ಮಂಡ್ಯ, ಆಗಸ್ಟ್ 31: ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಆದೇಶ ಹೊರಡಿಸಿದ್ದು, ಇದರ ಅನ್ವಯ ಕರ್ನಾಟಕ ಸರ್ಕಾರವು ಹರಿಸುತ್ತಿರುವ ನೀರಿನ ಪ್ರಮಾಣವನ್ನು ಹೆಚ್ಚಿಸಿದೆ. ಇದರ ವಿರುದ್ಧ ಮಂಡ್ಯದ (Mandya) ರೈತರು ಸಿಡಿದೆದ್ದಿದ್ದು, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಶ್ರೀರಂಗಪಟ್ಟಣದಲ್ಲಿ ರೈತರಿಂದ ಅರೆಬೆತ್ತಲೆ ಮೆರವಣಿಗೆ ನಡೆಸಿದ್ದು, ಚಾಮರಾಜನಗರ ಜಿಲ್ಲೆಯಲ್ಲೂ (Chamarajanagara) ಹೋರಾಟ ನಡೆಯುತ್ತಿದೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ರೈತರು ಅರೆಬೆತ್ತಲೆ ಮೆರವಣಿಗೆ ನಡೆಸಿದರು. ಭೂಮಿತಾಯಿ ಹೋರಾಟ ಸಮಿತಿಯು ಶ್ರೀರಂಗಪಟ್ಟಣದ ಕಾವೇರಿ ನದಿ ಸ್ನಾನಘಟ್ಟದಿಂದ ತಾಲೂಕು ಕಚೇರಿವರೆಗೆ ಅರೆ ಬೆತ್ತಲೆ ಮೆರವಣಿಗೆ ನಡೆಸಲಾಗಿದೆ. ಈ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ಹೋರಾಟವು ದಿನೇ ದಿನೇ ಕಾವೇರುತ್ತಿದೆ. ತಮಿಳುನಾಡಿಗೆ ನಿತ್ಯ 5,000 ಕ್ಯೂಸೆಕ್ ನೀರು ಬಿಡಲು ಸೂಚನೆ ಹಿನ್ನೆಲೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ವಿರುದ್ಧ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಭಾಗಿಯಾಗಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: ತಮಿಳುನಾಡಿಗೆ ಒಂದೇ ಒಂದು ಕ್ಯೂಸೆಕ್ ನೀರನ್ನೂ ಬಿಡಬಾರದು: ಮಂಡ್ಯ ಕಾಂಗ್ರೆಸ್ ಶಾಸಕ ರವಿಕುಮಾರ್ ಆಗ್ರಹ
ರೈತ ಪರ, ಕನ್ನಡ ಪರ ಸೇರಿದಂತೆ ಹಲವು ಸಂಘಟನೆಗಳು ನಡೆಸಿದ ಪ್ರತಿಭಟನೆಯಲ್ಲಿ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಲಾಯಿತು. ರಕ್ತ ಕೊಟ್ಟಿವು ನೀರು ಕೊಡಲ್ಲ ಎಂದು ಘೋಷಣೆಗಳನ್ನು ಕೂಗಲಾಯಿತು. ಈ ವೇಳೆ ಮಾಜಿ ಸಚಿವ ಆತ್ಮಾನಂದ, ರೈತ ಹೋರಾಗಾರ್ತಿ ಸುನಂದಾ ಜಯರಾಂ, ಮಾಜಿ ಎಂಎಲ್‌ಸಿ ಕೆಟಿ ಶ್ರೀಕಂಠೇಗೌಡ ಭಾಗಿಯಾದರು.
ಚಾಮರಾಜನಗರ: ಗಡಿ ನಾಡು ಚಾಮರಾಜನಗರ ಜಿಲ್ಲೆಯಲ್ಲೂ ಕಾವೇರಿ ಹೋರಾಟದ ಕಿಚ್ಚು ಜೋರಾಗಿದೆ. ನಗರದ ಭುವನೇಶ್ವರಿ ವೃತ್ತದ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಕನ್ನಡಪರ ಸಂಘಟನೆಗಳು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಪ್ರತಿ ಹರಿದು ಹಾಕಿದವು.
ಮುಂದಿನ ದಿನದಲ್ಲಿ ಸಂಸದರು ಹಾಗೂ ರಾಜ್ಯ ಸಂಪುಟದ ಸಚಿವರ ಮನೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ ಪ್ರತಿಭಟನಾಕಾರರು, ನಮಗೆ ಕುಡಿಯಲು, ಬೆಳೆ ಬೆಳೆಯಲು ನೀರಲ್ಲದೆ ಇದ್ದರೂ ತಮಿಳುನಾಡಿಗೆ ನೀರು ಹರಿಸುವುದು ಎಷ್ಟು ಸರಿ? ತಮಿಳುನಾಡಿನವರು ಮೂರನೇ ಬೆಳೆ ಬೆಳೆಯಲು ನೀರು ಕೇಳುತ್ತಿದ್ದಾರೆ? ಸುಪ್ರೀಂ ಕೋರ್ಟ್ ಆದೇಶ ಬರುವ ಮುನ್ನವೇ ಆತುರದಲ್ಲಿ ನೀರು ಬಿಡಲು ಕಾರಣವೇನು? ಎಂದು ಪ್ರಶ್ನಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ