
ಮಂಡ್ಯ, ಫೆಬ್ರವರಿ 18: ಸಾಲಗಾರರು ಹಾಗೂ ಚಿನ್ನ ಅಡವಿಟ್ಟವರಿಂದ ತಪ್ಪಿಸಿಕೊಳ್ಳಲು ತನ್ನ ಮೇಲೆ ಆ್ಯಸಿಡ್ ದಾಳಿ ನಡೆಸಿ ಬಂಗಾರದ ಅಂಗಡಿ ದರೋಡೆ ಮಾಡಲಾಗಿದೆ ಎಂದು ಸಿನಿಮೀಯ ಮಾದರಿ ಕತೆ ಹೆಣೆದಿದ್ದ ಚಿನ್ನದ ಅಂಗಡಿ ಮಾಲೀಕ ಕೊನೆಗೆ ತಾನೇ ಪೊಲೀಸರ ಬಳಿ ಲಾಕ್ ಆಗಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ ನಡೆದಿದೆ. ಮಹಾಲಕ್ಷ್ಮೀ ಜ್ಯುವೆಲರಿ ಶಾಪ್ ನಡೆಸುತ್ತಿದ್ದ ಜಿತೇಂದ್ರ ಆರೋಪಿಯಾಗಿದ್ದು ಈತನ ವಿರುದ್ಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜಸ್ಥಾನದಿಂದ ಬಂದು ಕಳೆದ ಹಲವು ವರ್ಷಗಳಿಂದ ಕ್ಯಾತನಹಳ್ಳಿಯಲ್ಲಿ ಜ್ಯುವೆಲರಿ ಶಾಪ್ ಇಟ್ಟುಕೊಂಡಿದ್ದ ಜಿತೇಂದ್ರ ಸಿಂಗ್, ದುಷ್ಕರ್ಮಿಗಳು ತನ್ನ ಮೇಲೆ ದಾಳಿ ನಡೆಸಿ ಬಂಗಾರದ ಅಂಗಡಿ ದೋಚಿದ್ದಾರೆ ಎಂದು ಆರೋಪಿಸಿದ್ದ. ಅಂಗಡಿಯಲ್ಲಿದ್ದ 170 ಗ್ರಾಂ ಚಿನ್ನ, 8 ಕೆಜಿ ಬೆಳ್ಳಿ ದರೋಡೆ ಆಗಿದೆ ಎಂದು ತಿಳಿಸಿದ್ದ. ಗಾಯಗೊಂಡು ಈತ ಆಸ್ಪತ್ರೆ ಸೇರಿದ ಹಿನ್ನೆಲೆ ಪೊಲೀಸರು ಸುಮೋಟೋ ಕೇಸ್ ದಾಖಲು ಮಾಡಿಕೊಂಡು ತನಿಖೆಗಿಳಿದಿದ್ದರು. ಈ ವೇಳೆ ಜಿತೇಂದ್ರ ಸಿಂಗ್ ಮುಖಕ್ಕೆ ಮಾತ್ರ ಗಾಯವಾಗಿರೋದು ಪೊಲೀಸರ ಅನುಮಾನಕ್ಕೆ ಕಾರಣವಾಗದೆ. ಆ್ಯಸಿಡ್ ಎರಚಿ ಆರೋಪಿಗಳು ದರೋಡೆ ನಡೆಸಿದ್ದರೆ ಅದು ಈತನ ಕಣ್ಣಿಗೂ ಹಾನಿ ಮಾಡಬೇಕಿತ್ತು, ಆದರೆ ಆಗಿರಲಿಲ್ಲ. ಹೀಗಾಗಿ ಹೆಚ್ಚಿನ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ.
ಇದನ್ನೂ ಓದಿ: ಕಾರ್ಖಾನೆ ಸ್ಥಳಾಂತರದ ವೇಳೆ ಅವಘಡ; ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಸಾವು
ಗಗನಕ್ಕೇರಿದ ಚಿನ್ನದ ಸಾಲ ವಾಪಸ್ ಕೊಡದಿರಲು ಮತ್ತು ಚಿನ್ನ ಅಡವಿಟ್ಟವರಿಂದ ತಪ್ಪಿಸಿಕೊಳ್ಳಲು ಜಿತೇಂದ್ರ ಪ್ಲ್ಯಾನ್ ಮಾಡಿದ್ದ. ಚಿನ್ನಕ್ಕೆ ಬಳಸುವ ರಾಸಾಯನಿಕ ಮುಖಕ್ಕೆ ಬಳಿದುಕೊಂಡಿದ್ದ ಈತ, ಅಂಗಡಿ ದರೋಡೆ ನಡೆದಿದೆ. ಆರೋಪಿಗಳು ಸಿಸಿಟಿವಿ DVRನೂ ಬಿಡದೆ ಕದ್ದು ಎಸ್ಕೇಪ್ ಆಗಿದ್ದಾರೆ ಎಂದಿದ್ದ. ಡ್ರಾಮಾ ಮಾಡಿ ಎಲ್ಲರನ್ನು ನಂಬಿಸಿ ಕೆಲ ದಿನಗಳ ಬಳಿಕ ಅಂಗಡಿ ಮುಚ್ಚಿಕೊಂಡು ರಾಜಸ್ಥಾನಗೆ ಮರಳಲು ಪ್ಲ್ಯಾನ್ ಮಾಡಿದ್ದ ಎಂಬುದು ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ. ಸತ್ಯಾಸತ್ಯತೆ ಬಯಲಿಗೆಳೆದ ಪೊಲೀಸರು ಚಿನ್ನದಂಗಡಿ ಮಾಲೀಕನ ವಿರುದ್ಧವೇ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:57 am, Wed, 18 February 26