ಮಲೈ ಮಹದೇಶ್ವರ ಮಹಾ ಕುಂಭಮೇಳಕ್ಕೆ ಲಕ್ಷಾಂತರ ಜನ: ಪೂರ್ಣಾಹುತಿಯ ನಂತರ ಕಳಸ ವಿಸರ್ಜನೆ ಮಾಡಿದ ನಿರ್ಮಲಾನಂದನಾಥ ಸ್ವಾಮೀಜಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 16, 2022 | 12:18 PM

ಸಂಗಮದಲ್ಲಿ ಮಹಾಕುಂಭದಂದು ತೀರ್ಥ ಸ್ನಾನ ಮಾಡಿದರೆ ಮಾತಾಪಿತೃ ದೋಷ, ಭೂ ದೋಷ, ನಾಗ ದೋಷಗಳು ಪರಿಹಾರವಾಗಲಿವೆ ಎಂಬ ನಂಬಿಕೆ ಭಕ್ತರಲ್ಲಿದೆ.

ಮಲೈ ಮಹದೇಶ್ವರ ಮಹಾ ಕುಂಭಮೇಳಕ್ಕೆ ಲಕ್ಷಾಂತರ ಜನ: ಪೂರ್ಣಾಹುತಿಯ ನಂತರ ಕಳಸ ವಿಸರ್ಜನೆ ಮಾಡಿದ ನಿರ್ಮಲಾನಂದನಾಥ ಸ್ವಾಮೀಜಿ
ಕೆ.ಆರ್ ಪೇಟೆ ತಾಲೂಕಿನ ಅಂಬಿಗರ ಹಳ್ಳಿ ಬಳಿ ಇರುವ ತ್ರಿವೇಣಿ ಸಂಗಮದಲ್ಲಿ ಮಲೈ ಮಹದೇಶ್ವರ ಮಹಾ ಕುಂಭಮೇಳಕ್ಕಾಗಿ ಅಗತ್ಯ ಸಿದ್ಧತೆ ಮಾಡಲಾಗಿದೆ.
Follow us on

ಮಂಡ್ಯ: ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಅಂಬಿಗರ ಹಳ್ಳಿ ಬಳಿ ಇರುವ ತ್ರಿವೇಣಿ ಸಂಗಮದಲ್ಲಿ ಮಲೈ ಮಹದೇಶ್ವರ ಮಹಾ ಕುಂಭಮೇಳದ (Malai Mahadeshwara Kumbh Mela) ಪೂರ್ಣಾಹುತಿ ಕಳಸ ವಿಸರ್ಜನೆಯ ಧಾರ್ಮಿಕ ವಿಧಿಗಳನ್ನು ಭಾನುವಾರ (ಅ 16) ತ್ರಿವೇಣಿ ಸಂಗಮದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ (Nirmalanandanatha Swamiji of Adichunchanagiri Mutt) ನೆರವೇರಿಸಿದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಚಿವ ನಾರಾಯಣ ಗೌಡ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಸ್ನಾನಘಟ್ಟದಲ್ಲಿ ಕಳಸ ವಿಸರ್ಜನೆ ಮಾಡಿದ ನಂತರ ಕಳಸದ ಶ್ರೀಗಳು ತ್ರಿವೇಣಿ ಸಂಗಮದಲ್ಲಿ ನದಿ ನೀರು ಪ್ರೋಕ್ಷಣೆ ಮಾಡಿಕೊಂಡರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದಕ್ಕಾಗಿ ವಿಶೇಷ ಹೆಲಿಪ್ಯಾಡ್ ಸಿದ್ಧಪಡಿಸಲಾಗಿದೆ. ಮೈದಾನದ ಸುತ್ತಲೂ ಪೊಲೀಸರು ಎಎಸ್​ಪಿ ವೇಣುಗೋಪಾಲ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಹಾಕಿದ್ದಾರೆ. ಸಿಎಂ ಬೊಮ್ಮಾಯಿ ಹೆಲಿಪ್ಯಾಡ್​ನಿಂದ ನೇರವಾಗಿ ಮಾದೇಶ್ವರನ ಸನ್ನಿದಿಗೆ ತೆರಳಿದ್ದಾರೆ. ಮಾದೇಶ್ವರನ ದರ್ಶನದ ಬಳಿಕ ನಡೆಯಲಿರುವ ತೀರ್ಥ ಸ್ನಾನದ ಬಳಿಕ ವೇದಿಕೆಯ ಕಾರ್ಯಕ್ರಮದಲ್ಲಿಯೂ ಮುಖ್ಯಮಂತ್ರಿ ಪಾಲ್ಗೊಳ್ಳಲಿದ್ದಾರೆ.

ತ್ರಿವೇಣಿ ಸಂಗಮದಲ್ಲಿ 9 ವರ್ಷಗಳ ಬಳಿಕ ಮಹಾ ಕುಂಭಮೇಳ ನಡೆಯುತ್ತಿದ್ದು, ಹೋಮದ ಪೂರ್ಣಾಹುತಿ ಬಳಿಕ ತ್ರಿವೇಣಿ ಸಂಗಮದಲ್ಲಿ ಪವಿತ್ರ ತೀರ್ಥ ಸ್ನಾನ ನಡೆಯಲಿದೆ. ಜಿಲ್ಲೆಯ ಹಲವು ಗ್ರಾಮಗಳು ಮತ್ತು ಹೊರ ರಾಜ್ಯಗಳಿಂದಲೂ ಸಾಕಷ್ಟು ಭಕ್ತರು ತ್ರಿವೇಣಿ ಸಂಗಮಕ್ಕೆ ಆಗಮಿಸಿದ್ದಾರೆ. ಸಂಗಮದಲ್ಲಿ ಮಹಾಕುಂಭದಂದು ತೀರ್ಥ ಸ್ನಾನ ಮಾಡಿದರೆ ಮಾತಾಪಿತೃ ದೋಷ, ಭೂ ದೋಷ, ನಾಗ ದೋಷಗಳು ಪರಿಹಾರವಾಗಲಿವೆ ಎಂಬ ನಂಬಿಕೆ ಭಕ್ತರಲ್ಲಿದೆ.

ಭಕ್ತರು ಸಾಗರೋಪಾದಿಯಲ್ಲಿ ತ್ರಿವೇಣಿ ಸಂಗಮದತ್ತ ಹರಿದುಬರುತ್ತಿದ್ದು, ತ್ರಿನೇತ್ರ ಮಹಾಂತ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ತೀರ್ಥ ಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ತೀರ್ಥ ಸ್ನಾನದಲ್ಲಿ ಮಿಂದೆಳಲು ಸಾಧು ಸಂತರು, ನಾಗ ಸಾಧುಗಳು, ಅಘೋರಿಗಳು ಆಗಮಿಸಿದ್ದಾರೆ.

ನದಿ ತಟದಲ್ಲಿ ಎಂ ಸ್ಯಾಂಡ್ ಬಳಸಿ ಕೃತಕ ದಡ ನಿರ್ಮಿಸಲಾಗಿದೆ. ಬಟ್ಟೆ ಬದಲಾಯಿಸಲು ತಾತ್ಕಾಲಿಕ ಟೆಂಟ್ ವ್ಯವಸ್ಥೆ ಮಾಡಲಾಗಿದೆ. ತ್ರಿವೇಣಿ ಸಂಗಮದ ಸ್ಥಳದಲ್ಲಿ ನದಿಯೊಳಗೆ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಅದನ್ನು ದಾಟಿ ಹೋಗಬಾರದೆಂದು ಭಕ್ತರಿಗೆ ಸೂಚನೆ ನೀಡಲಾಗಿದೆ.

ಮಹಾ ಕುಂಭಮೇಳದ ಸಮಾರೋಪದ ಹಿನ್ನೆಲೆಯಲ್ಲಿ ಬೆಳಿಗ್ಗೆ 8.30ರಿಂದ 9.30ರವರೆಗೆ ಪೂರ್ಣಾಹುತಿ ವಿಧಿಗಳು ನೆರವೇರಿದವರು. ಕಳಸದ ನೀರನ್ನು ಕಾವೇರಿ ನದಿಗೆ ಸಮರ್ಪಣೆ ಮಾಡಿದ ನಂತರ ಪುಣ್ಯಸ್ನಾನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು. ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕೊನೆಯ ದಿನವಾದ ಭಾನುವಾರ ಲಕ್ಷಾಂತರ ಭಕ್ತರು ಪುಣ್ಯ ಸ್ನಾನ ಮಾಡುವ ನಿರೀಕ್ಷೆಯಿದೆ.

Published On - 12:18 pm, Sun, 16 October 22