ಮಂಡ್ಯ: ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇ (Bengaluru Mysuru Expressway) ಹೆದ್ದಾರಿಯಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವುದನ್ನು ತಡೆಗಟ್ಟುವುದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹಾಗೂ ಸಂಚಾರ ಪೊಲೀಸರು ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ. ದ್ವಿಚಕ್ರ ವಾಹನ ಸೇರಿದಂತೆ ಹಲವು ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಆದಾಗ್ಯೂ, ಅತಿ ವೇಗದ ಚಾಲನೆ ಮತ್ತಿತರ ಸಂಚಾರಿ ನಿಯಮಗಳ ಉಲ್ಲಂಘನೆ ತಡೆಗೆ ಹೆದ್ದಾರಿಯಾದ್ಯಂತ ಕೃತಕಬುದ್ಧಿಮತ್ತೆ ಕ್ಯಾಮರಾಗಳು (AI Camera), ಎಎನ್ಪಿಆರ್ (Automatic Number Plate Recognition / ANPR) ಕ್ಯಾಮರಾಗಳನ್ನು ಅಳವಡಿಸಿರುವ ಬಗ್ಗೆ ಸಂಚಾರ ಸುರಕ್ಷತಾ ಎಡಿಜಿಪಿ ಅಲೋಕ್ ಕುಮಾರ್ ಇತ್ತೀಚೆಗೆ ಮಾಹಿತಿ ನೀಡಿದ್ದರು. ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ನಿರ್ಲಕ್ಷ್ಯದಿಂದ ಎಎನ್ಪಿಆರ್ ಕ್ಯಾಮರಾ ಬಂದ್ ಆಗಿದೆ ಎಂಬ ಆರೋಪ ಕೇಳಿಬಂದಿದೆ.
ಮಂಡ್ಯ ತಾಲೂಕಿನ ಉಮ್ಮಡಹಳ್ಳಿ ಗೇಟ್ ಬಳಿ ಅವಳವಡಿಕೆ ಮಾಡಿರುವ ಎಎನ್ಪಿಆರ್ ಕ್ಯಾಮರಾಗಳು ಮೂರೇ ದಿನಕ್ಕೆ ಬಂದ್ ಆಗಿವೆ. ಅತ್ಯಾಧುನಿಕ ತಂತ್ರಜ್ಞಾನ ಉಳ್ಳ ಈ ಕ್ಯಾಮರಾಗಳು ವಾಸ್ತವದಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಣೆ ಮಾಡಬೇಕು. ಆದರೆ, ಹೆದ್ದಾರಿಯಲ್ಲಿ ಅಳವಡಿಸಿರುವ ಕ್ಯಾಮರಾಗಳು ಬಂದ್ ಆಗಿವೆ.
ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ವೇಗಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಕ್ಯಾಮರಾಗಳನ್ನು ಅಳವಡಿಕೆ ಮಾಡಲಾಗಿತ್ತು. 100 ಕಿಲೋಮೀಟರ್ಗಿಂತ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಿದರೆ ಈ ಕ್ಯಾಮರಾದಿಂದ ಹೆದ್ದಾರಿ ಪ್ರಾಧಿಕಾರದ ಕಂಟ್ರೋಲ್ ರೂಮ್ ಹಾಗೂ ಸ್ಥಳೀಯ ಪೊಲೀಸರಿಗೂ ಮಾಹಿತಿ ರವಾನೆಯಾಗುತ್ತಿತ್ತು. ಅದರ ಆಧಾರದ ಮೇಲೆ ಪೊಲೀಸರು ದಂಡ ವಿಧಿಸಲು ಮುಂದಾಗಿದ್ದರು. ಆದರೆ, ಅಳವಡಿಕೆ ಮಾಡಿದ ಮೂರೇ ದಿನಕ್ಕೆ ಬಂದ್ ಆಗಿದೆ.
ನೂತನವಾಗಿ ಅಳವಡಿಸಿದ್ದ ಕ್ಯಾಮರಾಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಜುಲೈ 29 ರಂದು ವೀಕ್ಷಣೆ ಮಾಡಿದ್ದರು. ಉಮ್ಮಡಿಹಳ್ಳಿ ಗೇಟ್ ಬಳಿ ದಶಪಥ ರಸ್ತೆ ವೀಕ್ಷಣೆ ಮಾಡಿದ್ದರು. ಮುಖ್ಯಮಂತ್ರಿಗಳು ಬರುತ್ತಾರೆ ಎಂದು ಅಧಿಕಾರಿಗಳು ತರಾತುರಿಯಲ್ಲಿ ಕ್ಯಾಮರಾಗಳನ್ನು ಅಳವಡಿಕೆ ಮಾಡಿದ್ದರು. ಆದರೆ, ಸಿದ್ದರಾಮಯ್ಯ ಬಂದು ಹೋದ ಮೇಲೆ ಕ್ಯಾಮರಾಗಳು ಬಂದ್ ಆಗಿವೆ.
ಇದನ್ನೂ ಓದಿ: Bengaluru Mysuru Expressway: ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇಯಲ್ಲಿ ಎಸ್ಒಎಸ್ ಬಾಕ್ಸ್; ಏನಿದು, ಬಳಸುವುದು ಹೇಗೆ?
ಕ್ಯಾಮರಾಗಳನ್ನು ಪ್ರಾಯೋಗಿಕವಾಗಿ ಅವಳವಡಿಕೆ ಮಾಡಲಾಗಿತ್ತು. ಇದು ಯಶಸ್ವಿಯಾದರೆ ಶಾಶ್ವತವಾಗಿ ಅವಳವಡಿಕೆ ಮಾಡಲು ಅಧಿಕಾರಿಗಳು ಯೋಜನೆ ರೂಪಿಸಿದ್ದರು ಎಂದು ಕೆಲವು ಮೂಲಗಳು ತಿಳಿಸಿವೆ.
ಎಎನ್ಪಿಆರ್ ಅಥವಾ Automatic Number Plate Recognition ಕ್ಯಾಮರಾ ಎಂದರೆ, ಸ್ವಯಂಚಾಲಿತವಾಗಿ ವಾಹನಗಳ ನಂಬರ್ ಪ್ಲೇಟ್ ಅನ್ನು ಗುರುತಿಸಿ ಫೋಟೊ ಸೆರೆಹಿಡಿಯುವ ಸಾಮರ್ಥ್ಯವುಳ್ಳ ಕ್ಯಾಮರಾ ಆಗಿದೆ. ನಿಗದಿತ ಮಿತಿಗಿಂತ ಹೆಚ್ಚು ವೇಗದಲ್ಲಿ ಸಂಚರಿಸುವ ವಾಹನಗಳ ನಂಬರ್ ಪ್ಲೇಟ್ ಅನ್ನು ಕ್ಯಾಪ್ಚರ್ ಮಾಡುವ ಈ ಕ್ಯಾಮರಾಗಳು, ಹೆದ್ದಾರಿ ಪ್ರಾಧಿಕಾರದ ಕಂಟ್ರೋಲ್ ರೂಮ್ ಹಾಗೂ ಸ್ಥಳೀಯ ಪೊಲೀಸರಿಗೆ ತಕ್ಷಣವೇ ಮಾಹಿತಿ ರವಾನಿಸುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ