ಮಂಡ್ಯ, ಸೆಪ್ಟೆಂಬರ್ 23: ತಮಿಳುನಾಡಿಗೆ ಕಾವೇರಿ ನೀರು (Cauvery Water Dispute) ಬಿಡುಗಡೆ ಮಾಡುವ ವಿಚಾರವಾಗಿ ಮಂಡ್ಯ, ಮದ್ದೂರು ಹಾಗೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಬೆಳಗ್ಗೆಯಿಂದಲೇ ಭಾರೀ ಪ್ರತಿಭಟನೆ ನಡೆಯುತ್ತಿದೆ. ಮಂಡ್ಯ (Mandya) ಹಾಗೂ ಮದ್ದೂರಿನಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ. ಈ ಮಧ್ಯೆ, ಕಾನೂನು ತಜ್ಞರ ಸಲಹೆ ಮೇರೆಗೆ ತಮಿಳುನಾಡಿಗೆ ನೀರು ಬಿಡಲು ತೀರ್ಮಾನ ಮಾಡಿರುವುದಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಚಿವ ಸಂಪುಟ ಸಭೆಯ ಬಳಿಕ ಹೇಳಿಕೆ ನೀಡಿರುವುದು ಮತ್ತಷ್ಟು ಜನಾಕ್ರೋಶಕ್ಕೆ ಕಾರಣವಾಗಿದೆ.
ಮಂಡ್ಯ ನಗರ ಬಹುತೇಕ ಬಂದ್ ಆಗಿದೆ. ತೆರೆದಿದ್ದ ಅಂಗಡಿ ಮುಂಗಟ್ಟನ್ನು ಪ್ರತಿಭಟನಕಾರರು ಮುಚ್ಚಿಸಿದ್ದಾರೆ. ಮಂಡ್ಯದಲ್ಲಿ ಬಹುತೇಕ ಎಲ್ಲಾ ಅಂಗಡಿಗಳನ್ನು ವರ್ತಕರು ಸ್ವಯಂಪ್ರೇರಿತರಾಗಿ ಬಂದ್ ಮಾಡಿದ್ದಾರೆ. ಕೆಲವು ವರ್ತಕರು ವ್ಯಾಪಾರ ಮಾಡುತ್ತಿದ್ದರೂ ಅವರ ಅಂಗಡಿಗಳನ್ನು ರೈತರು ಬಂದ್ ಮಾಡಿಸಿದ್ದಾರೆ.
ಮಂಡ್ಯದ ಸಂಜಯ್ ವೃತ್ತದಲ್ಲಿ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಮದ್ದೂರಿನಲ್ಲಿ ವಿದ್ಯಾರ್ಥಿಗಳು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ನಗರದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯದ ಸಂಜಯ್ ವೃತ್ತದಲ್ಲಿ ಪ್ರತಿಭಟನೆ ವೇಳೆ ಬೈಕ್ನಲ್ಲಿ ಹೋಗಲು ಮುಂದಾದ ಬೈಕ್ ಸವಾರರೊಬ್ಬರನ್ನು ರೈತ ಮಹಿಳೆಯೊಬ್ಬರು ತರಾಟೆಗೆ ತೆಗೆದುಕೊಂಡು ತಡೆದ ಘಟನೆ ವರದಿಯಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ತೀವ್ರಗೊಂಡ ಕಾವೇರಿ ಹೋರಾಟ: ನಗರದಲ್ಲಿ ಹೈಅಲರ್ಟ್, ಹೆಚ್ಚುವರಿ ಪೊಲೀಸ್ ನಿಯೋಜನೆ
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಎಸ್ಆರ್ ಡ್ಯಾಮ್ನಲ್ಲಿ ಒಳ ಹರಿವು ಇಳಿಕೆಯಾಗಿ ಹೊರ ಹರಿವು ಏರಿಕೆಯಾಗಿದೆ. ಶುಕ್ರವಾರ ಕಾವೇರಿ ನದಿಗೆ 2,673 ಕ್ಯೂಸೆಕ್ ನೀರು ಬಿಡಲಾಗಿತ್ತು. ಶನಿವಾರ ಬೆಳಗ್ಗೆ ಕೆಆರ್ಎಸ್ ಡ್ಯಾಮ್ನಿಂದ 2973 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಶುಕ್ರವಾರ ಕೆಆರ್ಎಸ್ಗೆ 5,845 ಕ್ಯೂಸೆಕ್ ನೀರು ಒಳ ಹರಿವು ಇತ್ತು. ಶನಿವಾರ ಅದು 5147 ಕ್ಯೂಸೆಕ್ಗೆ ಇಳಿಕೆಯಾಗಿದೆ. ಸದ್ಯ ನೀರಿನ ಮಟ್ಟ 96.90 ಅಡಿಗೆ ಕುಸಿದಿದೆ.
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ 11 ಗಂಟೆಗೆ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಲಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಮೂರು ಕೆಎಸ್ಆರ್ಪಿ ತುಕಡಿ ಸೇರಿದಂತೆ ನೂರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ