ಮಂಡ್ಯ, ಸೆ.01: ಅಪ್ರಾಪ್ತ ಬಾಲಕರಿಂದ ಕಿರುಕುಳ ಹಿನ್ನಲೆ 15 ವರ್ಷದ ಬಾಲಕಿ ನೇಣಿಗೆ ಶರಣಾಗಿರುವ ಘಟನೆ ಮಂಡ್ಯ (mandya) ತಾಲೂಕಿನ ಹನಕೆರೆ ಗ್ರಾಮದಲ್ಲಿ ನಡೆದಿದೆ. ಇಂಪನ(15) ಮೃತ ಬಾಲಕಿ. ಬಾಲಕಿಯನ್ನ ಪ್ರೀತಿಸುವ ವಿಚಾರವಾಗಿ ಯುವಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಾಲಕಿಗೆ ಪ್ರೀತಿಸುವಂತೆ ಕೂಡ ಬಾಲಕರು ಒತ್ತಾಯ ಮಾಡಿದ್ದಾರೆ. ಇವರ ಮಾತಿನ ಚಕಮಕಿಯ ಆಡಿಯೋ ವೈರಲ್ ಆಗಿದೆ.
ಅಷ್ಟೇ ಅಲ್ಲ, ಅದನ್ನು ಮೃತ ಬಾಲಕಿಯ ತಾಯಿಯ ವಾಟ್ಸಪ್ಗೂ ಬಾಲಕರು ಕಳುಹಿಸಿದ್ದಾರೆ. ಇದರಿಂದ ಮನನೊಂದು ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಘಟನೆ ನಂತರ ಅಪ್ರಾಪ್ತ ಬಾಲಕರು ಪರಾರಿಯಾಗಿದ್ದು, ಈ ಕುರಿತು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಕಾಣೆಯಾಗಿರುವ ಬಾಲಕರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ:ಪೋಷಕರಿಗೆ ಕ್ಷಮೆ ಕೋರಿ ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ, ದೇಹದ ಅರ್ಧ ಭಾಗಕ್ಕೆ ಹುಡುಕಾಟ
ಕೋಲಾರ: ಮಾಲೂರು ತಾಲೂಕಿನ ಚಿಕ್ಕತಿರುಪತಿ ಗ್ರಾಮದ ಆದಿಶೇಷ ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿ ಸಾಲಬಾಧೆಗೆ ಬೇಸತ್ತು ಸಿಬ್ಬಂದಿ ಶ್ರೀರಾಮ್(40) ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇತ್ತೀಚೆಗೆ ಆನ್ಲೈನ್ ಗ್ಯಾಂಬ್ಲಿಂಗ್ನಲ್ಲಿ ಹಣ ಕಳೆದುಕೊಂಡು ಸಾಲಕ್ಕೆ ಸಿಲುಕಿದ್ದ ಶ್ರೀರಾಮ್, ಸಾಲಗಾರರ ಕಾಟ ತಾಳಲಾರದೆ ಮನನೊಂದು ನೇಣುಬಿಗಿದುಕೊಂಡು ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲೂಕಿನ ಮ್ಯಾಕಲಹಳ್ಳಿ ಬಳಿ ಟಿಪ್ಪರ್ಗೆ ಬೈಕ್ ಡಿಕ್ಕಿಯಾಗಿ ಟೆಕ್ಕಿ ಚಿರಾಯು(24) ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಗಾಂಧಿನಗರದ ನಿವಾಸಿಯಾದ ಚಿರಾಯು, ವೀಕೆಂಡ್ ಹಿನ್ನೆಲೆ ಮೋಜು ಮಸ್ತಿಗೆ ಬೈಕ್ ರೈಡ್ ಬಂದಿದ್ದ. ಇನ್ನು ಗಾಯಗೊಂಡ ಹಿಂಬದಿ ಸವಾರನಿಗೆ ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಶಿವಮೊಗ್ಗ: ವಿದ್ಯುತ್ ತಂತಿ ತಗುಲಿ ವೃದ್ದೆ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಪಾರ್ವತಮ್ಮ (67) ಮೃತ ದುರ್ದೈವಿ. ತೋಟದ ಪಂಪ್ ಸೆಟ್ಟಿನ ವಿದ್ಯುತ್ ವೈಯರ್ ಬೇಲಿಗೆ ಸುತ್ತಿಟ್ಟಿದ್ದ ಪರಿಣಾಮ ಬೇಲಿಗೆ ವಿದ್ಯುತ್ ಪ್ರವಹಿಸಿದೆ. ಈ ವೇಳೆ ಬೇಲಿ ಮುಟ್ಟಿದ ವೃದ್ದೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ರಿಪ್ಪನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ