ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದವರು ಗಿಮಿಕ್ ಮಾಡುವುದು ಸಹಜ: ಶಾಲೆಗಳಿಗೆ ಕೇಸರಿ ಬಣ್ಣಕ್ಕೆ ಸಿದ್ದರಾಮಯ್ಯ ವ್ಯಂಗ್ಯ
ಇದು ಬಿಜೆಪಿಯ ದುಡ್ಡಲ್ಲ, ಜನರ ದುಡ್ಡು. ಜನರು ಕೇಸರಿಕರಣ ಮಾಡಲು ಕೇಳಿದ್ದಾರೆಯೇ? ಇಷ್ಟ ಬಂದಂತೆ ಅಧಿಕಾರ ಮಾಡಲು ಆಗುವುದಿಲ್ಲ ಎಂದು ಸಿದ್ದರಾಮಯ್ಯ ಹರಿಹಾಯ್ದರು.
ಮೈಸೂರು / ಮಂಡ್ಯ: ಶಾಲೆಗಳ ಗೋಡೆಗಳಿಗೆ ಕೇಸರಿ ಬಣ್ಣ ಬಳಿಯುವ ಬಿಜೆಪಿ ಸರ್ಕಾರದ ನಿರ್ಧಾರವನ್ನು ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧಿಸಿದ್ದಾರೆ. ‘ಶಾಲೆಗಳಿಗೆ ಬಣ್ಣ ಬಳಿಯಲು ಸರ್ಕಾರದ ದುಡ್ಡು ಬಳಸಲಾಗುತ್ತದೆ. ಇದು ಬಿಜೆಪಿಯ ದುಡ್ಡಲ್ಲ, ಜನರ ದುಡ್ಡು. ಜನರು ಕೇಸರಿಕರಣ ಮಾಡಲು ಕೇಳಿದ್ದಾರೆಯೇ? ಇಷ್ಟ ಬಂದಂತೆ ಅಧಿಕಾರ ಮಾಡಲು ಆಗುವುದಿಲ್ಲ. ಹಾಗೆ ಮಾಡುವುದು ಜನ ವಿರೋಧಿ, ಸಂವಿಧಾನ ವಿರೋಧಿ ಕ್ರಮ ಆಗುತ್ತದೆ. ಇವರಿಗೆ ಜನರು ಬಹುಮತ ಕೊಟ್ಟಿಲ್ಲ. ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದು ಏನೇನೋ ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಹಾಕಿರುವ ಪ್ರತಿಕ್ರಿಯಿಸಿದ ಅವರು, ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಸಾಹಿತಿಗಳು, ಚಿಂತಕರು, ಪತ್ರಕರ್ತರು, ಪ್ರತಿಪಕ್ಷದವರಿಗೆ ಬೆದರಿಕೆ ಹಾಕುವುದು ಒಳ್ಳೆಯ ಬೆಳವಣಿಗೆ ಅಲ್ಲ. ಬಿಜೆಪಿಯವರು ಮೊದಲಿನಿಂದಲೂ ಇಂಥವುಗಳನ್ನು ಪೋಷಿಸುತ್ತಿದ್ದಾರೆ. ಕೇಂದ್ರ ಸರ್ಕಾರವೇ ಇದರ ಪರವಾಗಿ ಇದೆ. ಮೋದಿ ಅಧಿಕಾರಕ್ಕೆ ಬಂದ ದಿನದಿಂದ ಸೇಡಿನ ರಾಜಕಾರಣ ಶುರುವಾಗಿದೆ. ಬಸವರಾಜ ಬೊಮ್ಮಾಯಿ, ಆರಗ ಜ್ಞಾನೇಂದ್ರ ಇದರ ಭಾಗವಾಗಿದ್ದಾರೆ. ಸಂವಿಧಾನದ 19ನೇ ವಿಧಿ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ವಿಷಾದಿಸಿದರು.
‘ಸಿದ್ದರಾಮಯ್ಯಗೆ ರಾಜಕೀಯ ಪುನರ್ಜನ್ಮ ಕೊಟ್ಟೆ’ ಎಂಬ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಇದೊಂದು ಬಾಲಿಶ ಹೇಳಿಕೆ. ನಾನು 8 ಚುನಾವಣೆ ಗೆಲ್ಲುವಾಗ ಇದೇ ಕುಮಾರಸ್ವಾಮಿ ಎಲ್ಲಿದ್ದರು? ಎಚ್.ಡಿ.ಕುಮಾರಸ್ವಾಮಿ ರಾಜಕೀಯಕ್ಕೆ ಬಂದಿದ್ದು 1996ರಲ್ಲಿ. ನಾನು ಅಷ್ಟೊತ್ತಿಗಾಗಲೇ ಹಲವು ಚುನಾವಣೆಗಳನ್ನು ಗೆದ್ದಿದ್ದೆ. ಎಚ್ಡಿಕೆ ಹೇಳಿಕೆ ಮತದಾರರಿಗೆ ಮಾಡಿದ ಅವಮಾನ ಎಂದು ಅಭಿಪ್ರಾಯಪಟ್ಟರು.
ನನಗೆ ಬಹಳ ವರ್ಷ ಬದುಕಬೇಕೆಂಬ ಆಸೆಯಿದೆ. ಹೆಚ್ಚು ವರ್ಷ ಬದುಕುಳಿದು, ಜನರ ಸೇವೆ ಮಾಡಬೇಕು ಎಂಬ ಆಸೆಯಿಟ್ಟುಕೊಂಡಿದ್ದೇನೆ. ಈಗ ನನಗೆ 75 ವರ್ಷ. ಡಯಾಬಿಟಿಸ್ನಿಂದ ಆಯಸ್ಸು 10 ವರ್ಷ ಕಡಿಮೆಯಾಗುತ್ತೆ ಎನ್ನುತ್ತಾರೆ. ನಾನು ಎಷ್ಟು ವರ್ಷಗಳ ಕಾಲ ಬದುಕುತ್ತೇನೋ ಗೊತ್ತಿಲ್ಲ. ರೋಗಗಳು ಬಾರದಂತೆ ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಸಲಹೆ ಮಾಡಿದರು.
ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಅವರನ್ನು ಮುಂದಿನ ಸಿಎಂ ಸಿದ್ದರಾಮಯ್ಯ ಘೋಷಣೆಯೊಂದಿಗೆ ಅಭಿಮಾನಿಗಳು ಸ್ವಾಗತಿಸಿದರು.
ಯಾವ ಕ್ಷೇತ್ರದಿಂದ ನಿಲ್ಲಬೇಕು ಎಂದು ಸಿದ್ದರಾಮಯ್ಯ ಕ್ಷೇತ್ರ ಹುಡುಕುತ್ತಿರುವ ಕುರಿತು ಬಿಜೆಪಿ ವ್ಯಂಗ್ಯ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕರ್ನಾಟಕದ 224 ಕ್ಷೇತ್ರಗಳಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸುವವನು ನಾಯಕ. ಪ್ರಜಾಪ್ರಭುತ್ವದಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸುವ ಅವಕಾಶ ಇದೆ. ಜನರು ಬಯಸಿದ ಕಡೆ ಸ್ಪರ್ಧಿಸುತ್ತೇನೆ. ಕೋಲಾರ ಅಥವಾ ವರುಣಾ ಕ್ಷೇತ್ರದಿಂದ ನಾನು ಸ್ಪರ್ಧಿಸಬೇಕು ಎಂದುಕೊಂಡಿದ್ದೇನೆ. ಈ ಬಗ್ಗೆ ಅಂತಿಮ ತೀರ್ಮಾನ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದರು.
ಸದನದಲ್ಲಿ ಕಬ್ಬು ಬೆಳೆಗಾರರ ಸಂಕಷ್ಟ ಪ್ರಸ್ತಾಪ: ಸಿದ್ದರಾಮಯ್ಯ ಭರವಸೆ
ಕಬ್ಬಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು, ಭತ್ತದ ಬೆಂಬಲ ಬೆಲೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಸಿದ್ದರಾಮಯ್ಯ ಭೇಟಿಯಾಗಿ ಚರ್ಚಿಸಿದರು. ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಪ್ರತಿಭಟಿಸುತ್ತಿದ್ದ ರೈತರೊಂದಿಗೆ ಮಾತನಾಡಿದ ಅವರು, ಈ ಕುರಿತು ಈಗಾಗಲೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಮುಂದಿನ ದಿನಗಳಲ್ಲಿ ವಿಧಾನಸಭೆ ಅಧಿವೇಶನದಲ್ಲಿಯೂ ಪ್ರಸ್ತಾಪಿಸುತ್ತೇನೆ ಎಂದು ಭರವಸೆ ನೀಡಿದರು. ಬಿಜೆಪಿ ಸಚಿವರು, ಶಾಸಕರು ಸುಳ್ಳು ಹೇಳುತ್ತಿದ್ದಾರೆ. ಹೀಗಾಗಿಯೇ ಪ್ರತಿಭಟನಾನಿರತ ರೈತರನ್ನು ಅವರು ಭೇಟಿ ಮಾಡಿಲ್ಲ ಎಂದು ದೂರಿದರು. ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಉಪಸ್ಥಿತರಿದ್ದರು.
Published On - 2:23 pm, Mon, 14 November 22