ಪಾಂಡವಪುರ: ಬೇಬಿಬೆಟ್ಟ ಸಮೀಪದ ಗೋಮಾಳದಲ್ಲಿ ಸ್ಫೋಟಕಗಳು ಪತ್ತೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 09, 2021 | 3:30 PM

ಗಿಡಗಳ ಮಧ್ಯೆ ಬಿದ್ದಿರುವ ಜಿಲೆಟಿನ್ ಕಡ್ಡಿಗಳನ್ನು ಕಂಡ ತಕ್ಷಣ ರೈತರು ಅಧಿಕಾರಿಗಳ ಗಮನಕ್ಕೆ ತಂದರು.

ಪಾಂಡವಪುರ: ಬೇಬಿಬೆಟ್ಟ ಸಮೀಪದ ಗೋಮಾಳದಲ್ಲಿ ಸ್ಫೋಟಕಗಳು ಪತ್ತೆ
ಪಾಂಡವಪುರ ತಾಲ್ಲೂಕು ಬೇಬಿಬೆಟ್ಟ ಸಮೀಪ ಗ್ರಾಮಸ್ಥರ ಕಣ್ಣಿಗೆ ಬಿದ್ದ ಸ್ಫೋಟಕಗಳು
Follow us on

ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದಲ್ಲಿ ಜಾನುವಾರು ಮೇಯಿಸುತ್ತಿದ್ದ ರೈತರ ಕಣ್ಣಿಗೆ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ. ಗಿಡಗಳ ಮಧ್ಯೆ ಬಿದ್ದಿರುವ ಜಿಲೆಟಿನ್ ಕಡ್ಡಿಗಳನ್ನು ಕಂಡ ತಕ್ಷಣ ರೈತರು ಅಧಿಕಾರಿಗಳ ಗಮನಕ್ಕೆ ತಂದರು. ಬೇಬಿಬೆಟ್ಟ ವ್ಯಾಪ್ತಿಯ ಬನ್ನಂಗಾಡಿ ಗ್ರಾಮದ ಸರ್ವೆ ನಂಬರ್ 24ರ ಗೋಮಾಳ ಪ್ರದೇಶದಲ್ಲಿ ಸ್ಫೋಟಕ ಪತ್ತೆಯಾಗಿದೆ.

ಈ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದಲೂ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದಿಂದ ಸ್ಫೋಟಕ ಶೋಧ ಕಾರ್ಯಾಚರಣೆ ನಡೆಯುತ್ತಿತ್ತು. ಶೋಧ ಕಾರ್ಯಾಚರಣೆ ವೇಳೆ ಪತ್ತೆಯಾಗದ ಸ್ಪೋಟಕಗಳು ನಂತರದ ದಿನಗಳಲ್ಲಿ ರೈತರ ಕಣ್ಣಿಗೆ ಬಿದ್ದಿರುವುದು ಹಲವರ ಹುಬ್ಬೇರುವಂತೆ ಮಾಡಿದೆ. ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಸಿಬ್ಬಂದಿ ಸರಿಯಾಗಿ ಶೋಧ ನಡೆಸಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ (ಕೆಆರ್​ಎಸ್​) ಧಕ್ಕೆಯಾಗಿದೆ ಎಂದು ಸಂಸದೆ ಸುಮಲತಾ ಕಳೆದ ಜುಲೈ ತಿಂಗಳಲ್ಲಿ ಆರೋಪಿಸಿದ್ದರು. ಈ ಸಂಬಂಧ ಪಾಂಡವಪುರ ತಾಲ್ಲೂಕಿನ ವಿವಿಧೆಡೆ ಸ್ಥಳಪರಿಶೀಲನೆ ನಡೆಸಿದ್ದ ಅವರು ಅಧಿಕಾರಿಗಳ ಸಭೆ ನಡೆಸಿ ಎಚ್ಚರಿಕೆ ನೀಡಿದ್ದರು. ನಂತರ ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ, ಕೆಆರ್​ಎಸ್ ರಕ್ಷಿಸುವಂತೆ ಮನವಿ ಮಾಡಿದ್ದರು.

ಕಳೆದ ತಿಂಗಳು ಬೇಬಿಬೆಟ್ಟ ಗಣಿಗಾರಿಕೆ ಪ್ರದೇಶದಲ್ಲಿ ಸಂಸದೆ ಸುಮಲತಾ ಪರಿಶೀಲನೆ ನಡೆಸಲೆಂದು ಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗಣಿಗಾರಿಕೆಯ ಪರ, ವಿರೋಧದ ಕೂಗು ಕೇಳಿಬಂದಿತ್ತು. ಗಣಿಗಾರಿಕೆಯಿಂದ ಸಮಸ್ಯೆ ಆಗ್ತಿದೆ ದಯವಿಟ್ಟು ನಿಲ್ಲಿಸಿ ಎಂದು ಗಣಿಗಾರಿಕೆ ನಿಲ್ಲಿಸಲು ಬೇಬಿ ಗ್ರಾಮಸ್ಥರ ಮನವಿ ಒಂದೆಡೆಯಾದರೆ, ಅದೇ ಸ್ಥಳದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವಂತೆ ಒತ್ತಾಯವೂ ಕೇಳಿಬಂದಿತ್ತು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಗ್ರಾಮದಲ್ಲಿ ಬೇಬಿ ಸರ್ಕಲ್ ಗಣಿಗಾರಿಕೆ ಬಗ್ಗೆ ಪರ, ವಿರೋಧ ಘೋಷಣೆಗಳು ಮೊಳಗಿದ್ದವು.

(Explosives found near Babybetta of Pandavapura Taluk)

ಇದನ್ನೂ ಓದಿ: Mandya: ಕೆಆರ್​ಎಸ್ ಸಮೀಪ ಗಣಿ ಪ್ರದೇಶದಲ್ಲಿ ಸ್ಫೋಟಕ ಪತ್ತೆ; ಮುಂದುವರಿದ ಶೋಧಕಾರ್ಯ

ಇದನ್ನೂ ಓದಿ: ಬೇಬಿಬೆಟ್ಟದಲ್ಲಿ ಸಂಸದೆ ಸುಮಲತಾ ಪರಿಶೀಲನೆ: ಗಣಿಗಾರಿಕೆ ಪರ, ವಿರೋಧ ಘೋಷಣೆ ಕೂಗಿದ ಜನರು