ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ದಂಪತಿ ಡಿಸೆಂಬರ್ನಲ್ಲಿ ಮಂಡ್ಯಕ್ಕೆ; ಚಲುವರಾಯಸ್ವಾಮಿ ನಿಯೋಗದಿಂದ ಸಿದ್ದರಾಮಯ್ಯ ಭೇಟಿ
Barack Obama Mandya visit; ಒಬಾಮ ದಂಪತಿ ಆಗಮಿಸುತ್ತಿರುವ ಕಾರಣ ಹಲ್ಲೆಗೆರೆಯಲ್ಲಿ ಹೆಲಿಪ್ಯಾಡ್, ರಸ್ತೆ, ಚರಂಡಿ, ವಿದ್ಯುದ್ದೀಪ, ಕುಡಿಯುವ ನೀರು ಮುಂತಾದ ಸೌಕರ್ಯಗಳನ್ನು ಸರ್ಕಾರದ ವತಿಯಿಂದ ಒದಗಿಸಿ ಕೊಡುವಂತೆ ನಿಯೋಗವು ಮನವಿ ಮಾಡಿತು.ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ ಅವರು, ‘ಒಳ್ಳೆಯ ಕಾರ್ಯಗಳಿಗೆ ನಿಮ್ಮ ಜತೆ ನಾವಿದ್ದೇವೆ. ಬೇಕಾದ ಎಲ್ಲ ಬೆಂಬಲ ನೀಡಲಿದ್ದೇವೆ’ ಎಂದರು.
ಬೆಂಗಳೂರು, ಆಗಸ್ಟ್ 31: ಮಂಡ್ಯದ ಹಲ್ಲೆಗೆರೆಯ (Mandya) ಭೂತಾಯಿ ಟ್ರಸ್ಟ್ ವತಿಯಿಂದ ಹಲ್ಲೆಗೆರೆಯಲ್ಲಿ ನಿರ್ಮಿಸಲಾಗುತ್ತಿರುವ ಅಂತಾರಾಷ್ಟ್ರೀಯ ಯೋಗ ಮತ್ತು ಧ್ಯಾನ ಕೇಂದ್ರ (International Yoga And Meditation Centre) ಶಂಕುಸ್ಥಾಪನೆಗೆ ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ (Barack Obama) ದಂಪತಿ, ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರು ಡಿಸೆಂಬರ್ ತಿಂಗಳಲ್ಲಿ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರಸ್ಟ್ ಅಧ್ಯಕ್ಷರಾಗಿರುವ ಅಮೆರಿಕದ ವೈದ್ಯ ಡಾ. ಲಕ್ಷ್ಮಿನರಸಿಂಹ ಮೂರ್ತಿ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ, ವಿಧಾನ ಪರಿಷತ್ ಶಾಸಕರಾದ ದಿನೇಶ್ ಗೂಳಿಗೌಡ, ಶಾಸಕರಾದ ರವಿಕುಮಾರ್ ಗಣಿಗ, ಬಾಬು ಬಂಡಿಸಿದ್ದೇಗೌಡ ನೇತೃತ್ವದ ನಿಯೋಗವು ಗುರುವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.
ಒಬಾಮ ದಂಪತಿ ಆಗಮಿಸುತ್ತಿರುವ ಕಾರಣ ಹಲ್ಲೆಗೆರೆಯಲ್ಲಿ ಹೆಲಿಪ್ಯಾಡ್, ರಸ್ತೆ, ಚರಂಡಿ, ವಿದ್ಯುದ್ದೀಪ, ಕುಡಿಯುವ ನೀರು ಮುಂತಾದ ಸೌಕರ್ಯಗಳನ್ನು ಸರ್ಕಾರದ ವತಿಯಿಂದ ಒದಗಿಸಿ ಕೊಡುವಂತೆ ನಿಯೋಗವು ಮನವಿ ಮಾಡಿತು.
ಅಂತಾರಾಷ್ಟ್ರೀಯ ಯೋಗ ಮತ್ತು ಧ್ಯಾನ ಕೇಂದ್ರವು ಹಲ್ಲೆಗೆರೆ, ಮಂಡ್ಯ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ದೊಡ್ಡ ಕೊಡುಗೆಯಾಗಲಿದೆ ಎಂದು ನಿಯೋಗದ ಸದಸ್ಯರು ಕೇಂದ್ರದ ಕಾರ್ಯ ಸ್ವರೂಪವನ್ನು ವಿವರಿಸಿದರು. ಮಾತ್ರವಲ್ಲ ಟ್ರಸ್ಟ್ ಮಾಡುತ್ತಿರುವ ಸಾಮಾಜಿಕ ಕಾರ್ಯವನ್ನು ವಿವರಿಸಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ ಅವರು, ‘ಒಳ್ಳೆಯ ಕಾರ್ಯಗಳಿಗೆ ನಿಮ್ಮ ಜತೆ ನಾವಿದ್ದೇವೆ. ಬೇಕಾದ ಎಲ್ಲ ಬೆಂಬಲ ನೀಡಲಿದ್ದೇವೆ. ಶೀಘ್ರದಲ್ಲೇ ಅಧಿಕಾರಿಗಳ ಸಭೆ ಕರೆದು ಸಂಬಂಧಪಟ್ಟ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತೇನೆ’ ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಶಾಸಕ ದಿನೇಶ ಗೂಳಿಗೌಡ, ಶಾಸಕರಾದ ರವಿಕುಮಾರ್ ಗಣಿಗ, ಬಾಬು ಬಂಡಿಸಿದ್ದೇಗೌಡ, ಅಮೆರಿಕದ ಅಕ್ಕ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಶಿವಮೂರ್ತಿ ಕಿಲಾರ ಮುಂತಾದವರು ನಿಯೋಗದಲ್ಲಿದ್ದು, ಸಿಎಂಗೆ ವಿವರಣೆ ನೀಡಿದರು.
ಅಮೆರಿಕದಿಂದ ಹಲ್ಲೆಗೆರೆಗೆ
ಅಮೆರಿಕ ಹಾಲಿ ಅಧ್ಯಕ್ಷರಾದ ಜೋ ಬೈಡನ್ ಅವರ ವೈದ್ಯಕೀಯ ಸಲಹೆಗಾರ ಡಾ. ವಿವೇಕ್ ಮೂರ್ತಿ ಅವರು ಭಾರತೀಯ ಮೂಲದವರು. ಡಾ.ವಿವೇಕ ಮೂರ್ತಿ ಅಮೆರಿಕದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೂ ವೈದ್ಯಕೀಯ ಸಲಹೆಗಾರರಾಗಿದ್ದರು.
ಡಾ.ವಿವೇಕ್ ಮೂರ್ತಿ ಅವರ ತಂದೆ, ಅನಿವಾಸಿ ಭಾರತೀಯ ಡಾ. ಲಕ್ಷ್ಮಿನರಸಿಂಹ ಮೂರ್ತಿ (ಎಲ್.ಎನ್.ಮೂರ್ತಿ) ಅವರು ತಮ್ಮ ಮಾತೃಭೂಮಿಯ ಅಭ್ಯುದಯಕ್ಕೆ ಪಣ ತೊಟ್ಟಿದ್ದಾರೆ. ಅವರ ಸ್ವಂತ ಊರು ಮಂಡ್ಯ ಜಿಲ್ಲೆಯ ಹಲ್ಲೆಗೆರೆಯಾಗಿದ್ದು, ಇಲ್ಲಿ 13 ಎಕರೆ ಪಿತ್ರಾರ್ಜಿತ ಜಮೀನಿದೆ. ಅದರಲ್ಲಿ ಭೂತಾಯಿ ಟ್ರಸ್ಟ್ ನಿಂದ ಸುಮಾರು 80 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಯೋಗ ಮತ್ತು ಧ್ಯಾನ ಕೇಂದ್ರ ತೆರೆಯಲು ಯೋಜಿಸಿ, ಕಾರ್ಯಪ್ರವೃತ್ತರಾಗಿದ್ದಾರೆ.
ಇದನ್ನೂ ಓದಿ: ಸುಪ್ರೀಂಕೋರ್ಟ್ನಲ್ಲಿ ನಾಳೆ ಕಾವೇರಿ ನೀರು ವಿಚಾರಣೆ: ಕಾನೂನು ತಜ್ಞರೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್ ಸಭೆ, ಹೇಳಿದ್ದಿಷ್ಟು
ಟ್ರಸ್ಟ್ನ ಕಾರ್ಯಗಳಿಗೆ ಮಂಡ್ಯ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡುತ್ತಿದೆ. ಈ ಟ್ರಸ್ಟ್ಗೆ ಶಾಸಕರಾದ ದಿನೇಶ ಗೂಳಿಗೌಡ ಅವರು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 10 ಲಕ್ಷ ರೂಪಾಯಿ ಅನುದಾನವನ್ನು ನೀಡುವುದಾಗಿ ಘೋಷಿಸಿದ್ದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 5:55 pm, Thu, 31 August 23