ಮಂಡ್ಯ, (ಸೆಪ್ಟೆಂಬರ್ 04): ತಮಿಳುನಾಡಿಗೆ (Tamil Nadu) ಕಾವೇರಿ ನೀರು (Cauvery river water) ಬಿಡುಗಡೆ ವಿರೋಧಿಸಿ ರಾಜ್ಯದಲ್ಲಿ ಹೋರಾಟ ಭುಗಿಲೆದ್ದಿದೆ. ಅದರಲ್ಲೂ ಮಂಡ್ಯದಲ್ಲಿ (Mandya) ಕಾವೇರಿ ಕಿಚ್ಚು ಇಂದು ಸಹ ಮುಂದುವರೆದಿದೆ. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಕಳೆದ ಆರು ದಿನಗಳಿಂದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ಎಸ್ ಬಳಿ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರು ಇದೀಗ ಅಂತಿಮವಾಗಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಪ್ರತಿಭಟನೆ ವೇಳೆ ಮಾತನಾಡಿದ ಕರ್ನಾಟಕ ಸರ್ವೋದಯ ಪಕ್ಷದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಹೋರಾಟ ಆರನೇ ದಿನಕ್ಕೆ ಕಾಲಿಟ್ಟಿದೆ. ಅಹೋರಾತ್ರಿ ಚಳುವಳಿ ಮಾಡುತ್ತಿದ್ದು, ಇದೀಗ ನಾವು ಕೂಡ ಕಾನೂನು ಹೋರಾಟ ಮಾಡುತ್ತೇವೆ. ಸರ್ಕಾರದಿಂದ ಯಾವ ರೀತಿ ಕೇಸ್ ಫೈಲ್ ಮಾಡಿದ್ದಾರೆ ಅದರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇವೆ. ಅದರ ಮೇಲೆ ನಾವು ಸಹ ಪೆಟಿಶನ್ ಹಾಕುತ್ತೇವೆ. ಬುಧವಾರದ ಒಳಗೆ ಕೋರ್ಟ್ಗೆ ಅರ್ಜಿ ಸಲ್ಲಿಸುತ್ತೇವೆ ಎಂದರು.
ಮಾಜಿ ಅಡ್ವೋಕೇಟ್ ಜನರಲ್ ರವಿ ವರ್ಮರನ್ನ ಭೇಟಿ ಮಾಡುತ್ತೇವೆ. ಸರ್ಕಾರ ಯಾವ ರೀತಿ ಅರ್ಜಿ ಹಾಕಿದೇ ಎನ್ನುವುದರ ಮೇಲೆ ನಾವು ರಿಟ್ ಅರ್ಜಿ ಸಲ್ಲಿಸುತ್ತೇವೆ. ಮೊದಲು ಸರ್ಕಾರದಿಂದ ಮಾಹಿತಿ ಪಡೆಯುತ್ತೇವೆ. ಬಳಿಕ ಸರ್ಕಾರದ ಅರ್ಜಿ ಒಳಗೆ ಸೇರಿಸಲು ಸಾಧ್ಯವಾ ಎನ್ನುವುದನ್ನು ಚರ್ಚಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಲೆಕ್ಕಚಾರ ಹಾಕಿದರೆ ಕೆಆರ್ಎಸ್ನಲ್ಲಿ ನೀರು 12 ಟಿಸಿಎಂಗೆ ಬರಲಿದೆ. ಬೆಂಗಳೂರಿಗೆ ಕುಡಿಯಲು ನೀರು ಇರಲ್ಲ. ಈಗಾಗಲೇ ರೈತರು ಭತ್ತ ನಾಟಿ ಮಾಡಿದ್ದಾರೆ. ರೈತರಿಗೆ ನೀರಿಲ್ಲ. ಇದಕ್ಕಾಗಿ ಮತ್ತೊಂದು ಹೋರಾಟ ಮಾಡುತ್ತೇವೆ. ಪ್ರಾಧಿಕಾರ ವಾಸ್ತವ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಒಟ್ಟಿನಲ್ಲಿ ಒಂದೆಡೆ ಕಾವೇರಿಗಾಗಿ ಪ್ರತಿಭಟನೆ ಭುಗಿಲೆದ್ದಿದ್ರೆ, ಮತ್ತೊಂದೆಡೆ ಕಾವೇರಿ ನೀರು ನಿರ್ವಹಣಾ ಸಮಿತಿ ಮತ್ತು ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿದುಹೋಗುತ್ತಿದೆ. ಇತ್ತ ಕೇಂದ್ರಕ್ಕೆ ಸರ್ವಪಕ್ಷಗಳ ನಿಯೋಗ ಕೊಂಡೊಯ್ಯಲು ರಾಜ್ಯ ಸರ್ಕಾರಕ್ಕೆ ಒತ್ತಾಯ ಕೂಡ ಜೋರಾಗಿದ್ದು, ಇನ್ನೊಂದೆಡೆ ರೈತರು ಸಿಡಿದೆದ್ದಿದ್ದಾರೆ.
ಇನ್ನಷ್ಟು ನಿಮ್ಮ ನಿಮ್ಮ ಜಿಲ್ಲೆಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 12:07 pm, Mon, 4 September 23