ಒಕ್ಕಲಿಗ ಸಮುದಾಯದ ಹೊಸ ಸಂಕಟ ತೆರೆದಿಟ್ಟ ಚುಂಚಾದ್ರಿ ವಧು-ವರರ ಸಮಾವೇಶ: ಯುವತಿಯರ ಸಂಖ್ಯೆ ಕುಸಿತ, ಹುಡುಗರ ಪರಿತಾಪ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 14, 2022 | 10:46 AM

ಸಮಾವೇಶದಲ್ಲಿ ಕೇವಲ 200 ಒಕ್ಕಲಿಗ ಯುವತಿಯರು ಪಾಲ್ಗೊಂಡಿದ್ದರು, 10 ಸಾವಿರಕ್ಕೂ ಹೆಚ್ಚು ಯುವಕರು ಬಂದಿದ್ದರು.

ಮಂಡ್ಯ: ಕರ್ನಾಟಕದಲ್ಲಿ ಒಕ್ಕಲಿಗ ಯುವಕರು ಮದುವೆಗಾಗಿ ಪರಿತಪಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇಷ್ಟುದಿನ ಗಂಡು ಹೆತ್ತವರು ಮುಖಾಮುಖಿಯಾದಾಗ ಅನೌಪಚಾರಿಕವಾಗಿ ಚರ್ಚೆಯಾಗುತ್ತಿದ್ದ ಈ ವಿಚಾರ ಇದೀಗ ಕಣ್ಣಿಗೆ ಢಾಳಾಗಿ ಗೋಚರಿಸಿದೆ. ನಾಗಮಂಗಲ ತಾಲ್ಲೂಕಿನ ಚುಂಚನಗಿರಿಯಲ್ಲಿ ಸೋಮವಾರ ನಡೆದ ರಾಜ್ಯಮಟ್ಟದ ಒಕ್ಕಲಿಗ ವಧು-ವರರ ಸಮಾವೇಶದಲ್ಲಿ ಒಕ್ಕಲಿಗ ಸಮುದಾಯದ ಲಿಂಗಾನುಪಾತ ಮತ್ತು ಆರ್ಥಿಕ, ಸಾಮಾಜಿಕ ಸಮಸ್ಯೆಗಳು ಢಾಳಾಗಿ ಗೋಚರಿಸಿದವು. ಸಮಾವೇಶದಲ್ಲಿ ಕೇವಲ 200 ಒಕ್ಕಲಿಗ ಯುವತಿಯರು ಪಾಲ್ಗೊಂಡಿದ್ದರು, 10 ಸಾವಿರಕ್ಕೂ ಹೆಚ್ಚು ಯುವಕರು ಬಂದಿದ್ದರು. ವಧುಗಳು ಮತ್ತು ವರರ ಸಂಖ್ಯೆಯಲ್ಲಿದ್ದ ಈ ಅಂತರ ಗಮನಿಸಿದ ಆಯೋಜಕರಲ್ಲಿ ಅಚ್ಚರಿ ಮೂಡಿತ್ತು.

ವಧು-ವರರ ಸಮಾವೇಶಕ್ಕೆಂದು ಬಂದಿದ್ದ ಬಹುತೇಕ ಪೋಷಕರು ಭಾವಿ ಸೊಸೆ ಸಿಗಬಹುದೆ ಎಂದು ಹಾತೊರೆಯುತ್ತಿದ್ದರು. ವಧು-ವರರ ಸಮಾವೇಶಕ್ಕೆಂದು‌ ಭಾರೀ ಸಂಖ್ಯೆಯ ಜನಸ್ತೋಮ ಹರಿದುಬಂದ ಹಿನ್ನೆಲೆಯಲ್ಲಿ ಚುಂಚನಗಿರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಸವಾರರು ಪರದಾಡಬೇಕಾಯಿತು. ಚುಂಚನಗಿರಿ ಮಹಾ ಸಂಸ್ಥಾನ ಮಠ, ಸಮಾಜ ಸಂಪರ್ಕ ವೇದಿಕೆ, ರಾಜ್ಯ ಚುಂಚಾದ್ರಿ ಮಹಿಳಾ ಒಕ್ಕೂಟದ ಸಹಯೋಗದಲ್ಲಿ ವಧು-ವರರ ಸಮಾವೇಶವನ್ನು ಆಯೋಜಿಸಲಾಗಿತ್ತು.

Published on: Nov 14, 2022 10:46 AM