ಮಂಡ್ಯ, ಆ.14: 78ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಮಂಡ್ಯ ತಾಲೂಕಿನ ಕೆರಗೋಡು(Keregodu) ಗ್ರಾಮದ ಧ್ವಜ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ನಾಳೆ(ಆ.15) ವಿವಾದಿತ ಅರ್ಜುನ ಸ್ತಂಭದಲ್ಲಿ ಶಾಸಕ ಗಣಿಗ ರವಿಕುಮಾರ್ ಧ್ವಜಾರೋಹಣಕ್ಕೆ ವಿರೋಧ ವ್ಯಕ್ತವಾಗಿದ್ದು, ಇಂದು ಉಪವಿಭಾಗಾಧಿಕಾರಿ ಶಿವಮೂರ್ತಿ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಶಾಸಕರು ಧ್ವಜಾರೋಹಣ ಮಾಡದಂತೆ ಆಗ್ರಹಿಸಿ, ಗ್ರಾಮಸ್ಥರೇ ಧ್ವಜಾರೋಹಣ ನೆರವೇರಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
ಇನ್ನು ಧ್ವಜಾರೋಹಣ ಮಾಡಲು ಗ್ರಾಮಸ್ಥರಿಗೆ ಅವಕಾಶ ಕೊಡದಿದ್ರೆ, ಅಧಿಕಾರಿಗಳೇ ನೆರವೇರಿಸಬೇಕು. ಆದರೆ, ಶಾಸಕರು ಧ್ವಜಾರೋಹಣ ಮಾಡಿದ್ರೆ ಶಾಂತಿ ಹದಗೆಡುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಹನುಮ ಧ್ವಜ ಹಾರಿಸಿದ್ದರಿಂದ 108 ಅಡಿ ಎತ್ತರದ ಅರ್ಜುನ ಸ್ತಂಭ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನಲೆ ಶಾಂತಿ ಸಭೆ ನಡೆಸಿ ತಾಲ್ಲೂಕು ಮಟ್ಟದ ಅಧಿಕಾರಿಗಳಿಂದ ಧ್ವಜಾರೋಹಣ ನಡೆಸುವುದಾಗಿ ಸಭೆಯಲ್ಲಿ ಗ್ರಾಮಸ್ಥರಿಗೆ ಎಸಿ ಶಿವಮೂರ್ತಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ಕೆರಗೋಡು ಹನುಮ ಧ್ವಜ ತೆರವು ವಿರೋಧಿಸಿ ಪ್ರತಿಭಟಿಸಿದ್ದ ಹಿಂದೂ ಕಾರ್ಯಕರ್ತರಿಗೆ ಪೊಲೀಸ್ ನೋಟಿಸ್
ಕಳೆದ 2024 ಜನವರಿ 22ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ವೇಳೆ ಕೆರೆಗೋಡುವಿನಲ್ಲಿ 108 ಅಡಿ ಸ್ತಂಭದಲ್ಲಿ ಹನುಮ ಧ್ವಜವನ್ನು ಹಾರಿಸಿದ್ದರು. ಬಳಿಕ ಅದನ್ನು ತೆರವು ಮಾಡಲು ಎಸಿ ಮತ್ತು ತಹಶೀಲ್ದಾರ್ ಸೇರಿ ಹಲವು ಅಧಿಕಾರಿಗಳು ಗ್ರಾಮಕ್ಕೆ ಬಂದಿದ್ದರು. ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ, ಅಧಿಕಾರಿಗಳ ಜೊತೆ ಜಟಾಪಟಿ ನಡೆಸಿದ್ದರು. ನಂತರ ಸ್ಥಳೀಯ ಮಹಿಳೆಯರು, ಯುವಕರು ಸ್ಥಳದಲ್ಲಿ ಜಮಾಯಿಸಿ ಜೈ ಶ್ರೀರಾಮ್, ಜೈ ಹನುಮ ಘೋಷಣೆ ಕೂಗಿದ್ದರು. ವಿರೋಧದ ನಡುವೆಯೂ ನಂತರ ಜಿಲ್ಲಾಡಳಿತ ಧ್ವಜ ತೆರವು ಮಾಡಿ, ಬಳಿಕ ತ್ರಿವರ್ಣ ಧ್ವಜ ಹಾರಿಸಿತ್ತು. ನಂತರ ವಿವಾದ ರಾಜಕೀಯ ಆಯಾಮ ಪಡೆದುಕೊಂಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:35 pm, Wed, 14 August 24