ಪಾಂಡವಪುರದಲ್ಲಿ ಆರ್​​ಎಸ್​​ಎಸ್ ಕಚೇರಿಗೆ ಪೊಲೀಸ್ ದಾಳಿ: ಖಾಕಿ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

| Updated By: ಗಣಪತಿ ಶರ್ಮ

Updated on: Sep 16, 2024 | 12:50 PM

ಮಂಡ್ಯದ ಪಾಂಡವಪುರದಲ್ಲಿ ಶೂ ಧರಿಸಿಕೊಂಡೇ ಪೊಲೀಸರು ಆರ್​ಎಸ್​ಎಸ್​​ ಕಚೇರಿಗೆ ನುಗ್ಗಿದ್ದಾರೆ. ನಾವು ಕಚೇರಿಯನ್ನೂ ದೇವಾಲಯ ಎಂದೇ ಭಾವಿಸುತ್ತೇವೆ. ನಮ್ಮ ಭಾವನೆಗೆ ಧಕ್ಕೆಯಾಗಿದೆ. ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಕಾರ್ಯಕರ್ತರು ಪಾಂಡವಪುರದ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.

ಪಾಂಡವಪುರದಲ್ಲಿ ಆರ್​​ಎಸ್​​ಎಸ್ ಕಚೇರಿಗೆ ಪೊಲೀಸ್ ದಾಳಿ: ಖಾಕಿ ವಿರುದ್ಧ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ಸಾಂದರ್ಭಿಕ ಚಿತ್ರ
Follow us on

ಮಂಡ್ಯ, ಸೆಪ್ಟೆಂಬರ್ 16: ಮಂಡ್ಯ ಜಿಲ್ಲೆಯ ಪಾಂಡವಪುರ ಆರ್‌ಎಸ್‌ಎಸ್ ಕಚೇರಿಗೆ ಪೊಲೀಸರು ದಾಳಿ ಮಾಡಿದ್ದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪೊಲೀಸರು ಆರ್‌ಎಸ್‌ಎಸ್ ಕಚೇರಿಗೆ ದಾಳಿ ಮಾಡಿದ್ದಷ್ಟೇ ಅಲ್ಲದೆ, ಶೂ ಹಾಕಿಕೊಂಡೇ ಕಚೇರಿ ಒಳ ಪ್ರವೇಶಿಸಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಕಾರ್ಯಕರ್ತರು, ಡಿವೈಎಸ್‌ಪಿ ಹಾಗೂ ಇನ್ಸ್​​ಪೆಕ್ಟರ್ ಇಬ್ಬರನ್ನು ಸಸ್ಪೆಂಡ್ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಪಾಂಡವಪುರದ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ನಿನ್ನೆ ಪಾಂಡವಪುರದ ಆರ್‌ಎಸ್‌ಎಸ್ ಕಚೇರಿಗೆ ಬಜರಂಗದಳ, ವಿಹೆಚ್​​ಪಿ ಮುಖಂಡರ ಬಂಧನಕ್ಕೆ‌ ತೆರಳಿದ್ದ ಪೊಲೀಸರು ಶೂ ಧರಿಸಿಕೊಂಡೇ ಕಚೇರಿಯಲ್ಲಿ‌ ಓಡಾಡಿದ್ದಾರೆ. ನಾವು ನಮ್ಮ ಕಚೇರಿಯನ್ನು ದೇವಸ್ಥಾನ ಎಂದುಕೊಂಡಿದ್ದೇವೆ. ನಮ್ಮ ಭಾವನೆಗೆ ಧಕ್ಕೆ ತರುವ ಕೆಲಸವಾಗಿದೆ. ಡಿವೈಎಸ್‌ಪಿ ಹಾಗೂ ಇನ್ಸ್​​​ಪೆಕ್ಟರ್ ಇಬ್ಬರನ್ನು ಸಸ್ಪೆಂಡ್ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಮತ್ತೊಂದೆಡೆ ಕರ್ನಾಟಕ ಬಿಜೆಪಿ ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ, ‘ಸಂಘದ ಪ್ರಚಾರಕರ ಮೇಲೆ ದೌರ್ಜನ್ಯ ನಡೆಸಿದ್ದು ಅಕ್ಷಮ್ಯ’ ಎಂದು ಉಲ್ಲೇಖಿಸಿ ಘಟನೆಯನ್ನು ಖಂಡಿಸಿದೆ.

‘‘ಮಂಡ್ಯ ಜಿಲ್ಲೆಯ ಪಾಂಡವಪುರದ ಆರ್‌ಎಸ್‌ಎಸ್ ಕಾರ್ಯಾಲಯಕ್ಕೆ ರಾತ್ರೋರಾತ್ರಿ ಪೊಲೀಸರು ನುಗ್ಗಿ, ಸಂಘದ ಪ್ರಚಾರಕರ ಮೇಲೆ ದೌರ್ಜನ್ಯ ನಡೆಸಿದ್ದು ಅಕ್ಷಮ್ಯ. ಸಂಘದ ಕಾರ್ಯಾಲಯಕ್ಕೆ ಸಕಾರಣವಿಲ್ಲದೆ ದಾಳಿ ನಡೆಸಿದ ಘಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅರಾಜಕತೆ ಹೆಚ್ಚಾಗಿದ್ದು, ಹಿಂದೂಗಳನ್ನು ಭಯದ ವಾತಾವರಣದಲ್ಲಿ ಬದುಕುವಂತೆ ಮಾಡುವ ಸನ್ನಿವೇಶ ಸೃಷ್ಟಿಸುತ್ತಿದೆ’’ ಎಂದು ಬಿಜೆಪಿ ಉಲ್ಲೇಖಿಸಿದೆ.

ಇದನ್ನೂ ಓದಿ: ನಾಗಮಂಗಲ ಕೋಮುಗಲಭೆ ವೇಳೆ ಪಾಕ್ ಪರ ಘೋಷಣೆ? ಅನುಮಾನ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಅಶೋಕ್

ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಸಮಾಜದಲ್ಲಿ ಅಸ್ಥಿರತೆ ಮೂಡಿಸಲು ಕಾಂಗ್ರೆಸ್ ಯತ್ನಿಸುತ್ತಿದೆ. ಹಿಂದೂಗಳಿಗೆ ಬಹಿರಂಗ ಸವಾಲು ಎಸೆಯುವ ಮತಾಂಧರನ್ನು ಸ್ವತಂತ್ರವಾಗಿರಲು ಬಿಟ್ಟು, ರಾಷ್ಟ್ರಭಕ್ತ ಸ್ವಯಂಸೇವಕರ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಕಾಂಗ್ರೆಸ್ಸಿನ ಹಿಟ್ಲರ್ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬಿಜೆಪಿ ಟೀಕಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ