ರಂಗೇರಿದ ಮಂಡ್ಯ ಲೋಕಸಭಾ ಅಖಾಡ; ಟಿಕೆಟ್ ಘೋಷಣೆಗೂ ಮೊದಲೇ ಹಾಲಿ ಸಂಸದೆ ಸುಮಲತಾ ಫುಲ್ ಆಕ್ಟೀವ್
ಲೋಕಸಭಾ ಚುನಾವಣೆಗೆ ಇನ್ನೇನೂ ಕೆಲವೇ ದಿನಗಳು ಬಾಕಿ ಇವೆ. ಸಕ್ಕರೆ ನಗರಿ ಮಂಡ್ಯದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಸದ್ಯ ಬಿಜೆಪಿ ಟಿಕೆಟ್ಗಾಗಿ ಸಾಕಷ್ಟು ಪ್ರಯತ್ನ ಪಡುತ್ತಿರುವ ರೇಬಲ್ ಲೇಡಿ ಸಂಸದೆ ಸುಮಲತಾ, ಟಿಕೆಟ್ ಘೋಷಣೆಗೂ ಮೊದಲೇ ಕ್ಷೇತ್ರದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ.
ಮಂಡ್ಯ, ಮಾ.03: ಲೋಕಸಭಾ ಸಮರಕ್ಕೆ ಇನ್ನೇನೂ ಕೆಲವು ದಿನಗಳು ಬಾಕಿ ಇವೆ. ಅದರಲ್ಲೂ ಸಕ್ಕರೆ ನಗರಿ ಮಂಡ್ಯ (Mandya)ದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಬಿಜೆಪಿ ಹೈಕಮಾಂಡ್ ಈಗಾಗಲೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಸದ್ಯ ಬಿಜೆಪಿ ಟಿಕೆಟ್ಗಾಗಿ ರೆಬಲ್ ಲೇಡಿ ಸುಮಲತಾ(Sumalatha) ಅವರು ದೆಹಲಿ ಮಟ್ಟದಲ್ಲಿ ದಾಳ ಉರುಳಿಸಿ, ಮಂಡ್ಯ ಬಿಜೆಪಿ ಟಿಕೆಟ್ ಗಾಗಿ ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಮತ್ತೊಂದು ಕಡೆ ಬಿಜೆಪಿ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಮಂಡ್ಯ ಮೈತ್ರಿ ಟಿಕೆಟ್ ಯಾರಿಗೆ ಎಂಬ ಬಗ್ಗೆ ಇನ್ನು ತೀರ್ಮಾನವಾಗಿಲ್ಲ. ಆದರೆ, ಹಾಲಿ ಸಂಸದೆ ಸುಮಲತಾ, ತಮಗೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿ ತಾವು ಸ್ವರ್ಧಿಸುವ ಮಂಡ್ಯ ಕ್ಷೇತ್ರದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ.
15 ದಿನಗಳಲ್ಲಿ 6ನೇ ಬಾರಿ ಮಂಡ್ಯ ಪ್ರವಾಸ
ಚುನಾವಣೆ ಪೂರ್ವದಲ್ಲಿ ಕ್ಷೇತ್ರದತ್ತ ಅಷ್ಟಾಗಿ ಬಾರದ ಸುಮಲತಾ, ತಿಂಗಳಿಗೆ ಒಮ್ಮೆ ಬಂದು ಹೋಗುತ್ತಿದ್ದರು. ಆದರೆ, ಇದೀಗ 15 ದಿನಗಳಲ್ಲಿ 6ನೇ ಬಾರಿ ಮಂಡ್ಯ ಪ್ರವಾಸ ಮಾಡುತ್ತಿದ್ದಾರೆ. ಟಿಕೆಟ್ ಸಿಗುವ ನಿರೀಕ್ಷೆಯಲ್ಲಿರುವ ರೇಬಲ್ ಲೇಡಿ, ಮಂಡ್ಯ ಜಿಲ್ಲೆಯಾದ್ಯಂತ ಹಲವು ಕಾಮಗಾರಿಗಳ ಉದ್ಘಾಟನೆ ಸೇರಿದಂತೆ ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದರಲ್ಲೂ ಇಂದು ಇಡೀ ದಿನ ಮಂಡ್ಯ ಜಿಲ್ಲೆಯಲ್ಲಿಯೇ ಓಡಾಟ ಮಾಡಿ, ಪ್ರಮುಖವಾಗಿ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ಕಾಲಭೈರವೇಶ್ವರನ ದರ್ಶನ ಪಡೆದು, ನಿರ್ಮಲಾನಂದ ಸ್ವಾಮೀಜಿಗಳ ಆರ್ಶೀವಾದ ಕೂಡ ಪಡೆದಿದ್ದಾರೆ.
ಇದನ್ನೂ ಓದಿ:ಲೋಕಸಭಾ ಚುನಾವಣೆ: ಮಂಡ್ಯ ಕಣದಿಂದ ಹಿಂದೆ ಸರಿದ ನಿಖಿಲ್, ಯಾರಿಗೆ ಸಿಗಲಿದೆ ಮೈತ್ರಿಯ ಟಿಕೆಟ್, ಮಹತ್ವದ ಸಭೆ
ಇನ್ನು ಕಳೆದ ಬಾರಿ ಚುನಾವಣೆಯಲ್ಲಿ ಪ್ರಚಾರಕ್ಕೂ ಮೊದಲು ನಿರ್ಮಲಾನಂದ ಶ್ರೀಗಳ ಆರ್ಶೀವಾದ ಪಡೆದಿದ್ದರು. ಅದೇ ರೀತಿ ಮೊನ್ನೆ ಸಹಾ ಶ್ರೀಗಳ ಆರ್ಶೀವಾದ ಪಡೆದು, ನಾನು ಪ್ರಚಾರ ಕೂಡ ಆರಂಭಿಸುತ್ತೇನೆ ಎಂದಿದ್ದರು. ಅದರ ಬೆನ್ನಲ್ಲೇ ಇಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಅದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶ್ರೀಗಳನ್ನ ಭೇಟಿ ಮಾಡಿ, ಆರ್ಶೀವಾದ ಪಡೆದಿದ್ದಾರೆ. ಒಟ್ಟಾರೆ ಟಿಕೆಟ್ ಘೋಷಣೆಗೂ ಮೊದಲೇ ಹಾಲಿ ಸಂಸದೆ ತಮ್ಮ ಕ್ಷೇತ್ರದಲ್ಲಿ ಫುಲ್ ಆಕ್ಟೀವ್ ಆಗಿದ್ದು, ಸುಮಲತಾ ನಡೆ ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಹಾಗಾದರೆ ರೇಬಲ್ ಲೇಡಿಗೆ ಟಿಕೆಟ್ ಸಿಗುತ್ತಾ ಇಲ್ಲವೇ, ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ