
ಮಂಡ್ಯ, ಡಿಸೆಂಬರ್ 20: ಮಂಡ್ಯ (Mandya) ಜಿಲ್ಲೆಯ ಮದ್ದೂರು ತಾಲೂಕಿನ ಹೊಂಬಾಳೆಗೌಡನ ದೊಡ್ಡಿ ಗ್ರಾಮದಲ್ಲಿ ಸತೀಶ್ ಹಾಗೂ ಸೌಮ್ಯ ದಂಪತಿಯ ಮನೆಯಲ್ಲಿ ಪತ್ತೆಯಾಗಿದ್ದ ನಿಗೂಢ ರಕ್ತದ ಕಲೆಗಳ ಪ್ರಕರಣದ ಸತ್ಯಾಸತ್ಯತೆ ಕೊನೆಗೂ ಬಯಲಾಗಿದೆ. ಎಫ್‌ಎಸ್‌ಎಲ್ (Forensic Science Laboratory) ವರದಿ ಬಹಿರಂಗಗೊಂಡಿದ್ದು, ಮನೆಯೊಳಗೆ ಹರಿದಿದ್ದ ರಕ್ತವು ಮನೆ ಮಾಲೀಕ ಸತೀಶ್ ಅವರದ್ದೇ ಎಂಬುದು ದೃಢಪಟ್ಟಿದೆ! ಅಕ್ಟೋಬರ್ 28ರಂದು ಸತೀಶ್ ದಂಪತಿಯ ಮನೆಯ ಹಾಲ್, ಬಾತ್‌ರೂಂ, ಟಿವಿ ಹಾಗೂ ಫ್ಯಾನ್‌ಗಳ ಮೇಲೆ ರಕ್ತದ ಕಲೆಗಳು ಕಾಣಿಸಿಕೊಂಡು ಗ್ರಾಮದೆಲ್ಲೆಡೆ ಆತಂಕ ಸೃಷ್ಟಿಸಿತ್ತು. ಮೊದಲಿಗೆ ಅದು ಯಾವುದೋ ಪ್ರಾಣಿಯ ರಕ್ತವಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಪ್ರಾಥಮಿಕ ತನಿಖೆಯಲ್ಲೇ ಅದು ಮನುಷ್ಯನ ರಕ್ತ ಎಂಬುದು ಗೊತ್ತಾಗಿತ್ತು.
ಈ ಪ್ರಕರಣದ ಗಂಭೀರತೆಯನ್ನು ಗಮನಿಸಿ ಬೆಸಗರಹಳ್ಳಿ ಠಾಣಾ ಪೊಲೀಸರು, ಎಫ್‌ಎಸ್‌ಎಲ್ ಹಾಗೂ ಶ್ವಾನದಳದ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ರಕ್ತದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಇದೀಗ ಬಂದಿರುವ ವರದಿಯಲ್ಲಿ, ಆ ರಕ್ತವು ಮನೆ ಮಾಲೀಕ ಸತೀಶ್ ಅವರದೇ ಎಂದು ಉಲ್ಲೇಖಿಸಲಾಗಿದೆ.
ಪೊಲೀಸ್ ತನಿಖೆಯಲ್ಲಿ ತಿಳಿದುಬಂದಂತೆ, ಸತೀಶ್ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ರಕ್ತ ತೆಳುಗೊಳಿಸುವ (ಬ್ಲಡ್ ಥಿನ್ನರ್) ಮಾತ್ರೆಗಳನ್ನು ಸೇವಿಸುತ್ತಿದ್ದರು. ಅವರಿಗೆ ದೇಹದ ಮೇಲೆ ಸೂಜಿ ಗಾತ್ರದ ಸಣ್ಣ ಗಾಯವಾಗಿದ್ದು, ಅದು ಅವರಿಗೂ ತಿಳಿಯದಂತೆ ರಕ್ತ ಚಿಮ್ಮಿ ಮನೆಯೊಳಗೆ ಹರಿದಿದೆ ಎನ್ನಲಾಗಿದೆ. ಆದರೆ ಇದರ ಅರಿವು ಅವರಿಗೂ ಆಗಿಲ್ಲದೇ ಇದ್ದುದರಿಂದ ಯಾರೋ ದುಷ್ಕೃತ್ಯ ಎಸಗಿರಬಹುದು, ಅಥವಾ ಮಾಟ ಮಂತ್ರಕ್ಕಾಗಿ ರಕ್ತ ಚೆಲ್ಲಿರಬಹುದು ಎಂಬ ಅನುಮಾನಗಳು ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ಮೂಡಿದ್ದವು. ಯಾಕೆಂದರೆ, ಕೇವಲ ಒಂದು ಕಡೆ ಅಲ್ಲದೆ ಮನೆ ಹಾಲ್, ಬಾತ್‌ರೂಂ, ಟಿವಿ ಹಾಗೂ ಫ್ಯಾನ್‌ಗಳ ಮೇಲೆಲ್ಲ ರಕ್ತದ ಕಲೆ ಕಾಣಿಸಿತ್ತು. ಹೀಗಾಗಿ ಸಹಜವಾಗಿಯೇ ಅನುಮಾನಗಳು ಹೆಚ್ಚಾಗಿದ್ದವು. ಇದರಿಂದ ಗ್ರಾಮದಲ್ಲಿ ಕೆಲಕಾಲ ಭಯ ಮತ್ತು ಕುತೂಹಲ ವಾತಾವರಣ ನಿರ್ಮಾಣವಾಗಿತ್ತು.
ಇದನ್ನೂ ಓದಿ: ಮಂಡ್ಯ: ನೆತ್ತರ ನಿಗೂಢತೆಗೆ ನಡುಗಿದ ದಂಪತಿ, ಮನೆಯಲ್ಲಿ ಎಲ್ಲಿ ನೋಡಿದರೂ ರಕ್ತದ ಕಲೆ!
ಆದರೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದ ಬಳಿಕ ಇದೀಗ ರಕ್ತ ರಹಸ್ಯ ಸಂಪೂರ್ಣವಾಗಿ ಬಯಲಾಗಿದ್ದು, ಯಾವುದೇ ಅಪರಾಧ ಅಥವಾ ಹೊರಗಿನ ದುರುದ್ದೇಶ ಇಲ್ಲ ಎಂಬುದು ಸ್ಪಷ್ಟವಾಗಿದೆ. ಎಫ್‌ಎಸ್‌ಎಲ್ ವರದಿಯಿಂದ ಸತೀಶ್ ದಂಪತಿ ಮತ್ತು ಗ್ರಾಮಸ್ಥರು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ.
Published On - 7:48 am, Sat, 20 December 25