ಮಂಡ್ಯ, ಆಗಸ್ಟ್ 14: ಮಂಡ್ಯದಲ್ಲಿ ಮೆಡಿಕಲ್ ಮಾಫಿಯಾ ತಲೆ ಎತ್ತಿದೆಯಾ ಎಂಬ ಅನುಮಾನ ಈಗ ಬಲವಾಗಿದೆ. ಮೆಡಿಕಲ್ ಮಾಫಿಯಾದ ಹಿಂದೆ ಸರ್ಕಾರಿ ಅಧಿಕಾರಿಗಳು ಕೂಡ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಇದಕ್ಕೆ ಮುಖ್ಯ ಕಾರಣ, ಮಂಡ್ಯದ ಮಿಮ್ಸ್ ಆಸ್ಪತ್ರೆಯ ಔಷಧಿ ಮುಖ್ಯ ಉಗ್ರಾಣದ ಮೇಲೆ ಲೋಕಯುಕ್ತ ಅಧಿಕಾರಿಗಳು ದಾಳಿ ನಡೆಸಿದಾಗ ಕಂಡುಬಂದಿರುವ ಅಂಶಗಳು. ಲೋಕಾಯುಕ್ತ ದಾಳಿ ವೇಳೆ ಅವಧಿ ಮುಗಿದ ಲಕ್ಷಾಂತರ ರೂ. ಮೌಲ್ಯದ ಔಷಧಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ.
ಮಂಡ್ಯ ಎಸ್ಪಿ ಸುರೇಶ್ ಬಾಬು ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಉಗ್ರಾಣದಲ್ಲಿ ಎಕ್ಸ್ಪೈರಿ ಆಗಿರವ ಡ್ರಗ್ಸ್ ಶೇಖರಣೆ ಮಾಡಿರುವ ಬಗ್ಗೆ ದೂರುಗಳು ದಾಖಲಾಗಿದ್ದವು. ಲೋಕಯುಕ್ತ ನ್ಯಾಯಧೀಶರಿಗೆ ಕೇಶವಮೂರ್ತಿ ಎಂಬುವವರು ಕಳೆದ ತಿಂಗಳು ದೂರು ನೀಡಿದ್ದರು. ಈ ಹಿನ್ನೆಲೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾಳಿ ವೇಳೆ 40 ಲಕ್ಷ ರೂ. ಮೌಲದ್ಯ ರೆಮ್ಡಿಸಿವರ್ ಡ್ರಗ್ ಪತ್ತೆಯಾಗಿದೆ. ಇಷ್ಟೇ ಅಲ್ಲದೆ, ಲಕ್ಷಾಂತರ ರೂ. ಮೌಲ್ಯದ ಖಾಸಗಿ ಕಂಪನಿಗಳ ಔಷಧಿಗಳು ಕೂಡ ಪತ್ತೆಯಾಗಿವೆ. ಅವಧಿ ಮೀರಿದ ಔಷಧಗಳನ್ನು ಖಾಸಗಿ ಕಂಪನಿಗೆ ವಾಪಾಸ್ ಕಳುಹಿಸದೇ ನಿರ್ಲಕ್ಷ್ಯ ವಹಿಸುವುರುದು ಕಂಡುಬಂದಿದೆ.
ನಿಯಮಗಳ ಪ್ರಕಾರ, ಯಾವುದೇ ಔಷಧವನ್ನು ಅವಧಿ ಮುಗಿಯುವ ಮೂರು ತಿಂಗಳ ಒಳಗೆ ಕಂಪನಿಗೆ ವಾಪಾಸ್ ಕಳುಹಿಸಿ ಬದಲಿ ಔಷಧ ಪಡೆಯಬೇಕು. ನಿಯಮ ಹೀಗಿದ್ದರೂ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿರುವುದು ಕಂಡುಬಂದಿದೆ.
ಇದನ್ನೂ ಓದಿ: ಮಂಡ್ಯ: ರೈತರಿಗೆ ಒಂದು ಮಾತು ಕೊಟ್ಟ ಹೆಚ್ಡಿ ಕುಮಾರಸ್ವಾಮಿ; ಏನದು?
ಮಿಮ್ಸ್ ಆಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಅಧಿಕಾರಿಗಳು ಕೂಡ ಮೆಡಿಕಲ್ ಮಾಫಿಯಾದ ಪ್ರಭಾವಕ್ಕೆ ಒಳಗಾದರೇ ಎಂಬ ಶಂಕೆ ವ್ಯಕ್ತವಾಗಿದೆ.
ಈ ಹಿಂದೆ 2016-17 ರಲ್ಲೂ ಕೂಡ ಮಿಮ್ಸ್ನಲ್ಲಿ 5 ಲಕ್ಷ ರೂ. ಮೌಲ್ಯದ ಡ್ರಗ್ಸ್ ಶೇಖರಣೆ ಮಾಡಿದ್ದು ಬೆಳಕಿಗೆ ಬಂದಿತ್ತು. ಈ ಸಂಬಂಧ ಕೂಡ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಾಗಿತ್ತು. ಇದೀಗ ಮತ್ತೊಮ್ಮ ಲಕ್ಷಾಂತರ ರೂ. ಮೌಲ್ಯದ ಅವಧಿ ಮುಗಿದ ಔಷಧಗಳು ಪತ್ತೆಯಾಗಿವೆ. ಈ ಬಗ್ಗೆ ಇದೀಗ ಲೋಕಾಯುಕ್ತ ಅಧಿಕಾರಿಗಳು ಇಂಚಿಂಚೂ ಮಾಹಿತಿ ಕಲೆ ಹಾಕುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ