದ ಕಿರಂಗೂರು ಬಳಿಯ ಬನ್ನಿಮಂಟಪದಲ್ಲಿ ಮಧ್ಯಾಹ್ನ 12.30ಕ್ಕೆ ನಂದಿಧ್ವಜ ಪೂಜೆ, 2.30 ರಿಂದ 3ರವರೆಗೂ ಸಲ್ಲುವ ಶುಭ ಮರಕ ಲಗ್ನದಲ್ಲಿ ನಾಡದೇವತೆ ಶ್ರೀಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ಸಲ್ಲಿಸಿ, ಜಂಬೂ ಸವಾರಿ ಮೆರವಣಿಗೆಗೆ ಪುಷ್ಪರ್ಚಾನೆ ಮಾಡಿ ಚಾಲನೆ ನೀಡಬೇಕಿತ್ತು. ನಟ ಶಿವರಾಜ್ ಕುಮಾರ್ ತಡವಾಗಿ ಬಂದ ಹಿನ್ನೆಲೆ ಯಮಗಂಡ ಕಾಲದಲ್ಲಿ 3.24 ಸಮಯದಲ್ಲಿ ಚಾಲನೆ ನೀಡಲಾಯಿತು.
ಜಂಬೂಸವಾರಿಯಲ್ಲಿ ಅಂಬಾರಿ ಆನೆಯಾದ ಮಹೇಂದ್ರ ಹಾಗೂ ಅಕ್ಕಪಕ್ಕದಲ್ಲಿ ಹಿರಣ್ಯ, ಲಕ್ಷೀ ಆನೆಗಳು ಸಾಥ್ ನೀಡಿದವು. ಬನ್ನಿಮಂಟಪದಿಂದ ಬ್ಯಾಂಡ್, ಪೂಜಾ ಕುಣಿತಾ, ವೀರಗಾಸೆ, ನಗಾರಿ, ಜಡೆಕೋಲಾಟ, ಗಾರುಡಿಗೊಂಬೆ, ತಮಟೆ,
ದೊಣ್ಣೆವರಸೆ ಸೇರಿದಂತೆ ಸ್ತಬ್ದ ಚಿತ್ರಗಳ ಮೆರವಣಿಗೆ ರಂಗನಾಥ ದೇವಾಲಯದ ವರೆಗೂ ಬಂಜೂ ಸವಾರಿ ಸಾಗಿತ್ತು. ಕಾರ್ಯಕ್ರಮದಲ್ಲಿ ಸಚಿವರಾದ ಚಲುವರಾಯಸ್ವಾಮಿ, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್ ಸೇರಿ ಶಾಸಕರು ಪಾಲ್ಗೊಂಡಿದ್ದರು.
ಇದನ್ನೂ ಓದಿ:ವಿಜೃಂಭಣೆಯಿಂದ ನಡೆಯುವ ಉಡುಪಿಯ ಉಚ್ಚಿಲ ಮಹಾಲಕ್ಷ್ಮೀ ದಸರಾ ಮಹೋತ್ಸವದ ವಿಶೇಷತೆ ತಿಳಿಯಿರಿ
ಅಂದಹಾಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ದಸರಾವನ್ನ 1610 ರಲ್ಲಿ ಅಂದಿನ ವಿಜಯನಗರ ಸಾಮ್ರಾಜ್ಯದ ದೊರೆ ಪ್ರಾರಂಭ ಮಾಡಿದರು. 1799ರ ವರೆಗೂ ಶ್ರೀರಂಗಪಟ್ಟಣದಲ್ಲಿ ನಡೆಯುತ್ತದೆ. ನಂತರ ದಸರಾ ಮೈಸೂರಿಗೆ ಸ್ಥಳಾಂತರವಾಗುತ್ತದೆ. ಶ್ರೀರಂಗಪಟ್ಟಣ ದಸರಾ ಮೈಸೂರಿನ ದಸರಾಗಿಂತಲೂ ಹಳೆಯದಾದುದು.
ಇನ್ನು ಈ ನಡುವೆ ಲಕ್ಷ್ಮೀ ಆನೆ ಅವಾಂತರ ಸೃಷ್ಠಿ ಮಾಡಿದ್ದಳು. ರಂಗನಾಥ ಮೈದಾನದಿಂದ ಬನ್ನಿಮಂಟಪಕ್ಕೆ ಬರುವ ವೇಳೆ ಲಾರಿ ಹತ್ತಲು ಹೋಗಿ ಅಲ್ಲಿಯೇ ಇದ್ದ ಬಿಳಿ ಕುದುರೆಯನ್ನ ನೋಡಿ ಬೆಚ್ಚಿ ಓಡಿದ್ದಳು. ಆನೆ ಅವಾಂತರ ನೋಡಿ ಜನರು ಕೂಡ ದಿಕ್ಕಾಪಾಲಾಗಿ ಓಡಿದರು. ನಂತರ ಮಾವುತ ಹಾಗೂ ಕಾವಾಡಿಗರು ಲಕ್ಷೀಯನ್ನ ಸಮಾಧಾನ ಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ