ಮಂಡ್ಯ: ಸಜ್ಜೆ ಕುಸಿದುಬಿದ್ದು ಮಹಿಳೆ ದುರ್ಮರಣವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಲಗೆರೆಪುರದಲ್ಲಿ ನಡೆದಿದೆ. ಘಟನೆಯಲ್ಲಿ ಹಲವರಿಗೆ ಗಾಯವಾಗಿದೆ. ಕೊಂಡೋತ್ಸವ ವೀಕ್ಷಣೆಗೆ ಸಜ್ಜೆ ಮೇಲೆ ಕುಳಿತಿದ್ದಾಗ ದುರ್ಘಟನೆ ಸಂಭವಿಸಿದೆ. ಸಜ್ಜೆ ಕುಸಿದುಬಿದ್ದು ಪುಟ್ಟಲಿಂಗಮ್ಮ ಸ್ಥಳದಲ್ಲಿಯೇ ದುರ್ಮರಣವನ್ನಪ್ಪಿದ್ದಾರೆ. ಗಾಯಳುಗಳಿಗೆ ಮದ್ದೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೊಂಡೋತ್ಸವ ನೋಡಲು ಮನೆ ಸಜ್ಜೆ ಮೇಲೆ ಹತ್ತಿದ್ದರು. ಸಜ್ಜೆ ಮೇಲೆ, ಕೆಳಗೆ ನಿಂತಿದ್ದ 40ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ. ಮಂಡ್ಯ DC, DHO ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ 35 ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ಮದ್ದೂರು ತಾಲೂಕು ಆಸ್ಪತ್ರೆಯಲ್ಲಿ 10 ಜನರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಒಬ್ಬರಿಗೆ ಹಾಗೂ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮತ್ತೊಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕೊಂಡೋತ್ಸವದ ವೇಳೆ ಸಜ್ಜೆ ಕುಸಿದು ಮಹಿಳೆ ಸಾವು ಹಿನ್ನೆಲೆ, ಹುಲಿಗೆರೆಪುರದ ಬಸವೇಶ್ವರ ದೇವರ ಕೊಂಡೋತ್ಸವ ರದ್ದು ಮಾಡಲಾಗಿದೆ. ಹುಲಿಗೆರೆಪುರ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಇತ್ತ ಮತ್ತೊಂದು ಪ್ರಕರಣದಲ್ಲಿ ಟಿ.ನರಸೀಪುರ ತಾಲೂಕಿನ ರಂಗಸಮುದ್ರ ಗ್ರಾಮದಲ್ಲಿ ಹುಚ್ಚಗಮ್ಮ ದೇವಿ ಮತ್ತು ಲಕ್ಷ್ಮೀದೇವಿ ಹಬ್ಬದ ಕೊಂಡೋತ್ಸವದಲ್ಲಿ, ತಡರಾತ್ರಿ ಕೊಂಡ ಹಾಯುವಾಗ ಮನು ಎಂಬ ವ್ಯಕ್ತಿ ಆಯತಪ್ಪಿ ಬಿದ್ದ ಘಟನೆ ನಡೆದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಕೊಂಡೋತ್ಸವ ವೀಕ್ಷಣೆ ವೇಳೆ ಅವಘಡ ಪ್ರಕರಣ ಹಿನ್ನೆಲೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಮೃತ ಪುಟ್ಟಲಿಂಗಮ್ಮ ಕುಟುಂಬಕ್ಕೆ ವೈಯಕ್ತಿಕ ಪರಿಹಾರ ನೀಡಿದ್ದಾರೆ. ವೈಯಕ್ತಿಕವಾಗಿ ₹1 ಲಕ್ಷ ಪರಿಹಾರ ನೀಡಿದ್ದು, ಸರ್ಕಾರದಿಂದ ₹5 ಲಕ್ಷ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ₹5 ಲಕ್ಷ ಪರಿಹಾರ ನೀಡುವಂತೆ ಸಿಎಂಗೆ ಮನವಿ ಮಾಡುತ್ತೇನೆ. ಗಾಯಾಳುಗಳಿಗೆ ಸರ್ಕಾರದಿಂದಲೇ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಉಳಿದವರ ಸ್ಥಿತಿ ಸ್ಥಿರವಾಗಿದೆ ಎಂದು ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಕೆ.ಗೋಪಾಲಯ್ಯ ಹೇಳಿಕೆ ನೀಡಿದ್ದಾರೆ.
ದ್ವಿಚಕ್ರ ವಾಹನದ ಮೇಲೆ ಮರ ಬಿದ್ದು ಸವಾರ ದುರ್ಮರಣ
ದ್ವಿಚಕ್ರ ವಾಹನದ ಮೇಲೆ ಮರ ಬಿದ್ದು ಸವಾರ ದುರ್ಮರಣವನ್ನಪ್ಪಿದ ಘಟನೆ ಮೈಸೂರು-ಟಿ.ನರಸೀಪುರ ರಸ್ತೆಯಲ್ಲಿ ಸಂಭವಿಸಿದೆ. ಮೂಗೂರು ನಿವಾಸಿ ಮನು (30) ಎಂಬವರು ಮೃತ ದುರ್ದೈವಿ. ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಮರ ಬಿದ್ದು ಘಟನೆ ಸಂಭವಿಸಿದೆ. ಟಿ. ನರಸೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇಂದಿರಾ ಕ್ಯಾಂಟೀನ್ಗೆ ಸಂಕಷ್ಟ; ಹಣ ಬಿಡುಗಡೆ ಮಾಡದ ಸರ್ಕಾರ
ಸರ್ಕಾರದಿಂದ ಕಳೆದ 4 ವರ್ಷದಿಂದ ಹಣವೇ ಬಂದಿಲ್ಲ. ಸರ್ಕಾರ ಬರೋಬ್ಬರಿ ₹23 ಕೋಟಿ ಬಾಕಿ ಉಳಿಸಿಕೊಂಡಿದೆ ಎಂಬ ಬಗ್ಗೆ ಇಂದಿರಾ ಕ್ಯಾಂಟೀನ್ ಆಹಾರ ಗುತ್ತಿಗೆದಾರ ಬಸಲಿಂಗಪ್ಪ ಅಳಲು ತೋಡಿಕೊಂಡಿದ್ದಾರೆ. ಕೊಪ್ಪಳ, ಬಳ್ಳಾರಿ, ಕಲಬುರಗಿ, ಬಾಗಲಕೋಟೆ ಸೇರಿದಂತೆ ರಾಜ್ಯದ ವಿವಿಧೆಡೆ ಟೆಂಡರ್ ಪಡೆದಿರುವ ಬಸಲಿಂಗಪ್ಪ ಹಣ ಬಿಡುಗಡೆ ಸಂಬಂಧ ಪಾಲಿಕೆ ಆಯುಕ್ತರಿಗೂ ಪತ್ರ ಬರೆದಿದ್ದಾರೆ. ಆದರೆ, ಪಾಲಿಕೆ ಆಯುಕ್ತರು ಕೂಡ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಹೀಗೆ ಆದರೆ ಇಂದಿರಾ ಕ್ಯಾಂಟೀನ್ ನಡೆಸುವುದಕ್ಕೆ ಕಷ್ಟವಾಗುತ್ತಿದೆ. ಹಣ ಬಿಡುಗಡೆಯಾಗದಿದ್ದರೆ ಕ್ಯಾಂಟೀನ್ ಮುಚ್ಚಬೇಕಾಗುತ್ತೆ ಎಂದು ಹೇಳಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಹುಲಿ ದಾಳಿಗೆ ಯುವಕ ಬಲಿ; ಸ್ಥಳೀಯರಿಂದ ಅಹೋರಾತ್ರಿ ಪ್ರತಿಭಟನೆ
ಕೊಡಗು ಜಿಲ್ಲೆಯಲ್ಲಿ ಹುಲಿ ದಾಳಿಗೆ ಯುವಕ ಬಲಿ ಪ್ರಕರಣಕ್ಕೆ ಸಂಬಂಧಿಸಿ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ರುದ್ರಗುಪ್ಪೆ ಗ್ರಾಮದಲ್ಲಿ ಸ್ಥಳೀಯರಿಂದ ಅಹೋರಾತ್ರಿ ಪ್ರತಿಭಟನೆ ನಡೆಸಲಾಗಿದೆ. ಸ್ಥಳಕ್ಕೆ ಹಿರಿಯ ಅರಣ್ಯ ಅಧಿಕಾರಿಗಳು ಬರಬೇಕೆಂದು ಪಟ್ಟು ಹಿಡಿಯಲಾಗಿದ್ದು ಮೃತ ಗಣೇಶ್ ಶವ ಸ್ಥಳಾಂತರಕ್ಕೆ ಅವಕಾಶ ನೀಡದೆ ಧರಣಿ ನಡೆಸಲಾಗಿದೆ. ಅರಣ್ಯಾಧಿಕಾರಿಗಳ ವಿರುದ್ಧ FIR ದಾಖಲಿಸುವಂತೆ ಆಗ್ರಹ ಕೇಳಿಬಂದಿದೆ. ಸ್ಥಳಕ್ಕೆ ಭೇಟಿ ನೀಡಿದ್ದ SP ಅಯ್ಯಪ್ಪಗೆ ಧರಣಿ ನಿರತರು ಒತ್ತಾಯ ಮಾಡಿದ್ದಾರೆ. ಹುಲಿ ಸೆರೆಗೆ ಆಗ್ರಹಿಸಿ ಧರಣಿ ನಡೆಸಿದ್ದರೂ ನಿರ್ಲಕ್ಷ್ಯಕ್ಕೆ ಆಕ್ರೋಶ ಕೇಳಿಬಂದಿದೆ. ಅರಣ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಗಣೇಶ್ ಬಲಿ ಎಂದು ಆರೋಪ ಮಾಡಲಾಗಿದೆ.
ಇದನ್ನೂ ಓದಿ: SSLC Exam: ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು
ಇದನ್ನೂ ಓದಿ: Crime News: ಹಿರಿ ಸಹೋದರನನ್ನು ಕೊಲೆ ಮಾಡಿದವನ ಬಂಧನ, ಕೃಷಿ ಹೊಂಡದಲ್ಲಿ ತಾಯಿ-ಮಗನ ಶವ ಪತ್ತೆ
Published On - 7:57 am, Tue, 29 March 22