ಮಂಡ್ಯ: ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ಎಂಟ್ರಿ-ಎಕ್ಸಿಟ್ ಕ್ಲೋಸ್, ತಾಲೂಕು ಕೇಂದ್ರಗಳಿಗೆ ತೆರಳುವವರ ಪರದಾಟ
Bangalore Mysore Expressway: ಇದೀಗ ಟೋಲ್ ಸಂಗ್ರಹದ ನೆಪವೊಡ್ಡಿ, ಮಂಡ್ಯ ಜಿಲ್ಲೆಯ ಬಹುತೇಕ ಕಡೆ ಎಂಟ್ರಿ ಹಾಗೂ ಎಕ್ಸಿಟ್ಗಳನ್ನ ಕ್ಲೋಸ್ ಮಾಡಲಾಗಿದ್ದು ಬೆಂಗಳೂರಿನಿಂದ ಮಂಡ್ಯಕ್ಕೆ, ಮೈಸೂರಿನಿಂದ ಮಂಡ್ಯಕ್ಕೆ, ಮಂಡ್ಯದಿಂದ ಮೈಸೂರಿಗೆ ಹೋಗಲು ವಾಹನ ಸವಾರರು ಪರದಾಡುವಂತೆ ಆಗಿದ್ದು, ಸರ್ವಿಸ್ ರಸ್ತೆಯಲ್ಲಿಯೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಂಡ್ಯ, ಅಕ್ಟೋಬರ್ 23: ಬೆಂಗಳೂರು ಮೈಸೂರು ನೂತನ ದಶಪಥ ಎಕ್ಸ್ಪ್ರೆಸ್ ವೇ (Bangalore Mysore Expressway) ಸದಾ ಒಂದಿಲ್ಲೊಂದು ವಿವಾದಗಳ ಮೂಲಕ ಆಗಾಗ ಸುದ್ದಿಯಾಗುತ್ತಿದೆ. ಹೆದ್ದಾರಿ ನಿರ್ಮಾಣದ ನಂತರ ಗ್ರಾಮೀಣ ಭಾಗದ ಜನರು ಹಾಗೂ ತಾಲೂಕು ಕೇಂದ್ರಗಳಿಗೆ ಹೋಗಲು ವಾಹನ ಸವಾರರಿಗೆ ಅನುಕೂಲವಾಗಲಿ ಎಂದು ದಶಪಥ ಹೆದ್ದಾರಿಯಲ್ಲಿ ಅಲ್ಲಲ್ಲಿ ಎಂಟ್ರಿ ಹಾಗೂ ಎಕ್ಸಿಟ್ (Entry Exit Points) ಕೊಟ್ಟಿದೆ. ಆದರೆ, ಇದೀಗ ಎಕ್ಸಿಟ್ ಹಾಗೂ ಎಂಟ್ರಿಗಳನ್ನ ಕ್ಲೋಸ್ ಮಾಡುವ ಮೂಲಕ ಮತ್ತೊಂದು ವಿವಾದಕ್ಕೆ ಮುಂದಾಗಿದೆ.
ಹೌದು, ಸದಾ ಒಂದಿಲ್ಲೊಂದು ವಿವಾದಗಳಿಂದ ಅಪಖ್ಯಾತಿಗಳಿಸಿರೋ ನೂತನ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಇದೀಗ ಮತ್ತೊಂದು ವಿವಾದಕ್ಕೆ ಸಾಕ್ಷಿ ಆಗುತ್ತಿದೆ. ಸಾವಿರಾರು ಕೋಟಿ ರೂ ವೆಚ್ಚದಲ್ಲಿ ನೂತನವಾಗಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನ ನಿರ್ಮಾಣ ಮಾಡಲಾಗಿದೆ. ಪ್ರಧಾನಿ ಮೋದಿ ಅವರು ದಶಪಥ ಹೆದ್ದಾರಿಯನ್ನ ಉದ್ಘಾಟನೆ ಮಾಡಿದ್ರು. ನೂತನ ಎಕ್ಸ್ಪ್ರೆಸ್ ವೇನಲ್ಲಿ ತಾಲೂಕು ಕೇಂದ್ರ, ಜಿಲ್ಲಾ ಕೇಂದ್ರಗಳಿಗೆ ಎಂಟ್ರಿ ಹಾಗೂ ಎಕ್ಸಿಟ್ಗಳು ಇರಲಿಲ್ಲ. ನೇರವಾಗಿ ಬೆಂಗಳೂರು ಟು ಮೈಸೂರು ಸಂಚಾರಕ್ಕೆ ಮಾತ್ರ ಅವಕಾಶ ಇತ್ತು. ಆನಂತರ ಪ್ರತಿಭಟನೆ, ಹೋರಾಟಗಳು ನಡೆದ ನಂತರ ಜಿಲ್ಲಾ ಹಾಗೂ ತಾಲೂಕು ಕೇಂದ್ರ ಸಂಪರ್ಕ ಕಲ್ಪಿಸಲು ದಶಪಥ ಹೆದ್ದಾರಿಯಲ್ಲಿ ಎಂಟ್ರಿ ಹಾಗೂ ಎಕ್ಸಿಟ್ ಕಲ್ಪಿಸಲಾಗಿತ್ತು.
ಆದರೆ ಇದೀಗ ಟೋಲ್ ಸಂಗ್ರಹದ ನೆಪವೊಡ್ಡಿ, ಮಂಡ್ಯ ಜಿಲ್ಲೆಯ ಬಹುತೇಕ ಕಡೆ ಎಂಟ್ರಿ ಹಾಗೂ ಎಕ್ಸಿಟ್ಗಳನ್ನ ಕ್ಲೋಸ್ ಮಾಡಲಾಗಿದ್ದು ಬೆಂಗಳೂರಿನಿಂದ ಮಂಡ್ಯಕ್ಕೆ, ಮೈಸೂರಿನಿಂದ ಮಂಡ್ಯಕ್ಕೆ, ಮಂಡ್ಯದಿಂದ ಮೈಸೂರಿಗೆ ಹೋಗಲು ವಾಹನ ಸವಾರರು ಪರದಾಡುವಂತೆ ಆಗಿದ್ದು, ಸರ್ವಿಸ್ ರಸ್ತೆಯಲ್ಲಿಯೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಂದಹಾಗೆ ಈಗಾಗಲೇ ನೂತನ ದಶಪಥ ಹೆದ್ದಾರಿಯಲ್ಲಿ ದುಬಾರಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಬೆಂಗಳೂರಿನ ಕಣಮಿಣಿಕೆ ಹಾಗೂ ಮಂಡ್ಯದ ಗಣಂಗೂರು ಬಳಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಆದರೆ ಬೆಂಗಳೂರಿನಿಂದ ಬರುವ ವಾಹನ ಸವಾರರು ಪಾಂಡವಪುರಕ್ಕೆ ಹೋಗಬೇಕಾದರೆ ಇಂಡವಾಳು ಬಳಿ ಹಾಕಲಾಗಿದ್ದ ಎಕ್ಸಿಟ್ ಅನ್ನ ಕ್ಲೋಸ್ ಮಾಡಲಾಗಿದೆ. ಇನ್ನು ಮಂಡ್ಯದಿಂದ ಮೈಸೂರಿಗೆ ಹೋಗುವವರು ಇಂಡುವಾಳು ಬಳಿ ಇರುವ ಎಂಟ್ರಿ ಮೂಲಕ ದಶಪಥ ರಸ್ತೆಯ ಮೂಲಕ ಮೈಸೂರು ಕಡೆಗೆ ಸಂಚಾರ ಮಾಡುತ್ತಿದ್ದರು. ಆದರೆ ಅಲ್ಲೂ ಕೂಡ ಬಂದ್ ಮಾಡಲಾಗಿದೆ. ಇನ್ನು ಸರ್ವಿಸ್ ರಸ್ತೆಯಲ್ಲಿ ಕಾಮಗಾರಿಯೇ ಪೂರ್ಣಗೊಂಡಿಲ್ಲ. ಅರ್ಧಂಬರ್ಧ ಕಾಮಗಾರಿ ನಡೆದಿದೆ. ಇಂತಹದರಲ್ಲಿ ಸರ್ವಿಸ್ ರಸ್ತೆಯಲ್ಲಿ ಸಂಚಾರಿಸಿ ಎಂದರೇ ಹೇಗೆ ಎಂದು ವಾಹನ ಸವಾರರು ಪ್ರಶ್ನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬೆಸಗರಹಳ್ಳಿ: ಮಗನ ಜೊತೆ ಸೇರಿ ವಿಕಲಚೇತನ ಗಂಡನ ಕಥೆ ಮುಗಿಸಿದ ಪತ್ನಿ, ಅಂಥಾ ಕಾರಣವೇನಿತ್ತು?
ಇನ್ನು ನೈಸ್ ರಸ್ತೆಯ ಮಾದರಿಯಲ್ಲಿ ಟೋಲ್ ಸಂಗ್ರಹಕ್ಕೆ ಪ್ರಸ್ತಾವನೆಯನ್ನ ಕಳುಹಿಸಲಾಗಿದೆ. ಅದಕ್ಕೆ ಒಪ್ಪಿಗೆ ಸಿಗುವ ಮೊದಲೇ ಟೋಲ್ ಸಂಗ್ರಹದ ನೆಪವೊಡ್ಡಿ ಎಂಟ್ರಿ ಹಾಗೂ ಎಕ್ಸಿಟ್ ಬಂದ್ ಮಾಡಲಾಗಿದೆ. ಇನ್ನು ಈ ಬಗ್ಗೆ ಜಿಲ್ಲಾಧಿಕಾರಿಗಳನ್ನ ಕೇಳಿದ್ರೆ ಅವರು ಹೇಳುವುದೇ ಬೇರೆ.
ಒಟ್ಟಾರೆ ಜಿಲ್ಲಾ ಹಾಗೂ ತಾಲೂಕು ಕೇಂದ್ರದ ಜನರಿಗೆ ಅನುಕೂಲವಾಗಲಿ ಎಂದು ಬಿಟ್ಟಿದ್ದ ಎಂಟ್ರಿ ಹಾಗೂ ಎಕ್ಸಿಟ್ ಬಂದ್ ಮಾಡಿರುವುದು ವಾಹನ ಸವಾರರಿಗೆ ಸಾಕಷ್ಟು ತೊಂದರೆ ಉಂಟಾಗಿದೆ. ಇನ್ನಾದರೂ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ