ರಾಮನಗರ: ಗ್ರೇಸ್ ಕಮ್ಯೂನಿಟಿ ಚರ್ಚ್ಗೆ ಬೆಂಕಿ, ಸುಟ್ಟು ಕರಕಲಾದ ಪ್ರಾರ್ಥನಾ ಪರಿಕರ, ಶಿಲುಬೆ, ಏಸುವಿನ ಮೂರ್ತಿ
ಮಂಡ್ಯ, ರಾಮನಗರದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ರಾಮನಗರದಲ್ಲಿ ಗ್ರೇಸ್ ಕಮ್ಯೂನಿಟಿ ಚರ್ಚ್ ಬೆಂಕಿಗೆ ಆಹುತಿಯಾಗಿದೆ. ಪ್ರಾರ್ಥನಾ ಪರಿಕರ ಶಿಲುಬೆ ಸೇರಿದಂತೆ ಏಸುವಿನ ಮೂರ್ತಿ ಸುಟ್ಟ ಕರಕಲಾಗಿದೆ. ಇನ್ನು ಮಂಡ್ಯ ತಾಲೂಕಿನ ತೂಬಿನಕೆರೆ ಕೈಗಾರಿಕಾ ಪ್ರವೇಶದಲ್ಲಿ ಮುಂಜಾನೆ 4 ಗಂಟೆ ಸುಮಾರಿಗೆ ಬೆಲ್ಟ್ ಕಾರ್ಖಾನೆಗೆ ಬೆಂಕಿ ಬಿದ್ದಿದೆ.
ರಾಮನಗರ, ಮಾರ್ಚ್.03: ರಾಮನಗರ (Ramanagara) ಪಟ್ಟಣದ ಗ್ರೇಸ್ ಕಮ್ಯೂನಿಟಿ ಚರ್ಚ್ ಬೆಂಕಿಗೆ (Church Fire) ಆಹುತಿಯಾಗಿದೆ. ಸುಟ್ಟ ಚರ್ಚ್ ನೋಡಿ ಭಕ್ತರು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ. ಚರ್ಚ್ಗೆ ಕಿಡಿಗೇಡಿಗಳು ಬೆಂಕಿ ಹಾಕಿರುವ ಆರೋಪ ಕೇಳಿ ಬಂದಿದೆ. ಬೆಂಕಿ ಅವಘಡದಿಂದ ಪ್ರಾರ್ಥನಾ ಪರಿಕರ ಶಿಲುಬೆ ಸೇರಿದಂತೆ ಏಸುವಿನ ಮೂರ್ತಿ ಕೂಡ ಸುಟ್ಟು ಹೋಗಿದೆ. ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ಚರ್ಚ್ ಸಿಬ್ಬಂದಿ ಮನವಿ ಮಾಡಿದ್ದಾರೆ.
ಪ್ರತಿ ರವಿವಾರ ನಡೆಯುತ್ತಿದ್ದ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲು ಬಂದ ಭಕ್ತರು ಸುಟ್ಟ ಚರ್ಚ್ ನೋಡಿ ಕಣ್ಣೀರಿಟ್ಟಿದ್ದಾರೆ. ಶುಕ್ರವಾರದಂದೇ ಚರ್ಚ್ಗೆ ಕಿಡಿಗೇಡಿಗು ಬೆಂಕಿ ಹಚ್ಚಿದ್ದಾರೆ ಎಂದು ಕಿಡಿಕಾರಿದ್ದಾರೆ. ಕಿಡಿಗೇಡಿಗಳ ಮೇಲೆ ಕ್ರಮ ವಹಿಸುವಂತೆ ಚರ್ಚ್ ಸಿಬ್ಬಂದಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ. ಚರ್ಚ್ ಸುಟ್ಟು ಹೋಗಿರುವ ವಿಡಿಯೋ ಟ್ಯಾಗ್ ಮಾಡಿ ಮನವಿ ಮಾಡಿದ್ದಾರೆ. ಘಟನೆ ಸಂಬಂಧ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚರ್ಚ್ಗೆ ಹೇಗೆ ಬೆಂಕಿ ಬಿತ್ತು ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಶಾರ್ಟ್ ಸರ್ಕ್ಯೂಟ್ನಿಂದ ಬೆಲ್ಟ್ ತಯಾರಿಕಾ ಕಾರ್ಖಾನೆಗೆ ಬೆಂಕಿ
ಇನ್ನು ಮತ್ತೊಂದೆಡೆ ಮಂಡ್ಯ ತಾಲೂಕಿನ ತೂಬಿನಕೆರೆ ಕೈಗಾರಿಕಾ ಪ್ರವೇಶದಲ್ಲಿ ಮುಂಜಾನೆ 4 ಗಂಟೆ ಸುಮಾರಿಗೆ ಬೆಲ್ಟ್ ಕಾರ್ಖಾನೆಗೆ ಬೆಂಕಿ ಬಿದ್ದಿದೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಲ್ಟ್ ತಯಾರಿಕಾ ಕಾರ್ಖಾನೆಗೆ ಬೆಂಕಿ ತಗುಲಿದೆ. ಬೆಂಕಿಯ ಕೆನ್ನಾಲಿಗೆಗೆ ಬೆಲ್ಟ್ ಫ್ಯಾಕ್ಟರಿ ಹೊತ್ತಿ ಉರಿದಿದೆ. ಇಡೀ ಕಾರ್ಖಾನೆ ಬೆಂಕಿಗೆ ಆಹುತಿಯಾಗಿದೆ.
ತೂಬಿನಕೆರೆ ಗ್ರಾಮದ ಕೈಗಾರಿಕಾ ಪ್ರವೇಶದಲ್ಲಿರುವ ಪ್ಲೇಕಾನ್ ಹೆಸರಿನ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಸದ್ಯ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:43 am, Sun, 3 March 24