100% ಮಂಡ್ಯ ಟಿಕೆಟ್​​ ನನಗೆ ಸಿಗಲಿದೆ: ವಿಶ್ವಾಸದಲ್ಲಿ ಸುಮಲತಾ ಅಂಬರೀಶ್

| Updated By: Rakesh Nayak Manchi

Updated on: Mar 03, 2024 | 4:48 PM

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಮಂಡ್ಯ ಕ್ಷೇತ್ರದಲ್ಲಿನ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ಭಾರೀ ಕುತೂಹಲ ಮೂಡಿಸಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ಕಾತರದಿಂದ ಕಾಯುತ್ತಿದ್ದಾರೆ. ಒಂದೆಡೆ, ಜೆಡಿಎಸ್​ಗೆ ಮಂಡ್ಯ ಕ್ಷೇತ್ರದ ಟಿಕೆಟ್ ಫಿಕ್ಸ್ ಆಗಿದೆ ಎಂದು ಹೇಳಲಾಗುತ್ತಿದ್ದು, ಹೆಚ್​ಡಿ ಕುಮಾರಸ್ವಾಮಿ ಅವರು ಸಭೆಗಳ ಮೇಲೆ ಸಭೆ ನಡೆಸುತ್ತಿದ್ದಾರೆ. ಇನ್ನೊಂದೆಡೆ, ಕ್ಷೇತ್ರದ ಟಿಕೆಟ್ 100 ಪರ್ಸೆಂಟ್ ನನಗೆ ಸಿಗಲಿದೆ ಎಂದು ಹಾಲಿ ಸಂಸದೆ ಸುಮಲತಾ ಸಂಬರೀಶ್ ಮತ್ತೆ ಮತ್ತೆ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

100% ಮಂಡ್ಯ ಟಿಕೆಟ್​​ ನನಗೆ ಸಿಗಲಿದೆ: ವಿಶ್ವಾಸದಲ್ಲಿ ಸುಮಲತಾ ಅಂಬರೀಶ್
ಸುಮಲತಾ ಅಂಬರೀಶ್
Follow us on

ಮಂಡ್ಯ, ಮಾ.3: ಲೋಕಸಭೆ ಚುನಾವಣೆಗೆ (Lok Sabha Elections) ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದರೂ ಕರ್ನಾಟಕದಿಂದ ಯಾವುದೇ ಅಭ್ಯರ್ಥಿಗಳ ಟಿಕೆಟ್ ಘೋಷಣೆ ಆಗಿಲ್ಲ. ಆದರೆ, ಜಿದ್ದಾಜಿದ್ದಿನ ಕ್ಷೇತ್ರಗಳಲ್ಲಿ ಒಂದಾಗಿರುವ ಮಂಡ್ಯದ (Mandya) ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ಭಾರೀ ಕುತೂಹಲ ಮೂಡಿಸಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ಟಿಕೆಟ್ ಯಾರಿಗೆ ಸಿಗಲಿದೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಒಂದೆಡೆ, ಜೆಡಿಎಸ್​ಗೆ (JDS) ಮಂಡ್ಯ ಕ್ಷೇತ್ರದ ಟಿಕೆಟ್ ಫಿಕ್ಸ್ ಆಗಿದೆ ಎಂದು ಹೇಳಲಾಗುತ್ತಿದ್ದು, ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಅವರು ಸಭೆಗಳ ಮೇಲೆ ಸಭೆ ನಡೆಸುತ್ತಿದ್ದಾರೆ. ಇನ್ನೊಂದೆಡೆ, ಕ್ಷೇತ್ರದ ಟಿಕೆಟ್ 100 ಪರ್ಸೆಂಟ್ ನನಗೆ ಸಿಗಲಿದೆ ಎಂದು ಹಾಲಿ ಸಂಸದೆ ಸುಮಲತಾ ಸಂಬರೀಶ್ (Sumalatha Ambareesh) ಮತ್ತೊಮ್ಮೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಡ್ಯ ನಗರದಲ್ಲಿ ಮಾತನಾಡಿದ ಸುಮಲತಾ ಅವರು, 100% ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್​ ನನಗೆ ಸಿಗಲಿದೆ ಎಂದರು. ರಾಜ್ಯದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವೇಳೆ ನನ್ನ ಹೆಸರು ಇರುತ್ತದೆ. ದೆಹಲಿಗೆ ಹೋಗುವ ಅಗತ್ಯವಿಲ್ಲ, ಕರೆದರೆ ಮಾತ್ರ ಹೋಗುತ್ತೇನೆ. ಕಳೆದ 5 ವರ್ಷದಲ್ಲಿ ಶುಭ ಸಮಾರಂಭಗಳಲ್ಲಿ ಭಾಗವಹಿಸಿದ್ದೇನೆ. ಈ ಸಂದರ್ಭದಲ್ಲಿ ಅದು ಹೈಲೈಟ್ ಆಗುತ್ತಿದೆ ಅಷ್ಟೇ ಎಂದರು.

ಚುನಾವಣೆ ತಯಾರಿ ವಿಚಾರವಾಗಿ ಮಾತನಾಡಿದ ಅವರು, ಯಾವುದೇ ನಿರ್ಧಿಷ್ಟ ಪ್ಲಾನ್ ಇಲ್ಲ. ಕಳೆದ ಬಾರಿ ನಾನು ನಿಂತಿದ್ದು ಪಕ್ಷೇತರ ಅಭ್ಯರ್ಥಿಯಾಗಿದೆ. ಯಾವುದೇ ಒಂದು ಅನುಭವ ಇಲ್ಲದೆ ಚುನಾವಣೆಗೆ ಸ್ಪರ್ಧಿಸಿದ್ದೆ. ನನಗೆ ಬೇಕಾದವರು ನಿಮ್ಮ ಜೊತೆ ಇರುತ್ತೇವೆ ಅಂತಾ ನಿಂತಿದ್ದರು. ಈಗ ಚಿಹ್ನೆಯಿಂದ ನಿಲ್ಲುತ್ತೇನೆ, ನಾಯಕರು ಏನು ಹೇಳುತ್ತಾರೆ ನೋಡಬೇಕು. ಇದು ಬೇರೆ ರೀತಿಯಲ್ಲಿ ಚುನಾವಣೆ ನಡೆಯುತ್ತದೆ ಎಂದರು.

ಯಶ್, ದರ್ಶನ್ ಬಂದರೆ ಬಲ

ಪ್ರಚಾರ, ಹೋರಾಟ, ಕ್ಯಾಂಪೇನ್ ಡಿಫೆರೆಂಟ್ ಇರುತ್ತದೆ. ಯಶ್, ದರ್ಶನ್ ಬಂದರೆ ಬಲ ಇರುತ್ತದೆ. ಎಲ್ಲರು ಸಪೋರ್ಟ್ ಇದ್ದಾರೆ. ನನಗೋಸ್ಕರ ಅವರು ಕೇವಲ ಬೆಂಬಲ ಅಲ್ಲ ತ್ಯಾಗ ಮಾಡಿದ್ದರು. ಇಬ್ಬರು 25 ದಿನ ಸುಪರ್ ಸ್ಟಾರ್​ಗಳು ಸ್ವಾರ್ಥ ಇಲ್ಲದೆ ನನ್ನ ಪರ ನಿಂತಿದ್ದರು. ಪದೇ ಪದೇ ಎಲ್ಲಾ ಬಿಟ್ಟು ಪ್ರಚಾರಕ್ಕೆ ಬನ್ನಿ ಅನ್ನೋದು ಸರಿಯಲ್ಲ. ನನಗೆ ಮನಸ್ಸು ಒಪ್ಪಲ್ಲ ಎಂದರು.

ಯಶ್, ದರ್ಶನ್ ಒಂದೊಂದು ಮೂವಿ ಮಾಡುತ್ತಿರುತ್ತಾರೆ. ಅದನ್ನೇಲ್ಲ ಬಿಟ್ಟು ಬನ್ನಿ ಅನ್ನೋದು ಸರಿಯಲ್ಲ. ಅವರು ಬರುತ್ತಾರೆ ಎಂದರೆ ಸ್ವಾಗತಿಸುತ್ತೇನೆ. ಇಬ್ಬರು ನಟರು ದೊಡ್ಡ ಶಕ್ತಿಯಾಗಿ ನನಗೆ ಇರುತ್ತಾರೆ ಎಂದರು. ಯಶ್ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಲ್ಲ ಎಂಬ ವಿಚಾರವಾಗಿ ಮಾತನಾಡಿದ ಅವರು, ರಾಜಕಾರಣ ಗಲಿಜು ಅಂತ ಹೇಳಿದ್ದಾರೆ. ಟೀಕೆ ಬಗ್ಗೆ ತಿಳಿದುಕೊಂಡಿದ್ದಾರೆ. ಅವರು ಬರುತ್ತೇನೆ ಅಂತ ಸಂತೋಷ ಪಡುತ್ತೇನೆ. ನನ್ನ ಮನೆಯ ಮಕ್ಕಳು ತರ ಓಡಾಡಿದ್ದಾರೆ. ಅವತ್ತಿನ ಸ್ಥಿತಿಯಲ್ಲಿ ನನ್ನ ಜೊತೆ ನಿಂತಿದ್ದರು. ಅವರು ಬರಲಿಲ್ಲ ಅಂದರೂ ಬೇಸರ ಮಾಡಿಕೊಳ್ಳುವುದಿಲ್ಲ ಎಂದರು.

ಮೈಷುಗರ್ ಕಾರ್ಖಾನೆಯನ್ನ ಯಾರು ಟಚ್ ಮಾಡಬಾರದು

ಮೈಷುಗರ್ ಕಾರ್ಖಾನೆಯನ್ನ ಯಾರು ಟಚ್ ಮಾಡಬಾರದು ಎಂದು ಸುಮಲತಾ ಎಚ್ಚರಿಕೆ ನೀಡಿದರು. ಮೈಷುಗರ್ ಕಾರ್ಖಾನೆ ಬಗ್ಗೆ ಹಿಂದೆ ಭ್ರಷ್ಟಾಚಾರ ಆಗಿರುವುದು ಗೊತ್ತಿದೆ. ನೂರಾರು ಕೋಟಿ ನಷ್ಟವಾಗಿದೆ. ಎಷ್ಟೆ ದುಡ್ಡು ಹಾಕಿದರೂ ಫ್ಯಾಕ್ಟರಿ ಸರಿಯಾಗಿಲ್ಲ, ಹಾಗೆ ಬಿದ್ದಿತ್ತು. ನಾನು ಸಂಸದೆ ಆದ ಬಳಿಕ ಯಡಿಯೂರಪ್ಪ ಅವರನ್ನ ಡೆಲ್ಲಿಯಲ್ಲಿ ಭೇಟಿಯಾಗಿದ್ದೆ. ಮಂಡ್ಯ ರೈತರ ಸಮಸ್ಯೆ ಬಗ್ಗೆ ತಿಳಿಸಿದ್ದೆ, ಯಡಿಯೂರಪ್ಪ ಮಾತು ಕೊಟ್ಟಂತೆ ಬೊಮ್ಮಯಿ ಅವರು 50 ಕೋಟಿ ಕೊಟ್ಟು ಶುರು ಮಾಡಿದರು ಎಂದರು.

ಅಲ್ಲದೆ, ಇಂದಿನ ಸರ್ಕಾರ 100 ಕೋಟಿ ಕೊಟ್ಟಿದೆ. ಇನ್ನೂ ಕೂಡ ಕಬ್ಬು ಅರೆಯುತ್ತಿಲ್ಲ, ಮತ್ತೆ 500 ಕೋಟಿಯ ಹೊಸ ಕಾರ್ಖಾನೆ ಅಂದರೆ ಅರ್ಥ ಏನು? ಒಂದಲ್ಲ 5 ಕಾರ್ಖಾನೆ ಮಾಡಿ. ಆದರೆ ಮೈಷುಗರ್ ಕಾರ್ಖಾನೆ ಮಂಡ್ಯಕ್ಕೆ ಪ್ರತಿಷ್ಠೆ. ಹಳೆಯ ಕಾರ್ಖಾನೆ ಏನು ಮಾಡುತ್ತೀರಾ? ಮತ್ತೆ ಕ್ಲೋಸ್ ಮಾಡುತ್ತೀರಾ| ಐತಿಹಾಸಿಕ ಅಂತ ಕಾಪಾಡಲು ಹೋರಾಟ ಮಾಡಿದ್ದು ವ್ಯರ್ಥನಾ? ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಭಾವನಾತ್ಮಕ ಸಂಬಂಧ ಇದೆ. 500 ಕೋಟಿಯನ್ನ ಈ ಕಾರ್ಖಾನೆಗೆ ಹಾಕಿ ಸರಿಪಡಿಸಿ. ಹಳೆಯದನ್ನೆ ಅಭಿವೃದ್ಧಿ ಮಾಡಿ ಎಂದರು.

ಇದನ್ನೂ ಓದಿ: ರಂಗೇರಿದ ಮಂಡ್ಯ ಲೋಕಸಭಾ ಅಖಾಡ; ಟಿಕೆಟ್ ಘೋಷಣೆಗೂ ಮೊದಲೇ ಹಾಲಿ ಸಂಸದೆ ಸುಮಲತಾ ಫುಲ್ ಆಕ್ಟೀವ್

ಮೈಷುಗರ್​ಗೆ ಒಂದು ಐತಿಹಾಸಿಕ ಸ್ಥಳ ಮಹತ್ವ ಇದೆ. ಹಾಗಿದ್ದರೆ KRS ಡ್ಯಾಂನಲ್ಲಿ ಬೇರೆ ಪಾರ್ಕ್ ಮಾಡಿಬಿಡುತ್ತೀರಾ? ಎಷ್ಟೋ ಪ್ರಾಚೀನ ಕಾಲದ ದೇವಸ್ಥಾನ ಇವೆ ಅಲ್ಲಿ. ಬಿಲ್ಡಿಂಗ್ ಕಟ್ಟುತ್ತಿರಾ? ಜನ ಒಪ್ಪುತ್ತಾರಾ? ಮೈಷುಗರ್ ಕಾರ್ಖಾನೆ ದುಡ್ಡು ಎಲ್ಲಿಗೆ ಹೋಗಿದೆ? ಹೊಸ ಕಾರ್ಖಾನೆ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತದೆ ಎಂದರು.

ನಾನು ಸಂಸದೆಯಾಗುವ ವೇಳೆಯಲ್ಲಿ ಎರಡೂ ಕಾರ್ಖಾನೆ ಮುಚ್ಚಿದ್ದವು. ಪಾಂಡವಪುರ ಕಾರ್ಖಾನೆ ನಡೆಯುತ್ತಿದೆ. ಯಾವುದೇ ತೊಂದರೆ ಇಲ್ಲ. ಪಾಂಡವಪುರ ಕಾರ್ಖಾನೆಯನ್ನ ಖಾಸಗೀಕರಣ ನೀಡಿದ್ದಕ್ಕೆ ಸರಿಯಾಗಿ ನಡೆಯುತ್ತಿದೆ. ಯಡಿಯೂರಪ್ಪ ಅವರು ಮೈಷುಗರ್ ಕಾರ್ಖಾನೆ O&Mಗೆ ಕೊಡೋಣ ಅಂದಾಗ ಕೆಲವರು ವಿರೋಧ ವ್ಯಕ್ತಪಡಿಸಿದರು. ಗೊಂದಲಬೇಡ ಅಂತ ಸರ್ಕಾರಿ ಸ್ವಾಮ್ಯದಲ್ಲಿ ನಡೆಸೋಣ ಅಂದರು ಎಂದರು.

ಮೈಷುಗರ್ ಕಾರ್ಖಾನೆ ಉಳಿಸಿಕೊಳ್ಳಬೇಕು ನಮ್ಮೆಲ್ಲರ ಜವಾಬ್ದಾರಿ. ಬೇರೆ ಜಾಗದಲ್ಲಿ ಗುರುತಿಸಿ ಸಾಫ್ಟ್‌ವೇರ್ ಪಾರ್ಕ್ ಕಟ್ಟಲಿ. ಈ ಜಾಗದಲ್ಲಿ ಮೈಷುಗರ್ ಕಾರ್ಖಾನೆ ಇರಲಿ. ಮೈಷುಗರ್ ಜಾಗದಲ್ಲಿ ಮಾಡೋದು ಏನಿದೆ? 150 ಕೋಟಿ ವೇಸ್ಟ್, ಮತ್ತೆ 500 ಕೋಟಿ ಅರ್ಥವೇನು? ಎಂದು ಪ್ರಶ್ನಿಸಿದರು.

ಬಾಂಬ್ ಸ್ಫೋಟ ಪರವಾದ ರೀತಿಯಲ್ಲಿ ಹೇಳಿಕೆ ಅಪರಾಧ

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಮಾತನಾಡಿದ ಸುಮಲತಾ, ಇದು ಅತ್ಯಂತ ಭಯಾನಕ ವಿಚಾರ, ಎಲ್ಲರೂ ಖಂಡಿಸಬೇಕು. ಯಾರೂ ಇದನ್ನು ಸಮರ್ಥಿಸಿಕೊಳ್ಳುವ ಕೆಲಸ‌‌ ಮಾಡಬಾರದು. ಅವರ ಪರವಾದ ರೀತಿಯಲ್ಲಿ ಹೇಳಿಕೆ ಕೊಡುವುದು ಅಪರಾಧ ಎಂದರು.

ಮಂಗಳೂರು ಕುಕ್ಕರ್ ಬ್ಲಾಸ್ಟ್ ಆದ ರೀತಿ ಅಂತಾನೇ ಹೇಳುತ್ತಾರೆ. ಪೊಲೀಸ್ ಆದಷ್ಟು ಬೇಗ ಆರೋಪಿಯನ್ನು ಬಂಧಿಸುವ ವಿಶ್ವಾಸ ಇದೆ ಎಂದರು. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಆರೋಪ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪಾಕ್ ಪರ ಘೋಷಣೆ ವಿಡಿಯೋ ಸಂಬಂಧ ಎಫ್​ಎಸ್​ಎಲ್​ ವರದಿಯಲ್ಲೂ ಘೋಷಣೆ ಕೂಗಿರುವುದು ನಿಜ ಎಂಬಂತೆ ಬಂದಿದೆ. ತಪ್ಪು ಮಾಡಿದರೂ ಖಂಡಿಸದೇ ರಕ್ಷಣೆ ಮಾಡುವುದು ಸರಿಯಲ್ಲ ಎಂದರು.

ಮಂಡ್ಯದಲ್ಲಿ ಮನೆ ನಿರ್ಮಿಸಲಿರುವ ಸುಮಲತಾ

ಮಂಡ್ಯದಲ್ಲಿ ಬಾಡಿಗೆ ಮನೆಯಲ್ಲಿ ಇದ್ದೇವೆ. ಮುಂದೆ ಮಂಡ್ಯದಲ್ಲಿ ಮನೆ ಕಟ್ಟುತ್ತೇವೆ. ಇದು ನಮ್ಮ ಮನೆ ಅಂಬರೀಶ್ ಇದ್ದ ಕಾಲದಿಂದಲೂ ಈ ಮನೆಯಲ್ಲಿ ರೆಂಟ್​ನಲ್ಲೇ ಇದ್ದೇವೆ. ಅಂಬರೀಶ್ ಅವರು ಎಲೆಕ್ಷನ್ ಗೆದ್ದವರು, ಸಾಧಕ ಬಾಧಕ ಗೊತ್ತಿದೆ. ಹನಕೆರೆ ಬಳಿ ಲ್ಯಾಂಡ್ ತೆಗೆದುಕೊಂಡು ಗುದ್ದಲಿ ಪೂಜೆ ಮಾಡಿ ಮನೆಕಟ್ಟುವ ಆಸೆ ಇತ್ತು. ಆದರೆ ಅದರಲ್ಲಿ ರಾಜಕಾರಣ ನಡೆಯಿತು. ಮನೆ ಕಟ್ಟುವಾಗ ಅಡಚಣೆ, ಸಮಸ್ಯೆ ಕ್ರಿಯೆಟ್ ಮಾಡಿದರು. ನ್ಯೂಟ್ರಲ್ ಆಗೋದು ವಾಸಿ ಅಂತ ಆಗಿದ್ದೇನೆ. ದೇವರು ಆಶೀರ್ವಾದ ಮಾಡಿದರೆ ಮುಂದೆ ಮನೆ ಕಟ್ಟೋಣೋ. ನನಗಿಂತ ಅಭಿಗೆ ಮಂಡ್ಯದಲ್ಲಿ ಮನೆ ಕಟ್ಟಲು ತುಂಬಾ ಆಸೆ ಇದೆ‌ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ